ಕಟ್ಟಡ ತ್ಯಾಜ್ಯ ಸಮಸ್ಯೆಗೆ ಪರಿಹಾರ

ಪಿ.ಬಿ.ಹರೀಶ್ ರೈ ಮಂಗಳೂರು

ಮಂಗಳೂರು ನಗರದಲ್ಲಿ ಬಹುಕಾಲದ ಸಮಸ್ಯೆಯಾಗಿದ್ದ ಕಟ್ಟಡಗಳ ಭಗ್ನಾವಶೇಷ (ಡೆಬ್ರಿಸ್) ತ್ಯಾಜ್ಯ ನಿರ್ವಹಣೆಗೆ ಪರಿಹಾರ ದೊರೆಯಲಿದೆ. ಮಂಗಳೂರು ಮಹಾನಗರ ಪಾಲಿಕೆ ಕುಂಜತ್ತಬೈಲಿನ ದೇವಿನಗರದಲ್ಲಿ ಇದಕ್ಕಾಗಿ ಎರಡು ಎಕರೆ ಜಾಗ ಮೀಸಲಿರಿಸಿದೆ.
ಮೂರು ವರ್ಷದ ಹಿಂದೆಯೇ ಮನಪಾ ಕುಂಜತ್ತಬೈಲಿನಲ್ಲಿ ಜಾಗ ಪರಿಶೀಲಿಸಿ ಪರಿಸರ ಇಲಾಖೆಯ ಅನುಮತಿ ಕೋರಿತ್ತು. ಪರಿಸರ ಇಲಾಖೆ ನಿರ್ಲಕ್ಷೃ ವಹಿಸಿದ ಕಾರಣ ಪ್ರಸ್ತಾವನೆ ನನೆಗುದಿಗೆ ಬಿದ್ದಿತ್ತು. ಈಗ ಮನಪಾ ನೈರ್ಮಲೀಕರಣ ಹಾಗೂ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಬೈಲಾ ಜಾರಿಗೊಳಿಸಿದ್ದು, ಈ ಜಾಗ ಬಳಕೆಯಾಗಲಿದೆ.

ಡೆಬ್ರಿಸ್ ಸಮಸ್ಯೆ: ನಗರಗಳಲ್ಲಿ ಹೊಸ ಕಟ್ಟಡಗಳ ನಿರ್ಮಾಣ, ಹಳೇ ಕಟ್ಟಡ, ಮನೆ, ಕಚೇರಿಗಳ ನವೀಕರಣ ಹೀಗೆ ನಿರ್ಮಾಣ ಕಾಮಗಾರಿ ನಡೆಯುತ್ತಲೇ ಇದೆ. ಪ್ರತಿ ನಿರ್ಮಾಣ ಕಾಮಗಾರಿಯಲ್ಲಿ ಒಡೆದ ಟೈಲ್ಸ್, ಬೇಸಿನ್, ಸಿಮೆಂಟ್ ಗಟ್ಟಿ .. ಹೀಗೆ ಲೋಡ್‌ಗಟ್ಟಲೆ ಕಟ್ಟಡಗಳ ಭಗ್ನಾವಶೇಷ (ಡೆಬ್ರಿಸ್) ಉತ್ಪತ್ತಿಯಾಗುತ್ತದೆ. ಇದರ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಇಲ್ಲ. ಪರಿಣಾಮ ರಾತ್ರೋರಾತ್ರಿ ರಸ್ತೆ ಬದಿಯಲ್ಲಿ, ಖಾಲಿ ಇರುವ ಜಾಗದಲ್ಲಿ ತಂದು ಸುರಿಯುತ್ತಿದ್ದಾರೆ. ಕಟ್ಟಡ ತ್ಯಾಜ್ಯ ತಂದು ಹೆದ್ದಾರಿ ಇಕ್ಕೆಲಗಳಲ್ಲಿ ರಾಶಿ ಹಾಕುವುದು ಸಾಮಾನ್ಯ ದೃಶ್ಯವಾಗಿದೆ.

