ವಾಷಿಂಗ್ಟನ್: ಹೆಚ್ಚುತ್ತಿರುವ ಬಿಗುವಿನ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಸಿಬ್ಬಂದಿ ಮತ್ತು ಮಿತ್ರ ರಾಷ್ಟ್ರ ಇಸ್ರೇಲ್ನ ರಕ್ಷಣೆಗಾಗಿ ಆ ವಲಯದಲ್ಲಿ ಹೆಚ್ಚುವರಿ ಯುದ್ಧ ನೌಕೆಗಳು ಹಾಗೂ ಯುದ್ಧ ವಿಮಾನಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಶುಕ್ರವಾರ ಹೇಳಿದೆ.
ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಯನ್ನು ಟೆಹರಾನ್ನಲ್ಲಿ ಮತ್ತು ಹಿಜ್ಬುಲ್ಲಾ ಕಮಾಂಡರ್ ಒಬ್ಬನನ್ನು ಬೈರೂತ್ನಲ್ಲಿ ಹತ್ಯೆ ಮಾಡಿದ್ದಕ್ಕೆ ಪ್ರತೀಕಾರ ತೀರಿಸುವುದಾಗಿ ಇರಾನ್ ಮತ್ತು ಅದರ ಪ್ರಾದೇಶಿಕ ಮಿತ್ರ ರಾಷ್ಟ್ರಗಳು ಘೋಷಿಸಿರುವ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮಕ್ಕೆ ಮುಂದಾಗಿದೆ. ಸಮರ ಜೆಟ್ನ ಒಂದು ತುಕಡಿ ಹಾಗೂ ವಿಮಾನವಾಹಕ ನೌಕೆಯೊಂದನ್ನು ಮಧ್ಯ ಪ್ರಾಚ್ಯ ವಲಯಕ್ಕೆ ಕಳಿಸುವುದಾಗಿ ಅದು ಹೇಳಿದೆ. ಅದಲ್ಲದೆ, ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ರಕ್ಷಿಸಿಕೊಳ್ಳಲು ಸಮರ್ಥವಾದ ಹೆಚ್ಚುವರಿ ಕ್ರೂಯ್ಸರ್ಗಳು ನಾಶಕಗಳನ್ನು ಯುರೋಪ್ ಮತ್ತು ಮಧ್ಯ ಪ್ರಾಚ್ಯ ವಲಯಗಳಿಗೆ ಕಳಿಸಲೂ ರಕ್ಷಣಾ ಇಲಾಖೆ ಕಾರ್ಯದರ್ಶಿ ಲಾಯ್್ಡ ಆಸ್ಟಿನ್ ಆದೇಶಿಸಿದ್ದಾರೆ.
ದೆಹಲಿಯಲ್ಲಿ ಕಟ್ಟೆಚ್ಚರ : ಇಸ್ಮಾಯಿಲ್ ಹತ್ಯೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯ ಛಬಡ್ ಹೌಸ್ನಲ್ಲಿರುವ ಇಸ್ರೇಲ್ ರಾಯಭಾರ ಕಚೇರಿ ಸುತ್ತಮುತ್ತ ಕಟ್ಟೆಚ್ಚರ ವಹಿಸಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ. ದೆಹಲಿಯಲ್ಲಿರುವ ಎರಡು ಇಸ್ರೇಲಿ ಕಟ್ಟಡಗಳ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸುವ ವಿಚಾರವನ್ನು ರ್ಚಚಿಸಲು ದೆಹಲಿ ಪೊಲೀಸರು ಉನ್ನತ ಮಟ್ಟದ ಸಭೆ ನಡೆಸಿದ್ದಾರೆಂದು ಮೂಲಗಳು ತಿಳಿಸಿವೆ. ಕಳೆದ ಮೂರು ವರ್ಷಗಳಲ್ಲಿ ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಸಮೀಪ ಎರಡು ಕಡಿಮೆ ತೀವ್ರತೆಯ ಸ್ಪೋಟಗಳು ಸಂಭವಿಸಿದ್ದವು. ಗುರುವಾರ ಸ್ಪೋಟದ ಬಗ್ಗೆ ಎಕ್ಸ್ ಪೋಸ್ಟ್ನಲ್ಲಿ ಬೆದರಿಕೆಯೊಂದು ಬಂದಿದ್ದು ಅದು ಹುಸಿ ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದರು.
