More

    ಹಣ ಗಳಿಸಬೇಕೆ? ಹಾಗಾದರೆ ತೂಕ ಇಳಿಸಿ!

    ಹಣ ಗಳಿಸಬೇಕೆ? ಹಾಗಾದರೆ ತೂಕ ಇಳಿಸಿ!ದಢೂತಿ ಮಹಿಳೆಯೊಬ್ಬಳಿಗೆ ಸೌಂದರ್ಯದ ಚಿಂತೆ ಹೆಚ್ಚಾಯಿತು. ವೈದ್ಯರ ಬಳಿ ಹೋಗಿ ‘ತೂಕ ಇಳಿಸುವ ಎಲ್ಲಾ ವಿಧಾನಗಳನ್ನೂ ಮಾಡಿದ್ದೇನೆ. ಹೊಸ ವಿಧಾನವಿದ್ದರೆ ಹೇಳಿ’ ಎಂದಳು. ‘ಕುದುರೆ ಸವಾರಿ ಮಾಡಿ, ಒಂದು ತಿಂಗಳಾದ ಮೇಲೆ ಬನ್ನಿ’ ಅಂದರು ವೈದ್ಯರು. ಆಕೆ ಒಂದು ತಿಂಗಳಾದ ಮೇಲೆ ಬಂದಳು.

    ಡಾಕ್ಟರ್: ‘ನಾನು ಹೇಳಿದಂತೆ ಮಾಡಿಲ್ವೇ?’

    ಮಹಿಳೆ: ‘ಮಾಡಿದೆ ಸಾರ್.’

    ಡಾಕ್ಟರ್: ‘ತೂಕ ಇಳೀಲಿಲ್ವೇನಮ್ಮಾ?’

    ಮಹಿಳೆ: ‘ಇಳೀತು ಸಾರ್, ಆದರೆ ನಂದಲ್ಲ, ಕುದುರೇದು.’

    ಇದು ಜೋಕ್ ತರಹ ಕಾಣಿಸಬಹುದು. ಆದರೆ ಇದು ಸತ್ಯ. ತೂಕ ಇಳಿಸುವುದಕ್ಕೂ ಜೀವನದಲ್ಲಿ ಗೆಲ್ಲೋದಕ್ಕೂ ಏನು ಸಂಬಂಧ ಅಂತ ನೀವು ಕೇಳಬಹುದು. ನಾನು ವೈದ್ಯನಲ್ಲ. ಆದರೆ ತೂಕ ಇಳಿಸಲು ಸಹಾಯಕವಾಗುವ ಈ ಲೇಖನದಲ್ಲಿ, ನನ್ನ ಸ್ವಯಂ ಅನುಭವಗಳನ್ನು ಮತ್ತು ವೈದ್ಯರಾದ ನನ್ನ ಮಗಳು ಮತ್ತು ಅಳಿಯನಿಂದ ತಿಳಿದುಕೊಂಡುದನ್ನು ಬರೆದಿದ್ದೇನೆ. ಹಾಗೆಯೇ ರುಜುತಾ ದಿವೇಕರ್ ಅವರ ‘Don’t loose your mind, loose your weight‘ ಎಂಬ ಪುಸ್ತಕದಲ್ಲಿ ಸಹ ಸ್ಥೂಲ ದೇಹದ ಅಪಾಯದ ಬಗ್ಗೆ ಹೆಚ್ಚಿನ ಮಾಹಿತಿ ಇದೆ.

