25.7 C
Bangalore
Monday, December 16, 2019

ಪೂಜಾರ ಎಂಬ ಬ್ಯಾಟಿಂಗ್ ತಪಸ್ವಿ

Latest News

ಸರ್ಕಾರದ ಸಾಧನೆಗಳ ಅನಾವರಣ

ವಿಜಯಪುರ: ನೆರೆ ಹಾವಳಿ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಮ್ಮಿಕೊಂಡ ಛಾಯಾಚಿತ್ರ ಪ್ರದರ್ಶನಕ್ಕೆ...

ಅವಶ್ಯಕ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿ

ವಿಜಯಪುರ: ವಿಶೇಷ ಘಟಕ ಹಾಗೂ ಗಿರಿಜನ ಉಪಯೋಜನೆಯ ಭೂ ಒಡೆತನ ಯೋಜನೆಯಡಿ ಅವಶ್ಯಕವಿರುವ ಅನುದಾನ-ಜಮೀನು ಕುರಿತು ವಾರದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲು ಕ್ರಮ...

ಕ್ರೀಡೆ, ಯೋಗಕ್ಕೆ ಆದ್ಯತೆ ನೀಡಿ

ಹುನಗುಂದ: ಮಾನಸಿಕ ನೆಮ್ಮದಿಯೊಂದಿಗೆ ದೇಹಕ್ಕೆ ಹೊಸ ಉಲ್ಲಾಸ ನೀಡುವ ಕ್ರೀಡೆ ಹಾಗೂ ಯೋಗ ಮಾಡಲು ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ವಿಜಯ ಮಹಾಂತೇಶ...

ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ತಮ್ಮ ಪ್ರಜೆಗಳನ್ನು ವಾಪಸ್​ ಕರೆಯಿಸಿಕೊಳ್ಳಲು ಸಿದ್ಧ ಎಂದ ಬಾಂಗ್ಲಾದೇಶ

ಢಾಕಾ: ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿ ವಲಸಿಗರನ್ನು ವಾಪಸ್ ಪಡೆಯಲು ಸಿದ್ದವಿರುವುದಾಗಿ ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ. ಅಬ್ದುಲ್ ಮೆಮೊನ್ ಹೇಳಿದ್ದಾರೆ. ಪೌರತ್ವ ಕಾಯ್ದೆ...

ಪೌರತ್ವ ತಿದ್ದುಪಡಿ ಮಸೂದೆ ತಿರಸ್ಕರಿಸಲು ಒತ್ತಾಯ

ವಿಜಯಪುರ: ಪೌರತ್ವ ತಿದ್ದುಪಡಿ ಮಸೂದೆ-2019 ತಿರಸ್ಕರಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ೆಡರೇಷನ್ (ಎಸ್‌ಎ್ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎ್ಐ) ಕಾರ್ಯಕರ್ತರು...

| ರಾಘವೇಂದ್ರ ಗಣಪತಿ

ವಿರಾಟ್ ಕೊಹ್ಲಿಯ ಬ್ಯಾಟಿಂಗ್ ನೋಡುವಾಗ ಅನೇಕ ಬಾರಿ ‘ಕ್ರಿಕೆಟ್ ಒಂದು ಜೇಮ್ಸ್​ಬಾಂಡ್ ಸಿನಿಮಾದಂತೆ’ ಎಂದು ಅನ್ನಿಸುವುದಿದೆ. ಇನ್ನೂ ಕೆಲವು ಬ್ಯಾಟುಗಾರರ ಸ್ಪೋಟಕ ಆಟದ ಸಂದರ್ಭದಲ್ಲಿ ‘ಇದು ಆಟವಲ್ಲ, ಯುದ್ಧ’ ಎಂಬ ಭಾವನೆಯೂ ಬರುವುದಿದೆ. ಆದರೆ, ಕ್ರಿಕೆಟ್ ಎನ್ನುವುದೊಂದು ಕಲೆ, ಬ್ಯಾಟಿಂಗ್ ಒಂದು ತಪಸ್ಸಿನಂತೆ, ಧ್ಯಾನದಂತೆ ಎಂದೆಲ್ಲ ಅನ್ನಿಸದೆ ಬಹಳ ದಿನಗಳೇ ಆಗಿಹೋಗಿದ್ದವು. ಸಚಿನ್ ತೆಂಡುಲ್ಕರ್ ನಿವೃತ್ತಿಯೊಂದಿಗೆ ಈ ಆಟದ ಕಲಾತ್ಮಕತೆಯೂ ನಿವೃತ್ತಿಯಾಯಿತೇ? ರಾಹುಲ್ ದ್ರಾವಿಡ್, ಜಾಕ್ಸ್ ಕಾಲಿಸ್​ರಂಥ ಆಟಗಾರರು ನೇಪಥ್ಯಕ್ಕೆ ಸರಿಯುವುದರೊಂದಿಗೆ ತಪಸ್ಸಿನಂಥ ಬ್ಯಾಟಿಂಗ್, ಧ್ಯಾನಸ್ಥ ಬ್ಯಾಟ್ಸ್​ಮನ್​ಗಳ ಪರಂಪರೆ ಮಾಯವಾಯಿತೇನೋ ಎಂಬ ಅನುಮಾನಗಳು ಶುರುವಾಗಿದ್ದವು. ಆದರೆ, ಆತಂಕ ಬೇಡ. ಚೇತೇಶ್ವರ ಪೂಜಾರ ಅಂಥ ಓರ್ವ ಕ್ರಿಕೆಟ್​ನ ಕಲಾತ್ಮಕ ಪರಂಪರೆಯ ಸಮರ್ಥ ಉತ್ತರಾಧಿಕಾರಿ.

