Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ವಿಕಾಸಕ್ಕೆ ಭಾರತೀಯ ದೃಷ್ಟಿ

Sunday, 29.04.2018, 3:03 AM       No Comments

| ರವೀಂದ್ರ ಎಸ್. ದೇಶಮುಖ್

ಸಮಷ್ಟಿಯ ಸಮಸ್ಯೆಗಳ ಬಗ್ಗೆ ಮಾತಾಡುವವರು, ಚರ್ಚೆ ಮಾಡುವವರು ಅಸಂಖ್ಯ ಜನ. ಆದರೆ, ಸಮಾಜದ ಸಮಸ್ಯೆಗಳಿಗೆ ಮದ್ದರೆಯುವುದು, ಜನಚೇತನವನ್ನು ಜಾಗೃತಗೊಳಿಸಿ ಸಮಾಜ ನಿರ್ವಣದಲ್ಲಿ ತೊಡಗಿಸುವುದು, ಯಾವುದೇ ಅಪಸವ್ಯದ ಬಗ್ಗೆ ಮಾತಾಡದೆ ತನ್ನ ಪಾಡಿಗೆ ತಾನು ಬೇರುಮಟ್ಟದಲ್ಲಿ ಕೆಲಸ ಮಾಡುತ್ತ ರಾಷ್ಟ್ರ ಕಟ್ಟುವಲ್ಲಿ ನಿರತನಾಗಿರುವ ಶ್ರೀಸಾಮಾನ್ಯನಿಗೆ, ಸಾಮಾಜಿಕ ಸಂಸ್ಥೆಗಳಿಗೆ ಬೆಂಬಲವಾಗಿ ನಿಲ್ಲುವುದು, ನಮ್ಮ ನಡುವೆಯೇ ಇರುವ ಶಕ್ತಿ, ಸಕಾರಾತ್ಮಕತೆಯನ್ನು ಗುರುತಿಸಿ ಅದನ್ನು ಗಟ್ಟಿದನಿಯಲ್ಲಿ ಹೇಳುವುದು… ಇದೆಲ್ಲವೂ ಆದರ್ಶ ಕನಸಿನಂತೆ ಗೋಚರಿಸುತ್ತದೆ. ಆದರೆ, ಈ ಕನಸನ್ನು ನನಸು ಮಾಡುತ್ತ ವಿಕಾಸಕ್ಕೆ ಅಪ್ಪಟ ಭಾರತೀಯತೆಯ ಸ್ಪರ್ಶ ನೀಡಿ ಅಭಿವೃದ್ಧಿಯ ತೇರನ್ನು ಎಳೆಯುತ್ತಿರುವ ಸಾಧಕ, ಚಿಂತಕ ಕೆ.ಎನ್.ಗೋವಿಂದಾಚಾರ್ಯ!

ರಾಜಕೀಯರಂಗದಲ್ಲಿ ಆಯಕಟ್ಟಿನ ಹುದ್ದೆಗಳನ್ನು ಏರಿದರೂ, ಪ್ರಭುತ್ವಕ್ಕಿಂತ ಸಮುದಾಯದ ಶಕ್ತಿ ದೊಡ್ಡದು ಎಂಬ ಅರಿವಾಗುತ್ತಲೇ ಎಲ್ಲವನ್ನೂ ತೊರೆದು ಸಾಮಾಜಿಕ ಸಂತನಾಗಿ ಬದಲಾದ ಗೋವಿಂದಾಚಾರ್ಯರು ತಮ್ಮ ಚಿಂತನೆಗಳ ಫಲವಾಗಿ ಅಭಿವೃದ್ಧಿಗೆ ಹೊಸ ಗತಿ ನೀಡಿ ಪ್ರಕೃತಿಕೇಂದ್ರೀತ ಹಾಗೂ ಸ್ವಾವಲಂಬನೆಯ ಮಂತ್ರದೊಂದಿಗೆ ಜಿಲ್ಲೆಗಳನ್ನು ಸಶಕ್ತಗೊಳಿಸುತ್ತಿದ್ದಾರೆ. ಅವರ ತಾಜಾ ಚಿಂತನೆಗಳ ಪರಿಣಾಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾನಸಿಕ ಜಡತ್ವ ಕಳೆದಿದ್ದು, ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಉತ್ತರಪ್ರದೇಶ ಪ್ರಾಂತ್ಯಗಳಲ್ಲಿ ಸುಸ್ಥಿರ ಅಭಿವೃದ್ಧಿಯ ಮಾದರಿ ತಲೆಯೆತ್ತಿದೆ.

