ಹಾವೇರಿ: ಪ್ರಾಥಮಿಕ ಹಾಗೂ ಪ್ರೌಢಶಾಲಾ ಹೆಚ್ಚುವರಿ ಬೋಧನಾ ಕೊಠಡಿ ನಿರ್ಮಾಣ ಹಾಗೂ ಮರು ನಿರ್ಮಾಣ ಕಾಮಗಾರಿಯ ಅನುಮೋದನೆ ಪಡೆಯಲು ವಿಳಂಬ ಮಾಡಿದ ಕಾರಣಕ್ಕೆ ಡಿಡಿಪಿಐ ಅಂದಾನೆಪ್ಪ ವಡಗೇರಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ, ಜಿಲ್ಲಾಧಿಕಾರಿಗೆ ಸೂಚಿಸಿದರು.
ನಗರದ ಜಿಪಂ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ತ್ರೖೆಮಾಸಿಕ ಕೆಡಿಪಿ ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆಯ ವೇಳೆ, ಜಿಲ್ಲೆಯಲ್ಲಿ 33 ಬೋಧನಾ ಕೊಠಡಿಗಳ ನಿರ್ಮಾಣ ಹಾಗೂ ಮರು ನಿರ್ವಣಕ್ಕೆ 5.28 ಕೋಟಿ ರೂ.ಗಳ ಅನುದಾನ ಮಂಜೂರಾಗಿದ್ದರೂ ಅನುಮೋದನೆ ಪಡೆಯದೇ ಇರುವುದರಿಂದ ಕಾಮಗಾರಿ ವಿಳಂಬವಾಗಿರುವುದು ಬೆಳಕಿಗೆ ಬಂತು. ಇದರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ‘ಯಾಕಿಷ್ಟು ವಿಳಂಬ ಮಾಡಿದ್ದೀರಿ. ಮಾರ್ಚ್ ಅಂತ್ಯಕ್ಕೆ ಕೆಲಸ ಆರಂಭವಾಗದೇ ಇದ್ದರೆ ಅನುದಾನ ಮರಳಿ ಹೋಗುತ್ತದೆ. ನಿಮ್ಮ ನಿರ್ಲಕ್ಷ್ಯ್ಕೆ ಮಕ್ಕಳು ನೋವು ಅನುಭವಿಸಬೇಕಾ ? ಕೂಡಲೆ ಇವರಿಗೆ ನೋಟಿಸ್ ಕೊಡಿ’ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರಿಗೆ ಸೂಚಿಸಿದರು.
ಗುತ್ತಿಗೆದಾರರ ಮೇಲೆ ದೂರು ದಾಖಲಿಸಲು ಸೂಚನೆ: ಹಾನಗಲ್ಲ ತಾಲೂಕಿನಲ್ಲಿ 19 ಶುದ್ಧ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬೇಸಿಗೆಯಲ್ಲಿ ಸಮಸ್ಯೆ ತೀವ್ರವಾಗುವ ಮುನ್ನವೇ ಕ್ರಮ ಕೈಗೊಳ್ಳಿ. ಸಹಕಾರಿ ಸಂಘಗಳಿಗೆ ನೀಡಿರುವ ನಿರ್ವಹಣೆ ಜವಾಬ್ದಾರಿಯನ್ನು ಜಿಪಂಗೆ ಕೊಡಲು ಕೆಲವರು ಸಿದ್ಧರಿದ್ದಾರೆ. ಅವುಗಳನ್ನು ಜಿಪಂನಿಂದಲೇ ನಿರ್ವಹಣೆ ಮಾಡಿ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಜಿಲ್ಲೆಯಲ್ಲಿರುವ ಶುದ್ಧ ನೀರಿನ ಘಟಕಗಳಲ್ಲಿ ಶೇ. 45ರಷ್ಟು ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾಹಿತಿ ಮೂರನೇ ವ್ಯಕ್ತಿ ಪರಿಶೀಲನಾ ವರದಿಯಲ್ಲಿ ಬಂದಿದೆ ಎಂದು ಸಿಇಒ ಮಹಮ್ಮದ್ ರೋಷನ್ ತಿಳಿಸಿದರು. ಆಗ ಸಚಿವರು ಕೂಡಲೆ ಬಂದ್ ಆಗಿರುವ ಶುದ್ಧ ನೀರಿನ ಘಟಕಗಳ ಮಾಹಿತಿ ಪಡೆದು, ಗುತ್ತಿಗೆದಾರರ ಮೇಲೆ ಕ್ರಿಮಿನಲ್ ದೂರು ದಾಖಲಿಸಿ ಎಂದು ಸೂಚಿಸಿದರು.
