ಹಳ್ಳೂರ: ಗಾಳಿ, ಮಳೆ, ಬಿಸಿಲು ಲೆಕ್ಕಿಸದೇ ನಿರಂತರವಾಗಿ ಮಹಾಮಾರಿ ಕೋವಿಡ್-19 ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಕರೊನಾ ಸೇನಾನಿಗಳ ಸೇವೆ ನಿಜಕ್ಕೂ ಶ್ರೇಷ್ಠವಾದದ್ದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ವಾಸಂತಿ ತೇರದಾಳ ಹೇಳಿದರು.
ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯರ ಸ್ವ-ಗೃಹದ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕರೊನಾ ಸೇನಾನಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಕರೊನಾ ಸೇನಾನಿಗಳು ಕರ್ತವ್ಯ ಪಾಲನೆ ಮಾಡಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಪ್ರಾಮಾಣಿಕ ಸೇವೆಗೆ ನಾವು ಋಣಿಯಾಗಿದ್ದೇವೆ ಎಂದರು.
ಮೂಡಲಗಿ ಪೊಲೀಸ್ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ಮಾತನಾಡಿ, ಸಾರ್ವಜನಿಕರು ಕಡ್ಡಾಯವಾಗಿ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಅಂತಾರಾಜ್ಯಗಳಿಂದ ಬಂದವರ ಬಗ್ಗೆ ತಕ್ಷಣವಾಗಿ ನಮಗೆ ಮಾಹಿತಿ ನೀಡಬೇಕು ಎಂದರು. ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಪತ್ರಕರ್ತರು, ಗ್ರಾಮ ಪಂಚಾಯಿತಿ ಅಧಿಕಾರಿಗಳು, ಪೊಲೀಸ್ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹನುಮಂತ ತಾಳಿಕೋಟಿ, ಪಿಕೆಪಿಎಸ್ ಸದಸ್ಯ ಹನುಮಂತ ತೇರದಾಳ, ತಾಪಂ ಸದಸ್ಯೆ ಸವಿತಾ ಡಬ್ಬಣ್ಣವರ, ಮೂಡಲಗಿ ಪುರಸಭೆ ಸದಸ್ಯ ಶಿವು ಚಂಡಕಿ, ಪಿಕೆಪಿಎಸ್ ಅಧ್ಯಕ್ಷ ಸುರೇಶ ಕತ್ತಿ, ಸುರೇಶ ಡಬ್ಬಣ್ಣವರ, ಬಿ.ಜಿ. ಸಂತಿ, ಕುಮಾರ ಲೋಕಣ್ಣವರ ಇತರರು ಪಾಲ್ಗೊಂಡಿದರು.