ಹೇಮನಾಥ ಪಡುಬಿದ್ರಿ
ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ಳಾಲ ಕಾಡು ಪ್ರದೇಶದ 10 ಎಕರೆ ಜಮೀನಿನಲ್ಲಿ ನಿರ್ಮಾಣವಾಗುತ್ತಿರುವ ಕಾಪು ಪುರಸಭೆ ಘನತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಘಟಕವನ್ನು ರಾಜ್ಯಕ್ಕೇ ಮಾದರಿಯಾಗಿ ರೂಪಿಸುವ ಇರಾದೆಯನ್ನು ಪುರಸಭೆ ಹೊಂದಿದೆ.
ಸುಮಾರು 7200 ವಸತಿ ಹೊಂದಿರುವ ಕಾಪು ಪುರಸಭೆ ವ್ಯಾಪ್ತಿಯಲ್ಲಿ ದಿನನಿತ್ಯ 5 ಟನ್ ಹಸಿ ಹಾಗೂ 5 ಟನ್ ಘನತ್ಯಾಜ್ಯ ಸಂಗ್ರಹವಾಗುತ್ತಿದೆ. ಪುರಸಭೆ ವ್ಯಾಪ್ತಿಯಲ್ಲಿ ಸೂಕ್ತ ಸರ್ಕಾರಿ ಜಮೀನಿನ ಕೊರತೆಯಿಂದ ಘನತ್ಯಾಜ್ಯ ಸಂಸ್ಕರಣೆಗಾಗಿ ಜಿಲ್ಲಾಡಳಿತದಿಂದ 4 ವರ್ಷಗಳ ಹಿಂದೆ ಎಲ್ಲೂರಿನಲ್ಲಿ 10 ಎಕರೆ ಜಮೀನು ಮಂಜೂರು ಮಾಡಲಾಗಿತ್ತು.
2019ರಲ್ಲಿ ಲೋಕೋಪಯೋಗಿ ಇಲಾಖೆ ಮೂಲಕ 6.36 ಕೋಟಿ ರೂಪಾಯಿ ವೆಚ್ಚದ ಯೋಜನೆಯನ್ನು ಕಾಪು ದೇವಿಪ್ರಸಾದ್ ಕನ್‌ಸ್ಟ್ರಕ್ಷನ್ ಮೂಲಕ ಕೈಗೆತ್ತಿಕೊಳ್ಳಲಾಗಿದೆ. ಅಲ್ಲಿನ 10 ಎಕರೆ ಪ್ರದೇಶಕ್ಕೆ ಈಗಾಗಲೇ ಆವರಣಗೋಡೆ ನಿರ್ಮಿಸಲಾಗಿದೆ. 3000 ಚ.ಮೀ ವಿಸ್ತೀರ್ಣದ 2 ಕೊಳಚೆನೀರು ಸಂಗ್ರಹಣಾ ತೊಟ್ಟಿ, ಕಾಂಕ್ರೀಟ್ ರಸ್ತೆ ಸಹಿತ 95 ಶೇ.ಕಾಮಗಾರಿ ಪೂರ್ಣಗೊಂಡಿದ್ದು, ವೇಬ್ರಿಡ್ಜ್, 10 ಟನ್ ಘನ ತ್ಯಾಜ್ಯ ಸಂಗ್ರಹಿಸಿ ಪ್ರತ್ಯೇಕಿಸುವ 2 ಶೆಡ್ ಕಾಮಗಾರಿ ಅಂತಿಮ ಹಂತದಲ್ಲಿದೆ.
ಹಳೇ ತ್ಯಾಜ್ಯ ಸ್ಥಳಾಂತರ ಆರಂಭ
ಕಾಪು ಹೃದಯ ಭಾಗದಲ್ಲಿ ಹಲವು ವರ್ಷಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಶೀಘ್ರ ಸ್ಥಳಾಂತರಿಸುವ ಉದ್ಧೇಶದಿಂದ ಎಲ್ಲೂರು ಘಟಕದ ಕಾಮಗಾರಿ ಪೂರ್ಣವಾಗದಿದ್ದರೂ, ಲೋಕೋಪಯೋಗಿ ಇಲಾಖೆಯಿಂದ ಕೇವಲ ಸ್ಯಾನಿಟರಿ ಪಿಟ್ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಪುರಸಭೆ ಸುಪರ್ದಿಗೆ ಪಡೆದು ತ್ಯಾಜ್ಯವನ್ನು ತುಂಬಿಸಲಾಗುತ್ತಿದೆ.
