ಕಣ್ಣು ಹೊಡೆದ ವಿಡಿಯೋ ವೈರಲ್​ ಆದ ನಂತರ ಗೃಹಬಂಧನಕ್ಕೀಡಾಗಿದ್ದರಂತೆ: ಸತ್ಯ ಬಿಚ್ಚಿಟ್ಟ ಕಣ್ಸನ್ನೆ ಹುಡುಗಿ ಪ್ರಿಯಾ

ಕೊಚ್ಚಿ: ಮಲೆಯಾಳಂನ “ಒರು ಅಡರ್​ ಲವ್​” ಸಿನಿಮಾದ ಹಾಡಿನಲ್ಲಿದ್ದ ಕಣ್ಣು ಹೊಡೆಯುವ ದೃಶ್ಯ ವೈರಲ್​ ಆದ ನಂತರ ಪ್ರಿಯಾ ಪ್ರಕಾಶ್​ ವಾರಿಯರ್​ ಹಲವು ದಿನಗಳ ಕಾಲ ಗೃಹಬಂಧನಕ್ಕೆ ಈಡಾಗಿದ್ದರಂತೆ. ಸ್ವತಃ ಪ್ರಿಯಾ ಅವರೇ ಈ ವಿಚಾರವನ್ನು ಈಗ ಬಹಿರಂಗಪಡಿಸಿದ್ದಾರೆ.

” ನನಗೆ ಮತ್ತು ನನ್ನ ಕುಟುಂಬಕ್ಕೆ ಎಲ್ಲವೂ ಹೊಸದೇ. ಸಿನಿಮಾದ ಹಾಡಿನ ಆ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆದ ಬಳಿಕ ನಾನು ಗೃಹಬಂಧನಕ್ಕೆ ಒಳಗಾಗಬೇಕಾಯಿತು. ಮಾಧ್ಯಮದವರು ಯಾವುದೇ ಮುನ್ಸೂಚನೆಯೂ ಇಲ್ಲದೇ ನಮ್ಮ ಮನೆ ಬಾಗಿಲು ಬಡಿಯಲಾರಂಭಿಸಿದ್ದರು. ಹೀಗಾಗಿ ನನ್ನ ತಂದೆ ತಾಯಿ ಆತಂಕಕ್ಕೀಡಾಗಿದ್ದರು. ನನ್ನನ್ನು ಮನೆಯಿಂದ ಹೊರಗೆ ಬಿಡಲೂ ಅವರು ಹೆದರುತ್ತಿದ್ದರು. ನಾನು ಒಂದರ್ಥದಲ್ಲಿ ಗೃಹ ಬಂಧನಕ್ಕೆ ಒಳಗಾಗಬೇಕಾಯಿತು,” ಎಂದು ಅವರು ಹೇಳಿಕೊಂಡಿದ್ದಾರೆ.

“ಒರು ಅಡರ್​ ಲವ್​” ಚಿತ್ರದ “ಮಾಣಿಕ್ಯ ಮಲರಾಯ ಪೂವಿ” ಎಂಬ ಹಾಡಿನಲ್ಲಿ ಪ್ರಿಯಾ ಅವರು ತಮ್ಮ ಸಹಪಾಠಿಗೆ ಕಣ್ಣು ಹೊಡೆಯುವ ವಿಡಿಯೋ ಕಳೆದ ವರ್ಷ ದೇಶಾದ್ಯಂತ ಸಾಮಾಜಿ ಜಾಲತಾಣಗಳಲ್ಲಿ ವೈರಲ್​ಗೊಂಡಿತ್ತು. ರಾತ್ರೋ ರಾತ್ರಿ ಪ್ರಿಯಾ ಜನಪ್ರಿಯರಾಗಿದ್ದರು.