Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಸರ್ಕಾರದ ಮೇಲೆ ಪ್ರತಿಪಕ್ಷ ಸವಾರಿ

Wednesday, 07.02.2018, 3:01 AM       No Comments

ಬೆಂಗಳೂರು: ರಾಜ್ಯದ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ವಿಧಾನಮಂಡಲದ ಉಭಯ ಸದನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಜಟಾಪಟಿ ತೀವ್ರಗೊಂಡು ತೋಳುತಟ್ಟಿಕೊಳ್ಳುವವರೆಗೆ ಪರಿಸ್ಥಿತಿ ಕೈ ಮೀರಿತ್ತು.

ಎರಡೂ ಸದನಗಳಲ್ಲಿ ನಿಲುವಳಿ ಸೂಚನೆ ಮಂಡಿಸಿದ ಬಿಜೆಪಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದಿಂದಲೂ ಬಲವಾಗಿ ಆಕ್ಷೇಪ ಕೇಳಿಬಂತು. ಪ್ರಧಾನಿ, ಗುಜರಾತ್ ವಿಷಯವನ್ನೂ ಎಳೆದುತಂದು ಬಿಜೆಪಿಯನ್ನು ಕೆರಳಿಸಿದ್ದು ಪರಿಸ್ಥಿತಿ ಕಾವೇರಲು ಕಾರಣವಾಯಿತು. ಕೊನೆಗೆ ಸರ್ಕಾರದ ವಿರುದ್ಧ ಪ್ರತಿಪಕ್ಷ ಸದಸ್ಯರು ಧರಣಿ ನಡೆಸಿದರು. ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ಈಗ ಗಾರ್ಬೆಜ್ ಸಿಟಿ, ರೇಪ್, ಮರ್ಡರ್ ಸಿಟಿ ಎಂದು ಕರೆಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. ರಾಜ್ಯದ ಜನರಲ್ಲಿ ಸುರಕ್ಷತಾ ಭಾವನೆ ಇಲ್ಲ. ಗೃಹ ಇಲಾಖೆ ಮಾನ್ಯತೆ ಕಳೆದುಕೊಂಡಿದೆ. ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ. ಯಾರೇ ಬಂದರೂ ಗೃಹ ಇಲಾಖೆ ಹಿಡಿತಕ್ಕೆ ಸಿಗುತ್ತಿಲ್ಲ. ಸೂಪರ್ ಮುಖ್ಯಮಂತ್ರಿಯೊಬ್ಬರು ಇದರ ನಿರ್ವಹಣೆ ಮಾಡುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆ, ಆಡಳಿತ ಸೇರಿ ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಪ್ರಧಾನಿಯವರು ಅನಿವಾರ್ಯವಾಗಿ ರಾಜ್ಯದ ಭ್ರಷ್ಟಾಚಾರ ಮತ್ತು ಅಪರಾಧ ಪ್ರಕರಣದ ಬಗ್ಗೆ ಹೇಳಬೇಕಾಯಿತು ಎಂದಾಗ, ಸಿಟ್ಟಿಗೆದ್ದ ಸಚಿವ ಕೆ.ಜೆ. ಜಾರ್ಜ್, ರಾಜ್ಯಕ್ಕೆ ಕೆಟ್ಟ ಹೆಸರು ತರಲು ಹೊರಟಿದ್ದೀರಿ ಎಂದು ಆಕ್ಷೇಪಿಸಿದರು.

ಈ ವೇಳೆ ಗೃಹ ಸಚಿವ ರಾಮಲಿಂಗಾರೆಡ್ಡಿ, ಗುಜರಾತ್​ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಉಂಟಾಗಿದ್ದ ಹತ್ಯೆ ಪ್ರಕರಣ ಉಲ್ಲೇಖಿಸಿದರು. ಆಗ ಬಿಜೆಪಿ ಸದಸ್ಯರಾದ ಅರವಿಂದ್ ಲಿಂಬಾವಳಿ, ಅಪ್ಪಚ್ಚು ರಂಜನ್, ಸಿ.ಟಿ.ರವಿ ಮತ್ತಿತರರು ಆಕ್ಷೇಪ ವ್ಯಕ್ತಪಡಿಸಿದರು.

ಜೈಲಿಗೆ ಹೋಗಿ ಬಂದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಮೋದಿ ಭ್ರಷ್ಟಾಚಾರದ ಪಾಠ ಮಾಡುತ್ತಾರೆಂದು ಎಂ.ಬಿ.ಪಾಟೀಲ್ ಆರೋಪಿಸಿದಾಗ ಎರಡೂ ಕಡೆಯಿಂದ ಆರೋಪ ಪ್ರತ್ಯಾರೋಪ ಹೆಚ್ಚಾಯಿತು. ಒಂದು ಹಂತದಲ್ಲಿ ಲಿಂಬಾವಳಿ ತೋಳುತಟ್ಟಿ ಸೆಡ್ಡು ಹೊಡೆದರು. ಜಾರ್ಜ್ ‘ಏ ಶೆಟ್ಟರ್…’ ಎಂದು ಕೂಗಿದ್ದು ಆಕ್ರೋಶಕ್ಕೆ ತುಪ್ಪ ಸುರಿದಂತಾಯಿತು. ಕೀಳುಮಟ್ಟದ ರಾಜಕೀಯ ಹಾಗೂ ಮತಬ್ಯಾಂಕ್ ಆಸೆಗಾಗಿ ಅಲ್ಪಸಂಖ್ಯಾತರ ತುಷ್ಟೀಕರಣವನ್ನು ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ. ಅಲ್ಪಸಂಖ್ಯಾತರ ಮೇಲಿನ ಕೇಸ್​ಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿ ಎಂದರು. ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವ ಪಿಎಫ್​ಐ, ಕೆಎಫ್​ಡಿ ಸಂಘಟನೆ ನಿಷೇಧಿಸಬೇಕು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ವರದಿ ಕೊಟ್ಟರೂ, ಅದನ್ನು ಸರ್ಕಾರ ಏಕೆ ನಿಷೇಧಿಸುತ್ತಿಲ್ಲ? ಎಂದು ಶೆಟ್ಟರ್ ಗೃಹ ಸಚಿವರನ್ನು ತರಾಟೆ ತೆಗೆದುಕೊಂಡರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆ.ಜೆ.ಜಾರ್ಜ್, ಭಜರಂಗದಳ, ವಿಶ್ವಹಿಂದೂ ಪರಿಷತ್ ಮುಂತಾದ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ನೀವು ಯಾಕೆ ಒತ್ತಾಯಿಸುವುದಿಲ್ಲ ಎಂದು ಪ್ರಶ್ನಿಸಿದರು.