    ನನ್ನ ತಂದೆ ನೂರೈದು ಕೆಜಿ ಇದ್ದರು. ತೂಕ ಇಳಿಸುವ ಬೇರೆ ಬೇರೆ ವಿಧಾನಗಳನ್ನು ಅನುಸರಿಸಿ ಎಪ್ಪತೆôದು ಕೆಜಿಗೆ ಇಳಿದಿದ್ದರು. ನಮ್ಮ ಕುಟುಂಬದವರ ದೇಹಗಳೆಲ್ಲ ಸ್ವಲ್ಪ ಸ್ಥೂಲವೇ. ಎಷ್ಟೇ ಕಮ್ಮಿ ತಿಂದರೂ ನಮ್ಮ ದೇಹ ಅಗತ್ಯವಿರುವಷ್ಟು ಖರ್ಚು ಮಾಡಿ ಉಳಿದ ಕೊಬ್ಬನ್ನು ತೆಗೆದಿಡುತ್ತದೆ. ಕೆಲವರು ಎಷ್ಟೇ ತಿಂದರೂ ಹಂಚಿ ಕಡ್ಡಿ ತರಹ ಇರುತ್ತಾರೆ. ಅವರ ದೇಹಪ್ರಕೃತಿಯೇ ಹಾಗೆ. ಯಾರಿಗೆ ಒಬೆಸಿಟಿ ಇದೆಯೋ ಅವರ ಬಗ್ಗೆ ಹೇಳ್ತಾ ಇದ್ದೇನೆ. ತೂಕ ಕಡಿಮೆ ಮಾಡೋದಕ್ಕೆ ಯಾವುದೇ ಔಷಧಿ, ಮಂತ್ರದಂಡ ಮುಂತಾದ ಶಾರ್ಟ್​ಕಟ್ ಇಲ್ಲ. ದಿಢೀರ್ ತೂಕ ಇಳಿಸುವ ದಂಧೆ ಮಾಡುವವರ ಪ್ರಚಾರಕ್ಕೆ ಮರುಳಾಗಬೇಡಿ. ಅವರು ಅನುಸರಿಸುವ ವಿಧಾನಗಳಿಂದ ನಿಮಗೆ ಸುಸ್ತು ಬರುತ್ತೆ. ನೇಚರ್ ಕ್ಯೂರ್ ವಿಧಾನದಲ್ಲಿ ಹಸಿ ತರಕಾರಿ, ಜ್ಯೂಸ್ ಕುಡಿಸಿ ಮಣ್ಣಲ್ಲಿ ಕೂರಿಸುತ್ತಾರೆ. ಅಲ್ಲಿ ಜ್ಯೂಸ್, ತರಕಾರಿ ತಿನ್ನುತ್ತಿದ್ದವರು ಅಲ್ಲಿಂದ ಬಂದ ತಕ್ಷಣ ಸಿಕ್ಕಿದ್ದನ್ನೆಲ್ಲಾ ತಿನ್ನಲು ಶುರು ಮಾಡುತ್ತಾರೆ. ಆಗ ತೂಕ ಮೊದಲಿಗಿಂತ ಹೆಚ್ಚಾಗುತ್ತದೆ. ‘ಒಂದೇ ವಾರದಲ್ಲಿ ಹತ್ತು ಕೆಜಿ ಇಳಿಸಿ. ಇಲ್ಲದಿದ್ದಲ್ಲಿ ದುಡ್ಡು ವಾಪಸ್’ ಎಂಬ ಜಾಹೀರಾತಿಗೆ ಮರುಳಾಗಿ ನನ್ನ ಸ್ನೇಹಿತ ರಾಮನಾಥ ಸಾವಿರಾರು ರೂಪಾಯಿ ಖರ್ಚು ಮಾಡಿದ. ಪರಿಣಾಮ ಮಾತ್ರ ಸೊನ್ನೆ. ಕೊನೆಗೆ ನನ್ನ ಕೆಲವು ಸಿಂಪಲ್ ಟಿಪ್ಸ್ ಅನುಸರಿಸಿ ಈಗ ಫಿಟ್ ಆಗಿದ್ದಾನೆ.