ಪ್ಲ್ಲಾಸ್ಟಿಕ್ ತ್ಯಾಜ್ಯ ವಿಲೇ ಹಾಗೂ ಸಂಸ್ಕರಣೆ
ಉತ್ತಮ ಗುಣಮಟ್ಟದ ಆದರೆ ಮರುಬಳಕೆ ಮೌಲ್ಯ ಹೊಂದಿರದ ತೆಳುವಾದ ಪ್ಲಾಸ್ಟಿಕ್ ಇತ್ಯಾದಿ ಪ್ಲಾಸ್ಟಿಕನ್ನು ಪುರಸಭೆಗೆ ಯಾವುದೇ ಆರ್ಥಿಕ ಹೊರೆಯಿಲ್ಲದೆ ಸಂಪೂರ್ಣ ಖಾಸಗಿ ಸಹಭಾಗಿತ್ವದೊಂದಿಗೆ ರಾಜ್ಯದಲ್ಲಿಯೇ ಪ್ರಥಮ ಪ್ರಯತ್ನ ಎಂಬಂತೆ ಸಂಸ್ಕರಿಸಿ ರಸ್ತೆ ನಿರ್ಮಾಣಕ್ಕೆ ಬಳಸುವ ಯೋಜನೆ ಯಶಸ್ಸಿನತ್ತ ಸಾಗಿದೆ. ಅದರೊಂದಿಗೆ ಮರುಬಳಕೆ ಮೌಲ್ಯ ಹೊಂದಿರದ ಮತ್ತು ರಸ್ತೆ ನಿರ್ಮಾಣಕ್ಕೂ ಯೋಗ್ಯವಲ್ಲದ ಪ್ಲಾಸ್ಟಿಕನ್ನು ಬೆಂಗಳೂರು ಮೂಲದ ರೀಕಾರ್ಟ್ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಎಲ್ಲೂರು ಘಟಕದಲ್ಲಿ ಬೃಹತ್ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸಂಸ್ಕರಿಸುವ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಕಾಪು ಪುರಸಭೆ ಸೇರಿದಂತೆ ಎಲ್ಲೂರು ಗ್ರಾಪಂನ ಘನತ್ಯಾಜ್ಯವನ್ನು ಸಂಸ್ಕರಿಸಲು ಯೋಜನೆ ಹಾಕಿಕೊಳ್ಳಲಾಗಿದೆ.
ಘಟಕ ನಿರ್ಮಾಣ ಕುರಿತಂತೆ ಎಲ್ಲೂರು ಗ್ರಾಪಂ ಹಲವು ಷರತ್ತುಗಳನ್ನು ಇರಿಸಿದ್ದು, ಅದಕ್ಕೆ ಒಪ್ಪಿಗೆ ಸೂಚಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಘಟಕ ಅನುಷ್ಠಾನಿಸಲಾಗುತ್ತಿದೆ. ಕೆಮುಡೇಲು -ಗುರುಗುಂಡಿ ರಸ್ತೆ ಅಭಿವೃದ್ಧಿಗೆ ಪುರಸಭೆಯಿಂದ 35 ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ. ಕಾಪುವಿನ ತ್ಯಾಜ್ಯ ಸ್ಥಳಾಂತರ ಬಳಿಕ ರಸ್ತೆ ಕಾಮಗಾರಿ ಶೀಘ್ರ ಆರಂಭಿಸಲಾಗುವುದು. ಘಟಕದ ಖಾಲಿ ಜಮೀನಿನಲ್ಲಿ ಉದ್ಯಾನವನ, ತರಕಾರಿ, ಸಹಿತ ಹಣ್ಣಿನ ಗಿಡಗಳನ್ನು ಬೆಳೆಸಿ ಅಮ್ಮ ಚಾರಿಟೆಬಲ್ ಟ್ರಸ್ಟ್ ಮೂಲಕ ನಿರ್ವಹಣೆ ಮಾಡಿ, ರಾಜ್ಯಕ್ಕೇ ಮಾದರಿ ಘಟಕವಾಗಿ ರೂಪಿಸುವ ಇರಾದೆಯನ್ನು ಗುತ್ತಿಗೆದಾರ ಕಾಪು ವಾಸುದೇವ ಶೆಟ್ಟಿ ಪ್ರಸ್ತಾಪಿಸಿದ್ದಾರೆ. ಕಾನೂನು ರೀತ್ಯಾ ಕ್ರಮವಹಿಸಿ ಟ್ರಸ್ಟ್‌ಗೆ ನೀಡುವ ಬಗ್ಗೆ ತೀರ್ಮಾನಿಸಲಾಗುವುದು.
ವೆಂಕಟೇಶ ನಾವಡ, ಮುಖ್ಯಾಧಿಕಾರಿ ಕಾಪು ಪುರಸಭೆ