ಭ್ರಷ್ಟಾಚಾರ ವಿರುದ್ಧ ಸಮರ ಸಾರಿ

ಶಿಗ್ಗಾಂವಿ: ಇಂದಿನ ಯುವಜನ ಜಾಗೃತಗೊಂಡು ಭ್ರಷ್ಟಾಚಾರ ನಿಮೂಲನೆಗೆ ತೊಡೆ ತಟ್ಟಿ ನಿಂತಾಗ ನಾಡಿನ ಅಭಿವೃದ್ಧಿ ಸಾಧ್ಯ. ಅಪರಾಧ ಮುಕ್ತ ಸಮಾಜ ನಮ್ಮದಾಗಬೇಕು ಎನ್ನುವ ಕಲ್ಪನೆ ಪ್ರತಿಯೊಬ್ಬರಲ್ಲಿಯೂ ಮೂಡಬೇಕಿದೆ ಎಂದು ಬೆಳಕು ಟ್ರಸ್ಟ್ ಗೌರವಾಧ್ಯಕ್ಷ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.

ಪಟ್ಟಣದ ವಾಲ್ಮೀಕಿ ಸಭಾಭವನದಲ್ಲಿ ಭಾನುವಾರ ಜರುಗಿದ ತ್ರಿವಳಿ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಪ್ರತಿಯೊಂದು ರಂಗದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದನ್ನು ತಡೆಯುವ ಶಕ್ತಿ ಯುವ ಸಮುದಾಯಕ್ಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಇದನ್ನು ಅಭಿಯಾನದ ರೂಪದಲ್ಲಿ ಪ್ರತಿ ಗ್ರಾಮದಲ್ಲೂ ಪ್ರಯೋಗಿಸಬೇಕು. ನಾಡು, ನುಡಿ, ಸಾಹಿತ್ಯದ ಸಂರಕ್ಷಣೆಯ ಜತೆಗೆ ನಮಗೆ ಅಂಟಿಕೊಂಡಿರುವ ಇತರ ಪಿಡುಗುಗಳನ್ನು ನಿವಾರಿಸುವುದು ಅವಶ್ಯವಾಗಿದೆ ಎಂದರು.

ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಸಾಹಿತ್ಯ ಕ್ಷೇತ್ರಕ್ಕೆ ಉತ್ತರ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಅಂತಹ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಮಹನೀಯರ ಸ್ಮರಣೆಗಾಗಿ ಗ್ರಂಥಾಲಯಗಳು ಸ್ಥಾಪನೆಯಾಗಬೇಕು. ಬಂಕಾಪುರದಲ್ಲಿ ರನ್ನ, ಸವಣೂರಿನಲ್ಲಿ ವಿ.ಕೃ. ಗೋಕಾಕ ಸ್ಮಾರಕ ನಿರ್ವಣವಾಗಬೇಕು ಎಂದರು.

25 ಕಿ.ಮೀ. ದೂರದ ಬೇಡ್ತಿ-ವರದಾ ನದಿಯನ್ನು ಜೋಡಣೆ ಮಾಡುವ ಮೂಲಕ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿದರೆ, ದೇಶದಲ್ಲೇ ನದಿ ಜೋಡಣೆಯ ಪ್ರಥಮ ಪ್ರಯೋಗ ಇದಾಗಲಿದೆ ಎಂದರು.

ಜಾವಿವಿ ಕುಲಪತಿ ಪೊ›.ಡಿ.ಬಿ. ನಾಯಕ ಮಾತನಾಡಿದರು. ಹಿರಿಯ ಸಾಹಿತಿ ವಿ.ಸಿ. ಐರಸಂಗ ಸಮ್ಮೇಳನ ಉದ್ಘಾಟಿಸಿದರು. ವಿರಕ್ತಮಠದ ಸಂಗನಬಸವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನದ ಅಧ್ಯಕ್ಷೆ ನಿರ್ಮಲಾ ಯಲಿಗಾರ, ಜಾನಪದ ತಜ್ಞ ಡಾ.ಶ್ರೀಶೈಲ ಹುದ್ದಾರ, ಬೆಳಕು ಟ್ರಸ್ಟ್​ನ ಜಿಲ್ಲಾಧ್ಯಕ್ಷ ನಾಗಪ್ಪ ಬೆಂತೂರ, ಬಸವರಾಜ ಹಡಪದ, ಮುಖಂಡರಾದ ಶ್ರೀಕಾಂತ ದುಂಡಿಗೌಡ್ರ, ತಿಪ್ಪಣ್ಣ ಸಾತಣ್ಣವರ, ಕೊಟ್ರೇಶ ಮಾಸ್ತರ ಬೆಳಗಲಿ, ಕೊಂಡಾಯಿ ಮಾಸ್ತರ, ಪತ್ರಕರ್ತೆ ಸಾವಿತ್ರಿ ಮಜುಮದಾರ, ಶರೀಫಸಾಬ ನದಾಫ, ಸಾಹಿತಿ ಎಸ್.ಬಿ. ಅಂಗಡಿ, ಕಸಾಪ ಅಧ್ಯಕ್ಷ ನಾಗರಾಜ ದ್ಯಾಮನಕೊಪ್ಪ, ಸೇರಿ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಲೇಖಕರ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಇದಕ್ಕೂ ಪೂರ್ವದಲ್ಲಿ ಪಟ್ಟಣದ ಕಚೇರಿ ಮೈದಾನದಿಂದ ಸಮ್ಮೇಳನಾಧ್ಯಕ್ಷೆ ನಿರ್ಮಲಾ ಯಲಿಗಾರ ಅವರನ್ನು ವಿವಿಧ ವಾದ್ಯ ವೈಭವ ಕಲಾ ರೂಪಕಗಳೊಂದಿಗೆ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಮೆರವಣಿಗೆಗೆ ಶಾಸಕ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.