ಪೀಠದ ಎದುರು ಧರಣಿ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿದ್ದು, ಪ್ರತಿಪಕ್ಷ ಬಿಜೆಪಿ ಆರೋಪದಲ್ಲಿ ಯಾವುದೇ ಸತ್ಯವಿಲ್ಲ ಎಂಬ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಯಿಂದ ಅಸಮಾಧಾನಗೊಂಡ ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಭಾಧ್ಯಕ್ಷ ಸ್ಥಾನದಲ್ಲಿದ್ದ ಉಪ ಸಭಾಧ್ಯಕ್ಷ ಶಿವಶಂಕರೆಡ್ಡಿ ಸಭೆಯನ್ನು ಬುಧವಾರಕ್ಕೆ ಮುಂದೂಡಿದರು.

ಎನ್​ಪಿಎಸ್ ಕೈಬಿಡುವುದು ಸಾಧುವಲ್ಲ

ರಾಜ್ಯದ ನೂತನ ಪಿಂಚಣಿ ಯೋಜನೆ ಕೈಬಿಡುವುದು ಸಾಧುವಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿಯ ಐಹೊಳೆ ಡಿ. ಮಗಾಲಿಂಗಪ್ಪ ಪ್ರಶ್ನೆಗೆ ಉತ್ತರಿಸಿದ ಸಿಎಂ, ದೇಶದ 28 ರಾಜ್ಯಗಳಲ್ಲಿ ಹೊಸ ಪಿಂಚಣಿ ಪದ್ಧತಿ ಜಾರಿಯಲ್ಲಿದೆ. ಕರ್ನಾಟಕದಲ್ಲಿ 2012ರಿಂದಲೂ ಈ ಯೋಜನೆ ಜಾರಿಯಲ್ಲಿದೆ ಎಂದರು. ಈ ವೇಳೆ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ದೇಶದ ವಿವಿಧ ರಾಜ್ಯಗಳಲ್ಲಿ ಹೊಸ ಪಿಂಚಣಿ ಪದ್ಧತಿ ಜಾರಿಗೆ ತಂದಿದ್ದರೂ ಅನೇಕ ತಿದ್ದುಪಡಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 2 ಲಕ್ಷ ನೌಕರರು ಪಿಂಚಣಿಯೇ ಸಿಗುವುದಿಲ್ಲ ಎಂಬ ಆತಂಕದಲ್ಲಿದ್ದಾರೆ. ಈ ಬಗ್ಗೆ ದೊಡ್ಡ ಹೊರಾಟವೂ ನಡೆದಿದ್ದು, ಸರ್ಕಾರ ಸಕಾರಾತ್ಮಕ ಸ್ಪಂದನೆ ನೀಡಬೇಕೆಂದು ಒತ್ತಾಯಿಸಿದರು. 6ವೇ ವೇತನ ಆಯೋಗದಲ್ಲಿಯೂ ಈ ಬಗ್ಗೆ ಕೆಲವು ಶಿಫಾರಸು ಇದೆ ಎಂಬ ಮಾಹಿತಿಯಿದ್ದು, ಆ ಶಿಫಾರಸನ್ನು ಪರಿಗಣಿಸುವಂತೆ ಆಗ್ರಹಿಸಿದರು. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಈ ವಾದಕ್ಕೆ ದನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಒಂದು ಸಮಿತಿ ಶಿಫಾರಸಿನಂತೆಯೇ ಹೊಸ ಪಿಂಚಣಿ ಪದ್ಧತಿ ಜಾರಿಗೆ ತರಲಾಗಿದೆ. ಅದನ್ನು ಕೈ ಬಿಡುವುದು ಸಾಧುವಲ್ಲ, 6ವೇ ವೇತನ ಆಯೋಗದ ಶಿಫಾರಸನ್ನು ಪರಿಗಣಿಸುವಾಗ ಈ ಬಗ್ಗೆ ಗಮನಿಸುವುದಾಗಿ ಸ್ಪಷ್ಟಪಡಿಸಿದರು.

