ಚೆನ್ನೈ: ತಮಿಳು ಚಿತ್ರರಂಗದಲ್ಲಿ ಬಾಲನಟನಾಗಿ ಪಾದರ್ಪಣೆ ಮಾಡಿ ನಂತರ ಹೀರೋ ಆದವರಲ್ಲಿ ಜಯಂ ರವಿ ಕೂಡ ಒಬ್ಬರು. ಹೀರೋ ಮಾತ್ರವಲ್ಲ ಇಂದು ಸ್ಟಾರ್ ನಟರಲ್ಲಿ ಜಯಂ ರವಿ ಕೂಡ ಒಬ್ಬರು. 1989ರಲ್ಲಿ ಒರು ತೊಟ್ಟಿಲ್ ಸಬಥಮ್ ಚಿತ್ರದಲ್ಲಿ ಬಾಲನಟನಾಗಿ ಪಾದರ್ಪಣೆ ಮಾಡಿದರು, ನಂತರ ಎರಡು ತೆಲುಗು ಚಿತ್ರಗಳಲ್ಲಿ ಬಾಲನಟನಾಗಿ ನಟಿಸಿದರು.
ತನ್ನ ಕಾಲೇಜು ಶಿಕ್ಷಣವನ್ನು ಮುಗಿಸಿದ ನಂತರ, ತಮ್ಮ ಸಹೋದರ ಮೋಹನ್ ರಾಜ ನಿರ್ದೇಶನದ 2003 ರಲ್ಲಿ ತೆರೆಕಂಡ ಜಯಂ ಚಿತ್ರದಲ್ಲಿ ನಾಯಕನಾಗಿ ಪಾದರ್ಪಣೆ ಮಾಡಿದರು. ಮೊದಲ ಚಿತ್ರದಲ್ಲೇ ಎಲ್ಲರ ಮೆಚ್ಚುಗೆ ಗಳಿಸಿದರು. ಈ ಸಿನಿಮಾದಿಂದ ಜಯಂ ರವಿ ಎಂಬ ಹೆಸರು ಖಾಯಂ ಆಯಿತು. ಬಳಿಕ 2004ರಲ್ಲಿ ಜಯಂ ರವಿ ಹಾಗೂ ಮೋಹನ್ ರಾಜ ಕಾಂಬೋ ಚಿತ್ರ ‘ಎಂ ಕುಮಾರನ್ ಸನ್ ಆಫ್ ಮಹಾಲಕ್ಷ್ಮಿ’ ತಮಿಳು ಚಿತ್ರರಂಗದಲ್ಲಿ ಒಳ್ಳೆಯ ಯಶಸ್ಸನ್ನು ದಾಖಲಿಸಿತು. ಇದರ ಬೆನ್ನಲ್ಲೇ ದಾಸ್, ರಾಮಿ, ಇರಿಟಾ ತಿರುದನ್, ತೋಕ್ಕು ಮತ್ತು ಮನಂ, ದೀಪಾವಳಿ, ಸಂತೋಷ್ ಸುಬ್ರಮಣ್ಯಂ, ಧಾಮ್ ಧೂಮ್ ಹೀಗೆ ವೈವಿಧ್ಯಮಯ ಪಾತ್ರಗಳಲ್ಲಿ ಜಯಂ ರವಿ ನಟಿಸಿದರು. ಅವರು ನಟಿಸಿದ ಬಹುತೇಕ ಚಿತ್ರಗಳು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ.
