ಸವಾಲಿನ ಹಾದಿಯಲ್ಲಿ ಸ್ಟಾಲಿನ್

| ಪ್ರದ್ಯುಮ್ನ ಬೆಂಗಳೂರು

ಒಂದು ಬಗೆಯ ಖಾಲಿತನ, ಮುಂದೇನು ಎಂಬ ಆತಂಕ, ಜನರ ನಾಡಿಮಿಡಿತ ಅರಿಯುವ ಸವಾಲು… ಇದು ತಮಿಳುನಾಡು ರಾಜಕೀಯದ ಸದ್ಯದ ಸ್ಥಿತಿ. ಜಯಲಲಿತಾರನ್ನು ಕಳೆದುಕೊಂಡ ಎಐಎಡಿಎಂಕೆ, ಕರುಣಾನಿಧಿ ಯುಗಾಂತ್ಯದ ಬಳಿಕ ಡಿಎಂಕೆ ವರ್ಚಸ್ವಿ ನಾಯಕತ್ವದ ಕೊರತೆ ಎದುರಿಸುತ್ತಿವೆ. 49 ವರ್ಷಗಳ ದೀರ್ಘಾವಧಿಗೆ ಡಿಎಂಕೆಯನ್ನು ಮುನ್ನಡೆಸಿದ ಕರುಣಾನಿಧಿ ನಾಲ್ಕು ವರ್ಷದ ಹಿಂದೆಯೇ ಪುತ್ರ ಸ್ಟಾಲಿನ್​ರನ್ನು ಉತ್ತರಾಧಿಕಾರಿ ಎಂದು ಘೋಷಿಸಿದ್ದರು. ಈ ಆಗಸ್ಟ್ 28ರಂದು ಸ್ಟಾಲಿನ್ ಪಕ್ಷದ ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆ ಆಗಿದ್ದಾರೆ. ಈಗಾಗಲೇ 65 ವರ್ಷ ತುಂಬಿರುವ, ಅನಾರೋಗ್ಯ ಸಮಸ್ಯೆಯನ್ನೂ, ಪಕ್ಷದೊಳಗೆ ಭಿನ್ನಮತವನ್ನೂ ಎದುರಿಸುತ್ತಿರುವ ಸ್ಟಾಲಿನ್ ಮುಂದಿನ ಹಾದಿ ದುರ್ಗಮವಾದದ್ದಂತೂ ಹೌದು.

ಅದು 1953ರ ಮಾರ್ಚ್ ತಿಂಗಳು. ಕರುಣಾನಿಧಿಯವರ ಮೂರನೇ ಪುತ್ರನಾಗಿ, ಅವರ ಎರಡನೇ ಹೆಂಡತಿ ದಯಾಲು ಅಮ್ಮಳ್​ನ ಸಂತಾನವಾಗಿ ಮದ್ರಾಸ್​ನಲ್ಲಿ (ಈಗಿನ ಚೆನ್ನೈ) ಮುಥುವೆಲ್ ಕರುಣಾನಿಧಿ ಸ್ಟಾಲಿನ್ ಜನನ(ಮಾರ್ಚ್ 1). ಅದೇ ತಿಂಗಳು 5ರಂದು ಸೋವಿಯತ್ ರಷ್ಯಾದ ಕಮ್ಯುನಿಸ್ಟ್ ನಾಯಕ ಜೋಸೆಫ್ ಸ್ಟಾಲಿನ್ ನಿಧನರಾದರು. ಜೋಸೆಫ್ ಸ್ಟಾಲಿನ್​ಗಾಗಿ ಆಯೋಜಿಸಿದ್ದ ಶೋಕಸಭೆಯಲ್ಲಿ ಕರುಣಾ ಪಾಲ್ಗೊಂಡಿದ್ದಾಗಲೇ ಪುತ್ರ ಜನನದ ಸುದ್ದಿ ತಲುಪಿತಂತೆ. ಸ್ಟಾಲಿನ್ ವ್ಯಕ್ತಿತ್ವವನ್ನು ಬಹುವಾಗಿ ಇಷ್ಟಪಟ್ಟಿದ್ದ ಕರುಣಾ ಪುತ್ರನಿಗೆ ಅವರ ಹೆಸರೇ ಇಟ್ಟರು. ಆಟದ ಅಂಗಳದಲ್ಲಿ ಇರಬೇಕಾದ ವಯಸ್ಸಿನಲ್ಲೇ ತಂದೆಯ ರಾಜಕೀಯ ಹೆಜ್ಜೆಗುರುತುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಸ್ಟಾಲಿನ್ ಧುಮುಕಿದ್ದು ರಾಜಕೀಯ ಅಂಗಳಕ್ಕೆ. ಅವರಿಗಾಗ 14 ವರ್ಷ. 1967ರ ವಿಧಾನಸಭಾ ಚುನಾವಣೆಯ ವೇಳೆ ಸಕ್ರಿಯವಾಗಿ ಪ್ರಚಾರ ಮಾಡಿದರು. 1973ರಲ್ಲಿ ಡಿಎಂಕೆ ಜನರಲ್ ಕಮಿಟಿಗೆ ಪ್ರವೇಶ ಪಡೆದರು. ಈ ನಡುವೆ ಸಿನಿರಂಗ ಇವರನ್ನು ಆಕರ್ಷಿಸಿತು. 1980ರ ದಶಕದಲ್ಲಿ ಕೆಲ ಚಲನಚಿತ್ರಗಳಲ್ಲಿ ಮತ್ತು 90ರ ದಶಕದಲ್ಲಿ ಟಿ.ವಿ. ಧಾರವಾಹಿಗಳಲ್ಲಿ ನಟಿಸಿದರು.