ಶಾಲೆಗೆ ಮುಜರಾಯಿ ಹಣ ಬಳಸುವಂತಿಲ್ಲ

ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾ ಕೇಂದ್ರ ದತ್ತು ಪಡೆದು ಆಹಾರ ಸರಬರಾಜು ಮಾಡುತ್ತಿದ್ದ ಆದೇಶ ಹಿಂಪಡೆದದ್ದು ಕಾನೂನು ಬಾಹಿರವೂ ಅಲ್ಲ, ವಿದ್ಯಾರ್ಥಿಗಳ ಮೇಲೆ ಧ್ವೇಷವೂ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ವಿಧಾನಪರಿಷತ್​ನಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನೆಗೆ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ನೀಡಿದ್ದ ಉತ್ತರಕ್ಕೆ ಬಿಜೆಪಿ ಸದಸ್ಯರು ಆಕ್ಷೇಪಿಸಿದರು. ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗಲೂ ಚಾಲ್ತಿಯಲ್ಲಿದ್ದ ಯೋಜನೆ ಬಗ್ಗೆ ಸಚಿವ ರಮಾನಾಥ ರೈ ಪತ್ರ ಬರೆದ ತಕ್ಷಣವೇ ನಿಯಮ ಅಡ್ಡ ಬಂದಿತೇ, ಮಕ್ಕಳ ವಿರುದ್ಧ ಏಕೆ ಸರ್ಕಾರದ ಕ್ರಮ ಎಂದು ಪ್ರಶ್ನಿಸಿದರು. ಇದಕ್ಕುತ್ತರಿಸಿದ ಲಮಾಣಿ, ಹಿಂದೆ ಮಾಡಿರಬಹುದು, ಆದರೆ ನಿಯಮದಲ್ಲಿಲ್ಲ. ಆಹಾರ ಬೇಕು ಎಂದರೆ ಶಿಕ್ಷಣ ಇಲಾಖೆೆಗೆ ಅರ್ಜಿ ಸಲ್ಲಿಸಿ ಮದ್ಯಾಹ್ನದ ಬಿಸಿಯೂಟ ಕಾರ್ಯಕ್ರಮದಲ್ಲಿ ಜೋಡಿಸಿಕೊಳ್ಳಬಹುದು ಎಂದರು. ಲಮಾಣಿ ನೆರವಿಗೆ ಬಂದ ಕೃಷಿ ಸಚಿವ ಕೃಷ್ಣ ಬೈರೇಗೌಡ ಸಮರ್ಥನೆಗೆ ಮುಂದಾದರು.ಆಗ 10 ನಿಮಿಷ ಸದನ ಮುಂದೂಡಲಾಯಿತು. ಮತ್ತೆ ಸಭೆ ಸೇರಿದಾಗಲೂ ಪ್ರತಿಭಟನೆ ಮುಂದುವರಿದು, ಊಟ ಕೊಡ್ತೀರಾ ಇಲ್ಲವಾ? ಸ್ಪಷ್ಟಪಡಿಸಿ ಎಂದರು. ಅಂತಿಮವಾಗಿ, ಬಿಜೆಪಿ ನಾಯಕರನ್ನು ಸಿಎಂ ಜತೆ ಸಭೆ ಸೇರಿಸಲಾಗುತ್ತದೆ ಎಂದು ಸಭಾನಾಯಕ ಎಂ.ಆರ್. ಸೀತಾರಾಮ್ ಭರವಸೆ ನೀಡಿದರು.

ಪರಿಷತ್​ನಲ್ಲೂ ಮುಂದುವರಿದ ದಾಳಿ

ಕರ್ನಾಟಕ ಅತ್ಯಾಚಾರಿಗಳಿಗೆ, ಕೊಲೆಗಡುಕರಿಗೆ ಸ್ವರ್ಗವಾಗಿಬಿಟ್ಟಿದೆ. ಯಾರೂ ಎಲ್ಲಿ, ಏನು ಬೇಕಾದರೂ ಮಾಡಬಹುದು. ಅವರನ್ನು ಹೇಳುವವರು ಕೇಳುವವರು ಇಲ್ಲವಾಗಿದೆ. ಕೊಲೆ ಮಾಡಿ ಜೈಲಿನಲ್ಲಿರುವವರಿಗೆ ಬಿರಿಯಾನಿ ಪಾಕೆಟ್ ಹೋಗುತ್ತದೆ. ಅಂತಹವರಿಗೆ ಕೆಲವೇ ದಿನಗಳಲ್ಲಿ ಬೇಲ್ ಸಿಗುತ್ತದೆ. ಹೊರಗೆ ಬಂದವರು ಮತ್ತೆ ಹಳೆ ಕೆಲಸದಲ್ಲೇ ತೊಡಗಿಕೊಳ್ಳುತ್ತಾರೆ. ವಿಧಾನಪರಿಷತ್​ನಲ್ಲಿ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ನಿಲುವಳಿ ಸೂಚನೆ ಮಂಡಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಪರಿ ಇದು. ಒಂದು ಕಡೆ ಅತ್ಯಾಚಾರಿಗಳನ್ನು ಕಂಡಲ್ಲಿ ಗುಂಡಿಕ್ಕಿ ಎನ್ನುತ್ತಾರೆ. ಮುಖ್ಯಮಂತ್ರಿಗಳು ಅತ್ಯಾಚಾರಿಗಳ ಮೇಲೆ ಗೂಂಡಾ ಕಾಯ್ದೆ ಹಾಕಿ ಎನ್ನುತ್ತಾರೆ. ಅದನ್ನು ಪಾಲನೆ ಮಾಡಬೇಕಾದ ಅಧಿಕಾರಿಗಳು ಏನು ಮಾಡಿದ್ದಾರೆ? ಅಧಿಕಾರಿಗಳ ವಿರುದ್ಧವೇ ಗೂಂಡಾ ಕಾಯ್ದೆ ಕೇಸ್ ಹಾಕಿ ಆಗ ಎಲ್ಲವೂ ಸರಿಹೋಗುತ್ತದೆ. ಅಧಿಕಾರಿಗಳಿಗಂತೂ ಸರ್ಕಾರ, ಮಂತ್ರಿಗಳ ಬಗ್ಗೆ ಗೌರವವೇ ಇರುವುದಿಲ್ಲ. ಇನ್ನು ಕೊಲೆಗಳ ಬಗ್ಗೆ ಅವರೇಕೆ ತಲೆಕೆಡಿಸಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ವಿಧಾನಸಭೆಯಲ್ಲಿ ರೌಡಿಶೀಟರ್ ರಾಜಕೀಯ

ರಾಜ್ಯದಲ್ಲಿ ಅಮಾಯಕರ ಮೇಲೆ ರೌಡಿಶೀಟ್ ತೆರೆಯಲಾಗುತ್ತಿದೆ ಎಂಬ ವಿಚಾರವಾಗಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಿಧಾನಸಭೆಯಲ್ಲಿ ಮಂಗಳವಾರ ವಾಗ್ಯುದ್ಧ ನಡೆಯಿತು.

