ಅನ್ಸರ್ ಇನೋಳಿ ಉಳ್ಳಾಲ
ಸ್ವಚ್ಛ ಸಂಕೀರ್ಣ ನಿರ್ವಹಣೆಗೆ ಮಹಿಳಾ ಸಂಘಟನೆ ಸಂಜೀವಿನಿ ಒಕ್ಕೂಟ ಹಿಂದೇಟು.. ತ್ಯಾಜ್ಯ ನಿರ್ವಹಣೆಗೆ ಎದುರಾಗುತ್ತಿದೆ ತೊಡಕು.. ಸರ್ಕಾರದ ನಿಯಮದಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಲೆನೋವು..
ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಸ್ವಚ್ಛ ಸಂಕೀರ್ಣ ಘಟಕ ನಿರ್ಮಿಸಿ ಮನೆ, ಅಂಗಡಿ, ಹೋಟೆಲ್, ವಾಣಿಜ್ಯ ಸಂಕೀರ್ಣಗಳಿಂದ ಸಮಗ್ರವಾಗಿ ಕಸ ನಿರ್ವಹಣೆಯಾಗಬೇಕು ಎನ್ನುವುದು ಸರ್ಕಾರದ ನಿಯಮ. ಘಟಕ ನಿರ್ಮಾಣಕ್ಕೆ ಅನುದಾನ ನೀಡಲು ಆರಂಭಿಸಿ ದಶಕಗಳೇ ಕಳೆದಿದೆ. ಆದರೆ ಕೆಲವೊಂದು ಪಂಚಾಯಿತಿಗಳಲ್ಲಿ ಇಂದಿಗೂ ಘಟಕ ಸ್ಥಾಪನೆಯಾಗಿಲ್ಲ. ಕೆಲ ಪಂಚಾಯಿತಿಗಳಲ್ಲಿ ಹೆಸರಿಗಷ್ಟೇ ಘಟಕ ಹಾಗೂ ವಾಹನ ಇದೆ. ಆದರೆ ಕಸ ಸಂಗ್ರಹ ಆರಂಭಗೊಂಡಿಲ್ಲ. ಇನ್ನು ಕೆಲವು ಪಂಚಾಯಿತಿಗಳು ನಿರ್ವಹಣೆಯ ಉಸಾಬರಿಯೇ ಬೇಡವೆಂದು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿವೆ.
ಮಹಿಳಾ ಸಂಘಗಳಿಗೆ ಆದಾಯ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ತಂದ ಈ ನಿಯಮ ಅಂಬ್ಲಮೊಗರು ಗ್ರಾ.ಪಂ.ಗೆ ಕಬ್ಬಿಣದ ಕಡಲೆಯಾಗಿದೆ. ಪಂಚಾಯಿತಿಗೆ ತಾಗಿಕೊಂಡು ಸಣ್ಣದೊಂದು ಸ್ವಚ್ಛ ಸಂಕೀರ್ಣ ನಿರ್ಮಿಸಲಾಗಿದೆ. ಕಸ ಸಾಗಾಟಕ್ಕೆ ವಾಹನ ಬಂದು ತಿಂಗಳುಗಳೇ ಕಳೆದಿವೆ. ಆದರೆ ಕಸ ಸಂಗ್ರಹ, ಘಟಕ ನಿರ್ವಹಣೆಗೆ ಜನರೇ ಇಲ್ಲದೆ ಸಂಕಷ್ಟ ಎದುರಿಸುತ್ತಿದೆ. ಗ್ರಾಮದಲ್ಲಿ ಇನ್ನೂ ಕಸ ಸಂಗ್ರಹಣೆ ಆರಂಭವಾಗದ ಹಿನ್ನೆಲೆಯಲ್ಲಿ ತ್ಯಾಜ್ಯಗಳು ರಸ್ತೆಯಲ್ಲೇ ಚೆಲ್ಲಾಪಿಲ್ಲಿಯಾಗಿವೆ. ಕೆಲವು ಕಡೆ ರಸ್ತೆ ಬದಿಯ ತ್ಯಾಜ್ಯಕ್ಕೆ ಬೆಂಕಿ ಹಾಕಿ ಮರೆಮಾಚುವ ಕೆಲಸ ನಡೆಯುತ್ತಿದೆ.
ಏನಿದು ನಿಯಮ?
