ವಿಜಯಪುರ: ಕೇಂದ್ರದಲ್ಲಿ ವಕ್ಫ್ ಕಾಯ್ದೆಗೆ ತಿದ್ದು ಪಡಿ ತರುತ್ತಿರುವ ಹಿನ್ನೆಲೆ ಮತ್ತು ರಾಜ್ಯದ ಉಪ ಚುನಾವಣೆ ಹಾಗೂ ನೆರೆಯ ಮಹಾರಾಷ್ಟ್ರ ಚುನಾವಣೆಗೋಸ್ಕರ ಬಿಜೆಪಿ ವಕ್ಫ್ ವಿವಾದ ಹುಟ್ಟು ಹಾಕಿದೆ ವಿನಃ ಇದರಲ್ಲಿ ಯಾವುದೇ ಹುರುಳಿಲ್ಲವೆಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಡಾ.ಎಂ.ಬಿ. ಪಾಟೀಲ ಪ್ರತಿಕ್ರಿಯಿಸಿದರು.
ಕನಿಷ್ಠ ನೈತಿಕತೆಯನ್ನೂ ಮಣ್ಣುಪಾಲು ಮಾಡಿ ನಿರ್ಲಜ್ಜ ರಾಜಕಾರಣ ಮಾಡುತ್ತಿರುವ ಬಿಜೆಪಿ ಸುಳ್ಳುಗಳನ್ನೇ ನಿಜವೆಂಬಂತೆ ಬಿಂಬಿಸುವ ಕಲೆಯನ್ನು ಹಿಟ್ಲರ್‌ನ ಗೊಬೆಲ್ಸ್ ಎಂಬ ದುಷ್ಟನಿಂದ ಕಲಿತಂತಿದೆ. ಅಧಿಕಾರಕ್ಕಾಗಿ ಜನರಲ್ಲಿ ಅಶಾಂತಿ ಸೃಷ್ಠಿಸುತ್ತಿದ್ದಾರೆ. ಬೆಂಕಿ ಹಚ್ಚುವ ಬಿಜೆಪಿಯವರ ಕೆಲಸಕ್ಕೆ ಇದೀಗ ಎಚ್.ಡಿ. ಕುಮಾರಸ್ವಾಮಿ ಸಹ ಸಾಥ್ ನೀಡಿದ್ದಾರೆಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.
ಬಿಜೆಪಿ ಅವಧಿಯಲ್ಲಿನ ಪ್ರಕರಣ
ರಾಜ್ಯದಲ್ಲಿ 1973-74 ರ ಗೆಜೆಟ್ ನೋಟಿಫಿಕೇಶನ್ ಆದಾಗಿನಿಂದ ಇಲ್ಲಿವರೆಗಿನ ಆಸ್ತಿಗಳನ್ನು ಇಂಡೀಕರಣ ಮಾಡುವ ಪ್ರಕ್ರಿಯೆ ನಡೆದಿದೆ. ಆ ಹಿನ್ನೆಲೆ ರೈತರಿಗೆ ನೋಟಿಸ್ ನೀಡಲಾಗಿದೆ ವಿನಃ ಒಂದೇ ಒಂದು ಇಂಚು ರೈತರ ಭೂಮಿ ಕಬಳಿಸುವ ಪ್ರಯತ್ನ ನಡೆದಿಲ್ಲವೆಂದು ಸಾರಿ ಸಾರಿ ಹೇಳಿದರೂ ಕೇಳಿಸಿಕೊಳ್ಳುವ, ತಿಳಿದುಕೊಳ್ಳುವ ವ್ಯವಧಾನ ಬಿಜೆಪಿಗರಿಗಿಲ್ಲ. ನೊಟೀಸ್ ಕೊಡುವ ಪ್ರಕ್ರಿಯೆ ಆಡಳಿತ ಯಂತ್ರದ ಒಂದು ಭಾಗ. ಬಿಜೆಪಿ ಆಡಳಿತಾವಧಿಯಲ್ಲಿಯೂ ಸಾಕಷ್ಟು ನೋಟಿಸ್ ನೀಡಲಾಗಿದೆ. ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ 2006ರಲ್ಲಿ ಚಿಕ್ಕಮಗಳೂರಿನ ಗಾವನಹಳ್ಳಿ, ಕಡೂರಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಒಟ್ಟು 4 ಖಾತೆ ಮಾಡಲಾಗಿದೆ. 