ಬಿಜೆಪಿ ಹಾಗೂ ಪರಿವಾರದ ವಿವಿಧ ಸಂಘಟನೆ ಕಾರ್ಯಕರ್ತರ ಮೇಲೆ, ಹೋರಾಟ ಹಾಗೂ ಚಳವಳಿಗಾರರ ಮೇಲೆ ವಿನಾಕಾರಣ ರೌಡಿಶೀಟರ್ ಹಾಕಲಾಗುತ್ತಿದೆ ಎಂದು ಬಿಜೆಪಿ ಸದಸ್ಯರು ಸರ್ಕಾರದ ಮೇಲೆ ಮುಗಿಬಿದ್ದರು. ಒಂದುಕಡೆ ರೌಡಿಶೀಟರ್ ಪಟ್ಟಿ ಕೊಡಿ ಎಂದು ಜನಪ್ರತಿನಿಧಿ ಕೇಳಿದರೂ ಇಲಾಖೆ ಕೊಡುತ್ತಿಲ್ಲ. ಹಾಗೆಯೇ ರೌಡಿಶೀಟ್ ತೆಗೆದು ಹೋರಾಟಗಾರರು, ಚಳವಳಿ ಅಮಾಯಕರನ್ನು ಹತ್ತಿಕ್ಕುವ ಕೆಲಸ ನಡೆಸಲಾಗುತ್ತದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿದೆ, ಚುನಾವಣೆ ಉದ್ದೇಶಕ್ಕೆ ಹೀಗೆ ಮಾಡಲಾಗುತ್ತದೆ ಎಂದು ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಟಿ.ರವಿ, ಸುನೀಲ್​ಕುಮಾರ್ ಮತ್ತಿತರರು ಗಂಭೀರ ಆರೋಪ ಮಾಡಿದರು.

ಸ್ಪೀಕರ್ ಕೆ.ಬಿ.ಕೋಳಿವಾಡ ದನಿಗೂಡಿಸಿ, ತಮ್ಮ ಕ್ಷೇತ್ರದ ಘಟನೆಯನ್ನು ಉದಾಹರಿಸಿದರು. ಪರಿಸ್ಥಿತಿ ಗಂಬೀರತೆ ಅರಿತ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಒಂದು ವೇಳೆ ಅಮಾಯಕರ ಮೇಲೆ ರೌಡಿಶೀಟರ್ ಪಟ್ಟ ಕಟ್ಟಿದ್ದರೆ ಗಮನಕ್ಕೆ ತನ್ನಿ ಪರಿಶೀಲಿಸಿ ಕೈಬಿಡುತ್ತೇವೆಂದು ಸ್ಪಷ್ಟಪಡಿಸಿದರು. ಈ ವೇಳೆ ಪೊಲೀಸ್ ಇಲಾಖೆ ರೌಡಿಶೀಟರ್ ಪಟ್ಟಿ ಬಹಿರಂಗಪಡಿಸುತ್ತಿಲ್ಲ ಎಂದು ಸಿ.ಟಿ.ರವಿ ಹಾಗೂ ಸುನೀಲ್ ಕುಮಾರ್ ಆರೋಪಿಸಿದರು.

ರೌಡಿ ಶೀಟರ್ ಎಂದು ಗುರುತಿಸುವಲ್ಲಿ ಸರ್ಕಾರ ಎಂದಿಗೂ ಮಧ್ಯ ಪ್ರವೇಶಿಸುವುದಿಲ್ಲ. ಅಮಾಯಕರು ಪಟ್ಟಿಯಲ್ಲಿ ಸೇರಿದ್ದರೆ ತಪ್ಪಾಗುತ್ತದೆ. ಹಾಗೆಯೇ ರೌಡಿಶೀಟರ್ ಪಟ್ಟಿ ಬಿಡುಗಡೆ ಮಾಡಲು ಅಡ್ಡಿ ಇಲ್ಲ, ಕೂಡಲೇ ಪಟ್ಟಿ ಕೊಡಿ ಎಂದು ಗೃಹ ಸಚಿವರಿಗೆ ಸಿಎಂ ಸೂಚಿಸಿದರಾದರೂ ಚರ್ಚೆ ಕೊನೆಯಲ್ಲಿ, ಯಾವ ಮಾಹಿತಿ ಕೊಡಬಹುದೋ ಅದನ್ನು ಕೊಡುತ್ತಾರೆ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡಿದ್ದು ಪ್ರತಿಪಕ್ಷ ಸದಸ್ಯರನ್ನು ಕೆರಳಿಸಿತು. ಈ ನಡುವೆ ಬಿಜೆಪಿ ಸದಸ್ಯರೆಲ್ಲ ಇಷ್ಟೊಂದು ಒತ್ತಡ ಹೇರುವುದನ್ನು ನೋಡಿದರೆ, ರೌಡಿಶೀಟರ್​ಗಳು ಬಿಜೆಪಿಯವರೇ ಎಂದೆನಿಸುತ್ತದೆ ಎಂದು ಸಿಎಂ ಕಿಚಾಯಿಸಿದರು, ಇದಕ್ಕೆ ಯಾವ ಪಾರ್ಟಿಯವರು ಎಂದು ಗೊತ್ತಾಗಬೇಕೆಂದರೆ ಪಟ್ಟಿ ಬಹಿರಂಗಪಡಿಸಿ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸವಾಲು ಹಾಕಿದರು.

ಜಮೀರ್ ಕೂರಿಸಲು ಮಾರ್ಷಲ್!