ಸ್ಟಾಲಿನ್ ಸುದ್ದಿಯ ಮುನ್ನೆಲೆಗೆ ಬಂದಿದ್ದು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸುತ್ತಿದ್ದ ವೇಳೆ ಮಿಸಾ (Mಚಜ್ಞಿಠಿಛ್ಞಿಚ್ಞ್ಚ ಟ್ಛ ಐಠಿಛ್ಟಿ್ಞ್ಝ ಖಛ್ಚಿuಜಿಠಿಢ ಅಠಿ) ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಯಿತು. ಜೈಲಿನಿಂದ ಹೊರಬಂದ ಬಳಿಕ ‘ಯುವ ನಾಯಕ’ ಪಟ್ಟ ದೊರಕಿ, ಚುನಾವಣೆಗೆ ಸ್ಪರ್ಧಿಸುವ ಒತ್ತಾಸೆಯೂ ಸೃಷ್ಟಿಯಾಯಿತು. 1989ರ ವಿಧಾನಸಭೆ ಚುನಾವಣೆಯಲ್ಲಿ ಚೆನ್ನೈನ ಥೌಸಂಡ್ ಲೈಟ್ಸ್ ಕ್ಷೇತ್ರದಿಂದ ಗೆದ್ದು ಬಂದರಲ್ಲದೆ, ಇದೇ ಕ್ಷೇತ್ರದಿಂದ ಒಟ್ಟು 4 ಬಾರಿ ಶಾಸಕರಾದರು. 1996ರಲ್ಲಿ ಚೆನ್ನೈನ ಮೇಯರ್ ಹುದ್ದೆಗೇರಿದರು. 2001ರಲ್ಲಿ ಎರಡನೇ ಬಾರಿಗೆ ಮೇಯರ್ ಆದಾಗ ಜಯಲಲಿತಾ ಮುಖ್ಯಮಂತ್ರಿ ಆಗಿದ್ದರು. 2002ರಲ್ಲಿ ‘ತಮಿಳುನಾಡು ಮುನ್ಸಿಪಲ್ ಕಾನೂನು (ತಿದ್ದುಪಡಿ)’ ಜಾರಿಗೆ ತಂದು ಒಂದೇ ಅವಧಿಯಲ್ಲಿ ಎರಡೆರಡು ಸರ್ಕಾರಿ ಹುದ್ದೆ ಹೊಂದುವಂತಿಲ್ಲ ಎಂದು ಸರ್ಕಾರ ಹೇಳಿತು. ಆಗ ಶಾಸಕರೂ ಆಗಿದ್ದ ಸ್ಟಾಲಿನ್​ರನ್ನು ಮೇಯರ್ ಸ್ಥಾನದಿಂದ ಕೆಳಗಿಳಿಸುವ ಏಕೈಕ ಉದ್ದೇಶದಿಂದ ಹೀಗೆ ಮಾಡಲಾಯಿತು ಎಂಬೆಲ್ಲ ವಿಶ್ಲೇಷಣೆಗಳು ಕೇಳಿಬಂದವು. ಪ್ರಕರಣ ಮದ್ರಾಸ್ ಹೈಕೋರ್ಟ್ ಮೆಟ್ಟಿಲು ಏರಿದಾಗ ನ್ಯಾಯಾಲಯ ಸರ್ಕಾರ ರೂಪಿಸಿದ ಕಾನೂನನ್ನು ಅನೂರ್ಜಿತಗೊಳಿಸಿತಾದರೂ ಮುನ್ಸಿಪಲ್ ಕಾಪೋರೇಷನ್ ಆಕ್ಟ್ 1919ರ ಪ್ರಕಾರ ಓರ್ವ ವ್ಯಕ್ತಿ ಎರಡು ಅವಧಿಗೆ ಮೇಯರ್ ಆಗುವಂತಿಲ್ಲ ಎಂದು ಹೇಳಿತು. 2001ರಲ್ಲಿ ಮೇಲ್ಸೇತುವೆ ಭ್ರಷ್ಟಾಚಾರ ಪ್ರಕರಣದಲ್ಲಿ ಮಧ್ಯರಾತ್ರಿ ಕರುಣಾ ಜತೆಗೆ ಸ್ಟಾಲಿನ್​ರನ್ನು ಕೂಡ ಬಂಧಿಸಲಾಯಿತು.

