ಸಮಾನತೆ ವಾಕಥಾನ್​ಗೆ ತಾರೆಯರು ಫಿದಾ

ವಿಶ್ವ ಮಹಿಳಾ ದಿನದ ಪ್ರಯುಕ್ತ (ಮಾ.8) ಲಿಂಗ ಸಮಾನತೆಗಾಗಿ ‘ವಿಜಯವಾಣಿ’ ಮತ್ತು ‘ದಿಗ್ವಿಜಯ 247 ನ್ಯೂಸ್’ ಶುಕ್ರವಾರ ಏರ್ಪಡಿಸಿದ್ದ ವಾಕಥಾನ್​ಗೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ಕಂಡು ಚಂದನವನದ ತಾರೆಯರು ಆಶ್ಚರ್ಯಚಕಿತರಾದರು. ವಿಧಾನಸೌಧ ಮುಂಭಾಗದಲ್ಲಿ ನೆರೆದಿದ್ದ ಮಹಿಳೆಯರ ಉತ್ಸಾಹ ಎಂಥವರನ್ನೂ ಹುರಿದುಂಬಿಸುವಂತಿತ್ತು. ಸೆಲೆಬ್ರಿಟಿಗಳಾದ ಶ್ರೀಮುರಳಿ, ಹರ್ಷಿಕಾ ಪೂಣಚ್ಚ, ರೂಪಿಕಾ, ಪ್ರಥಮ್ ಧರ್ಮಣ್ಣ ಕಡೂರ್, ಜೀ ಕನ್ನಡ ವಾಹಿನಿ ಜನಪ್ರಿಯ ‘ಪಾರು’ ಧಾರಾವಾಹಿ ಕಲಾವಿದರಾದ ಮೋಕ್ಷಿತಾ, ಶರತ್ ಹಾಗೂ ‘ಸುಬ್ಬಲಕ್ಷ್ಮೀ ಸಂಸಾರ’ ಧಾರಾವಾಹಿಯ ದೀಪಾ ಮುಂತಾದವರು ಈ ವಿಶೇಷ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಒಟ್ಟಾರೆ ವಾಕಥಾನ್ ಬಗ್ಗೆ ಅವರು ಹಂಚಿಕೊಂಡ ಅನಿಸಿಕೆಯನ್ನು ‘ನಮಸ್ತೆ ಬೆಂಗಳೂರು’ ನಿಮ್ಮ ಮುಂದಿರಿಸಿದೆ.

ಮನಸ್ಸಲ್ಲಿ ಕುಗ್ಗಬೇಡಿ, ಧೈರ್ಯವಾಗಿರಿ!