‘ಬಿಜೆಪಿಯವರು ಚುನಾವಣೆ ಬಂದಾಗ ರೌಡಿಶೀಟರ್ ಪಟ್ಟಿ ಕೇಳುತ್ತಿದ್ದಾರೆ’ ಎಂಬ ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ನೀಡಿದ್ದು ಗದ್ದಲಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ಸ್ಪೀಕರ್ ಕೋಳಿವಾಡ ಎಲ್ಲ ಸದಸ್ಯರನ್ನು ಸಮಾಧಾನ ಪಡಿಸುತ್ತಿದ್ದಾಗಲೇ ಜಮೀರ್ ಮಾತು ಮುಂದು ವಸಿದ್ದರು. ಇದರಿಂದ ಸಿಟ್ಟಾದ ಸ್ಪೀಕರ್, ‘ಯಾರ್ರೀ ಅವರು, ಹೋಗಿ ಕೂರಿಸಿ..’ ಎಂದು ಮಾರ್ಷಲ್​ಗೆ ಸೂಚಿಸಿದರು.

ಹತ್ಯೆ, ಸರ್ಕಾರದ ಸಮರ್ಥನೆ

ರಾಜ್ಯದಲ್ಲಿ ಕೇವಲ ಹಿಂದುಗಳ ಹತ್ಯೆ ಮಾತ್ರವಾಗಿಲ್ಲ. 13 ಮಂದಿ ಅಲ್ಪಸಂಖ್ಯಾತರ ಕೊಲೆಯೂ ಆಗಿವೆ ಎಂದು ಸರ್ಕಾರ ಅಂಕಿ-ಅಂಶ ಬಿಡುಗಡೆ ಮಾಡುವ ಮೂಲಕ ಪ್ರತಿಪಕ್ಷ ಬಿಜೆಪಿ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಿತು. ಕೊಲೆಗೀಡಾದ ಪ್ರತಿಯೊಬ್ಬರ ಹೆಸರನ್ನು ಉಲ್ಲೇಖಿಸಿ ಅಪಘಾತ, ಆತ್ಮಹತ್ಯೆ, ಅತಿಯಾದ ಕುಡಿತ, ಜಮೀನು ಜಗಳಗಳಲ್ಲಿ 14 ಕೊಲೆಗಳಾಗಿದ್ದು, ಇವೆಲ್ಲವೂ ಹಿಂದು-ಹಿಂದುಗಳ ನಡುವೆಯೇ ಆಗಿವೆ ಎಂದು ಸಚಿವ ರಾಮಲಿಂಗಾರೆಡ್ಡಿ ನಯವಾಗಿಯೇ ಪ್ರಶ್ನಿಸಿದರು.

ಖಾದರ್ ವಿವಾದಾತ್ಮಕ ಹೇಳಿಕೆ

ರೌಡಿ ಶೀಟರ್ ವಿಚಾರದಲ್ಲಿ ಚರ್ಚೆ ನಡೆಯುತ್ತಿದ್ದಾಗ ಸಚಿವರ ಪಕ್ಕದಲ್ಲೂ ರೌಡಿಶೀಟರ್ ಇರುವ ಫೋಟೊ ಪತ್ರಿಕೆಯಲ್ಲಿ ಬಂದಿದೆ ಎಂದು ಜಗದೀಶ್ ಶೆಟ್ಟರ್ ಹೇಳುತ್ತಿದ್ದಂತೆ ಸಚಿವ ಖಾದರ್ ವ್ಯಘ್ರರಾದರು. ಪ್ರಧಾನಿ ಪಕ್ಕದಲ್ಲಿ ರೌಡಿಶೀಟರ್ ಇರುವ ದಾಖಲೆ ನಮ್ಮ ಬಳಿ ಇದೆ ಎಂದು ಆರೋಪಿಸಿದರು. ಇದರಿಂದ ಬಿಜೆಪಿ ಸದಸ್ಯರು ಸಚಿವರ ವಿರುದ್ಧ ಹರಿಹಾಯ್ದರು.