    ಹಾಗಾದರೆ ತೂಕ ಇಳಿಸುವ ರಹಸ್ಯ ಏನು? ಇದು ಒಂಥರಾ ಬ್ಯಾಂಕ್ ಬ್ಯಾಲೆನ್ಸ್ ಇದ್ದ ಹಾಗೆ. ನೀವು ಅಕೌಂಟಿಗೆ ಜಾಸ್ತಿ ದುಡ್ಡು ಹಾಕಿ ಕಡಿಮೆ ಖರ್ಚು ಮಾಡಿದ್ರೆ ಬ್ಯಾಂಕ್ ಬ್ಯಾಲೆನ್ಸ್ ಏರುತ್ತಾ ಹೋಗೋ ತರಹ ಕೊಬ್ಬನ್ನು ಜಮಾ ಮಾಡಿಕೊಂಡು ವ್ಯಾಯಾಮ ಮಾಡದೇ ಅದರ ಖರ್ಚನ್ನು ಕಮ್ಮಿ ಮಾಡಿದರೆ ತೂಕ ಜಾಸ್ತಿಯಾಗುತ್ತಾ ಹೋಗುತ್ತದೆ. ಹಾಗಾದ್ರೆ ಕಮ್ಮಿ ತಿಂದರೆ ಹಸಿವಾಗೋಲ್ವೇ? ಆಗುತ್ತೆ, ಅದಕ್ಕೆ ತಿನ್ನೋ ಪ್ರಮಾಣ ಕಡಿಮೆ ಮಾಡಬೇಡಿ. ಹಸಿವಾದಾಗ ಕ್ಯಾರೆಟ್, ಸೌತೆಕಾಯಿ, ಟೊಮೆಟೊ, ಈರುಳ್ಳಿಯಂತಹ ಕಡಿಮೆ ಕ್ಯಾಲರಿ ಇರುವ ತರಕಾರಿ ತಿನ್ನಿ. ಹೊಟ್ಟೆ ಖಾಲಿ ಅನ್ನಿಸಬಾರದು ಅನ್ನೋದಕ್ಕೆ ನಾನು ಕಂಡುಹಿಡಿದ ಉಪಾಯ ಏನೂಂದ್ರೆ ಇಸಬ್​ಗೋಲ್ ಅನ್ನೋ ನಾರಿನಂಶ ಜಾಸ್ತಿ ಇರುವ ಪೌಡರ್. ಇದು ಔಷಧದ ಅಂಗಡಿಗಳಲ್ಲಿ ಸಿಗುತ್ತದೆ. ಇದು ಔಷಧವೂ ಅಲ್ಲ ಆಹಾರವೂ ಅಲ್ಲ. ಇದರಲ್ಲಿ ಯಾವುದೇ ಕ್ಯಾಲರಿ ಇಲ್ಲ. ಊಟಕ್ಕೆ ಮೊದಲು ಒಂದು ಗ್ಲಾಸ್ ನೀರಿಗೆ ಎರಡು ಚಮಚ ಈ ಪೌಡರನ್ನು ಹಾಕಿ ಚಮಚದಿಂದ ಚೆನ್ನಾಗಿ ಕಲಸಿ ತಕ್ಷಣ ಕುಡಿಯಬೇಕು. ಹೊಟ್ಟೆಯಲ್ಲಿ ಇದರ ಕಣಗಳು ನೂರು ಪಟ್ಟು ಉಬ್ಬಿಕೊಂಡು ಹಸಿವೆ ಕಮ್ಮಿಯಾಗುತ್ತದೆ. ಊಟ ಮಾಡಬೇಕಾದರೆ ಅರ್ಧ ಹೊಟ್ಟೆ ಊಟ, ಕಾಲು ಹೊಟ್ಟೆ ನೀರು, ಇನ್ನು ಕಾಲು ಭಾಗ ಖಾಲಿ ಬಿಡಿ. ದಿನಕ್ಕೆ ಮೂರು ಹೊತ್ತು ಊಟ ಮಾಡಬಾರದು. ಹೀಗೆ ಮಾಡೋದ್ರಿಂದ ದೇಹದಲ್ಲಿ ಕೊಬ್ಬು ಸೇರಿಕೊಳ್ಳುತ್ತದೆ. ಅದರ ಬದಲಿಗೆ ಎರಡೆರಡು ಗಂಟೆಗೊಮ್ಮೆ ಸ್ವಲ್ಪ ಸ್ವಲ್ಪ ತಿನ್ನುತ್ತಾ ಇದ್ದರೆ ಅದು ಕರಗುತ್ತದೆ. ಉಪವಾಸ ಮಾಡಬಾರದು.

    ಡಯಾಬಿಟಿಸ್ ರೋಗಿಗಳಿಗಾಗಿ ನನ್ನ ತಂದೆ ಒಂದು ಉಪಾಯ ಕಂಡುಹಿಡಿದಿದ್ದರು. ಅದೇನೆಂದರೆ ಸ್ವೀಟ್ ಅಥವಾ ಗೋಡಂಬಿ ಮುಂತಾದ ಜಾಸ್ತಿ ಕ್ಯಾಲರಿ ಇರುವ ತಿನಿಸುಗಳ ರುಚಿ ನೋಡಲೇಬೇಕೆನಿಸಿದರೆ ಅವನ್ನು ಚೆನ್ನಾಗಿ ಅಗಿದು ರುಚಿ ಗ್ರಹಿಸಿ ಯಾರೂ ಇಲ್ಲದ ಕಡೆ ಎಸೆದುಬಿಡುವುದು. ಇದು ಕೆಲವರಿಗೆ ಅಸಹ್ಯವೆನಿಸಬಹುದು. ಅಯ್ಯೋ, ದುಡ್ಡು ವೇಸ್ಟ್ ಆಗುತ್ತಲ್ಲಾ ಅಂತ ಅನ್ನಿಸಬಹುದು. ಆದರೆ ನುಂಗಿದರೆ ದೇಹವೇ ಹಾಳಾಗುತ್ತದೆಂಬ ಯೋಚನೆ ಇರಬೇಕು.

    ತಿರುಪತಿ ಲಡ್ಡು ಆದರೂ ಅಷ್ಟೆ, ಒಂದು ಚಿಟಿಕೆ ಬಾಯಿಗೆ ಹಾಕಿ ಧನ್ಯರಾಗಿ. ಮಸಾಲೆ ದೋಸೆ, ಬೋಂಡಾ ಮೊದಲಾದ ಎಣ್ಣೆಯ ತಿನಿಸುಗಳನ್ನು ತಿನ್ನಲೇಬೇಕಾದ ಸಂದರ್ಭ ಬಂದರೆ ಟಿಶ್ಯೂ ಪೇಪರ್​ನಲ್ಲಿ ಮಡಚಿ ಎಣ್ಣೆಯ ಅಂಶವನ್ನು ತೆಗೆದು ತಿನ್ನಿ. ನೀವು ಈಗಾಗಲೇ ರುಚಿ ನೋಡಿರುವ ತಿಂಡಿಯೇನಾದರೂ ಇದ್ದಲ್ಲಿ ಸ್ವಲ್ಪವೇ ತಿನ್ನಿ. ಹಣಕ್ಕೂ, ಆರೋಗ್ಯಕ್ಕೂ, ತೂಕಕ್ಕೂ ಸಂಬಂಧ ಖಂಡಿತವಾಗಿಯೂ ಇದೆ. ಹಣ ಮಾಡುವ ಮೊದಲ ಸೂತ್ರ ತೆಳ್ಳಗಾಗುವುದು. ಆಲಸ್ಯ, ಬೇಸರಗಳು ಹಣ ಮಾಡುವಿಕೆಯ ಮೊದಲ ಶತ್ರುಗಳು. ಇವು ದೇಹ ತೂಕ ಹೆಚ್ಚಿರುವವರ ಬಂಧುಗಳು. ಲಕ್ಷ್ಮಿ ಸುಂದರವಾಗಿರುವವರ ಬಳಿ, ಉತ್ಸಾಹದಿಂದ ಪುಟಿಯುವವರ ಬಳಿ ಪ್ರೇಮಯಾಚಿಸುತ್ತಾಳೆಂಬುದು ನೆನಪಿರಲಿ!

