ತೆಲಂಗಾಣದ ಈ ಹೋಟೆಲ್​ನಲ್ಲಿ ಊಟ ವ್ಯರ್ಥ ಮಾಡಿದರೆ 50 ರೂ. ದಂಡ: ಸಂಗ್ರಹ ಮೊತ್ತ ಅನಾಥಾಶ್ರಮಕ್ಕೆ

ವಾರಂಗಲ್​: ನಿಮ್ಮ ಮನೆಗಳಲ್ಲಿ ಊಟವನ್ನು ವ್ಯರ್ಥ ಮಾಡಿದಾಗ ಹೇಗೋ ಹಿರಿಯರ ಕೈಯಿಂದ ತಪ್ಪಿಸಿಕೊಂಡು ಬಿಡುತ್ತೀರ. ಆದರೆ, ಇಲ್ಲೊಂದು ಹೋಟೆಲ್​ನಲ್ಲಿ ಅದಕ್ಕೆ ಅವಕಾಶವಿಲ್ಲ. ಬದಲಾಗಿ ಕಾಸು ಕೊಟ್ಟು ಪಡೆದ ಊಟವನ್ನು ವ್ಯರ್ಥ ಮಾಡಿದರೆ, ಅದಕ್ಕೆ ನೀವೇ ದಂಡವನ್ನೂ ಕಟ್ಟಬೇಕಾಗುತ್ತದೆ.

ತೆಲಂಗಾಣದ ವಾರಂಗಲ್​ನಲ್ಲಿರುವ ಕೇದಾರಿ ಫುಡ್​ ಕೋರ್ಟ್​ ಹೆಸರಿನ ಹೋಟೆಲ್​ ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದೆ. ಕೇವಲ ಗುಣಮಟ್ಟದ ಆಹಾರದಿಂದ ಮಾತ್ರವಲ್ಲದೆ, ಆಹಾರವನ್ನು ವ್ಯರ್ಥ ಮಾಡಬೇಡಿ(no food waste) ಎಂಬ ನೀತಿಯಿಂದಲೂ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

ಹೋಟೆಲ್​ ಮಾಲೀಕರಾಗಿರುವ ಲಿಂಗಲ್​​ ಕೇದಾರಿ ಅವರು ಬಹುದಿನಗಳಿಂದ ಈ ನೀತಿಯನ್ನು ಪಾಲಿಸಿಕೊಂಡು ಬರುತ್ತಿದ್ದು, ಆಹಾರವನ್ನು ವ್ಯರ್ಥ ಮಾಡುವ ಗ್ರಾಹಕರು 50 ರೂ. ದಂಡವನ್ನು ವಿಧಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಂದೇಶವುಳ್ಳ ಫಲಕವನ್ನು ತಮ್ಮ ಹೋಟೆಲ್​ ಮುಂಭಾಗದಲ್ಲಿ ಇಟ್ಟಿದ್ದಾರೆ.

ಕೇದಾರಿ ಅವರು ಅನೇಕ ವರ್ಷಗಳಿಂದ ಕ್ಯಾಟರಿಂಗ್​ ವ್ಯವಹಾರವನ್ನು ನಡೆಸುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಆಹಾರ ವ್ಯರ್ಥ ಮಾಡುವವರಿಗೆ ದಂಡವನ್ನು ವಿಧಿಸುತ್ತಿದ್ದಾರೆ. ಇಲ್ಲಿಯವರೆಗೆ ಸುಮಾರು 14 ಸಾವಿರ ಹಣವನ್ನು ದಂಡದ ರೂಪದಲ್ಲಿ ಸಂಗ್ರಹಿಸಲಾಗಿದ್ದು, ಅದನ್ನು ಅನಾಥಾಶ್ರಮಗಳಿಗೆ ನೀಡಬೇಕೆಂದುಕೊಂಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕೇದಾರಿ ಅವರು ಇಲ್ಲಿಯವರೆಗೆ ನಾವು 14 ಸಾವಿರ ರೂ. ಹಣವನ್ನು ಸಂಗ್ರಹಿಸಿದ್ದೇವೆ. ಅದನ್ನು ಅನಾಥಾಶ್ರಮಗಳಿಗೆ ನೀಡಬೇಕೆಂದುಕೊಂಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಹೋಟೆಲ್​ಗೆ ಬರುವ ಗ್ರಾಹಕರು ಆಹಾರವನ್ನು ವ್ಯರ್ಥ ಮಾಡದಂತೆ ತುಂಬಾ ಎಚ್ಚರಿಕೆ ವಹಿಸುತ್ತಾರೆ. ಇದರಿಂದಾಗಿ ದಂಡದ ಮೊತ್ತ ಸಂಗ್ರಹಣೆ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.

ಆಹಾರ ರುಚಿಯಾಗಿಲ್ಲ. ಆದ್ದರಿಂದ ಪೂರ್ತಿಯಾಗಿ ಸೇವಿಸಲು ಆಗುವುದಿಲ್ಲ ಎಂದು ಸಾಬೀತು ಪಡಿಸಿದವರಿಗೆ ದಂಡದ ಹಣವನ್ನು ನೀಡುವುದಾಗಿ ಕೇದಾರಿ ಅವರು ಸವಾಲು ಹಾಕಿದ್ದಾರೆ. ಅಲ್ಲದೆ, ನನ್ನ ವ್ಯಾಪಾರ ವೃದ್ಧಿಯಾಗಿದೆ. ಈ ಮೊದಲು ದಿನವೊಂದಕ್ಕೆ 300 ಮೀಲ್ಸ್​ ಮಾರಾಟ ಮಾಡುತ್ತಿದ್ದೆವು. ಇಂದು 800 ಮೀಲ್ಸ್​ ಮಾರಾಟ ಮಾಡುತ್ತಿದ್ದೇನೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)