ಮೊಸ್ಸಾದ್ ಮಾಸ್ಟರ್ ಪ್ಲಾನ್: ಹಮಾಸ್ ಮುಖಂಡನನ್ನು ಕೊಲ್ಲಲು ಇಸ್ರೇಲ್ನ ಗುಪ್ತಚರ ಸಂಸ್ಥೆ ಮೊಸ್ಸಾದ್, ಇರಾನ್ನ ಭದ್ರತಾ ಸಿಬ್ಬಂದಿಗೆ ಹಣಕೊಟ್ಟಿದ್ದರು ಎಂದು ಅಮೆರಿಕದ ಪತ್ರಿಕೆಯೊಂದು ಶನಿವಾರ ವರದಿ ಮಾಡಿದೆ. ಮೇನಲ್ಲಿ ವಿಮಾನ ದುರಂತದಲ್ಲಿ ಮೃತಪಟ್ಟ ಅಂದಿನ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಅಂತ್ಯಕ್ರಿಯೆಗಾಗಿ ಇಸ್ಮಾಯಿಲ್ ಹನಿಯೆ ಇರಾನ್ಗೆ ಭೇಟಿ ಕೊಟ್ಟಿದ್ದಾಗಲೇ ಕೊಲ್ಲುವುದು ಮೊಸ್ಸಾದ್ನ ಮೂಲ ಯೋಜನೆಯಾಗಿತ್ತು. ಆದರೆ ಆಗ ಭಾರಿ ಜನಸ್ತೋಮ ನೆರೆಯುವುದರಿಂದ ಭದ್ರತಾ ಕಾರಣಗಳಿಂದಾಗಿ ಆಗ ಹತ್ಯೆ ಯೋಜನೆಯನ್ನು ಕೈಬಿಡಲಾಗಿತ್ತು.
ಹಲವರ ಬಂಧನ: ಹಮಾಸ್ ಮುಖ್ಯಸ್ಥನ ಹತ್ಯೆ ಹಿನ್ನೆಲೆಯಲ್ಲಿ ಮಿಲಿಟರಿ ಅಧಿಕಾರಿಗಳು, ಗುಪ್ತಚರ ದಳದ ಹಿರಿಯ ಅಧಿಕಾರಿಗಳು ಮತ್ತು ಮಿಲಿಟರಿ ಅತಿಥಿ ಗೃಹದ ಸಿಬ್ಬಂದಿ ಸಹಿತ ಎರಡು ಡಜನ್ಗೂ ಹೆಚ್ಚು ಜನರನ್ನು ಇರಾನ್ ಬಂಧಿಸಿದೆ. ಮಿಲಿಟರಿ ಅತಿಥಿ ಗೃಹದಲ್ಲೇ ಸ್ಫೋಟ ನಡೆಸಿ ಇಸ್ಮಾಯಿಲ್ ಹಾಗೂ ಆತನ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿರುವುದು ಭಾರಿ ಭದ್ರತಾ ಲೋಪವೆಂದು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಭಾರತೀಯರಿಗೆ ಸೂಚನೆ: ಗಾಜಾ ಯುದ್ಧದಿಂದಾಗಿ ವಲಯದಲ್ಲಿ ಉದ್ವಿಗ್ನತೆ ನೆಲೆಸಿರುವುದರಿಂದ ಇಸ್ರೇಲ್ನಲ್ಲಿರುವ ಭಾರತೀಯರು ತುಂಬಾ ಎಚ್ಚರಿಕೆಯಿಂದ ಇರುವಂತೆ ಹಾಗೂ ಸ್ಥಳೀಯ ಭದ್ರತಾ ಶಿಷ್ಟಾಚಾರಗಳನ್ನು ಅನುಸರಿಸುವಂತೆ ಟೆಲ್ ಅವೀವ್ನಲ್ಲಿರುವ ಭಾರತೀಯ ದೂತಾವಾಸ ಕಚೇರಿ ತನ್ನ ಪ್ರಜೆಗಳಿಗೆ ನಿರ್ದೇಶಿಸಿದೆ. ಇರಾನ್ ರಾಜಧಾನಿ ಟೆಹರಾನ್ನಲ್ಲಿ ಬುಧವಾರ ಹಮಾಸ್ ಮುಖಂಡ ಇಸ್ಮಾಯಿಲ್ ಹನಿಯೆ ಹತ್ಯೆಯಾಗಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ. ಇಸ್ರೇಲ್ನೊಳಗೆ ಅನಗತ್ಯವಾಗಿ ಓಡಾಡದಿರಿ ಹಾಗೂ ಸುರಕ್ಷಿತ ತಾಣಗಳ ಒಳಗಡೆ ಇರಿ ಎಂದು ದೂತಾವಾಸ ಕಚೇರಿ ಹೇಳಿದೆ.
‘ಹರ್ ಘರ್ ತಿರಂಗ’ ಅಭಿಯಾನ: ರಾಷ್ಟ್ರಧ್ವಜದ ಜೊತೆ ಸೆಲ್ಫೀ ಕ್ಲಿಕ್ಕಿಸಿ ಅಪ್ಲೋಡ್ ಮಾಡಲು ಅಮಿತ್ ಷಾ ಮನವಿ