ಎಲ್ಲ ಹೆಣ್ಣುಮಕ್ಕಳೂ ಸಾಧಕಿಯರೇ. ಅವರನ್ನು ನಿರ್ದಿಷ್ಟವಾಗಿ ಒಂದು ಕ್ಷೇತ್ರಕ್ಕೆ ಸೀಮಿತಗೊಳಿಸುವಂತಿಲ್ಲ. ಈಗಾಗಲೇ ಮಹಿಳೆ ಎಲ್ಲ ಕ್ಷೇತ್ರದಲ್ಲೂ ಮೇಲುಗೈ ಸಾಧಿಸಿದ್ದಾಳೆ. ಅದೇ ರೀತಿಯಲ್ಲಿ ಹೊಸ ಹೊಸ ದಾರಿಯತ್ತ ಹೆಜ್ಜೆ ಇರಿಸಿದ್ದಾಳೆ. ಹಾಗಂತ ಎಲ್ಲಿಯೂ ಸ್ತ್ರೀ ಕುರಿತು ಸಿಂಪತಿ ತೋರಬೇಕಿಲ್ಲ. ಸಣ್ಣ ಮೆಚ್ಚುಗೆ ಮಾತು ಸಿಕ್ಕರೆ ಸಾಕು, ಮುಂದಿನ ದಾರಿಯನ್ನು ತಾನೇ ಹುಡುಕಿಕೊಳ್ಳುತ್ತಾಳೆ. ಮನೆಯ ವಿಚಾರಕ್ಕೆ ಬಂದರೆ, ಒಂದು ಮನೆಯಲ್ಲಿ ಹೆಣ್ಣಿಲ್ಲ ಎಂದರೆ ಅದೊಂದು ಅಪೂರ್ಣ ಕುಟುಂಬ ಎಂದೇ ಅರ್ಥ. ಹೆಣ್ಣೇ ಮನೆಯ ಕಣ್ಣು. ಆಕೆ ಇದ್ದರೆ ಮಾತ್ರ ಅದಕ್ಕೆ ಮನೆ ಎಂದು ಕರೆಯುತ್ತಾರೆ. ಗಾಡಿ ಓಡಿಸೋಕೂ ರೆಡಿ, ವಿಮಾನ ಹಾರಿಸೋಕೂ ಸಿದ್ಧ. ಅಷ್ಟೇ ಏಕೆ ಮೆಟ್ರೋದಲ್ಲೂ ಅವರೇ ಇದ್ದಾರೆ. ಮೀಸಲಾತಿಯಲ್ಲೂ ಹೆಣ್ಣಿಗೆ ಶೇ.50 ಸಿಗಬೇಕು. ಸಿನಿಮಾರಂಗದಲ್ಲಿ ಈಗಾಗಲೇ ತುಂಬ ಬದಲಾವಣೆಗಳಾಗಿವೆ. ಖುಷಿಯ ವಿಚಾರವೇನೆಂದರೆ ಮಹಿಳಾ ಪ್ರಧಾನ ಸಿನಿಮಾಗಳು ಹೆಚ್ಚಾಗುತ್ತಿವೆ. ಇಂಥ ಎಲ್ಲವನ್ನೂ ಹೇಳಿಕೊಳ್ಳಲು ‘ವಿಜಯವಾಣಿ’ ಅವಕಾಶ ಮಾಡಿಕೊಟ್ಟಿದೆ.

| ರೂಪಿಕಾ ನಟಿ

ಸ್ವಾವಲಂಬಿಗಳಾಗಿ ಮೀಸಲಾತಿ ನಂಬಬೇಡಿ

ಮಹಿಳಾ ದಿನಾಚರಣೆಗೆ ಇಂಥ ಕಾರ್ಯಕ್ರಮ ಆಯೋಜಿಸಿದ ‘ವಿಜಯವಾಣಿ’ ಪತ್ರಿಕೆ ಮತ್ತು ‘ದಿಗ್ವಿಜಯ 247 ನ್ಯೂಸ್’ಗೆ ನನ್ನ ಧನ್ಯವಾದ. ಇಂದು ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರಿದ್ದಾರೆ. ಅವರೇ ಮುಂದಿನ ಪೀಳಿಗೆಯ ಆದರ್ಶವಾಗಿರಲಿ. ಮೀಸಲಾತಿ ಪದ್ಧತಿಗೆ ನನ್ನ ವಿರೋಧವಿದೆ. ಅದನ್ನು ನೀಡುವುದರಿಂದ ಕೀಳು ಎಂಬ ಭಾವನೆ ಮೂಡುತ್ತದೆ. ಹಾಗಾಗಿ ಸ್ವಾವಲಂಬಿಗಳಾಗಿ. ಮೀಸಲಾತಿ ನಂಬಬೇಡಿ. ಎಲ್ಲರೂ ಸಮಾನರೇ. ಹೆಣ್ಣನ್ನು ದೇವರ ಸ್ಥಾನದಲ್ಲಿಡುವೆ.

