ಹೊನ್ನಾಳಿ: ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವ ಕ್ರಮ ಖಂಡಿಸಿ ಹಾಗೂ ವಕ್ಫ್ ಮಂಡಳಿ ರದ್ದತಿಗೆ ಆಗ್ರಹಿಸಿ ತಾಲೂಕು ಬಿಜೆಪಿ ಘಟಕದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್ ಮಾತನಾಡಿ, ವಕ್ಫ್ ಆಸ್ತಿ ವಿಚಾರವಾಗಿ ಜಿಲ್ಲಾಡಳಿತ ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯುವ ಬದಲು ವಕ್ಫ್ ಮಂಡಳಿಯನ್ನೇ ರದ್ದು ಮಾಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ವಿಜಯಪುರದಲ್ಲಿ ಆರಂಭಗೊಂಡ ಕರ್ನಾಟಕ ವಕ್ಫ್ ಆಸ್ತಿ ವಿವಾದವು ಈಗ ಇಡೀ ರಾಜ್ಯ ವ್ಯಾಪಿಸಿದೆ. ಇದು ರೈತರಲ್ಲಿ ಆತಂಕ ಮೂಡಿಸಿದೆ. ಇದರ ಹಿಂದೆ ಸಚಿವ ಜಮೀರ್ ಅಹ್ಮದ್ ಕೈವಾಡವಿದೆ. ಕೂಡಲೇ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಮುಖಂಡ ನೆಲಹೊನ್ನೆ ಮಂಜುನಾಥ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲು ಈ ರೀತಿ ಮಾಡುತ್ತಿದೆ. ಮತದಾರರು ತಕ್ಕಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಅರಕೆರೆ ನಾಗರಾಜ್ ಮಾತನಾಡಿ, ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯುವುದಾಗಿ ಮುಖ್ಯಮಂತ್ರಿ ಹೇಳಿರುವುದು ರೈತರ ಕಣ್ಣೊರೆಸುವ ತಂತ್ರ. ಇದನ್ನು ಬಿಜೆಪಿ ನಂಬುವುದಿಲ್ಲ. ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರು ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಾನಂದ್, ಬಿ.ಎಲ್.ಕುಮಾರಸ್ವಾಮಿ ಮಾತನಾಡಿದರು. ನಂತರ ಹೊನ್ನಾಳಿ ಉಪವಿಭಾಗಾಧಿಕಾರಿ ವಿ.ಅಭಿಷೇಕ್ ಅವರಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮೊದಲು ಹಿರೇಕಲ್ಮಠದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು.
ಬಿಜೆಪಿ ಪ್ರಮುಖರಾದ ರಮೇಶ್‌ಗೌಡ, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರನಾಯ್ಕ, ಎಂ.ಪಿ.ರಾಜು, ಮಹೇಂದ್ರಗೌಡ, ನ್ಯಾಮತಿ ರವಿಕುಮಾರ್, ರಾಜು ಪಲ್ಲವಿ, ಅನಿಲ್, ಮಾರುತಿನಾಯ್ಕ, ಪುರಸಭೆ ಮಾಜಿ ಅಧ್ಯಕ್ಷ ಕೆ.ವಿ.ಶ್ರೀಧರ್, ಜುಂಜಾನಾಯ್ಕ, ಸದಾಶಿವ, ಕುಮಾರ್ ಇತರರು ಪಾಲ್ಗೊಂಡಿದ್ದರು.