ಖಿಲಾರಿ ತಳಿ ಕೇಂದ್ರದ ಪ್ರಭಾರಿ ನಿರ್ದೇಶಕ ಬಸವರಾಜ ಹಿರೇಮಠ ವರ್ಗಾವಣೆ?

ಬಂಕಾಪುರ:  ಪಟ್ಟಣದ ಖಿಲಾರಿ ತಳಿ ಗೋವು ಸಂವರ್ಧನಾ ಕೇಂದ್ರಕ್ಕೆ ರಾಜ್ಯ ವಲಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಜಂಟಿ ನಿರ್ದೇಶಕ ಜೆ. ಪಶುಪತಿ ಅವರು ಶುಕ್ರವಾರ ಭೇಟಿ ನೀಡಿ, ಪ್ರಭಾರಿ ನಿರ್ದೇಶಕ ಬಸವರಾಜ ಹಿರೇಮಠ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಮಧ್ಯಾಹ್ನ ಕೇಂದ್ರಕ್ಕೆ ಆಗಮಿಸಿದ ಜೆ. ಪಶುಪತಿ, ಜಾನುವಾರುಗಳ ಆರೋಗ್ಯ, ಮೇವು ಸಂಗ್ರಹ, ಮೇವಿನ ಬೆಳೆ ಬಿತ್ತನೆ ಕಾರ್ಯ ವೀಕ್ಷಿಸಿದರು. ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ವೈದ್ಯರ ಕಾರ್ಯವೈಖರಿಗೆ ಆಕ್ರೋಶ ವ್ಯಕ್ತಪಡಿಸಿದರು.

ಸರಿಯಾಗಿ ಕೆಲಸ ಮಾಡುವ ಇಚ್ಛೆ ಇಲ್ಲದಿದ್ದರೆ ಬೇರೆಡೆ ವರ್ಗಾವಣೆ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ಸಾರ್ವಜನಿಕರು ನೀಡಿರುವ ಮನವಿ ಮೇರೆಗೆ ನಾವೇ ವರ್ಗಾವಣೆ ಮಾಡಬೇಕಾಗುತ್ತದೆ. ಇಲಾಖೆ ಕ್ರಮ ಕೈಗೊಳ್ಳುವ ಮುನ್ನ ಬೇರೆಡೆ ವರ್ಗಾವಣೆ ಮಾಡಿಸಿಕೊಳ್ಳಿ’ ಎಂದು ವೈದ್ಯ ಬಸವರಾಜ ಹಿರೇಮಠಗೆ ಖಡಕ್ ಎಚ್ಚರಿಕೆ ನೀಡಿದರು.

ಪುರಸಭೆ ಸದಸ್ಯ ಹೊನ್ನಪ್ಪ ಹೂಗಾರ, ಮಾಜಿ ಸದಸ್ಯ ಶಿವು ಅಂಗಡಿ, ರಾಮಕೃಷ್ಣ ಆಲದಕಟ್ಟಿ, ಸೋಮಶೇಖರ ಗೌರಿಮಠ, ಎಸ್.ಬಿ.ಗಚ್ಚಿನಮಠ, ಶಣ್ಮುಖಪ್ಪ ಬಡ್ಡಿ, ಮಂಜುನಾಥ ಕೂಲಿ, ಬೀರಪ್ಪ ಈರಪ್ಪನವರ, ರಾಜು ಕೋರಿ, ಗಣೇಶ ನರೇಗಲ್, ಸಂಜೀವ ಚನ್ನೂರ, ಮಹದೇವಪ್ಪ ಗಣಪ್ಪನವರ, ಓಂಪ್ರಕಾಶ ಅಂಗಡಿ ಇತರರು ಇದ್ದರು.

ವೈದ್ಯನ ದುರ್ವರ್ತನೆಗೆ ಆಕ್ಷೇಪ: ಪಟ್ಟಣದಲ್ಲಿರುವ ರಾಜ್ಯದ ಏಕೈಕ ಖಿಲಾರಿ ಗೋವು ತಳಿ ಸಂವರ್ಧನಾ ಕೇಂದ್ರದಲ್ಲಿ ವೈದ್ಯರ ನಿರ್ಲಕ್ಷ್ಯಂದ ಹಸುಗಳ ಸಾವು, ನೋವಿನ ಘಟನೆ ನಡೆದಿತ್ತು. ಸಮರ್ಪಕವಾಗಿ ಮೇವು ಸಂಗ್ರಹಿಸದೆ, ಜಾನುವಾರುಗಳಿಗೆ ಅಲ್ಪ ಪ್ರಮಾಣದ ಆಹಾರ ನೀಡಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದರು. ಕೇಂದ್ರದ ವೈದ್ಯರು ಅಲ್ಲಿನ ಕೂಲಿ ಕಾರ್ವಿುಕರು ಹಾಗೂ ಸಾರ್ವಜನಿಕರೊಟ್ಟಿಗೆ ದುರ್ವರ್ತನೆ ತೋರುತ್ತಿರುವುದು, ಪಟ್ಟಣದ ಜನತೆಯ ಬಗೆಗೆ ತುಚ್ಛವಾಗಿ ಮಾತನಾಡಿ ನಂತರ ಕ್ಷಮೆ ಕೋರಿದ ಘಟನೆಯೂ ನಡೆದಿತ್ತು. ಈ ಬಗೆಗೆ ‘ವಿಜಯವಾಣಿ’ ನ. 30ರಂದು ‘ಖಿಲಾರಿ ತಳಿ ಹಸುಗಳು ಅವಸಾನದತ್ತ’ ಶೀರ್ಷಿಕೆಯಡಿ ಸಮಗ್ರ ವರದಿ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರದ ಜಂಟಿ ನಿರ್ದೇಶಕ ಜೆ. ಪಶುಪತಿ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.