ಭಾರತದ ಅಭಿವೃದ್ಧಿಗೆ ರಚನಾತ್ಮಕ, ಬೌದ್ಧಿಕ ಮತ್ತು ಆಂದೋಲನಾತ್ಮಕ ಪ್ರಯತ್ನಗಳು ಆರಂಭವಾಗಬೇಕು, ಅಭಿವೃದ್ಧಿಗೆ ವಿದೇಶದ್ದಲ್ಲ ನಮ್ಮದೇ ಆದ ಮಾದರಿ ಅನುಸರಿಸಬೇಕು ಎಂದುಕೊಂಡವರೆ, ‘ಮತ್ತೆಂದೂ ರಾಜಕೀಯಕ್ಕೆ ಮರಳುವುದಿಲ್ಲ’ ಎಂದು ಸಂಕಲ್ಪಿಸಿ 2003ರಲ್ಲಿ ಭಾರತ ವಿಕಾಸ ಸಂಗಮವನ್ನು ಹುಟ್ಟುಹಾಕಿದರು. ಅದಾಗಿ 15 ವರ್ಷಗಳಾಗಿವೆ.

‘ನನ್ನ ಗ್ರಾಮ ನನ್ನ ಜಗತ್ತು,’ ‘ನನ್ನ ಜಿಲ್ಲೆ ನನ್ನ ಜಗತ್ತು’ ಎಂಬ ಅವರ ಪರಿಕಲ್ಪನೆ ಪ್ರಸಕ್ತ ರಾಷ್ಟ್ರಾದ್ಯಂತ ಸಂಚಲನ ಮೂಡಿಸಿದೆ. ಜಿಲ್ಲೆಯ ಬಗ್ಗೆ ಸಮಗ್ರ ಜ್ಞಾನ ಹೊಂದುವುದು, ಅಲ್ಲಿನ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದು, ಸಾಂಪ್ರದಾಯಿಕ ಕುಲಕಸುಬುಗಳನ್ನು, ಕೃಷಿಯನ್ನು ಪ್ರೋತ್ಸಾಹಿಸುವುದು, ಈ ಮೂಲಕ ಆಯಾ ಗ್ರಾಮದಲ್ಲಿ, ಜಿಲ್ಲೆಯಲ್ಲಿ ಉದ್ಯೋಗಗಳನ್ನು ಸೃಷ್ಟಿಸುವುದು, ಮೌಲಸೌಕರ್ಯಗಳನ್ನು ಪೂರೈಸಿಕೊಳ್ಳುವುದು… ಈ ಚಿಂತನೆಯ ಮೂಲ ಉದ್ದೇಶವಾಗಿದ್ದು, ಇದು ಅದ್ಭುತ ಫಲಿತಾಂಶವನ್ನು ನೀಡಿದೆ ಎಂಬುದು ಗಮನಾರ್ಹ. ‘ಜನ, ಅರಣ್ಯ, ಮಣ್ಣು, ಪ್ರಾಣಿ, ಜೀವಜಂತುಗಳ ರಕ್ಷಣೆಯೊಂದಿಗೆ ಪ್ರಕೃತಿಯಾಧಾರಿತ ವಿಕಾಸ’, ‘ಸಮೃದ್ಧ ಹಳ್ಳಿ-ಸಮೃದ್ಧ ದೇಶ’ಗಳಂಥ ಅವರ ಪರಿಕಲ್ಪನೆಗಳು ವಿಶಾಲ ತಳಹದಿಯಲ್ಲಿ ಜೀವಂತಿಕೆ ಪಡೆದುಕೊಂಡು ಬೇರುಮಟ್ಟದ ಪರಿವರ್ತನೆಗೆ ಸಾಕ್ಷಿಯಾಗಿವೆ.

