ಮಾಂಜರಿ: ಯೋಧ ಪ್ರವೀಣ ಪಂಚಭೂತಗಳಲ್ಲಿ ಲೀನ

ಮಾಂಜರಿ: ಪಂಜಾಬ್‌ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಆಕಸ್ಮಿಕವಾಗಿ ತಲೆಗೆ ಗುಂಡು ತಗುಲಿ ಹುತಾತ್ಮನಾದ ಯೋಧ ಪ್ರವೀಣ ಸಾಗರ ಪಟ್ಟಣಕುಡೆ (32) ಅಂತ್ಯಕ್ರಿಯೆ ಸ್ವಗ್ರಾಮ ಚಂದೂರಲ್ಲಿ ಭಾನುವಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.

ಯೋಧ ಪ್ರವೀಣ ಪಟ್ಟಣಕುಡೆ ಮಾ.7ರಂದು ಪಂಜಾಬ್‌ನಲ್ಲಿ ತರಬೇತಿ ಪಡೆಯುವಾಗ ಅಕಸ್ಮಿಕವಾಗಿ ತಲೆಗೆ ಗುಂಡು ತಗುಲಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಯೋಧ ಚಿಕಿತ್ಸೆ ಫಲಿಸದೆ ಮಾ.9 ರಂದು ಮೃತಪಟ್ಟಿದ್ದರು. ಪುಣೆಯಿಂದ ರಸ್ತೆ ಮಾರ್ಗವಾಗಿ ಚಂದೂರ ಗ್ರಾಮಕ್ಕೆ ಭಾನುವಾರ ಬೆಳಗ್ಗೆ 8 ಗಂಟೆಗೆ ಪಾರ್ಥಿವ ಶರೀರ ತಲುಪಿತು.

ಟ್ರ್ಯಾಕ್ಟರ್‌ನಲ್ಲಿ ಪಾರ್ಥಿವ ಶರೀರವಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಗ್ರಾಮದ ಹೊರವಲಯದಲ್ಲಿರುವ ಯೋಧನ ಹೊಲದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಯೋಧನಿಗೆ ಅಂತಿಮ ನಮನ ಸಲ್ಲಿಸಲಾಯಿತು.

ಬಿಎಸ್‌ವೈ ಭೇಟಿ: ಹುತಾತ್ಮ ಯೋಧನ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಚಿಕ್ಕೋಡಿಯಲ್ಲಿ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆಗೆ ಆಗಮಿಸಿದ್ದ ಬಿ.ಎಸ್.ವೈ ಅವರೊಂದಿಗೆ ಮಾಜಿ ಸಚಿವರಾದ ಲಕ್ಷ್ಮಣ ಸವದಿ, ಉಮೇಶ ಕತ್ತಿ, ವಿಧಾನ ಪರಿಷತ್ ಪ್ರತಿಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಶಾಸಕಿ ಶಶಿಕಲಾ ಜೊಲ್ಲೆ, ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಚಂದೂರ ಗ್ರಾಮಕ್ಕೆ ತರಳಿ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.