| ಪ್ರಥಮ್ ನಟ

ಅಚ್ಚರಿಯ ಜನಸ್ಪಂದನೆ

ಇದೇ ಮೊದಲ ಬಾರಿಗೆ ನಾನು ಇಂಥ ವಾಕಥಾನ್​ನಲ್ಲಿ ಭಾಗವಹಿಸಿದ್ದು. ಮಹಿಳೆಯರಲ್ಲಿ ಎಷ್ಟು ಒಗ್ಗಟ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕಿದ್ದರೆ ಈ ಕಾರ್ಯಕ್ರಮಕ್ಕೆ ಸಿಕ್ಕಿರುವ ಜನಸ್ಪಂದನೆ ನೋಡಿದರೆ ಸಾಕು. ನನಗಂತೂ ನಿಜಕ್ಕೂ ಅಚ್ಚರಿ ಆಯಿತು. ಕಾಲೇಜು ಯುವತಿಯರಿಂದ ಹಿಡಿದು ವೃದ್ಧರವರೆಗೆ ಎಲ್ಲ ವಯೋಮಾನದವರೂ ಇದರಲ್ಲಿ ಭಾಗವಹಿಸಿದ್ದಾರೆ. ಮೊಮ್ಮಗಳ ಜತೆಗೆ ಬಂದ ಅಜ್ಜಿಯಂದಿರನ್ನು ನೋಡಿ ಖುಷಿ ಆಯಿತು. ಅವರ ಜತೆಗೆ ಕುಟುಂಬದ ಸದಸ್ಯರು ಕೂಡ ಬಂದಿದ್ದಾರೆ. ಇಂದು ಮನೆಮಗಳು ಏನೇ ಮಾಡುತ್ತೇನೆ ಎಂದರೂ ಅದಕ್ಕೆ ಮನೆಯವರ ಬೆಂಬಲ ಹೇಗಿರುತ್ತದೆ ಎಂಬುದಕ್ಕೆ ಇದೇ ಸಾಕ್ಷಿ. ನಮ್ಮ ಮನೆಯಲ್ಲೂ ಇಂಥದ್ದೇ ವಾತಾವರಣ ಇದೆ. ನಾನು ‘ಪಾರು’ ಧಾರಾವಾಹಿಯಲ್ಲಿ ನಟಿಸಲು ಅಮ್ಮನ ಪ್ರೋತ್ಸಾಹ ದೊಡ್ಡದು. ಬೆಳಗ್ಗೆ ಶೂಟಿಂಗ್ ಹೊರಡುವುದಕ್ಕೂ ಮುನ್ನ ಅವರು ನನಗೆ ಬೇಕಾದ ಎಲ್ಲ ತಯಾರಿ ಮಾಡಿಕೊಡುತ್ತಾರೆ. ಅಂಥ ಎಲ್ಲ ಅಮ್ಮಂದಿರಿಗೆ ಮಹಿಳಾ ದಿನವನ್ನು ಅರ್ಪಿಸುತ್ತೇನೆ. ಹೊರಗಡೆ ದುಡಿಯುವುದರ ಜತೆಗೆ ಮನೆಯ ಕೆಲಸಗಳನ್ನೂ ಎಷ್ಟೋ ತಾಯಂದಿರು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಅವರಿಗೆಲ್ಲ ಸೂಕ್ತ ಗೌರವ ಸಲ್ಲಬೇಕು. ಸಮಾಜದಲ್ಲಿ ಸಂಪೂರ್ಣ ಸಮಾನತೆ ಸಾಧ್ಯವಾಗಬೇಕು. ಆ ಉದ್ದೇಶದಿಂದ ವಾಕಥಾನ್ ಏರ್ಪಡಿಸಿದ ‘ವಿಜಯವಾಣಿ’ ಮತ್ತು ‘ದಿಗ್ವಿಜಯ’ಕ್ಕೆ ಧನ್ಯವಾದ ತಿಳಿಸುತ್ತೇನೆ.