ಸದನದಲ್ಲಿ ಸದ್ದು ಮಾಡಿದ ಒಳಚರಂಡಿ ಅವ್ಯವಹಾರ

ರಾಜ್ಯ ವಿವಿಧ ಪಟ್ಟಣಗಳಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಗಳು ತಡವಾಗುತ್ತಿರುವ, ದೋಷಪೂರ್ಣ ಕಾಮಗಾರಿ ಕುರಿತ ವಿಚಾರ ವಿಧಾನಸಭೆ ಪ್ರಶ್ನೋತ್ತರ ವೇಳೆ ಸಾಕಷ್ಟು ಸದ್ದುಮಾಡಿತು. ಇದೊಂದು ಅವ್ಯವಹಾರ ಮತ್ತು ಹಗರಣ ಎಂದು ಟೀಕಿಸಿದ ಬಿಜೆಪಿ ಸದಸ್ಯರು, ತನಿಖೆಗೆ ಪಟ್ಟು ಹಿಡಿದಾಗ ಸಚಿವರು ಒಪ್ಪಿಗೆ ಸೂಚಿಸಿದರು. ಆರಂಭದಲ್ಲಿ ಚಿಕ್ಕಮಗಳೂರು ನಗರದ ಒಳಚರಂಡಿ ಯೋಜನೆ ಆರಂಭವಾಗಿ ಎಂಟು ವರ್ಷವಾದರೂ ಪೂರ್ಣಗೊಂಡಿಲ್ಲ, ಇದರಿಂದ ಕುಡಿಯುವ ನೀರಿನ ಮೂಲಕ್ಕೆ ಕೊಳಚೆ ನೀರು ಸೇರುತ್ತಿದೆ. 57 ಕೋಟಿ ರೂ. ಕಾಮಗಾರಿ 82 ಕೋಟಿ ರೂ.ಗೆ ಪರಿಷ್ಕರಣೆಯಾಗಿದೆ ಎಂದು ಸಿ.ಟಿ.ರವಿ ಆರೋಪಿಸಿದರು. ಜತೆಗೆ ಕಾಮಗಾರಿ ಕಳಪೆಯಾಗಿದ್ದು, ಗುತ್ತಿಗೆದಾರರನನ್ನು ಕಪು್ಪಪಟ್ಟಿಗೆ ಸೇರಿಬೇಕೆಂದು ಪಟ್ಟುಹಿಡಿದರು. ತಾವು ಐದನೇ ಬಾರಿಗೆ ಈ ಪ್ರಶ್ನೆ ಕೇಳುತ್ತಿದ್ದು, 24 ತಿಂಗಳ ಕಾಮಗಾರಿಯನ್ನು ವಿನಾಕಾರಣ ಎಂಟು ವರ್ಷದವರೆಗೆ ವಿಸ್ತರಿಸಲಾಗಿದೆ. ಕಾಮಗಾರಿ ಕಳಪೆಯಾಗಿದೆ, ಅವ್ಯವಹಾರ ನಡೆದಿದೆ. ಇದೊಂದು ಮಾಫಿಯಾ ಎಂದು ಟೀಕಿಸಿದರು. ಗುತ್ತಿಗೆದಾರನ ವಿಳಂಬವನ್ನು ಒಪ್ಪಿಕೊಂಡ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್, ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನನ್ನು ಕಪು್ಪಪಟ್ಟಿಗೆ ಸೇರಿಸುವ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ ಎಂದರು. ಇದೇ ವೇಳೆ ಕೊಡಗು, ಚಿತ್ರದುರ್ಗ ಮತ್ತಿತರ ಕಡೆಗಳಲ್ಲೂ ಇದೇ ರೀತಿ ಪ್ರಕರಣ ನಡೆದಿರುವ ಬಗ್ಗೆ ಶಾಸಕರು ಪ್ರಸ್ತಾಪ ಮಾಡಿದರು. ಎಲ್ಲೆಲ್ಲಿ ಈ ರೀತಿ ಆರೋಪಗಳಿವೆಯೋ ಅಲ್ಲಿಗೆ ವಿಶೇಷ ತಂಡ ಕಳಿಸಿ ತನಿಖೆ ನಡೆಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಸಚಿವರು ಸದನಕ್ಕೆ ಭರವಸೆ ನೀಡಿದರು.

ರಾಜ್ಯದಲ್ಲಿ ಬೇಸಿಗೆ ವಿದ್ಯುತ್ ಸಮಸ್ಯೆ ನೀಗಲು ಕ್ರಮ

ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗುವುದನ್ನು ತಡೆಗಟ್ಟಲು 10 ಲಕ್ಷ ಮೆ.ಟನ್ ಕಲ್ಲಿದ್ದಲು ಆಮದಿಗೆ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ವಿಧಾನಪರಿಷತ್​ನಲ್ಲಿ ಕಾಂಗ್ರೆಸ್​ನ ಮೋಟಮ್ಮ, ಬೋಸರಾಜು ಹಾಗೂ ಕೆ. ಪ್ರತಾಪ್​ಚಂದ್ರ ಶೆಟ್ಟಿ ಕೇಳಿದ ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದರು. ಈ ವರ್ಷ ಜಲಾಶಯಗಳಲ್ಲಿ ಕೇವಲ ಶೇ.60 ನೀರಿದೆ. ಬೇಸಿಗೆಯಲ್ಲಿ ವಿದ್ಯುತ್ ಸರಬರಾಜಿಗೆ ಸಮಸ್ಯೆಯಂತೂ ಇದೆ. ಕೇಂದ್ರ ಹೇಳಿದ್ದಕ್ಕಿಂತ ಶೇ.24 ಕಲ್ಲಿದ್ದಲು ಸರಬರಾಜು ಮಾಡುತ್ತಿದೆ. ಇದಕ್ಕೆ ಯಾರನ್ನೂ ನಾನು ಹೊಣೆ ಮಾಡುವುದಿಲ್ಲ. ದೇಶದ ಎಲ್ಲ ರಾಜ್ಯಗಳಿಗೂ ಈ ಸಮಸ್ಯೆಯಾಗುತ್ತಿದೆ. ಬೇಸಿಗೆಯಲ್ಲಿ ಎದುರಾಗುವ ಸಮಸ್ಯೆ ಎದುರಿಸಲು ನಾವು ಸಿದ್ಧತೆ ನಡೆಸಿದ್ದೇವೆ ಎಂದರು. ಪ್ರತಿ ಯೂನಿಟ್​ಗೆ 4.8 ರೂ.ನಂತೆ 900 ಮೆ.ವ್ಯಾ. ವಿದ್ಯುತ್ ಖರೀದಿಗೆ ಟೆಂಡರ್ ಅಂತಿಮ ಹಂತದಲ್ಲಿದೆ. ಮಾರ್ಚ್ ವೇಳೆಗೆ ಪವನ ಮತ್ತು ಸೌರ ವಿಭಾಗದಿಂದ 600 ಮೆ.ವ್ಯಾ. ಲಭಿಸಲಿದೆ. 10 ಲಕ್ಷ ಮೆ.ಟನ್ ಕಲ್ಲಿದ್ದಲು ಆಮದು ಮಾಡಿಕೊಳ್ಳುವ ಟೆಂಡರ್ ಪ್ರಕ್ರಿಯೆ ಸದ್ಯದಲ್ಲೆ ಮುಕ್ತಾಐವಾಗಲಿದೆ. ರಾಜ್ಯದ 2.5 ಕೋಟಿ ಗ್ರಾಹಕರಿಗೆ, ರೈತರಿಗೆ ಹಾಗೂ ಕೈಗಾರಿಕೆಗಳಿಗೆ ಭರವಸೆ ನೀಡಿದಷ್ಟು ವಿದ್ಯುತ್ತನ್ನು ಸರಬರಾಜು ಮಾಡಿಯೇ ತೀರುತ್ತೇವೆ ಎಂದು ಡಿಕೆಶಿ ತಿಳಿಸಿದರು.

