More

    ರಸ್ತೆಗೆ ಬದಿಯೇ ತ್ಯಾಜ್ಯ, ಎಸೆಯುವುಕ್ಕೆ ಬಿದ್ದಿಲ್ಲ ಕಡಿವಾಣ, ಬದಲಾಗದ ಜನರ ಮನಸ್ಥಿತಿ

    ಮಂಗಳೂರು: ಸುಶಿಕ್ಷಿತರು, ಪ್ರಜ್ಞಾವಂತರು ಅಧಿಕ ಸಂಖ್ಯೆಯಲ್ಲಿ ಇರುವ ಮಂಗಳೂರು ನಗರದಲ್ಲಿ ರಸ್ತೆಗೆ ತ್ಯಾಜ್ಯ ಎಸೆಯುವ ಕೆಟ್ಟ ಮನಸ್ಥಿತಿಗೆ ಇನ್ನೂ ಕಡಿವಾಣ ಬಿದ್ದಿಲ್ಲ. ಬೆಳಗ್ಗಿನ ಜಾವ ನಗರಕ್ಕೊಂದು ಸುತ್ತು ಬಂದರೆ ರಸ್ತೆಗಳಲ್ಲಿ ಚೆಲ್ಲಿದ ತ್ಯಾಜ್ಯ ದರ್ಶನವಾಗುತ್ತದೆ. ತ್ಯಾಜ್ಯ ನಿರ್ವಹಣೆಗೆ ಆಡಳಿತ ವ್ಯವಸ್ಥೆ ಸುಧಾರಿತ ಕ್ರಮಗಳನ್ನು ಅನುಷ್ಠಾನಕ್ಕೆ ತಂದಿದ್ದರೂ, ಕೆಲವೊಂದು ಜನರ ಮನಸ್ಥಿತಿ ಬದಲಾಗದೆ ಇರುವುದು ದುರದೃಷ್ಟಕರ.
    ಮನೆಗಳಿಂದ ಒಣ ಕಸ, ಹಸಿ ಕಸ ಎಂದು ಬೇರ್ಪಡಿಸಿ ಪಾಲಿಕೆ ತ್ಯಾಜ್ಯ ಸಂಗ್ರಹಿಸುತ್ತಿದೆ. ಇದಕ್ಕೆ ಸಾರ್ವಜನಿಕರಿಗೆ ಪೂರಕವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಆರೋಪವೂ ವ್ಯಕ್ತವಾಗಿದೆ.

    ಮನೆಗಳಲ್ಲಿ ಇಬ್ಬರಿದ್ದರೆ ಅವರು ಕೆಲಸಕ್ಕೆ ಹೋಗುವವರಾಗಿದ್ದರೆ ತ್ಯಾಜ್ಯ ಸಂಗ್ರಹಣೆ ಮಾಡುವವರು ಬರುವಾಗ ಅವರು ಮನೆಯಲ್ಲಿ ಇರುವುದಿಲ್ಲ. ಹೊರಗೆ ಇಟ್ಟು ಹೋದರೆ ಅದನ್ನು ನಾಯಿಗಳು ಎಳೆದು ಹಾಕಿ ಪರಿಸರವಿಡೀ ಹರಡುವಂತೆ ಮಾಡುತ್ತವೆ. ಅದಕ್ಕಾಗಿ ಮನೆಯಲ್ಲೇ ತ್ಯಾಜ್ಯ ಸಂಗ್ರಹಿಸಿಟ್ಟಿರುತ್ತಾರೆ. ರಾತ್ರಿ ವೇಳೆ ವಾಹನಗಳಲ್ಲಿ ತೆರಳಿ ನಿರ್ಜನ ಪ್ರದೇಶಗಳಲ್ಲಿ ರಸ್ತೆ ಬದಿಗೆ ಎಸೆದು ಬರುತ್ತಾರೆ. ಅಲ್ಲಿಯೂ ನಾಯಿಗಳು ಅದನ್ನು ರಸ್ತೆ ಮಧ್ಯಕ್ಕೆ ತಂದು ಹಾಕುತ್ತವೆ. ಮನೆ ಬಳಿ ನಾಯಿಗಳು ಕಸ ಎಳೆದು ಹಾಕುವುದನ್ನು ತಪ್ಪಿಸಲು ಹೊರಗೆ ಡಬ್ಬ ಅಳವಡಿಸಿ ಅದರೊಳಗೆ ಕಸ ಇಟ್ಟು ಹೋಗುವ ವ್ಯವಸ್ಥೆ ಮಾಡಲು ಸಾಧ್ಯವಿದೆ. ಬಹುತೇಕ ಮಂದಿ ಈ ಬಗ್ಗೆ ಯೋಚಿಸುವುದಿಲ್ಲ ಎಂದು ಪರಿಸರ ಪ್ರೇಮಿ ಮಹೇಶ್ ತಿಳಿಸಿದ್ದಾರೆ.