‘ನನ್ನ ಗ್ರಾಮ-ನನ್ನ ಜಗತ್ತು’ ಪರಿಕಲ್ಪನೆಯಲ್ಲಿ ಹಳ್ಳಿಯನ್ನು ಜನರ ಸಹಭಾಗಿತ್ವದಿಂದಲೇ ಅಭಿವೃದ್ಧಿಪಡಿಸಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬವನ್ನು ಮೇಲೆತ್ತುವುದು, ಕೃಷಿ ಉತ್ಪಾದನೆ ದ್ವಿಗುಣಗೊಳಿಸುವುದು, ಗೋವು- ಎತ್ತುಗಳ ಸಂಖ್ಯೆ ದ್ವಿಗುಣಗೊಳಿಸುವುದು, ಗ್ರಾಮವನ್ನು ಎಲ್ಲ ರೀತಿಯ ದುಶ್ಚಟ-ವ್ಯಸನಗಳಿಂದ ಮುಕ್ತಗೊಳಿಸುವುದು, ನೈತಿಕತೆ ಹೆಚ್ಚಿಸುವುದು, ಪೌಷ್ಟಿಕಾಂಶ ಕೊರತೆ, ರಕ್ತದ ಕೊರತೆಯಿಂದ ಯಾವುದೇ ಸಾವು ಸಂಭವಿಸದಂತೆ ಕಾಳಜಿ ವಹಿಸುವುದು, ಆಯಾ ಗ್ರಾಮದ ಸಾಂಸ್ಕೃತಿಕ-ಐತಿಹಾಸಿಕ ಪರಂಪರೆ ಕಾಪಾಡುವುದು ಸೇರಿದಂತೆ ಪ್ರಕೃತಿ ಆಧಾರಿತವಾದ ಅಕ್ಷಯ ವಿಕಾಸವನ್ನು ಸಾಧಿಸಲಾಗುತ್ತಿದೆ.

ಹಳ್ಳಿಗಳ ಖುಷಿ ಕೃಷಿಯಲ್ಲೇ ಇದೆ. ಕೃಷಿಯಾಧಾರಿತ ಕಸುಬುಗಳು ಗ್ರಾಮಗಳಲ್ಲಿನ ನಿರುದ್ಯೋಗ ನಿವಾರಣೆಗೆ ಮದ್ದು ಎಂದು ಸಾರುತ್ತ ಗ್ರಾಮಭಾರತವನ್ನು ಸ್ವಾವಲಂಬಿಯಾಗಿಸುವಲ್ಲಿ ಪರಿಣಾಮಕಾರಿ ಸಾಧನೆ ಮಾಡಲಾಗಿದೆ. ಹಾಗೆಯೇ ದೇಶದ ಆರು ಲಕ್ಷ ಹಳ್ಳಿಗಳಲ್ಲಿ ಇಂಥ ಬೇರುಮಟ್ಟದ ಬದಲಾವಣೆ ತರುತ್ತಿರುವ ವ್ಯಕ್ತಿ-ಸಂಘಟನೆಗಳು ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು, ಅವರ ಅಭಿವೃದ್ಧಿ ಮಾದರಿಗಳನ್ನು ದೇಶದ ಮುಂದೆ ಪರಿಚಯಿಸಬೇಕು ಆ ಮೂಲಕ ಪ್ರೇರಣೆಯ ಅಲೆಯನ್ನು ಹರಡಬೇಕು ಎಂಬ ಉದ್ದೇಶಕ್ಕಾಗಿ ಭಾರತ ವಿಕಾಸ ಸಂಗಮ ಕಾರ್ಯನಿರ್ವಹಿಸುತ್ತಿದೆ. ಸಮಾಜ ನಿರ್ವಣದಲ್ಲಿ ತೊಡಗಿರುವ ವ್ಯಕ್ತಿಗಳು ಹಾಗೂ ಸಂಘಸಂಸ್ಥೆಗಳು ಭಾರತ ವಿಕಾಸ ಸಂಗಮದ ಮೂಲಕ ತಮ್ಮ ಕಾರ್ಯಕ್ಷಮತೆ ಮತ್ತು ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿದ್ದು, ಚಿಂತನೆಯ ಕೊಡುಕೊಳ್ಳುವಿಕೆ ಕೂಡ ಸಕಾರಾತ್ಮಕ ಬದಲಾವಣೆಗೆ ಮುನ್ನುಡಿ ಬರೆದಿದೆ.

