ತ್ಯಾಜ್ಯ ತೆರವುಗೊಳಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್, ಡಿಸಿಎಂ ಸವದಿ

ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆ ಮಂಗಳವಾರ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ತೇರು ಬೀದಿಯ ಕಿರಾಣಾ ಬಜಾರ್ ನಲ್ಲಿ ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಬಿಜೆಪಿ ರಾಜ್ಯ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹಾಗೂ ಡಿಸಿಎಂ ಲಕ್ಷ್ಮಣ್ ಸವದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಸ್ತೆ ಬದಿ ಹಾಕಲಾಗಿದ್ದ ಹೂವು, ತರಕಾರಿ, ಸೊಪ್ಪು, ತೆಂಗಿನ ಗರಿ ಇತ್ಯಾದಿ ತ್ಯಾಜ್ಯವನ್ನು ತೆರವುಗೊಳಿಸಲಾಯಿತು. ದಿನ ರಸ್ತೆ ಬದಿಯೇ ಕಸ ಹಾಕುತ್ತಾರಾ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಶಾಸಕ ಜಿ.ಸೋಮಶೇಖರರೆಡ್ಡಿ ಅವರಿಗೆ ಕೇಳಿದರು. ದಿನ ರಸ್ತೆ ಬದಿ ಹಾಕಿದ ಕಸವನ್ನು ಪಾಲಿಕೆಯವರು ತೆರವುಗೊಳಿಸುತ್ತಾರೆ ಎಂದು ಶಾಸಕ ಸೋಮಶೇಖರರೆಡ್ಡಿ ತಿಳಿಸಿದರು.

ಕಸ ವಿಲೇವಾರಿಗಾಗಿ ಹೊಸ ಬಿದಿರಿನ ಹಾಗೂ ಪ್ಲಾಸ್ಟಿಕ್ ಪುಟ್ಟಿಗಳು, ಸಲಕೆಗಳನ್ನು ತರಲಾಗಿತ್ತು. ಬಿಜೆಪಿ ಜಿಲ್ಲಾ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಮಾಜಿ ಸಂಸದ ಎಸ್.ಪಕ್ಕೀರಪ್ಪ, ರಾಬಕೊ ಹಾಲು ಒಕ್ಕೂಟದ ನಿರ್ದೇಶಕ ಜಿ.ವೀರಶೇಖರರೆಡ್ಡಿ, ಮುಖಂಡರಾದ ಎಸ್.ಜೆ.ವಿ.ಮಹಿಪಾಲ್, ಕೆ.ಎ.ರಾಮಲಿಂಗಪ್ಪ, ಎಚ್.ಹನುಮಂತಪ್ಪ, ಸುಗುಣ, ಸುಮ, ಶ್ರೀನಿವಾಸ್ ಪಾಟೀಲ್ ಹಾಗೂ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *