ನಕ್ಸಲ್ ದಾಳಿಗೆ ಕಾರವಾರದ ಯೋಧ ಹುತಾತ್ಮ

ಕಾರವಾರ: ಛತ್ತೀಸ್​ಗಢ ರಾಜ್ಯದಲ್ಲಿ ನಕ್ಸಲರು ನಡೆಸಿದ ಬಾಂಬ್ ದಾಳಿಗೆ ಕಾರವಾರ ಮೂಲದ ಬಿಎಸ್​ಎಫ್ ಯೋಧ ವಿಜಯಾನಂದ ನಾಯ್ಕ (29) ಹುತಾತ್ಮರಾಗಿದ್ದಾರೆ.

ಛತ್ತೀಸ್​ಗಢದ ರಾಯಪುರದಿಂದ ಸುಮಾರು 200 ಕಿಮೀ ದೂರವಿರುವ ಕಂಕರ್ ಜಿಲ್ಲೆಯ ತಡಬೌಲಿ ಗ್ರಾಮದ ಬಳಿ ಸೋಮವಾರ ಸಂಜೆ ನಡೆದ ಇಂಪ್ರೂವ್ಡ್ ಎಕ್ಸ್​ಪ್ಲೋಸಿ ಡಿವೈಸ್ (ಐಇಡಿ) ಸ್ಪೋಟದಲ್ಲಿ ವಿಜಯಾನಂದ ನಾಯ್ಕ ಹಾಗೂ ಅವರ ಜತೆ ಇದ್ದ ಬೆಳಗಾವಿಯ ಸಂತೋಷ ವೀರ ಮರಣವನ್ನಪ್ಪಿದ್ದಾರೆ.

ಛತ್ತೀಸ್​ಗಢದ ಕಂಕರ್ ಜಿಲ್ಲೆಯಲ್ಲಿ ನಕ್ಸಲರ ಅಟ್ಟಹಾಸ ಮಟ್ಟ ಹಾಕಲು ಗಡಿ ರಕ್ಷಣಾ ಪಡೆಯ 121 ಬೆಟಾಲಿಯನ್​ನ 200 ಯೋಧರ ವಿಶೇಷ ತುಕಡಿ ಕೆಲ ದಿನಗಳಿಂದ ಕಾರ್ಯಾಚರಣೆ ನಡೆಸಿತ್ತು. ಸೋಮವಾರ ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ 13 ಬೈಕ್​ಗಳಲ್ಲಿ 8 ತಂಡಗಳಲ್ಲಿ ಯೋಧರು ತೆರಳುತ್ತಿದ್ದರು. ನಾಲ್ಕನೇ ಬೈಕ್​ನಲ್ಲಿ ವಿಜಯಾನಂದ ಅವರು ತೆರಳುತ್ತಿರುವ ಸಂದರ್ಭದಲ್ಲಿ ಐಇಡಿ ಸ್ಪೋಟಗೊಂಡಿದೆ.

ವಿಜಯಾನಂದ ನಾಯ್ಕ ಕಾರವಾರದ ಕೋಡಿಬಾಗದ ಕೋಮಾರಪಂಥವಾಡದ ನಿವೃತ್ತ ಗ್ರಾಮ ಲೆಕ್ಕಿಗ ಸುರೇಶ ನಾಯ್ಕ ಹಾಗೂ ವಿದ್ಯಾ ದಂಪತಿಯ ಎರಡನೇ ಪುತ್ರ. ಮೊದಲ ಮಗ ವಿಶಾಲ ಕಾರವಾರದ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸಹೋದರಿ ಭಾಗ್ಯಶ್ರೀ ಅವರಿಗೆ ವಿವಾಹವಾಗಿದ್ದಾರೆ.

ಕಾರವಾರದ ಸ್ವಾಮಿ ವಿವೇಕಾನಂದ ಹೈಸ್ಕೂಲ್​ನಲ್ಲಿ ಪ್ರೌಢ ಶಿಕ್ಷಣ, ಶಿವಾಜಿ ಕಾಲೇಜ್​ನ ವಿಜ್ಞಾನ ವಿಭಾಗದಲ್ಲಿ ಪಿಯುಸಿ ಓದಿದ್ದರು. ಜೊಯಿಡಾದಲ್ಲಿ ಡಿಪ್ಲೊಮಾ ಮಾಡಿದ್ದರು. 2014 ರಲ್ಲಿ ಭಾರತೀಯ ಗಡಿ ರಕ್ಷಣಾ ಪಡೆಗೆ ಆಯ್ಕೆಯಾಗಿದ್ದರು. ಮಣಿಪುರ ಇಂಫಾಲ್​ನಲ್ಲಿ ತರಬೇತಿ ಪಡೆದ ನಂತರ ಪಶ್ಚಿಮ ಬಂಗಾಳ, ಹೈದ್ರಾಬಾದ್​ನಲ್ಲಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗಷ್ಟೇ ಛತ್ತೀಸಗಢದಲ್ಲಿ ನಕ್ಸಲ್ ಕಾರ್ಯಾಚರಣೆ ಪಡೆಗೆ ನೇಮಕವಾಗಿದ್ದರು.

ಯೋಧರ ಕುಟುಂಬ: ವಿಜಯಾನಂದ ಅವರ ಅಜ್ಜ ವಿಶ್ರಾಮ ನಾಯ್ಕ ಹಿಂದೆ ಸೈನ್ಯದಲ್ಲಿ ಕಾರ್ಯನಿರ್ವಹಿಸಿದ್ದರು. ಅದರಿಂದ ಪ್ರೇರಿತರಾದ ವಿಜಯಾನಂದ ತಾನೂ ಸೇನೆ ಸೇರಬೇಕು ಎಂಬ ಇಚ್ಛೆಯನ್ನು ಬಾಲ್ಯದಿಂದಲೇ ಹೊಂದಿದ್ದರು. ಕಾಲೇಜ್​ಗೆ ತೆರಳುವಾಗ ಎನ್​ಸಿಸಿ ಸೇರಿದ್ದರು. ಸೇನೆ ಸೇರಿದ ನಂತರವೂ ಉತ್ತಮವಾಗಿ ಕಾರ್ಯನಿರ್ವಹಿಸಿ ಮೆಡಲ್ ಪಡೆದಿದ್ದರು ಎನ್ನುತ್ತಾರೆ ಚಿಕ್ಕಪ್ಪ ಸಂತೋಷ ನಾಯ್ಕ.

ಒಳ್ಳೆಯ ವ್ಯಕ್ತಿತ್ವ: ಎಲ್ಲರನ್ನೂ ಕಾಳಜಿ ಮಾಡುವ ಉತ್ತಮ ವ್ಯಕ್ತಿತ್ವ ಹೊಂದಿದವರಾಗಿದ್ದರು ಎಂಬುದು ವಿಜಯಾನಂದ ಸ್ನೇಹಿತರು ಹಾಗೂ ಕುಟುಂಬದವರ ಅಭಿಪ್ರಾಯ. ಇತ್ತೀಚೆಗಷ್ಟೇ ತಂದೆಯವರಿಗೆ ಹೊಸ ಬೈಕ್ ಕೊಡಿಸಿದ್ದ ವಿಜಯಾನಂದ ಅಣ್ಣ ವಿಶಾಲ್​ಗೆ ಎನ್​ಫೀಲ್ಡ್ ಬೈಕ್ ಕೊಡಿಸಲು ಮಾತುಕತೆ ನಡೆಸಿದ್ದರು. ಡಿಸೆಂಬರ್​ನಲ್ಲಿ ನಡೆಯುವ ಅತ್ತೆ ಮಗಳ ಮದುವೆ ರಜೆ ಹಾಕಿ ಬರುತ್ತೇನೆ ಎಂದಿದ್ದರು ಎನ್ನುತ್ತಾರೆ ಸ್ನೇಹಿತ ಪ್ರಮೋದ ನಾಯ್ಕ . ಎರಡು ತಿಂಗಳ ರಜೆಯ ಮೇಲೆ ಆಗಮಿಸಿದ್ದ ವಿಜಯಾನಂದ ಮೇ 1 ರಂದು ಕರ್ತವ್ಯಕ್ಕೆ ಮರಳಿದ್ದರು. ಸೋಮವಾರ ಬೆಳಗ್ಗೆ ಮನೆಯವರಿಗೆ ಕರೆ ಮಾಡಿದ್ದರು ಎನ್ನಲಾಗಿದೆ. ಆದರೆ, ರಾತ್ರಿ 7 ಗಂಟೆಯ ಹೊತ್ತಿಗೆ ಅವರ ಸಾವಿನ ಸುದ್ದಿ ಮನೆಯವರನ್ನು ತಲ್ಲಣಗೊಳಿಸಿದೆ.

ಅಂತಿಮ ನಮನಕ್ಕೆ ಇಂದು ವ್ಯವಸ್ಥೆ: ವಿಜಯಾನಂದ ನಾಯ್ಕ ಅವರ ಪಾರ್ಥಿವ ಶರೀರವನ್ನು ಜು.11 ರಂದು ಬೆಳಗ್ಗೆ 9 ಗಂಟೆಗೆ ಕಾರವಾರಕ್ಕೆ ತರಲಾಗುತ್ತಿದೆ. ಜಿಲ್ಲಾಧಿಕಾರಿ ಕಚೇರಿಯ ಎದುರು ಜಿಲ್ಲಾಡಳಿತದಿಂದ ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಲಾಗುವುದು. ಅಲ್ಲಿಂದ ಮೆರವಣಿಗೆ ಮೂಲಕ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಪೊಲೀಸ್ ಪೆರೆಡ್ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ನಂತರ ಕೋಮಾರಪಂತವಾಡದ ಅವರ ಮನೆಗೆ ವಿಜಯಾನಂದ ಪಾರ್ಥಿವ ಶರೀರ ಕೊಂಡೊಯ್ಯಲಾಗುವುದು. ನಂತರ ಅಂತಿಮ ವಿಧಿ ವಿಧಾನಗಳನ್ನು ನಡೆಸಲು ತೀರ್ವನಿಸಲಾಗಿದೆ.

ದುಃಖದ ಮಡುವಿನಲ್ಲಿ ಕೋಡಿಬಾಗ: ಕೋಡಿಬಾಗಕ್ಕೆ ಬಂದರೆ ಅಕ್ಕಪಕ್ಕದ ಮನೆಯವರನ್ನೆಲ್ಲ ಪ್ರೀತಿಯಿಂದ ಕಾಣುತ್ತಿದ್ದ ವಿಜಯಾನಂದ ನಾಯ್ಕ ಅವರು ಎಲ್ಲರ ನೆಚ್ಚಿನವರಾಗಿದ್ದರು. ಇದರಿಂದ ಮನೆಯವರಷ್ಟೇ ಅಲ್ಲದೆ, ಇಡೀ ಓಣಿ, ನೆಂಟರು, ಸ್ನೇಹಿತರು ದುಃಖದಲ್ಲಿ ಮುಳುಗಿದ್ದಾರೆ. ತಂದೆ ಸುರೇಶ ನಾಯ್ಕ ಹಾಗೂ ತಾಯಿ ವಿದ್ಯಾ ಆರೋಗ್ಯ ಸ್ಥಿತಿ ಹದಗೆಟ್ಟಿದೆ.