2006ರ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಡಿಎಂಕೆ ಪಾಲಾಯಿತು. ಆಗ ಸ್ಟಾಲಿನ್ ಗ್ರಾಮೀಣಾಭಿವೃದ್ಧಿ ಮತ್ತು ಸ್ಥಳೀಯಾಡಳಿತ ಸಚಿವರಾದರು. 2009ರ ಹೊತ್ತಿಗೆ ಕರುಣಾ ಆರೋಗ್ಯ ಕ್ಷೀಣಿಸತೊಡಗಿತು. ಉತ್ತರಾಧಿಕಾರಿಯ ಚರ್ಚೆ ಆಗಲೇ ಆರಂಭವಾಯಿತು. ಪುತ್ರನಿಗೆ ಕರುಣಾ ಸಿಎಂ ಸ್ಥಾನ ಬಿಟ್ಟುಕೊಡುತ್ತಾರೆ ಎಂಬ ಸುದ್ದಿಗಳೂ ಹರಿದಾಡಿದವು. ಆದರೆ, ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿದ ಕರುಣಾನಿಧಿ 2009 ಮೇ 29ರಂದು ಸ್ಟಾಲಿನ್​ಗೆ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬಡ್ತಿ ನೀಡಿದರು. 2011ರವರೆಗೂ ಈ ಜವಾಬ್ದಾರಿ ನಿರ್ವಹಿಸಿದರು.

2012ರ ಹೊತ್ತಿಗೆ ಡಿಎಂಕೆ ಉತ್ತರಾಧಿಕಾರಿಯಾಗಲು ಕರುಣಾ ಮತ್ತೋರ್ವ ಪುತ್ರ ಅಳಗಿರಿ ಮತ್ತು ಸ್ಟಾಲಿನ್ ನಡುವಿನ ಶೀತಲಸಮರ ಭುಗಿಲೆದ್ದಿತು. ತಂದೆ ಮೇಲೆ ಮುನಿಸಿಕೊಂಡು ಅಳಗಿರಿ ಡಿಎಂಕೆಯಿಂದ ದೂರವಾದರು. 2013ರ ಜನವರಿ 3ರಂದು ಕರುಣಾ ಅಧಿಕೃತವಾಗಿ ಸ್ಟಾಲಿನ್​ರನ್ನು ಉತ್ತರಾಧಿಕಾರಿಯಾಗಿ ಘೋಷಿಸಿದರು. 2017ರ ಜನವರಿ 4ರಂದು ಡಿಎಂಕೆ ಕಾರ್ಯಾಧ್ಯಕ್ಷರಾಗಿ ನಿಯಕ್ತರಾದರು.