ಸದ್ಯ ತಮಿಳು ಚಿತ್ರರಂಗದಲ್ಲಿ ಸ್ಟಾರ್ ನಟರಾಗಿರುವ ಜಯಂ ರವಿ 2009ರಲ್ಲಿ ಖ್ಯಾತ ನಿರ್ಮಾಪಕಿ ಸುಜಾತಾ ಅವರ ಪುತ್ರಿ ಆರತಿಯನ್ನು ಪ್ರೀತಿಸಿ ಮದುವೆಯಾದರು. ಇದೀಗ ಅವರ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎಬ್ಬಿರುವುದಾಗಿ ಸುದ್ದಿಯೊಂದು ಹರಿದಾಡುತ್ತಿದೆ. ಇಬ್ಬರು ಗಂಡು ಮಕ್ಕಳಿರುವಾಗಲೇ ಜಯಂ ರವಿ ಮತ್ತು ಆರತಿ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿದೆ. ಆದರೆ ಇಲ್ಲಿಯವರೆಗೆ ಜಯಂ ರವಿಯಾಗಲಿ ಅಥವಾ ಆರತಿಯಾಗಲಿ ಈ ಮಾಹಿತಿಯನ್ನು ಖಚಿತಪಡಿಸಿಲ್ಲ. ಆದರೆ, ಈ ವಿಷಯದ ಬಗ್ಗೆ ಅನೇಕ ವದಂತಿಗಳು ಹರಿದಾಡುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತೆ ಜಯಂ ರವಿ ಮತ್ತು ಆರತಿ ಒಬ್ಬರಿಗೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅನ್ಫಾಲೋ ಮಾಡಿದ್ದಾರೆ. ಅಲ್ಲದೆ, ಫೋಟೋಗಳನ್ನು ಸಹ ಡಿಲೀಟ್ ಮಾಡಿದ್ದಾರೆ. ಇಬ್ಬರು ಡಿವೋರ್ಸ್ ಪಡೆಯುವುದು ಬಹುತೇಕ ಖಚಿತ ಎಂಬ ಮಾತುಗಳು ಕೇಳಿಬರುತ್ತಿವೆ.
ಡಿವೋರ್ಸ್ ಸುದ್ದಿಯ ನಡುವೆಯೇ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಜಯಂ ರವಿ ಅವರು ಆರತಿಯನ್ನು ಮದುವೆಯಾಗದೇ ಇದ್ದಿದ್ದರೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಗಳನ್ನು ಮದುವೆಯಾಗುತ್ತಿದ್ದರು ಎಂದು ಹಿರಿಯ ಪತ್ರಕರ್ತೆ ಸಬಿತಾ ಜೋಸೆಫ್ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಮಾತನಾಡಿದ ಸಬಿತಾ, ಜಯಂ ರವಿ ಹಾಗೂ ಆರತಿ ಪ್ರೀತಿಗೆ ನಟಿ ಖುಷ್ಬು ಕಾರಣ. ಜಯಂ ರವಿ ಮತ್ತು ರಜಿನಿ ಮಗಳ ಮದುವೆಯ ಬಗ್ಗೆ ಕೆಲವು ಮಾತುಕತೆಗಳು ನಡೆದಿದ್ದವು. ಆದರೆ, ಜಯಂ ರವಿ, ಆರತಿಯನ್ನು ಪ್ರೀತಿಸುತ್ತಿದ್ದರು ಮತ್ತು ಆರತಿಯ ತಾಯಿ ಸುಜಾತಾಗೂ ಇಬ್ಬರ ಮದುವೆಯ ಬಗ್ಗೆ ಆಸಕ್ತಿ ಹೊಂದಿದ್ದರು. ಏಕೆಂದರೆ ಜಯಂ ರವಿ ನೋಡಲು ಆಕರ್ಷಕವಾಗಿದ್ದರು ಎಂದು ಹೇಳಿದ್ದಾರೆ. ಸದ್ಯ ಸಬಿತಾ ಅವರ ಮಾತುಗಳು ಕಾಲಿವುಡ್ನಲ್ಲಿ ಸಖತ್ ವೈರಲ್ ಆಗುತ್ತಿದೆ. (ಏಜೆನ್ಸೀಸ್)
ಡಿವೋರ್ಸ್ ಹಾದಿಯಲ್ಲಿ ಮತ್ತೊಂದು ಸ್ಟಾರ್ ಜೋಡಿ: ನಟ ಜಯಂ ರವಿ ದಾಂಪತ್ಯ ಜೀವನದಲ್ಲಿ ಬಿರುಗಾಳಿ!?
ಆತನಿಂದ ನಾನು ಮೋಸ ಹೋದೆ! ನೋವಿನ ಸಂಗತಿ ಬಿಚ್ಚಿಟ್ಟ ನಟಿ ನಿವೇತಾ ಪೇತುರಾಜ್