    ನದಿಗಳಿಗೆ ಕಸ: ಮೇರಿಹಿಲ್‌ನ ಹೆಲಿಪ್ಯಾಡ್ ರಸ್ತೆ, ವೆಲೆನ್ಸಿಯಾ ರಸ್ತೆ, ಯೆಯ್ಯಡಿ, ಉರ್ವ ಮಾರ್ಕೆಟ್, ಸೆಂಟ್ರಲ್ ಮಾರ್ಕೆಟ್ ಸೇರಿದಂತೆ ಮುಖ್ಯ ಹಾಗೂ ಒಳ ರಸ್ತೆಗಳಲ್ಲಿ ತ್ಯಾಜ್ಯ ಎಸೆಯುವುದು ಸಾಮಾನ್ಯವಾಗಿದೆ. ಹೆಲಿಪ್ಯಾಡ್ ರಸ್ತೆ ಬದಿಯಲ್ಲಿ 25 ಲೋಡ್‌ನಷ್ಟು ಕಟ್ಟಡ ತ್ಯಾಜ್ಯ ರಾಶಿ ಹಾಕಿದ್ದಾರೆ. ಇನ್ನು ಕೆಲವರು ಕೋಳಿ, ತರಕಾರಿ ತ್ಯಾಜ್ಯಗಳನ್ನು ಕೊಂಡೊಯ್ದು ನದಿಗಳಿಗೆ ಎಸೆಯುವ ಪ್ರವೃತ್ತಿಯೂ ಹೆಚ್ಚುತ್ತಿದೆ. ಕೂಳೂರು ಪರಿಸರದಲ್ಲಿ ಗುರುಪುರ ನದಿಗೆ ಕಸ ತಂದು ಹಾಕುತ್ತಿದ್ದ ಹಲವು ಮಂದಿಯನ್ನು ಈಗಾಗಲೇ ಪತ್ತೆ ಮಾಡಲಾಗಿದೆ. ಪಾಲಿಕೆ ತಪ್ಪಿತಸ್ಥರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳದೆ ಬಿಟ್ಟು ಬಿಡುವುದರಿಂದ ಇಂತಹ ಕೃತ್ಯಗಳು ಮರುಕಳಿಸುತ್ತವೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಂಗಳೂರು ಮಹಾನಗರ ಪಾಲಿಕೆ ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ಹಸಿ ಕಸ, ಒಣ ಕಸ ಸಂಗ್ರಹದ ಗೊಂದಲದಿಂದಾಗಿ ಜನರು ರಸ್ತೆ ಬದಿಗೆ ತಂದು ಹಾಕುತ್ತಿದ್ದಾರೆ. ಇನ್ನು ಕೆಲವರು ನದಿಗೆ ಕೊಂಡೊಯ್ದು ಹಾಕುತ್ತಿದ್ದಾರೆ. ಇಲ್ಲಿ ಕಸ ಹಾಕುವವರಲ್ಲಿ ಹಾಗೂ ಮನಪಾ ಆಡಳಿತ ವ್ಯವಸ್ಥೆಯಲ್ಲಿ ಲೋಪವಿದೆ.
    -ಜೆ.ಆರ್.ಲೋಬೊ, ಮಾಜಿ ಶಾಸಕರು

    ತ್ಯಾಜ್ಯ ನಿರ್ವಹಣೆಯಲ್ಲಿ ಪಾಲಿಕೆ ಹಲವು ಸುಧಾರಿತ ಕ್ರಮಗಳನ್ನು ಅನುರಿಸುತ್ತಿದೆ. ಹಸಿ ಹಾಗೂ ಒಣ ಕಸ ಸಂಗ್ರಹದಿಂದ ಅದರ ನಿರ್ವಹಣೆ ಸುಲಭವಾಗುತ್ತಿದೆ. ರಸ್ತೆ ಬದಿಯಲ್ಲಿ ಕಸ ಎಸೆಯುವುದು ತಪ್ಪು ಎನ್ನುವ ಪ್ರಜ್ಞೆ ಹಾಗೂ ಪರಿಸರ ಶುಚಿತ್ವ ಜಾಗೃತಿ ಪ್ರತಿಯೊಬ್ಬನಿಗೂ ಬರಬೇಕು. ಅದಿಲ್ಲದಿದ್ದರೆ ಆಡಳಿತ ವ್ಯವಸ್ಥೆ ಎಷ್ಟೇ ಸುಧಾರಿತ ಯೋಜನೆ ಜಾರಿಗೆ ತಂದರೂ ವ್ಯರ್ಥ.
    -ದಿವಾಕರ ಪಾಂಡೇಶ್ವರ, ಮೇಯರ್ 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts