ಸೋರುತಿದೆ ಎನ್.ಆರ್.ಪುರದ ಇಂದಿರಾ ಕ್ಯಾಂಟೀನ್

ಎನ್.ಆರ್.ಪುರ: ಹಸಿವು ಮುಕ್ತ ರಾಜ್ಯವನ್ನಾಗಿಸಲು ಈ ಹಿಂದಿನ ಕಾಂಗ್ರೆಸ್ ಸರ್ಕಾರ ಅತಿ ಕಡಿಮೆ ದರದಲ್ಲಿ ಊಟ, ಉಪಾಹಾರ ನೀಡುವ ಉದ್ದೇಶದಿಂದ ರಾಜ್ಯದ ವಿವಿಧೆಡೆ ಇಂದಿರಾ ಕ್ಯಾಂಟೀನ್​ಗಳನ್ನು ತೆರೆದಿತ್ತು. ಆದರೆ ವರ್ಷ ಕಳೆಯುವಷ್ಟರಲ್ಲಿ ಪಟ್ಟಣದ ಕ್ಯಾಂಟೀನ್​ನ ಛಾವಣಿಯಿಂದ ನೀರು ಸೋರುತ್ತಿದೆ. ಛಾವಣಿಗೆ ಹೊದಿಸಿದ ಸ್ಲ್ಯಾಬ್​ಗಳು ಜರಿಯುತ್ತಿವೆ. ಗೋಡೆಗಳು ಬಿರುಕುಬಿಟ್ಟಿವೆ.

ಚುನಾವಣೆ ಘೊಷಣೆಯಾಗುವ ಮುನ್ನ ಕ್ಯಾಂಟೀನ್ ನಿರ್ವಿುಸುವ ತರಾತುರಿಯಲ್ಲಿ ರೆಡಿಮೇಡ್ ಸ್ಲ್ಯಾಬ್, ಗೋಡೆಗಳನ್ನು ತಂದು ಅಳವಡಿಸಲಾಗಿತ್ತು. ಆದರೆ ನಿರ್ವಿುಸಿದ ಒಂದೇ ವರ್ಷದಲ್ಲಿ ಮೇಲ್ಭಾಗದ ಸ್ಲ್ಯಾಬ್​ಗಳ ಮಧ್ಯೆ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಭಯದ ವಾತಾವರಣದಲ್ಲಿ ಸಿಬ್ಬಂದಿ ಕೆಲಸ ಮಾಡುವಂತಾಗಿದೆ. ಒಳಗೆ ಪ್ರವೇಶಿಸುತ್ತಿದ್ದಂತೆ ಗ್ರಾಹಕರು ಕೂಡ ಮೇಲಕ್ಕೆ ದೃಷ್ಟಿ ಹಾಯಿಸುವಂತಾಗಿದೆ. ಅಲ್ಪಸ್ವಲ್ಪ ಮಳೆಗೇ ಕ್ಯಾಂಟೀನ್ ದುಸ್ಥಿತಿಗೆ ತಲುಪಿದೆ. ಇಲ್ಲಿನ ಶೌಚಗೃಹ ವ್ಯವಸ್ಥೆಯೂ ಸರಿಯಾಗಿಲ್ಲ. ಬಾಗಿಲುಗಳು ಮುರಿದಿವೆ. ಹೊರಸೂಸುವ ದುರ್ನಾತದಿಂದ ಗ್ರಾಹಕರಿಗೆ ಕಿರಿಕಿರಿಯಾಗುತ್ತಿದೆ.

ಇಲ್ಲಿ ನಾಲ್ವರು ಅಡುಗೆ ಕೆಲಸ ಮಾಡುತ್ತಾರೆ. ಬೆಳಗಿನ ಜಾವ 5 ಗಂಟೆಗೇ ಗ್ರಾಹಕರಿಗೆ ತಿಂಡಿ ತಯಾರಿಸಬೇಕು. ಹಾಗಾಗಿ ಸಿಬ್ಬಂದಿ ರಾತ್ರಿ ಕ್ಯಾಂಟೀನ್​ನಲ್ಲೇ ಮಲಗುವುದು ಅನಿವಾರ್ಯ. ಆದರೆ ಆತಂಕದಲ್ಲೇ ರಾತ್ರಿ ಕಳೆಯುವ ಪರಿಸ್ಥಿತಿ ನಿರ್ವಣವಾಗಿದೆ. ಮಳೆ ಬಂದರೆ ಅಡುಗೆ ತಯಾರಿಸುವ ಕೊಠಡಿ, ಗ್ರಾಹಕರು ಊಟ ಮಾಡುವ ಕೊಠಡಿ ಛಾವಣಿಯ ಸ್ಲ್ಯಾಬ್​ಗಳ ಸಂದಿಯಿಂದ ನೀರು ಸೋರುತ್ತದೆ.

ಪಪಂ ಆಡಳಿತ ಸ್ವಚ್ಛತೆ ಎಂಬ ಪದವನ್ನು ಕೇವಲ ಕಾರ್ಯಕ್ರಮಕ್ಕೆ ಮೀಸಲಾಗಿಸಿ ನಿಜವಾದ ಕಾರ್ಯ ಏನೆಂಬುದನ್ನೇ ಮರೆತಂತಿದೆ. ಇಂದಿರಾ ಕ್ಯಾಂಟೀನ್ ಸುತ್ತಮುತ್ತ ಗಿಡಗಂಟಿ ಬೆಳೆದಿವೆ. ಇದರ ಸುತ್ತ ಸ್ವಚ್ಛತೆ ಕಾಪಾಡಬೇಕು ಎಂಬ ಕಾಳಜಿಯೂ ಸ್ಥಳೀಯ ಆಡಳಿತಕ್ಕೆ ಇದ್ದಂತಿಲ್ಲ.

ಕ್ಯಾಂಟೀನ್​ಗೆ ಬರಲು ಗ್ರಾಹಕರಿಗೆ ಅನುಕೂಲ ಆಗಲೆಂದು ಎದುರಿನ ಚರಂಡಿಗೆ ಮಣ್ಣು ತುಂಬಿ ಸಮತಟ್ಟು ಮಾಡಿದ್ದರಿಂದ ಚರಂಡಿ ಕಟ್ಟಿದೆ. ಅಕ್ಕಪಕ್ಕದ ಐದಾರು ಮನೆಗಳ ಶೌಚದ ನೀರಿನ ಜತೆಗೆ ಇಂದಿರಾ ಕ್ಯಾಂಟೀನ್​ನ ಅಡುಗೆ ಮನೆ, ಶೌಚಗೃಹ, ಪಾತ್ರೆ ತೊಳೆದ ನೀರೂ ಹರಿಯುತ್ತದೆ. ಅನ್ನ, ಸಾಂಬಾರು, ತ್ಯಾಜ್ಯ ಇಲ್ಲಿಯೇ ನಿಂತು ಕೆಟ್ಟ ವಾಸನೆ ಬರುತ್ತಿದೆ.

ಚರಂಡಿಯಲ್ಲಿರುವ ಮಣ್ಣನ್ನು ತೆರವುಗೊಳಿಸಿ ಪೈಪ್ ಅಳವಡಿಸಿ ಎಂದು ಪಪಂ ಅಧಿಕಾರಿಗಳಿಗೆ ಗೂಡ್ಸ್ ವಾಹನ ಮಾಲೀಕರು ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪಕ್ಕದಲ್ಲೇ ಗೂಡ್ಸ್, ಟ್ಯಾಕ್ಸಿ ನಿಲ್ದಾಣವಿದೆ. ಚಾಲಕರು, ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡಬೇಕಿದೆ.

Leave a Reply

Your email address will not be published. Required fields are marked *