| ಮೋಕ್ಷಿತಾ ‘ಪಾರು’ ಧಾರಾವಾಹಿ ನಟಿ

ಮರುಕಳಿಸಲಿ ಇಂಥ ಕಾರ್ಯಕ್ರಮ

ಪ್ರತಿ ಮನೆಯಲ್ಲೂ ಹೆಣ್ಣುಮಕ್ಕಳಿಗೆ ಬೆಂಬಲ ಸಿಗಬೇಕು. ಅವರ ಆಸೆ ಏನಿದೆ ಎಂಬುದನ್ನು ಅರ್ಥ ಮಾಡಿಕೊಂಡು ಆ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ನೀಡಬೇಕು. ಆಗ ಇಡೀ ಸಮಾಜವೇ ಸಮಾನತೆಯತ್ತ ಸಾಗುತ್ತದೆ. ಅಂಥ ಜಾಗೃತಿ ಮೂಡಿಸಲು ಈ ವಾಕಥಾನ್ ಸಹಕಾರಿಯಾಗಿದೆ. ನನ್ನ ಯಶಸ್ಸಿನ ಹಿಂದೆ ಅಮ್ಮ ಇದ್ದಾರೆ. ನಾನು ಯಾವುದೇ ಕ್ಷೇತ್ರದಲ್ಲಿ ಗೆದ್ದಿದ್ದೇನೆ ಎಂದರೆ ಅದು ಅವರ ಗೆಲುವು ಎಂದರ್ಥ. ಆದರೆ ಯಾವತ್ತೂ ನಾನು ಅವರಿಗೆ ಮಹಿಳಾ ದಿನಾಚರಣೆಯ ಶುಭಾಶಯ ಕೋರಿರಲಿಲ್ಲ. ಈ ವಾಕಥಾನ್​ನಲ್ಲಿ ಭಾಗವಹಿಸಿದ ಬಳಿಕ ಅಮ್ಮನಿಗೆ ಮನಪೂರ್ವಕವಾಗಿ ಈ ದಿನದ ಶುಭ ಕೋರಬೇಕು ಎನಿಸುತ್ತಿದೆ. ‘ವಿಜಯವಾಣಿ’ ಮತ್ತು ‘ದಿಗ್ವಿಜಯ’ ಆಯೋಜಿಸಿರುವ ಕಾರ್ಯಕ್ರಮಕ್ಕೆ ಸಾವಿರಾರು ಮಹಿಳೆಯರು ಬೆಂಬಲ ನೀಡಿದ್ದಾರೆ. ಇಂಥ ಪ್ರಯತ್ನ ಮತ್ತೆ ಮತ್ತೆ ಆಗಬೇಕು.

| ಶರತ್ ‘ಪಾರು’ ಧಾರಾವಾಹಿ ನಟ

ಸಹನೆ ಪ್ರೀತಿಯ ಬುನಾದಿ

ಹೆಣ್ಣು ನಮ್ಮ ಜೀವನದ ಒಂದು ಭಾಗ. ಹುಟ್ಟಿದಾಗಿನಿಂದ, ತಾಯಿಯಾಗಿ, ಅಕ್ಕ-ತಂಗಿಯಾಗಿ, ಮಡದಿಯಾಗಿ ನಮ್ಮ ಜತೆಗಿರುತ್ತಾರೆ. ಪ್ರೀತಿ, ಸಹನೆಗೆ ಬುನಾದಿ ಹಾಕಿಕೊಟ್ಟವರೇ ಅವರು. ನನ್ನ ತಾಯಿಯೇ ನನಗೆಲ್ಲ. ನನ್ನ ಅತ್ತಿಗೆ ಇನ್ನೋರ್ವ ತಾಯಿಯಾಗಿ ಸಿಕ್ಕಿದ್ದಾರೆ. ತಾಯಿ ಮನಸ್ಸಿನ ಹೆಂಡತಿ ಸಿಕ್ಕಿದ್ದಾಳೆ. ಮಗನಾಗಿ, ಬಾಮೈದನಾಗಿ, ಗಂಡನಾಗಿ ನಾನು ಅವರೊಂದಿಗೆ ಖುಷಿಯಾಗಿದ್ದೇನೆ. ಮಹಿಳೆಯರಿಗಾಗಿ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡ ವಿಜಯವಾಣಿ’ ಪತ್ರಿಕೆ ಮತ್ತು ‘ದಿಗ್ವಿಜಯ 247 ನ್ಯೂಸ್’ಗೂ ಅಭಿನಂದನೆಗಳು.

| ಧರ್ಮಣ್ಣ ನಟ

ಸೌಟೂ ಹಿಡೀತಿವಿ, ಸ್ಪೇಸ್​ಗೂ ಹಾರ್ತೀವಿ!