ಪರಿಹಾರೋಪಾಯ
ರಾಜ್ಯದಲ್ಲೇ ಪ್ರಥಮವಾಗಿ ಮಂಗಳೂರು ಮಹಾನಗರ ಪಾಲಿಕೆ ಡೆಬ್ರಿಸ್ ಡಂಪಿಂಗ್ ಯಾರ್ಡ್ ಮೂಲಕ ಸಮಸ್ಯೆಯ ಪರಿಹಾರೋಪಾಯಕ್ಕೆ ಮುಂದಾಗಿತ್ತು. ಮಾಜಿ ಕಾರ್ಪೋರೇಟರ್ ಪ್ರಕಾಶ್ ಸಾಲ್ಯಾನ್ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭ ಮುತುವರ್ಜಿ ವಹಿಸಿ ಡೆಬ್ರಿಸ್ ಸುರಿಯಲು ಕುಂಜತ್ತಬೈಲಿನಲ್ಲಿ 2 ಎಕರೆ ಜಾಗ ನಿಗದಿ ಮಾಡಿದ್ದರು. ಈ ಪ್ರದೇಶದಲ್ಲಿ ಜಲ್ಲಿ ಕ್ವಾರಿಯಿದ್ದು, ಜಿಲ್ಲಾಧಿಕಾರಿ ಕ್ವಾರಿ ಹೊಂಡಗಳನ್ನು ಮುಚ್ಚಲು ಕಟ್ಟುನಿಟ್ಟಿನ ಆದೇಶ ನೀಡಿದ್ದರು. ಡೆಬ್ರಿಸ್ ಹಾಕುವ ಮೂಲಕ ಹೊಂಡ ಮುಚ್ಚಲು ಕೂಡ ಅನುಕೂಲವಿದ್ದ ಕಾರಣ ಈ ಜಾಗವನ್ನು ಆಯ್ಕೆ ಮಾಡಲಾಗಿತ್ತು.

ಬೈಲಾ ಜಾರಿ
ಹಸಿ ಕಸ ಸಂಸ್ಕರಣೆ, ಪ್ಲಾಸ್ಟಿಕ್ ನಿಷೇಧ, ಮನೆಯಲ್ಲೇ ತ್ಯಾಜ್ಯ ವಿಂಗಡಣೆ, ಕಟ್ಟಡ ತ್ಯಾಜ್ಯ ವೈಜ್ಞಾನಿಕ ನಿರ್ವಹಣೆ ಸಹಿತ 15 ಪ್ರಮುಖ ಅಂಶಗಳ ಮನಪಾ ನೈರ್ಮಲೀಕರಣ ಹಾಗೂ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಬೈಲಾ ಜಾರಿಯಾಗಿದೆ. ಇದರ ಅನುಷ್ಠಾನಕ್ಕೆ ಸಂಬಂಧಿಸಿ ನಡೆದ ಜಿಲ್ಲಾ ಅಭಿವೃದ್ಧಿ ಕೋಶದ ಸಭೆಯಲ್ಲಿ ತ್ಯಾಜ್ಯ ವಿಂಗಡಣೆಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿತ್ತು. ಮನಪಾ ಆರೋಗ್ಯ ನಿರೀಕ್ಷಕರು ವಾರದಲ್ಲಿ ಕನಿಷ್ಠ 500 ಮನೆಗಳಿಗೆ ಭೇಟಿ ನೀಡಿ ತ್ಯಾಜ್ಯ ವಿಂಗಡಣೆ ಬಗ್ಗೆ ಅರಿವು ಮೂಡಿಸಲು ತಿಳಿಸಲಾಗಿತ್ತು.

ಡೆಬ್ರಿಸ್ ಡಂಪಿಂಗ್ ಯಾರ್ಡ್ ಸಂಬಂಧಿಸಿ ಮನಪಾ ಈ ಹಿಂದೆಯೇ ನಿರ್ಣಯ ಕೈಗೊಂಡಿತ್ತು. ಕಟ್ಟಡ ನಿರ್ಮಾಣ ಹಂತದಲ್ಲೇ ಬಿಲ್ಡರ್‌ಗಳಿಂದ ಕಟ್ಟಡ ತ್ಯಾಜ್ಯ ನಿರ್ವಹಣೆ ಕರ ಸಂಗ್ರಹಿಸಲಾಗುತ್ತಿದೆ. ಡೆಬ್ರಿಸ್ ಡಂಪಿಂಗ್ ಯಾರ್ಡ್ ಹೋಗುವ ರಸ್ತೆ ಅಭಿವೃದ್ಧಿಗೆ 1 ಕೋಟಿ ರೂ. ಮೀಸಲಿರಿಸಲಾಗಿದೆ. ಹಿಂದಿನ ಅವಧಿಯ ಸಭೆಯಲ್ಲಿ ತ್ಯಾಜ್ಯ ವಸ್ತುಗಳ ನಿರ್ವಹಣೆ ಬೈಲಾ ಅನುಮೋದನೆಗೊಂಡಿದ್ದು ಈಗ ಜಾರಿ ಹಂತದಲ್ಲಿದೆ. ಇನ್ನು ಡೆಬ್ರಿಸ್ ಡಂಪಿಂಗ್ ಯಾರ್ಡ್ ಬಳಕೆಯಾಗಲಿದೆ.
ಪ್ರಕಾಶ್ ಸಾಲ್ಯಾನ್, ಮನಪಾ ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ

Leave a Reply

Your email address will not be published. Required fields are marked *