ಈ ಎಲ್ಲ ಅಭಿವೃದ್ಧಿ ಮಾದರಿಗಳ ಯಶೋ ಗಾಥೆಗಳನ್ನು ಸಮಾಜಕ್ಕೆ ಪರಿಚಯಿಸಲೆಂದೇ ಮೂರ್ನಾಲ್ಕು ವರ್ಷಗಳಿಗೊಮ್ಮೆ ಭಾರತ ವಿಕಾಸ ಸಂಗಮದ ಬೃಹತ್ ಸಮಾವೇಶವನ್ನೂ ಗೋವಿಂದಾಚಾರ್ಯರು ಏರ್ಪಡಿಸುತ್ತಾರೆ. 2010-11ರಲ್ಲಿ ಗೋವಿಂದಾಚಾರ್ಯರು ಮತ್ತು ಬಸವರಾಜ್ ಪಾಟೀಲ್ ಸೇಡಂರ ಸಾರಥ್ಯದಲ್ಲಿ ನಡೆದ ‘ಕಲಬುರಗಿ ಕಂಪು’ ಎಂಬ ಜಾಗೃತಿಜಾತ್ರೆ ಬದಲಾವಣೆಯ ಹೊಸ ಹೊಳಹುಗಳನ್ನು ಪರಿಚಯಿಸಿತು. ರೈತರ ಶ್ರೇಯೋಭಿವೃದ್ಧಿ, ಸ್ವಯಂಉದ್ಯೋಗ ಸೃಷ್ಟಿ, ಮಹಿಳಾ ಸಬಲೀಕರಣ, ಕೌಶಲಾಭಿವೃದ್ಧಿ ಸೇರಿದಂತೆ ಅಭಿವೃದ್ಧಿಯ ನೈಜ ಮುಖವನ್ನು ತೆರೆದಿಟ್ಟಿತು. 2015ರಲ್ಲಿ ಕೊಲ್ಲಾಪುರ ಜಿಲ್ಲೆಯ ಕನೇರಿಯ ಸಿದ್ಧಗಿರಿ ಮಠದಲ್ಲಿ ನಡೆದ ‘ಭಾರತೀಯ ಸಂಸ್ಕೃತಿ ಉತ್ಸವ’ದಲ್ಲಿ ಮತ್ತೆ ಸ್ವಾವಲಂಬನೆಯ ಶಕ್ತಿಯನ್ನು ರಾಷ್ಟ್ರದ ಮುಂದೆ ಪ್ರದರ್ಶಿಸಲಾಯಿತು. ಸಾವಿರಕ್ಕೂ ಅಧಿಕ ಸಂಘಸಂಸ್ಥೆಗಳು ಈ ಮಾದರಿಯನ್ನು ತಮ್ಮಲ್ಲಿ ಅನುಷ್ಠಾನಕ್ಕೆ ತರುತ್ತಿರುವುದು ಗೋವಿಂದಾಚಾರ್ಯರ ಶ್ರಮಕ್ಕೆ ಸಿಕ್ಕ ಜಯ.

ಹೀಗೆ, ಅಹರ್ನಿಶಿಯಾಗಿ ಸಮಾಜದ ಅಂತಃಶಕ್ತಿ ಜಾಗೃತಗೊಳಿಸುತ್ತಿರುವ ಗೋವಿಂದಾಚಾರ್ಯರು ಸುಪ್ರಸಿದ್ಧ ಧಾರ್ವಿುಕ ನಗರಿ ತಿರುಪತಿಯಲ್ಲಿ ಜನಿಸಿ (1943), ಮತ್ತೊಂದು ಚೈತನ್ಯಭೂಮಿ ವಾರಾಣಸಿಯಲ್ಲಿ ಬೆಳೆದು ಭಾರತೀಯ ಸಂಸ್ಕೃತಿ ಪ್ರವಾಹದ ಪ್ರಮುಖ ವಕ್ತಾರರಾಗಿ ಗುರುತಿಸಿಕೊಂಡಿದ್ದಾರೆ. 1962ರಲ್ಲಿ ಬನಾರಸ್ ಹಿಂದು ವಿಶ್ವವಿದ್ಯಾಲಯದಿಂದ ಎಂಎಸ್ಸಿ ಪದವಿ ಪಡೆದ ಮೇಧಾವಿ ಇವರು. 1965ರಲ್ಲಿ ಆರೆಸ್ಸೆಸ್ ಮೂಲಕ ಸಾಮಾಜಿಕ ಜೀವನ ಆರಂಭಿಸಿದ ಇವರು 1974ರಲ್ಲಿ ಜಯಪ್ರಕಾಶ ನಾರಾಯಣರ ‘ಸಂಪೂರ್ಣ ಕ್ರಾಂತಿ’ಯಲ್ಲಿ ಭಾಗವಹಿಸಿದರು. 1976ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ಗೆ ಬಂದು ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿ ಆರೆಸ್ಸೆಸ್ ಸೂಚನೆ ಮೇರೆಗೆ 1988ರಲ್ಲಿ ರಾಜಕೀಯ ರಂಗ ಪ್ರವೇಶಿಸಿದರು.