ಇದೇನು ಸಂತೆ ಮಾಡುವ ಜಾಗವೇ?

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆ ಸದನಕ್ಕೆ ಗೈರು ಹಾಜರಾಗುತ್ತಿರುವ ಜನಪ್ರತಿನಿಧಿಗಳ ಮನಸ್ಥಿತಿ ರಾಜ್ಯದ ಅಧಿಕಾರಿಗಳಿಗೂ ಬಂದಿದ್ದು, ಇದಕ್ಕೆ ವಿಧಾನಪರಿಷತ್​ನಲ್ಲಿ ಆಕ್ರೋಶ ವ್ಯಕ್ತವಾಯಿತು.

ಕಲಾಪ ಆರಂಭವಾದರೂ ಅಧಿಕಾರಿಗಳ ಗ್ಯಾಲರಿಯಲ್ಲಿ ಒಬ್ಬಿಬ್ಬರು ಮಾತ್ರ ಇದ್ದರು. ಇದು ಮತ್ತೊಂದು ವಿಷಯದ ಕುರಿತು ನಿಲುವಳಿ ಸೂಚನೆಗೆ ಮುಂದಾದ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪರನ್ನು ಕೆರಳಿಸಿತು. ನಾನು ಮಂಡನೆ ಮಾಡುವ ವಿಷಯಕ್ಕೆ ಸಂಬಂಧಿಸಿದ ಗೃಹ ಸಚಿವರಿಲ್ಲ, ಬರೆದುಕೊಂಡು ಸಚಿವರಿಗೆ ಹೇಳುತ್ತಾರೆ ಎಂದರೆ ಅಧಿಕಾರಿಗಳೂ ಇಲ್ಲ. ನಾನು ಯಾರಿಗೆ ಹೇಳಬೇಕು? ಇದೇನು ರಸ್ತೆ ಮೇಲೆ ಸಂತೆ ಮಾಡುವ ಜಾಗವೇ? ಅಧಿಕಾರಿಗಳು ಸದನಕ್ಕೆ ಬರುವುದಿಲ್ಲ ಎಂದರೆ ಏನರ್ಥ? ನಾವಂತೂ ಸಭಾ ತ್ಯಾಗ ಮಾಡುತ್ತೇವೆ ಎಂದು ಬಿಜೆಪಿ ಸದಸ್ಯರೊಂದಿಗೆ ಹೊರನಡೆದರು. ತಕ್ಷಣವೇ ಒಳಬಂದ ಈಶ್ವರಪ್ಪ, ನಾವಂತೂ ಪ್ರತಿಭಟನೆ ಮಾಡಿದ್ದೇವೆ. ಅಧಿಕಾರಿಗಳು ಉಪಸ್ಥಿತರಿರುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದರು. ಅಧಿಕಾರಿಗಳ ಅನುಪಸ್ಥಿತಿಗೆ ಸಭಾಪತಿ ಡಿ.ಎಚ್. ಶಂಕರಮೂರ್ತಿ ಸಹ ಅಸಮಾಧಾನ ವ್ಯಕ್ತಪಡಿಸಿ, ಸದನಕ್ಕೆ ಯಾವ ಅಧಿಕಾರಿಗಳು ಬರುತ್ತಾರೆ ಎಂಬ ಪಟ್ಟಿ ನೀಡಲಾಗಿರುತ್ತದೆ. ಅವರು ಉಪಸ್ಥಿತರಿರದಿದ್ದರೆ ಹೇಗೆ? ಅಧಿಕಾರಿಗಳು ಗೈರಾಗಿದ್ದರೆ ಪ್ರತಿಪಕ್ಷವಿರಲಿ, ಆಡಳಿತ ಪಕ್ಷವಿರಲಿ ಯಾರೂ ಸಮರ್ಥನೆ ಮಾಡಿಕೊಳ್ಳಬಾರದು ಎಂದರು.

ಉತ್ತರಕ್ಕೆ 2 ಲಕ್ಷ ರೂ. ವೆಚ್ಚ

ಪ್ರಶ್ನೆಯೊಂದಕ್ಕೆ ಈ ಹಿಂದೆ ಉತ್ತರ ನೀಡಲು 18 ಲಕ್ಷ ರೂ. ವೆಚ್ಚವಾಗಿದ್ದರ ಮಾಹಿತಿ ಇತ್ತು. ಈಗಿನ ಸಮಯದಲ್ಲಿ 2 ಲಕ್ಷ ರೂ. ವೆಚ್ಚವಾಗುತ್ತದೆ ಎನ್ನಲಾಗಿದೆ. ಇಷ್ಟು ಪ್ರಮಾಣದಲ್ಲಿ ಸರ್ಕಾರದ ಹಣ ಖರ್ಚು ಮಾಡಿ, ಅಧಿಕಾರಿಗಳೇ ಸದನಕ್ಕೆ ಹಾಜರಾಗದಿದ್ದರೆ ಸದನ ನಡೆಯುವುದು ಹೇಗೆ? ಅಧಿಕಾರಿಗಳು, ಬರಲಿ, ಬಿಡಲಿ ಸದನ ನಡೆಯುತ್ತದೆ ಎಂದು ತೀರ್ಮಾನ ತೆಗೆದುಕೊಂಡುಬಿಡಿ, ನಾವೂ ಸುಮ್ಮನಾಗುತ್ತೇವೆ ಎಂದು ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದರು.