2008 ರಿಂದ 2013ರ ವರೆಗೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವಧಿಯಲ್ಲಿ 7 ಆಸ್ತಿಗಳನ್ನು ಪಹಣಿಯ ಕಾಲಂ ನಂ.9ರಲ್ಲಿ ನಮೂದು ಮಾಡಲಾಗಿದೆ. ಯಾವ ಮೂರ್ಖತನದಿಂದ ಇದಾಗಿದ್ದು ಎಂದು ಪ್ರಶ್ನಿಸಿದ ಎಂ.ಬಿ. ಪಾಟೀಲರು, ಮುಂದುವರಿದು 2019ರ ಜುಲೈನಿಂದ 2023ರ ಏಪ್ರೀಲ್‌ವರೆಗೆ ಅಧಿಕಾರ ನಡೆಸಿದ್ದ ಬಿಜೆಪಿ ಅವಧಿಯಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ವಿವಿಧ ಜಿಲ್ಲೆಗಳಲ್ಲಿ 216 ಪ್ರಕರಣಗಳಲ್ಲಿ ನೊಟೀಸ್ ನೀಡಿದ್ದಾರೆ. ಬೆಂಗಳೂರು ನಗರದಲ್ಲಿ ಅಂದಿನ ಸಚಿವ ಆರ್. ಅಶೋಕ ಅವಧಿಯಲ್ಲಿ-7, ಬಾಗಲಕೋಟೆಯ ಅಂದಿನ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವಧಿಯಲ್ಲಿ-11, ಚಿಕ್ಕಮಗಳೂರಿನಲ್ಲಿನ 2019-2023ರ ಅವಧಿಯಲ್ಲಿ ಸಿ.ಟಿ. ರವಿ ಸಚಿವರಾಗಿದ್ದಾಗ 7ಕ್ಕೂ ಅಧಿಕ ಪ್ರಕರಣ ಮತ್ತು ಹಿಂದು-ಮುಸ್ಲಿಂ ಎಂದು ಸದಾ ಸಮಾಜ ವಿಭಜಿಸುವ ಕೃತ್ಯದಲ್ಲಿ ತೊಡಗಿರುವ ಬಸನಗೌಡ ಪಾಟೀಲ ಯತ್ನಾಳ ಅವರ ಜಿಲ್ಲೆಯಾದ ವಿಜಯಪುರದಲ್ಲಿಯೇ 109 ಪ್ರಕರಣಗಳಲ್ಲಿ ಪಹಣಿ ಕಾಲಂ -9ರಲ್ಲಿ ವಕ್ಫ್ ಎಂದು ನಮೂದಾಗಿದೆ. ಆದರೆ, ನಮ್ಮ ಸರ್ಕಾರ ಬಂದ ಬಳಿಕ ಪರಿಶೀಲಿಸಿ ನಿಜವಾದ ಆಸ್ತಿ ಮಾಲೀಕರು ಯಾರು ಎಂಬುದನ್ನು ಗುರುತಿಸಿ ನ್ಯಾಯ ಒದಗಿಸಲಾಗುತ್ತಿದೆ ಎಂದರು.
ಹಂಚಿಕೆಯಾದ ಆಸ್ತಿ ವಾಪಸ್ ಇಲ್ಲ
ಹಾಗೆ ನೋಡಿದರೆ ಆಸ್ತಿ ಕಳೆದುಕೊಂಡಿರುವುದು ವಕ್ಫ್ ಬೋರ್ಡ್. ಇಂಡೀಕರಣ ಮಾಡಿಕೊಳ್ಳದ ಕಾರಣ ಇನಾಂ ಕಾಯ್ದೆಯಲ್ಲಿ 12,000ಎಕರೆ ಜಮೀನು ಹಂಚಿಕೆಯಾಗಿದೆ. ಆ ಜಮೀನು ಸಹ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಸಚಿವರು,ವಕ್ಫ್ ಸಚಿವರು ಮತ್ತು ನಾನು ಸ್ಪಷ್ಟವಾಗಿ ತಿಳಿಸಿದ್ದೇವೆ.