ಹೊರ ಜಗತ್ತಿಗೆ ಜ್ಞಾನ ಪರಿಚಯಿಸಲಿ: ಶರೀಫರು ತಮ್ಮ ನುಡಿಯಲ್ಲಿ ಮಹಿಳೆಗೆ ಪ್ರಥಮ ಆದ್ಯತೆ ನೀಡಿದ್ದಾರೆ. ಹೆಣ್ಣು ಮಗಳು ಹೊಸ್ತಿಲ ಮೇಲಿಟ್ಟಿರುವ ದೀಪ, ಅದು ಹೊರಗೂ, ಒಳಗೂ ಬೆಳಕು ನೀಡುತ್ತದೆ. ಇದನ್ನು ಅರ್ಥೈಸಿಕೊಂಡಾಗ ಮಹಿಳೆ ಬಗ್ಗೆ ನಿಜವಾದ ಗೌರವ ಮೂಡಲು ಸಾಧ್ಯ ಎಂದು ತ್ರಿವಳಿ ಜಿಲ್ಲಾ ಬೆಳಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ನಿರ್ಮಲಾ ಯಲಿಗಾರ ಹೇಳಿದರು.

ತಮ್ಮ ಭಾಷಣದುದ್ದಕ್ಕೂ ಮಹಿಳೆಯರು ಮನೆಗೆ ಸೀಮಿತವಾಗದೆ, ತಮ್ಮಲ್ಲಿರುವ ಜ್ಞಾನವನ್ನು ಹೊರ ಜಗತ್ತಿಗೆ ಪರಿಚಯಿಸುವ ಪ್ರಯತ್ನ ಮಾಡಬೇಕು. ಸಾಹಿತ್ಯದ ಅಭಿರುಚಿ ಬೆಳೆಸಿಕೊಂಡು ಅಕ್ಷರದ ಮೂಲಕ ನಾಡಿನ ಸಾಹಿತ್ಯ ಬೆಳೆಸುವ ಕೆಲಸಕ್ಕೆ ಕೈಜೋಡಿಸಬೇಕು ಎಂದು ತಮ್ಮ ಸ್ವರಚಿತ ಕವನ ‘ನಾಕಾಣೆ ಕಾಸಿನಲಿ ಏನೇನು ಕನಸು ಕಂಡೆ’ ಎಂಬುದನ್ನು ವಿವರಿಸಿದರು.

ಏಕೀಕರಣದ ಧ್ವನಿಗೆ ಜನ್ಮ ನೀಡಿದ ಉತ್ತರ ಕರ್ನಾಟಕ ಎಂದೂ ಪ್ರತ್ಯೇಕತೆ ಬಯಸುವುದಿಲ್ಲ. ಆದರೆ, ಅನ್ನದಾತನ ಸಮಸ್ಯೆ, ಆತ ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರೆಯುವಂತಾಗಬೇಕು. ನಂಜುಂಡಪ್ಪ, ಸರೋಜಿನಿ ಮಹಿಷಿ ವರದಿ, ಮಹದಾಯಿ ಯೋಜನೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬರಬೇಕು. ಜನರ ಧ್ವನಿಯನ್ನು ಅಲಕ್ಷಿಸದೆ ಅನುಷ್ಠಾನಕ್ಕೆ ತಂದಾಗ ವಿಶ್ವಾಸ ಗಳಿಸಲು ಸಾಧ್ಯ. ಇಲ್ಲದಿದ್ದರೆ, ಪ್ರಜಾಪ್ರಭುತ್ವದ ಮೇಲೆ ಇದ್ದ ನಂಬಿಕೆ ಕುಸಿಯುತ್ತದೆ ಎಂದರು.