ಈ ನಡುವೆ ಡಿಎಂಕೆ ಪ್ರಾಬಲ್ಯ ತೀವ್ರ ಪ್ರಮಾಣದಲ್ಲಿ ಕುಸಿಯಿತು. 2014ರ ಲೋಕಸಭಾ ಚುನಾವಣೆಯಲ್ಲಿ 39 ಕ್ಷೇತ್ರಗಳ ಪೈಕಿ ಒಂದು ಕಡೆಯೂ ಗೆಲುವು ಸಿಗಲಿಲ್ಲ. ಮುಂದೆ ಎರಡೇ ವರ್ಷಗಳಲ್ಲಿ ವಿಧಾನಸಭೆ ಚುನಾವಣೆ. ಆದರೆ, ಅಧಿಕಾರಕ್ಕಾಗಿ ಕುಟುಂಬದೊಳಗೇ ನಡೆದ ಹಗ್ಗಜಗ್ಗಾಟದಲ್ಲಿ ಪಕ್ಷ ನೆಲಕಚ್ಚಿತು. 2016ರ ವಿಧಾನಸಭಾ ಚುನಾವಣೆಯಲ್ಲಿ 232 ಸ್ಥಾನಗಳ ಪೈಕಿ 89 ಸ್ಥಾನಗಳಷ್ಟೇ ಡಿಎಂಕೆ ಪಾಲಾಯಿತು. 2018ರ ಆಗಸ್ಟ್ 7ರಂದು ಕರುಣಾನಿಧಿ ನಿಧನದ ಬಳಿಕ ಪಕ್ಷ ಮತ್ತಷ್ಟು ಆತಂಕಕ್ಕೆ ಒಳಗಾಯಿತು. ಕಡೆಗೂ, ಸ್ಟಾಲಿನ್ ಪಕ್ಷದ ಅಧ್ಯಕ್ಷಗಾದಿ ಏರಿದ್ದಾರೆ. 2019ರ ಲೋಕಸಭಾ ಚುನಾವಣೆ ಜತೆಗೆ ಮುಂಬರುವ ವಿಧಾನಸಭೆ ಚುನಾವಣೆಗೂ ಪಕ್ಷವನ್ನು ಸಜ್ಜುಗೊಳಿಸುವ ಸವಾಲು ಅವರ ಮುಂದಿದೆ. ಸೋದರ ಅಳಗಿರಿ ಇತ್ತೀಚೆಗೆ ‘ಸ್ಟಾಲಿನ್ ನೇತೃತ್ವ ಒಪ್ಪಿಕೊಂಡು ಪಕ್ಷಕ್ಕೆ ಮರಳಲು ಸಿದ್ಧ’ ಎಂದು ಹೇಳಿದ್ದಾರೆ. ಆದರೂ, ಸೆ.5ರಂದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಕುತೂಹಲ ಉಳಿಸಿಕೊಂಡಿದ್ದಾರೆ.

ತಂದೆ ಕರುಣಾನಿಧಿಯಂತೆ ಭಾರಿ ವರ್ಚಸ್ಸು ಇಲ್ಲದಿದ್ದರೂ, ಪಕ್ಷದ ಮುಂದೆ ಸ್ಟಾಲಿನ್ ಹೊರತಾಗಿ ಬೇರೆ ಆಯ್ಕೆಗಳಿಲ್ಲ. ಎ.ರಾಜಾ ವಿಷಯದಲ್ಲಿ ತಂದೆಯೊಂದಿಗೂ ವಿರೋಧ ಕಟ್ಟಿಕೊಂಡಿದ್ದ ಸ್ಟಾಲಿನ್ ಈಗ ಒಂದೆಡೆ ಅಳಗಿರಿ, ಮತ್ತೊಂದೆಡೆ ರಾಜಾ, ಕನಿಮೊಳಿ ಇವರೆಲ್ಲರ ವಿಶ್ವಾಸ ಗೆದ್ದು, ಜನರ ನಡುವೆ ಹೋಗಿ ಡಿಎಂಕೆ ಮತಬ್ಯಾಂಕನ್ನು ಮತ್ತೆ ಸ್ಥಾಪಿಸುತ್ತಾರಾ ಕಾದು ನೋಡಬೇಕು. ಆದರೆ, ತಾಜಾ ಚಿಂತನೆಗಳಾಗಲಿ, ಸ್ಪಷ್ಟ ನಿಲುವುಗಳಾಗಲಿ ಸ್ಟಾಲಿನ್​ಗೆ ಇಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.