ಜಿಲ್ಲೆಯಲ್ಲಿ 1973-74ರಲ್ಲಿ ಜಿಲ್ಲೆಯಲ್ಲಿ ಗೆಜೆಟ್ ನೋಟಿಫಿಕೇಶನ್ ಆದ ಬಳಿಕ 14,201 ಎಕರೆ ವಕ್ಫ್ ಜಾಗೆ ಇದ್ದು ಇದರಲ್ಲಿ ಇನಂ ಕಾಯ್ದೆಯಡಿ 14,559ಎಕರೆ ಹಂಚಿಕೆಯಾಗಿದೆ. ಭೂ ಸುಧಾರಣೆ ಕಾಯ್ದೆಯಡಿ 11,835 ಎಕರೆ ಅಂದರೆ ಅಂದಾಜು 12 ಸಾವಿರ ಎಕರೆ ಜಮೀನು ವಕ್ಫ್‌ನವರು ಕಳೆದುಕೊಂಡಿದ್ದಾರೆ. ಆ 12 ಸಾವಿರ ಎಕರೆ ಜಮೀನಿನ ಪೈಕಿ ಯಾರಿಗೂ ನೋಟಿಸ್ ಕೊಟ್ಟಿಲ್ಲ. ಅವರ ಜಮೀನು ಸಹ ವಾಪಸ್ ಪಡೆಯಲ್ಲ ಎಂದು ಹೇಳಿಯಾಗಿದೆ. ಇನ್ನು ವಕ್ಫ್‌ಗೆ ಉಳಿದಿದ್ದು 773ಎಕರೆ ಜಮೀನು. ಇಷ್ಟಾದರೂ ವಕ್ಫ್‌ನಲ್ಲಿ ಲೋಪ ಆಗಿದ್ದು, ಅದಕ್ಕಾಗಿ ಟಾಸ್ಕ್‌ಪೋರ್ಸ್ ಸಮಿತಿ ರಚಿಸಲಾಗಿದೆ. 1973-74 ಗೆಜೆಟ್ ನೋಟಿಫೀಕೇಶಣ್ ಇಟ್ಟುಕೊಂಡು ಅದಕ್ಕಿಂತಲೂ ಮುಂಚಿನ ಅಂದರೆ ಸುಮಾರು 1930ರಿಂದ ತೆಗೆದು ದಾಖಲೆ ನೋಡಿ ಆ ಜಮೀನು ರೈತರದಿದ್ದರೆ ರೈತರು, ಸರ್ಕಾರದಿದ್ದರೆ ಸರ್ಕಾರ, ವಕ್ಫ್ ಇದ್ದರೆ ವಕ್ಪ್ ಮಾಡಲಾಗುವುದು. ಇಷ್ಟು ಪಾರದರ್ಶಕ ಇದ್ದರೂ ಸತ್ಯ ಶೋಧನ ನಾಟಕ ಏಕೆ?ಎಂದು ಸಚಿವ ಪಾಟೀಲ ಪ್ರಶ್ನಿಸಿದರು.
ಗೊಂದಲಗಳಿಗೆ ತೆರೆ
ವಕ್ಫ್ ವಿವಾದ ಆರಂಭವಾಗಿರುವುದು ಹೊನವಾಡ ಗ್ರಾಮದಿಂದ. ಹೊನವಾಡದಲ್ಲಿ ಸುಮಾರು 1200 ಎಕರೆ ಜಮೀನು 1973-74ರ ಗೆಜೆಟ್ ನೋಟಿಫಿಕೇಶನ್‌ನಲ್ಲಿ ವಿಜಯಪುರ ನಗರದ ಮಹಾಲ್ ಬಾಗಾಯತ್ ಎಂಬ ಪದದ ಕೆಳಗಡೆ ಬ್ರಾಕೆಟ್‌ನಲ್ಲಿ ಹೊನವಾಡ ಎಂದು ತಪ್ಪಾಗಿ ನಮೂದಾಗಿದೆ. ಮಹಾಲ್ ಬಾಗಾಯತ್ ಎಂದರೆ ವಿಜಯಪುರ ಎಂಬುದು ಸ್ಪಷ್ಟ ಅಲ್ಲವೇ? ತಪ್ಪಾಗಿದೆ. ಒಪ್ಪಿಕೊಳ್ಳೋಣ. 1973ರಲ್ಲಿ ತಪ್ಪು ಗೊತ್ತಾಗಿ ಅದನ್ನು ತೆಗೆದು ಹಾಕಲಾಗಿದೆ. ರೈತರ ಒಂದು ಎಕರೆ ಜಮೀನು ಕೂಡ ವಕ್ಫ್‌ಗೆ ಹೋಗಿಲ್ಲ. ಉತಾರೆ ಕೂಡ ಸರಿಯಾಗಿವೆ. ಒಬ್ಬರಿಗೂ ನೋಟಿಸ್ ಕೂಡ ಹೋಗಿಲ್ಲ. ಉಳಿದುರುವುದು 10.29 ಎಕರೆ ಜಮೀನು. ಅದನ್ನೂ ನಾನೇ ಹೇಳಿ ಸರಿಪಡಿಸಿ ಅಧಿಕೃತ ದಾಖಲೆ ಸಹ ಕೊಡಿಸಿದ್ದೇನೆ. ಇದರಲ್ಲಿ ಗೊಂದಲ ಏನು? ಎಂದರು.