ಸದನದಲ್ಲಿ ವಿಜಯವಾಣಿ ಪ್ರತಿಧ್ವನಿ

ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್​ಗಳಿಗೆ ಕನ್ನ ಹಾಕುವ ಆನ್​ಲೈನ್ ವಂಚಕರ ಹಾವಳಿ ಹೆಚ್ಚಾಗಿದೆ. ರಾಜ್ಯದಲ್ಲಿ ಪ್ರತಿಗಂಟೆಗೆ 2 ಲಕ್ಷ ರೂ. ಲಪಟಾಯಿಸುತ್ತಿರುವುದರಿಂದ ನಮ್ಮ ರಾಜ್ಯ 3ನೇ ಸ್ಥಾನದಲ್ಲಿರುವುದು ದುರ್ದೈವದ ಸಂಗತಿ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಮಂಗಳವಾರ ವಿಧಾನಸಭೆಯಲ್ಲಿ ‘ವಿಜಯವಾಣಿ’ ವರದಿ ಉಲ್ಲೇಖಿಸಿ ಹೇಳಿದರು. 2017ರಲ್ಲಿ ಸೈಬರ್ ಕಳ್ಳರು, 178 ಕೋಟಿ ರೂ. ದೋಚಿದ್ದಾರೆ. ಗೃಹಸಚಿವರು ಯಾವುದೇ ಕ್ರಮ ಕೈಗೊಳ್ಳತ್ತಿಲ್ಲ. ರಾಜ್ಯದಲ್ಲಿ ಈ ವರ್ಷ ಕೊಲೆ, ಸುಲಿಗೆ, ಮಟಕಾ-ಗುಟಕಾ ಯಾವುದೇ ಮುಲಾಜಿಲ್ಲದೇ ರಾಜಾರೋಷವಾಗಿ ನಡೆಯುತ್ತಿವೆ. ದರೋಡೆ, ಕಳ್ಳತನ ಸೇರಿ ರಾಜ್ಯದಲ್ಲಿ 2.15 ಲಕ್ಷ ಪ್ರಕರಣಗಳು ದಾಖಲಾಗಿದ್ದರೂ, ಕೇವಲ 90 ಸಾವಿರ ಪ್ರಕರಣಗಳಿಗೆ ಮಾತ್ರ ಪೊಲೀಸ್ ಇಲಾಖೆ ಚಾರ್ಜ್ ಶೀಟ್ ಸಲ್ಲಿಸಿದೆ. ಪೊಲೀಸರ ಕೆಲಸದಲ್ಲಿ ಸಚಿವರು ಹಸ್ತಕ್ಷೇಪ ಮಾಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಶೆಟ್ಟರ್ ಆರೋಪಿಸಿದರು. ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಸೂಕ್ತ ಸಾಕ್ಷ್ಯ್ಷಾರಗಳನ್ನು ಒದಗಿಸಿ, ಆರೋಪಿಗಳಿಗೆ ನ್ಯಾಯ ಒದಗಿಸಿಕೊಡುವ ಕೆಲಸವನ್ನು ಸರ್ಕಾರ ಮಾಡದ ಕಾರಣ, ಅಪರಾಧಿಗಳಿಗೆ ಕಾನೂನಿನ ಅಂಜಿಕೆ ಇಲ್ಲವಾಗಿದೆ. ಅದಕ್ಕಾಗಿ ಸರ್ಕಾರ ಶಿಕ್ಷೆಯಾಗುವಂತೆ ನೋಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಶೆಟ್ಟರ್ ಹೇಳಿದರು.

ಧ್ವಜ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆ

ಹಲವು ಗೊಂದಲಗಳ ನಡುವೆ ಕನ್ನಡ ನಾಡ ಧ್ವಜ ಹೇಗಿರಬೇಕೆಂಬುದು ಕೊನೆಗೂ ಅಂತಿಮಗೊಂಡಿದೆ. ಸೋಮವಾರ ರಾತ್ರಿ ಧ್ವಜ ರಚನಾ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಹಳದಿ, ಬಿಳಿ, ಕೆಂಪು ಬಣ್ಣದ ಧ್ವಜದ ನಡುವೆ ಸರ್ಕಾರದ ಲಾಂಛನ ಇರುವ ಬಗ್ಗೆ ಒಲವು ತೋರಿಸಿದೆ ಎಂದು ಮಾಹಿತಿ ಇದ್ದು, ಸರ್ಕಾರ ಅಂತಿಮಗೊಳಿಸಬೇಕಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ನಾಡ ಧ್ವಜ ಸಮಿತಿ ವರದಿ ನೀಡಿದೆ. ವರದಿ ಏನಿದೆ ಎಂದು ನಾನೂ ನೋಡಿಲ್ಲ. ವರದಿಯನ್ನು ಸಂಪುಟ ಸಭೆಯ ಮುಂದಿಟ್ಟು ರ್ಚಚಿಸಲಾಗುವುದು. ಬಳಿಕ ಜಾರಿ ಬಗ್ಗೆ ಮುಂದಿನ ನಿರ್ಧಾರ ಮಾಡ್ತೇವೆ ಎಂದರು.

ಸರ್ಕಾರಕ್ಕೆ ಪಾಕಿಸ್ತಾನ ಧ್ವಜ ಹಿಡಿದವರು ಮುಗ್ಧರಾಗಿಯೂ, ಭಗವಾಧ್ವಜ ಹಿಡಿದವರು ರೌಡಿಶೀಟರ್​ಗಳಂತೆ ಕಾಣುತ್ತಾರೆ. ರಾಜಕೀಯ ಕಾರಣಕ್ಕೆ ಅಮಾಯಕರನ್ನು ಶಿಕ್ಷಿಸಲಾಗುತ್ತಿದೆ.

| ಸಿ.ಟಿ.ರವಿ, ಶಾಸಕ

Leave a Reply

Your email address will not be published. Required fields are marked *

Back To Top