Tuesday, 11th December 2018  

Vijayavani

Breaking News

ಶ್ರೀಶಾಂತ್ ಮೇಲೆ ನಿಕೇಶಾ ಗರಂ!

Friday, 12.10.2018, 3:00 AM       No Comments

ಕನ್ನಡದ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ನಿಕೇಶಾ ಪಟೇಲ್, ಮಾಜಿ ಕ್ರಿಕೆಟಿಗ ಎಸ್. ಶ್ರೀಶಾಂತ್ ವಿರುದ್ಧ ಗರಂ ಆಗಿದ್ದಾರೆ. ಹಿಂದಿಯ ಬಿಗ್​ಬಾಸ್ ರಿಯಾಲಿಟಿ ಶೋನ 12ನೇ ಸೀಸನ್​ನಲ್ಲಿ ಪಾಲ್ಗೊಂಡಿರುವ ಶ್ರೀಶಾಂತ್, ಇತ್ತೀಚೆಗೆ ಟಾಸ್ಕ್​ವೊಂದರಲ್ಲಿ ಪ್ರೀತಿ-ಪ್ರೇಮದ ಬಗ್ಗೆ ಒಂದು ಹೇಳಿಕೆ ನೀಡಿದ್ದರು. ಆ ಹೇಳಿಕೆಯಿಂದಾಗಿ ಶ್ರೀಶಾಂತ್ ಮೇಲೆ ನಿಕೇಶಾ ಕೆಂಡ ಕಾರುತ್ತಿದ್ದಾರೆ. ಅಷ್ಟಕ್ಕೂ ಏನದು ಹೇಳಿಕೆ?

ಕಳೆದ ಕೆಲವು ವರ್ಷಗಳ ಹಿಂದೆ ನಿಕೇಶಾ ಮತ್ತು ಶ್ರೀಶಾಂತ್ ಲಿವ್ ಇನ್ ರಿಲೇಶನ್​ಶಿಪ್​ನಲ್ಲಿದ್ದರು. ಎಲ್ಲೆಂದರಲ್ಲಿ ಕೈ ಕೈ ಹಿಡಿದು ಸುತ್ತಾಡಿದ್ದರು. ಇಬ್ಬರೂ ಇನ್ನೇನು ಮದುವೆಯಾಗಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, 2013ರಲ್ಲಿ ಭುವನೇಶ್ವರಿ ಕುಮಾರಿಯನ್ನು ವರಿಸುವ ಮೂಲಕ ನಿಕೇಶಾ ಜತೆಗಿನ ಲಿವ್ ಇನ್ ರಿಲೇಶನ್​ಶಿಪ್​ಗೆ ಶ್ರೀಶಾಂತ್ ತಿಲಾಂಜಲಿ ಇಟ್ಟಿದ್ದರು.

ಬಳಿಕ ನಿಕೇಶಾ-ಶ್ರೀಶಾಂತ್ ನಡುವೆ ಬ್ರೇಕಪ್ ಆಗಿತ್ತು. ಹೀಗಿರುವಾಗ ಇತ್ತೀಚೆಗೆ ಶುರುವಾದ ಬಿಗ್​ಬಾಸ್​ನಲ್ಲಿ ‘ನಾನು ಮತ್ತು ಭುವನೇಶ್ವರಿ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದೆವು. 2013ರಲ್ಲಿ ಮದುವೆಯಾದೆವು’ ಎಂದು ಶ್ರೀಶಾಂತ್ ಹೇಳಿಕೊಂಡಿದ್ದರು. ಈ ಮಾತು ನಿಕೇಶಾ ಅವರ ಕಣ್ಣು ಕೆಂಪಾಗುವಂತೆ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಕಳೆದ ಏಳು ವರ್ಷದಿಂದ ಭುವನೇಶ್ವರಿಯನ್ನು ಪ್ರೀತಿಸುತ್ತಿದ್ದರು ಎಂದ ಮೇಲೆ ನನ್ನೊಟ್ಟಿಗೆ ವರ್ಷಗಟ್ಟಲೇ ರಿಲೇಶನ್​ಶಿಪ್​ನಲ್ಲಿ ಇರುವ ಅವಶ್ಯಕತೆಯಾದರೂ ಏನಿತ್ತು? ಇದೇ ನನಗೆ ಅಚ್ಚರಿ ಎನಿಸುತ್ತಿದೆ’ ಎಂದು ಶ್ರೀಶಾಂತ್ ಮೇಲೆ ಹರಿಹಾಯ್ದಿದ್ದಾರೆ.

ಅಷ್ಟೇ ಅಲ್ಲ, ಶ್ರೀಶಾಂತ್ ಸ್ವಭಾವದ ಬಗ್ಗೆಯೂ ನಿಕೇಶಾ ಹೇಳಿದ್ದಾರೆ. ‘ಬಿಗ್​ಬಾಸ್​ನಲ್ಲಿ ತಾನೊಬ್ಬ ಸಭ್ಯ, ಮಹಾನ್ ವ್ಯಕ್ತಿ ಎಂದು ಹೇಳಿಕೊಳ್ಳುತ್ತಿದ್ದಾನೆ. ಅವನ ಹುಳುಕು ನನಗೆ ಗೊತ್ತು. ಅವನೇನು ಮಹಾನ್ ಅಲ್ಲ. ಶೋದಲ್ಲಿ ನಾನೊಬ್ಬ ಅದ್ಭುತ ವ್ಯಕ್ತಿ ಎಂದು ತೋರಿಸಿಕೊಳ್ಳಲು ಆ ರೀತಿಯಲ್ಲಿ ನಟಿಸುತ್ತಿದ್ದಾನೆ. ಮಹಿಳೆಯರ ಬಗ್ಗೆ ಅಪಾರ ಗೌರವವಿದೆ ಎನ್ನುವ ಆತ ಮಹಿಳೆಗೆ ಗೌರವವನ್ನೇ ನೀಡುವುದಿಲ್ಲ’ ಎಂದು ಶ್ರೀಶಾಂತ್ ವಿರುದ್ಧ ಚಾಟಿ ಬೀಸಿದ್ದಾರೆ ನಿಕೇಶಾ. -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top