ಇನ್ನು ಸಿಂದಗಿಯ ವಿರಕ್ತ ಮಠದ್ದು ಸ.ನಂ.1020ರದ್ದು 1.36 ಎಕರೆ ಜಮೀನಿದ್ದು, ಸನಂ.1029ರಲ್ಲಿ 5.32 ಎಕರೆ ವಕ್ಫ್ ಜಾಗೆ ಇದೆ. ದಾಖಲೆಯಲ್ಲಿ ಸನಂ. 1029ರ ಬದಲಿ ಸನಂ. 1020 ಆಗಿದೆ. ಅದನ್ನೂ ನಾನೇ ಕಂಡು ಹಿಡಿದು ಹೇಳಿದ್ದೇನೆ. ಮಠದವರಿಗೂ ಗೊತ್ತಿರಲಿಲ್ಲ. ಆ ಮಠದ್ದೂ ಜಮೀನಿನ ಗೊಂದಲ ಇದೆ ಆ ಮಾತು ಬೇರೆ. ಇದೀಗ ಅದೆಲ್ಲವೂ ಸರಿಪಡಿಸಲಾಗಿದೆ ಎಂದರು.
ಯರಗಲ್ಲ ಕೆಡಿ ಗ್ರಾಮದ್ದು 1930ರಲ್ಲಿಯೇ ಸಮಸ್ಯೆ ಕಂಡು ಬಂದಿದೆ. ಅವರ ಹೆಸರಲ್ಲಿ ದಾಖಲಾತಿಗಳಿವೆ. ಗೆಜೆಟ್ ಮುಂಚೆಯೇ ಈ ಸಮಸ್ಯೆ ಆಗಿದ್ದು, ಅದನ್ನೂ ನಾವೇ ಪರಿಶೀಲಿಸಿದ್ದೇವೆ ವಿನಃ ಈ ಬಿಜೆಪಿಯ ಸತ್ಯ ಶೋಧನಾ ಸಮಿತಿಯಲ್ಲ ಎಂದು ವ್ಯಂಗ್ಯವಾಡಿದರು.
ಇನ್ನು ಇಂಡಿಯಲ್ಲಿ ತಹಸೀಲ್ದಾರ್ ನೋಟಿಸ್ ಕೊಡದೇ ದಾಖಲಾತಿಯಲ್ಲಿಯಲ್ಲಿ ಕಾಲಂ ನಂ.11ರಲ್ಲಿ ವಕ್ಫ್ ಎಂದು ಸೇರಿಸಿದ್ದರು. ಅದನ್ನೂ ಸಹ ಸರಿಪಡಿಸಲಾಗಿದೆ. ಈ ಎಲ್ಲವೂ ನಾವೇ ಮಾಡಿದ್ದು. ಆದರೂ ಈ ಸತ್ಯ ಶೋಧನಾ ನಾಟಕ ಮಾಡುವುದು ಏಕೆ? ಜನರನ್ನು ದಾರಿತಪ್ಪಿಸುತ್ತಿರುವುದೇಕೆ? ಎಂದು ಸಚಿವ ಎಂ.ಬಿ. ಪಾಟೀಲ ಆಕ್ರೋಶ ಹೊರಹಾಕಿದರು.