ಕೊಕ್ಕರ್ಣೆ ಪರಿಸರದಲ್ಲಿ ತ್ಯಾಜ್ಯರಾಶಿ

ಅನಂತ್ ನಾಯಕ್ ಮುದ್ದೂರು, ಕೊಕ್ಕರ್ಣೆ
ಕೊಕ್ಕರ್ಣೆ ಗ್ರಾಮಾಂತರ ಪ್ರದೇಶವಾದರೂ ನಗರ ಪ್ರದೇಶದಂತೆ ಬೆಳೆಯುತ್ತಿದೆ. ಆದರೆ ಇದಕ್ಕೆ ಕಪ್ಪು ಚುಕ್ಕೆ ಎಂಬಂತೆ ತ್ಯಾಜ್ಯ ರಾಶಿ ಅಲ್ಲಲ್ಲಿ ಕಂಡು ಬರುತ್ತಿದ್ದು, ಇದನ್ನು ತಡೆಗಟ್ಟುವುದೇ ದೊಡ್ಡ ಸವಾಲಾಗಿದೆ.

ಕೊಕ್ಕರ್ಣೆ ಪೇಟೆ ಇಕ್ಕೆಲ ಚರಂಡಿಗಳಲ್ಲಿ ಕಸದ ರಾಶಿ, ಕೊಳಚೆ ನೀರು ಹರಡಿಕೊಂಡಿದ್ದು, ಜನ ನರಕಯಾತನೆ ಅನುಭವಿಸುವಂತಾಗಿದೆ. ಇದೊಂದು ಮಾಮೂಲಿ ತ್ಯಾಜ್ಯ ವಿಲೇವಾರಿ ಪ್ರದೇಶದಂತೆ ಭಾಸವಾಗುತ್ತಿದೆ. ಮದ್ಯ ಬಾಟಲಿ, ಮೀನಿನ ತ್ಯಾಜ್ಯ, ಕೋಳಿ ತ್ಯಾಜ್ಯ, ತಂಪು ಪಾನೀಯ ಬಾಟಲಿಗಳನ್ನು ರಸ್ತೆ ಬದಿ ಬಿಸಾಕಲಾಗಿದೆ.ಇದರಿಂದ ಇಲ್ಲಿನ ಪರಿಸರ ದುರ್ನಾತ ಬೀರುತ್ತಿದೆ. ಜತೆಗೆ ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿ ಉಂಟಾಗಿದೆ.

ಕೊಳಚೆ ನೀರು ಹರಿಯುವುದರಿಂದ ಸಂಜಾಯಾಗುತ್ತಿದ್ದಂತೆ ಸೊಳ್ಳಗಳ ಕಾಟ ಉದ್ಭವಿಸಿದೆ. ಒಟ್ಟಿನಲ್ಲಿ ಪರಿಸರದ ಸ್ವಚ್ಛತೆ ಕಾಪಾಡುವಲ್ಲಿ ಕೊಕ್ಕರ್ಣೆ ಗ್ರಾಪಂ ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ತ್ಯಾಜ್ಯ ರಾಶಿ ಬೀಳುತ್ತಿರುವ ಸಮೀಪದಲ್ಲಿ ಅಂಗಡಿ ಮುಂಗಟ್ಟುಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಬ್ಯಾಂಕ್, ಸೊಸೈಟಿ, ಹಾಲು ಡೇರಿ, ಶಾಲಾ ಕಾಲೇಜು ಇದ್ದು, ಸ್ಥಳೀಯ ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕೊಳಚೆ ನೀರು ಮತ್ತು ತ್ಯಾಜ್ಯಗಳ ರಾಶಿಯಿಂದ ಪರಿಸರ ಸಂಪೂರ್ಣ ಹಾಳಾಗುತ್ತಿದೆ. ದಿನೇ ದಿನೆ ತ್ಯಾಜ್ಯ ರಾಶಿಗಳು ದೊಡ್ಡದಾಗಿ ಅಪಾಯಗಳನ್ನು ಸೃಷ್ಟಿಸುತ್ತಿದೆ. ಅನಾರೋಗ್ಯದ ಭೀತಿ ಕಾಡುತ್ತಿದೆ. ಗ್ರಾಪಂ ಈ ಬಗ್ಗೆ ನಿರ್ಲಕ್ಷೃ ವಹಿಸಿದೆ. ಗ್ರಾಪಂ ಶೀಘ್ರ ಕೊಳಚೆ ನೀರು ಮತ್ತು ತ್ಯಾಜ್ಯ ವಿಲೇವಾರಿ ಮಾಡಿಸಿ ಪರಿಸರವನ್ನು ಸ್ವಚ್ಛವಾಗಿಸದಿದ್ದರೆ ಮುಂದಿನ ದಿನಗಳಲ್ಲಿ ಭಾರಿ ಬೆಲೆ ತೆರಬೇಕಾದೀತು.

– ಪರಿಸರ ಪ್ರೇಮಿಗಳು, ಕೊಕ್ಕರ್ಣೆ

Leave a Reply

Your email address will not be published. Required fields are marked *