ಸ್ತ್ರೀಶಕ್ತಿ ಸಂಘಟನೆ ಮೂಲಕ ಮಹಿಳೆಯರನ್ನು ಸ್ವಾವಲಂಬಿ ಮಾಡುವ ಉದ್ದೇಶದಿಂದ ಪ್ರತಿ ಗ್ರಾಮದ ಸ್ವಚ್ಛ ಸಂಕೀರ್ಣ ನಿರ್ವಹಣೆ ಮಹಿಳಾ ಸಂಘಟನೆ ಮೂಲಕ ನಡೆದರೆ ಮಹಿಳೆಯರ ಆರ್ಥಿಕ ಸಬಲೀಕರಣವಾಗುತ್ತದೆ ಎನ್ನುವುದು ಸರ್ಕಾರದ ಯೋಜನೆ. ಆದರೆ ಈ ಕೆಲಸದಿಂದ ಘನತೆಗೆ ಕುಂದುಂಟಾಗುತ್ತದೆ ಎನ್ನುವ ಭಾವನೆಯಿಂದ ಮಹಿಳೆಯರು ಹಿಂದೇಟು ಹಾಕುತ್ತಿದ್ದಾರೆ.
ಪರ್ಯಾಯ ಕಂಡುಕೊಂಡ ಪಾವೂರು
ಸಂಜೀವಿನಿ ಒಕ್ಕೂಟದ ಹಿಂದೇಟಿನಿಂದ ಪಾವೂರು ಗ್ರಾಮದಲ್ಲಿ ಕಸ ಸಂಗ್ರಹಣೆ ನಿಂತು ಹೋಗಿತ್ತು. ಈ ಹಿನ್ನೆಲೆಯಲ್ಲಿ ಬೆಲ್ಮ ಗ್ರಾಮದಲ್ಲಿ ವಾಸವಿದ್ದ ಹುಬ್ಬಳ್ಳಿಯ ಕುಟುಂಬವನ್ನು ಪಾವೂರಿಗೆ ಕರೆಸಿ ಗ್ರಾಮದ ಸದಸ್ಯತ್ವ ನೀಡಿ ಸಂಜೀವಿನಿ ಒಕ್ಕೂಟಕ್ಕೆ ಸೇರಿಸಿ ಕಸ ಸಂಗ್ರಹ ಆರಂಭಿಸಲಾಯಿತು.
ಪಂಚಾಯಿತಿಯಿಂದ ಸ್ವಚ್ಛ ಸಂಕೀರ್ಣ ನಿರ್ಮಿಸಲಾಗಿದ್ದು ವಾಹನವೂ ಇದೆ. ನಿರ್ವಹಣೆ ಸ್ತ್ರೀಶಕ್ತಿ ಸಂಘಟನೆಗೆ ನೀಡಬೇಕೆನ್ನುವ ಸರ್ಕಾರದ ನಿಯಮ ಇದೆ. ಆದರೆ ಸಂಘಟನೆ ಹಿಂದೇಟು ಹಾಕಿ ಲಿಖಿತವಾಗಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಸಂಕೀರ್ಣ ನಿರ್ವಹಣೆಗೆ ಸೂಕ್ತ ಜನರ ಹುಡುಕಾಟ ನಡೆಸಲಾಗುತ್ತಿದೆ
ಮಹಮ್ಮದ್ ಇಕ್ಬಾಲ್, ಅಂಬ್ಲಮೊಗರು ಗ್ರಾ.ಪಂ. ಅಧ್ಯಕ್ಷ.
ಆಯಾ ಗ್ರಾಮ ಪಂಚಾಯಿತಿಗಳು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಸ ಸಂಗ್ರಹ ಮಾಡಬೇಕೆನ್ನುವ ಸರ್ಕಾರದ ನಿಯಮ ಇಂದಿಗೂ ಕೆಲವೆಡೆ ಪಾಲನೆಯಾಗದ ಕಾರಣ ರಸ್ತೆಬದಿ ತ್ಯಾಜ್ಯ ರಾಶಿಗೆ ಮುಕ್ತಿ ಸಿಕ್ಕಿಲ್ಲ. ಅಂಬ್ಲಮೊಗರು ಗ್ರಾಮದಲ್ಲೂ ಇದೇ ಪರಿಸ್ಥಿತಿ ಇದೆ. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸ್ಥಳೀಯಾಡಳಿತ ಇನ್ನೂ ಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಚಿಂತಾಜನಕವಾಗಿರಲಿದೆ.
ಕಮಲಾಕ್ಷ ಶೆಟ್ಟಿಗಾರ್, ಪ್ರಯಾಣಿಕ
https://www.vijayavani.net/munduru-nemostava