    ದೇಹ ತೂಕ ಹೆಚ್ಚಿರುವವರು ಓಡಾಡುವುದು, ನಡೆಯುವುದು, ಆಟ ಆಡುವುದು ಕಡಿಮೆ. ಓಡಬೇಕಾದರೆ ನಡೀತಾರೆ, ನಡೀಬೇಕಾದರೆ ಕೂರುತ್ತಾರೆ. ಕೂರಬೇಕಾದಾಗ ಮಲಗುತ್ತಾರೆ. ನೀವು ಇದನ್ನು ಉಲ್ಟಾ ಮಾಡಬೇಕು. ಮಲಗಬೇಕು ಅನ್ನಿಸಿದಾಗ ಕೂತುಕೊಳ್ಳಿ. ಕೂರಬೇಕೆನಿಸಿದಾಗ ನಡೀರಿ. ನಡೀಬೇಕೆನಿಸಿದಾಗ ಓಡಿ. ಯಾವುದೇ ತಿಂಡಿಯನ್ನು ಪಕ್ಕದಲ್ಲಿ ಇಟ್ಟುಕೊಂಡು ಟಿವಿ ನೋಡಬೇಡಿ. ಹೀಗೆ ಮಾಡುವುದರಿಂದ ನಿಮಗೆ ಎಷ್ಟು ತಿಂದೆ ಅನ್ನೋದೇ ಗೊತ್ತಾಗುವುದಿಲ್ಲ. ದೇಹದ ಭಾರ ಹೆಚ್ಚಾದರೆ ಮಂಡಿ ನೋಯುತ್ತದೆ. ಮಂಡಿನೋವು ಹೋಗಬೇಕಾದರೆ ತೂಕ ಇಳಿಸಲು ನಡೆಯಬೇಕಾಗುತ್ತದೆ. ನಡೆಯಲು ಮಂಡಿನೋವು ಬಿಡೋದಿಲ್ಲ. ಇದೊಂದು ವಿಷ ವ್ಯೂಹ. ಇದರಿಂದ ಹೊರಬರುವುದು ತುಂಬಾ ಕಷ್ಟ. ಆದ್ದರಿಂದ ತೂಕ ಹೆಚ್ಚಾಗದಂತೆ ಜಾಗರೂಕರಾಗಿರಬೇಕು.

    ವ್ಯಾಯಾಮ, ನಡೆಯುವುದು, ಜಾಗಿಂಗ್, ಕಸರತ್ತು ಏನೇ ಆದರೂ ದಿನಾಲೂ ಅಲ್ಪಸ್ವಲ್ಪದಿಂದ ಆರಂಭಿಸಿ, ನಿಧಾನವಾಗಿ ಹೆಚ್ಚಿಸಿ. ಜಿಮ್ಲ್ಲಿ ಒಮ್ಮೆಲೇ ಸಿಕ್ಕಾಪಟ್ಟೆ ವ್ಯಾಯಾಮ ಮಾಡಿ ಮೈಕೈ ನೋಯಿಸಿಕೊಂಡು ಮತ್ತೆಂದೂ ಜಿಮ್ ಕಡೆ ತಲೆ ಹಾಕದವರನ್ನು ನೋಡಿದ್ದೇನೆ. ಆದ್ದರಿಂದ ನಿಧಾನವಾಗಿ ಹೆಚ್ಚಿಸಿ. ಕ್ರಮ ತಪ್ಪಬೇಡಿ. ವಾರಕ್ಕೆ ಐದು ದಿನವಷ್ಟೇ ವ್ಯಾಯಾಮ ಮಾಡಿದರೆ ಸಾಕೆಂದು ಕೆಲವು ಪುಸ್ತಕಗಳು ಹೇಳುತ್ತವೆ. ಆದರೆ ವಾರದ ಏಳು ದಿನವೂ ತಪ್ಪದೆ ವ್ಯಾಯಾಮ ಮಾಡಿ.

    ಒಂದು ದಿನ ತಪ್ಪಿಸಿದರೆ ಮತ್ತೆ ಪ್ರಾರಂಭಿಸುವುದು ಕಷ್ಟ. ಮನಸ್ಸು ಸೋಮಾರಿ ಆಗುತ್ತದೆ. ಯಾವ ಸಮಯ ಆದ್ರೂ ಸರಿ ಸಿಕ್ಕಿದಷ್ಟು ಸಮಯ ಬಿರುಸಿನ ನಡಿಗೆ ರೂಢಿಸಿಕೊಳ್ಳಿ. ಆಗ ಅನಗತ್ಯ ಕ್ಯಾಲರಿ ಉರಿದುಹೋಗುತ್ತದೆ. ತೂಕ ಇಳಿಸಬೇಕಾದರೆ ಎಲ್ಲಕ್ಕಿಂತ ಮುಖ್ಯ, ಮನೆಯಲ್ಲಿ ಒಂದು ಡಿಜಿಟಲ್ ತೂಕಯಂತ್ರವಿರಬೇಕು. ವೆಯಿಂಗ್ ಮಷಿನ್​ನಿಂದ ತೂಕ ಇಳಿಸುವುದು ಹೇಗೆಂಬ ರಹಸ್ಯವನ್ನು ಮುಂದೆ ನೋಡೋಣ…

    (ಲೇಖಕರು ಖ್ಯಾತ ಜಾದೂಗಾರರು, ಬರಹಗಾರರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts