ಯುದ್ಧ ಆರಂಭವಾದರೆ ಅದರ ನಿಯಂತ್ರಣ ನನ್ನ ಕೈಲೂ ಇಲ್ಲ, ಮೋದಿ ಕೈಲೂ ಇರದು, ಶಾಂತಿಯಿಂದ ವರ್ತಿಸೋಣ: ಇಮ್ರಾನ್​

ಇಸ್ಲಾಮಾಬಾದ್​: ಒಂದು ವೇಳೆ ಯುದ್ಧ ಆರಂಭವಾದರೆ ನಂತರದ ಬೆಳವಣಿಗೆಗಳು ನನ್ನ ಕೈಯಲ್ಲೂ ಇರುವುದಿಲ್ಲ, ಮೋದಿ ಕೈಯಲ್ಲೂ ಇರುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್​ ಖಾನ್​ ಹೇಳಿದ್ದಾರೆ.

ಶಾಂತಿ ಸಂದೇಶದೊಂದಿಗೆ ಬುಧವಾರ ಮಾತನಾಡಿರುವ ಇಮ್ರಾನ್​ ಖಾನ್​, ” ಭಯೋತ್ಪಾದನೆ ಬಗ್ಗೆ ನಿಮಗೆ ಏನಾದರೂ ಮಾತನಾಡಬೇಕಿದ್ದರೆ ನಾವು ಸಿದ್ಧರಿದ್ದೇವೆ. ನಮ್ಮ ನಡುವಿನ ಸದುದ್ದೇಶಕ್ಕೆ ಜಯವಾಗಬೇಕು. ನಾವಿಬ್ಬರೂ ಕುಳಿತು ಚರ್ಚೆ ಮಾಡಬೇಕಿದೆ,” ಎಂದು ಖಾನ್​ ಹೇಳಿದ್ದಾರೆ.

“ಈ ಜಗತ್ತಿನ ಎಲ್ಲ ಯುದ್ಧಗಳು ನಡೆದಿರುವುದೂ ತಪ್ಪು ಲೆಕ್ಕಾಚಾರಗಳಿಂದಲೇ. ಇದುವರೆಗೆ ಯುದ್ಧ ಆರಂಭಿಸಿದವರಿಗೆಲ್ಲ ತಾವು ಆರಂಭಿಸಿದ ಯುದ್ಧ ಎಲ್ಲಿ ಅಂತ್ಯವಾಗುತ್ತದೆ ಎಂಬುದೇ ತಿಳಿದಿರಲಿಲ್ಲ. ಹೀಗಾಗಿ ನಾನು ಭಾರತಕ್ಕೆ ಹೇಳುವುದೇನೆಂದರೆ, ನೀವು ಆಯುಧಗಳೊಂದಿಗೆ ಬಂದರೆ ನಮ್ಮ ಬಳಿಯೂ ಆಯುಧಗಳಿವೆ. ನಾವು ತಪ್ಪು ಲೆಕ್ಕಾಚಾರಗಳಿಗೆ ಜಾಗ ಮಾಡಿಕೊಡಬೇಕೆ?” ಎಂದು ಅವರು ಹೇಳಿದ್ದಾರೆ.