ತುರ್ತಪರಿಸ್ಥಿತಿ ಹೊತ್ತಲ್ಲಿ ಬಿಹಾರ ಪ್ರವಾಸದಲ್ಲಿದ್ದಾಗ ವಾಸಿಸಲು ಸ್ಥಳ ಇಲ್ಲದೆ ಚಳಿಯಲ್ಲಿ ಥರಗುಡುತ್ತಿದ್ದ ಕಾರ್ವಿುಕರನ್ನು ಕಂಡು ದಂಗಾಗಿ ಹೋದ ಗೋವಿಂದಾಚಾರ್ಯರು ಅಭಿವೃದ್ಧಿಯ ಅಸಮತೋಲನ ನಿವಾರಿಸುವ, ಎಲ್ಲರಿಗೂ ಅನ್ನ, ಬಟ್ಟೆ, ವಸತಿ ದೊರೆಯುವಂತೆ ಮಾಡುವ ಸಂಕಲ್ಪ ಅಂದೇ ಕೈಗೊಂಡಿದ್ದರು. ಈ ಸಂವೇದನೆಯೇ ಅವರನ್ನು ಸಮಾಜಮುಖಿ ಬಾಳಿಗೆ ಪ್ರೇರೇಪಿಸಿತು. 2000ನೇ ಇಸ್ವಿಯಲ್ಲಿ ರಾಜಕೀಯ ಕ್ಷೇತ್ರದಿಂದ ದೂರವಾಗಿ ಬಳಿಕ ಭಾರತ ವಿಕಾಸ ಸಂಗಮ, ಭಾರತೀಯ ಸನಾತನ ಪರಂಪರೆ ಕುರಿತ ಸಂಶೋಧನೆ, ವಿಶ್ಲೇಷಣೆ, ಅನುಷ್ಠಾನಕ್ಕಾಗಿ ಕೌಟಿಲ್ಯ ಶೋಧ ಸಂಸ್ಥಾನ, ದೇಶದ ಸ್ವಾಭಿಮಾನ, ಸಾರ್ವಭೌಮತ್ವ ರಕ್ಷಣೆಗಾಗಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನವನ್ನು ಮುನ್ನಡೆಸುತ್ತ ರಾಷ್ಟ್ರನಿಷ್ಠ ಜನರ ದೊಡ್ಡಪಡೆಯನ್ನೇ ಕಟ್ಟಿದ್ದಾರೆ. ವ್ಯವಸ್ಥೆ ಪರಿವರ್ತನೆ ನಿಟ್ಟಿನಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸಿರುವ ಗೋವಿಂದಾಚಾರ್ಯರು ಇದೇ ಮೇ 2ರಂದು ಸಾರ್ಥಕ 75 ಸಂವತ್ಸರಗಳನ್ನು ಪೂರೈಸಿ 76ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಸಜ್ಜನಶಕ್ತಿಗಳನ್ನು ಸಂಘಟಿಸಿ, ಭಾರತವನ್ನು ಬಲಿಷ್ಠವಾಗಿಸಲು ಹೊರಟಿರುವ ಅವರು ವಿಕಾಸದ ಹೊಸ ಕನಸುಗಳನ್ನು ಹೆಣೆದಿದ್ದು, ಅವು ಯಶಸ್ವಿಯಾಗಲಿ ಎಂದು ಹಾರೈಸೋಣ.

ಗೋವಿಂದಾಚಾರ್ಯರಿಗೆ 75 ಸಂವತ್ಸರಗಳು ಪೂರ್ಣ ಗೊಂಡ ಪ್ರಯುಕ್ತ ಚಿಂತಕ ಬಸವರಾಜ್ ಪಾಟೀಲ್ ಸೇಡಂ ಅವರು ಕಲ್ಯಾಣ ಕರ್ನಾಟಕ ವಿಕಾಸ ಅಕಾಡೆಮಿಯಿಂದ ‘ಕನಸು-ಕಾರ್ಯ-ಮುನ್ನೋಟ’ ಕಾರ್ಯಕ್ರಮ ಆಯೋಜಿಸಿದ್ದಾರೆ. ಏ.30ರಂದು(ಸೋಮವಾರ) ಸಂಜೆ 6.30ಕ್ಕೆ ಕಲಬುರಗಿಯ ಭಾರತೀಯ ವಿದ್ಯಾಕೇಂದ್ರ ಸಿರನೂರ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಗೋವಿಂದಾಚಾರ್ಯರು ಉಪಸ್ಥಿತರಿರಲಿದ್ದಾರೆ.

Leave a Reply

Your email address will not be published. Required fields are marked *

Back To Top