ಶಾಸಕ ನೆಹರು ಓಲೇಕಾರ, ಜಿಪಂ ಅಧ್ಯಕ್ಷ ಏಕನಾಥ ಬಾನುವಳ್ಳಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಪಂ ಸಿಇಒ ಮಹಮ್ಮದ್ ರೋಷನ್, ಎಸ್ಪಿ ಕೆ.ಜಿ. ದೇವರಾಜ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಜನರ ಸುತ್ತ ಅಭಿವೃದ್ಧಿಯಾಗಬೇಕು…
ಬರೋಬ್ಬರಿ 1 ವರ್ಷ 2 ತಿಂಗಳ ನಂತರ ತ್ರೖೆಮಾಸಿಕ ಕೆಡಿಪಿ ಸಭೆ ನಡೆಸಿದ ಸಚಿವರು, ವಿವಿಧ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಏರು ಧ್ವನಿಯಲ್ಲಿ ಹರಿಹಾಯ್ದರು. ‘ಜಿಲ್ಲಾಡಳಿತಕ್ಕೆ ಅಧಿಕಾರಿಗಳ ಮೇಲೆ ಹಿಡಿತವೇ ಇಲ್ಲ’ ಎಂದು ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಉತ್ತಮ ಆಡಳಿತವಿದ್ದರೆ ಮಾತ್ರ ಆರ್ಥಿಕ ಸಬಲೀಕರಣ ಸಾಧ್ಯ. ಸರ್ಕಾರದ ಯೋಜನೆಗಳನ್ನು ಜಾರಿಗೊಳಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ. ಜನರ ಸುತ್ತ ಅಭಿವೃದ್ಧಿಯಾಗಬೇಕು. ಅಭಿವೃದ್ಧಿ ಸುತ್ತ ಜನ ಸುತ್ತಬಾರದು. ನಿಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ. ನಿಗದಿತ ಸಮಯಕ್ಕೆ ಕೆಲಸ ಮಾಡದೇ ಇದ್ದರೆ ಹಣ ಮರಳಿ ಹೋಗುತ್ತದೆ. ಶಿಸ್ತುಕ್ರಮ ಕೈಗೊಳ್ಳುವುದು ನನ್ನ ಉದ್ದೇಶವಲ್ಲ. ನಿಮ್ಮಲ್ಲಿ ಶಿಸ್ತು ತರುವುದು ನನ್ನ ಉದ್ದೇಶ. ಮುಂದಿನ ಸಭೆಯೊಳಗೆ ನೀವೆಲ್ಲರೂ ಸುಧಾರಿಸಬೇಕು’ ಎಂದು ಸಚಿವ ಬೊಮ್ಮಾಯಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಯುಬಿ ಬಣಕಾರ ಗರಂ
ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ ಅವರಿಗೆ ವೇದಿಕೆಯ ಕೊನೆಯಲ್ಲಿ ಸೀಟು ನಿಗದಿಗೊಳಿಸಲಾಗಿತ್ತು. ಇದರಿಂದ ಗರಂ ಆದ ಅವರು ಯಾರ್ರಿ ಇದು ಕೊನೆಗೆ ಸೀಟು ಹಾಕೀರಿ ಎಂದು ಹರಿಹಾಯ್ದರು. ಆಗ ಸಚಿವ ಬಸವರಾಜ ಬೊಮ್ಮಾಯಿಗೆ ವಿಷಯ ಗೊತ್ತಾಗಿ ಬಣಕಾರ ಅವರಿಗೆ ಸಚಿವ ದರ್ಜೆ ಸ್ಥಾನಮಾನವಿದೆ. ಶಿಷ್ಟಾಚಾರವನ್ನು ಪಾಲಿಸಿ ಎಂದು ಅಧಿಕಾರಿಗಳಿಗೆ ತಿಳಿ ಹೇಳಿದರು. ನಂತರ ಜಿಲ್ಲಾಧಿಕಾರಿ ಪಕ್ಕದ ಕುರ್ಚಿಯನ್ನು ಬಣಕಾರ ಅವರಿಗೆ ಬಿಟ್ಟುಕೊಡಲಾಯಿತು.