ಹೆಣ್ಣು ಅಡುಗೆ ಮನೆಗಷ್ಟೇ ಸೀಮಿತ ಎಂಬ ಮಾತಿದೆ. ಆದರೆ ಆಕೆ ಅಕ್ಕಿ ಬೇಯಿಸಲಿಲ್ಲ ಎಂದರೆ ಯಾವ ಕೆಲಸವೂ ನಡೆಯದು. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಅಸಮಾನತೆ ಬೇರೂರಿದೆ. ಹೆಣ್ಣು ಶೋಷಣೆಗೆ ಒಳಗಾಗುತ್ತಿದ್ದಾಳೆ. ಆ ಶೋಷಣೆಯನ್ನು ಮುಚ್ಚಿಡುವ ಬದಲು, ಧೈರ್ಯವಾಗಿ ಮುಂದೆ ಬಂದು ಹೇಳಿಕೊಳ್ಳಬೇಕು. ಸಮಾನತೆಯ ಹರಡುವಿಕೆಗೆ ಎಲ್ಲರೂ ಸಹಕರಿಸಬೇಕು. ಇಂಥ ಕಾರ್ಯಕ್ರಮಗಳು ಬೆಳಗ್ಗೆ ಶುರುವಾಗಿ ಮಧ್ಯಾಹ್ನಕ್ಕೆ ಮುಕ್ತಾಯವಾಗಬಾರದು. ಅದನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ. ಹೆಣ್ಣು ಅಡುಗೆ ಮನೆಯಲ್ಲಿ ಸೌಟು ಹಿಡಿಯೋದ್ರಿಂದ ಬಾಹ್ಯಾಕಾಶದವರೆಗೂ ಛಾಪು ಮೂಡಿಸಿದ್ದಾಳೆ. ಒಂದೊಳ್ಳೆಯ ಉದ್ದೇಶಕ್ಕಾಗಿ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ 247 ನ್ಯೂಸ್’ ಆಯೋಜನೆ ಮಾಡಿದ ವಾಕಥಾನ್ ನಿಜಕ್ಕೂ ಅರ್ಥಪೂರ್ಣ. ಆರು ಸಾವಿರಕ್ಕೂ ಅಧಿಕ ಜನರು ಈ ವಾಕಥಾನ್​ನಲ್ಲಿ ಭಾಗಿಯಾಗಿದ್ದಾರೆ. ಶೋಷಣೆಗೆ ಒಳಗಾದ ಕೋಟ್ಯಂತರ ಮಹಿಳೆಯರಿದ್ದಾರೆ. ಅವರೆಲ್ಲರ ಧ್ವನಿಯಾಗಿ ನಾವಿಲ್ಲಿದ್ದೇವೆ. ಶೋಷಣೆ ಆಗುತ್ತಿದೆ ಎಂಬುದನ್ನು ಹೇಳಿಕೊಳ್ಳಬೇಕು. ಮುಂದೆ ಬಂದು ತನ್ನ ಕಾಲ ಮೇಲೆ ನಿಲ್ಲಬೇಕು. ಸ್ತ್ರೀ ಶಕ್ತಿ ಮನೆಗಷ್ಟೇ ಸೀಮಿತವಾಗಬಾರದು. ಜಿಲ್ಲೆ, ರಾಜ್ಯ, ದೇಶಕ್ಕೆ ಅದರ ಸದ್ಬಳಕೆ ಆಗಬೇಕು. ಬಯಸಿದ ಬಾಗಿಲು ತೆಗೆಯೋಣ, ಪ್ರತಿಯೊಂದು ಮನೆಯಲ್ಲಿಯೂ ಹೆಣ್ಣುಮಕ್ಕಳು ಬಯಸಿದ್ದು ಸಿಗುವಂತಾಗಬೇಕು.

| ದೀಪಾ ‘ಸುಬ್ಬಲಕ್ಷ್ಮೀ ಸಂಸಾರ’ ನಟಿ