ಭಾರತೀಯ ಕ್ರಿಕೆಟ್​ಗೆ ಪೂಜಾರ ಹೊಸಬರೇನೂ ಅಲ್ಲ. 2005ರಿಂದ ದೇಶಿ ಕ್ರಿಕೆಟ್​ನಲ್ಲಿ ಶತಕ, ದ್ವಿಶತಕ, ತ್ರಿಶತಕಗಳ ರನ್​ಪ್ರವಾಹ ಹರಿಸುತ್ತಿರುವ ಪ್ರತಿಭಾವಂತನೀತ. ಆದರೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೂರ್ಣ ಪ್ರಮಾಣದಲ್ಲಿ ಪೂಜಾರ ಅನಾವರಣಕ್ಕೆ ಹಾಲಿ ಆಸ್ಟ್ರೇಲಿಯಾ ಪ್ರವಾಸದವರೆಗೆ ಕಾಯಬೇಕಾಯಿತು. ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ 2018-19ರ ಈ ಆಸ್ಟ್ರೇಲಿಯಾ ಪ್ರವಾಸ ಕೇವಲ ಪೂಜಾರ ಕಾರಣದಿಂದಲೇ ಚಿರಸ್ಥಾಯಿ ಆಗಲಿದೆ. ಆಸೀಸ್ ನೆಲದಲ್ಲಿ ಹಿಂದೆಂದೂ ಸಾಧ್ಯವಾಗದ ಚಾರಿತ್ರಿಕ ಸಾಧನೆಯ ಅರ್ಹರೂವಾರಿ ಸೌರಾಷ್ಟ್ರದ ಮಾಂತ್ರಿಕ.

ಪೂಜಾರ 2010ರಿಂದ ಭಾರತ ತಂಡದ ಸದಸ್ಯ. ಅವರ ಬ್ಯಾಟಿಂಗ್ ದಕ್ಷತೆ ದೇಶದ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅಪರಿಚಿತವೇನೂ ಅಲ್ಲ. ಆದರೂ, ಕಳೆದ ಒಂದು ದಶಕದಿಂದ ವಿಶ್ವ ಕ್ರಿಕೆಟ್ ಆವರಿಸಿರುವ ವಿರಾಟ್ ಕೊಹ್ಲಿ ಎಂಬ ಬ್ಯಾಟಿಂಗ್ ಸುನಾಮಿಯ ಎದುರು ಉಳಿದೆಲ್ಲ ಆಟಗಾರರು, ಅವರ ಆಟಗಾರಿಕೆ ಗೌಣವೆನಿಸುತ್ತಿರುವುದು ಅವರ ತಪ್ಪಲ್ಲ. ಹಾಗೆ ನೋಡಿದರೆ, ಈ ಆಸ್ಟ್ರೇಲಿಯಾ ಪ್ರವಾಸ ಕೂಡ ಕೊಹ್ಲಿ ಬೊಂಬಾಟಾಟಕ್ಕೆ ವೇದಿಕೆ ಆಗಬೇಕಿತ್ತು. ಅದೇ ಎಲ್ಲರ ನಿರೀಕ್ಷೆಯೂ ಆಗಿತ್ತು. ಆಸೀಸ್ ತಂಡದ ರಣತಂತ್ರವೂ ಕೊಹ್ಲಿ ಸುತ್ತಲೇ ಕೇಂದ್ರೀಕೃತವಾಗಿತ್ತು. ತೆಂಡುಲ್ಕರ್, ದ್ರಾವಿಡ್ ನಂತರದ ದಿನಗಳಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಸೆಡ್ಡುಹೊಡೆಯುವ ಸಾಮರ್ಥ್ಯ ಇದ್ದರೆ ಅದು ಕೊಹ್ಲಿಗೆ ಮಾತ್ರ ಎನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿತ್ತು. ಇದಕ್ಕೆ 2014ರ ಪ್ರವಾಸವೂ ಪುರಾವೆಯಂತಿತ್ತು. ಆ ಪ್ರವಾಸದಲ್ಲಿ ಕೊಹ್ಲಿ ಏಕಾಂಗಿಯಾಗಿ 4 ಶತಕ ಸಿಡಿಸಿದ್ದರೂ, ಭಾರತ ತಂಡವಾಗಿ ಸೋತಿತ್ತು. ಈ ಬಾರಿ ಸಹ ಕೊಹ್ಲಿಯಿಂದ ಇನ್ನಷ್ಟು ಶತಕಗಳ, ಮತ್ತಷ್ಟು ಸಾಹಸಗಳ ನಿರೀಕ್ಷೆ ಇತ್ತು. ಆದರೆ, ಪೂಜಾರ ಆಟ ಉಳಿದೆಲ್ಲರನ್ನು ಮರೆಮಾಚಿಸಿತು.

ಆಸ್ಟ್ರೇಲಿಯಾ ಕ್ರಿಕೆಟ್ ಸದ್ಯ ಸಂಕ್ರಮಣ ಕಾಲಘಟ್ಟದಲ್ಲಿದೆ. ಕಳೆದ ವರ್ಷದ ಚೆಂಡು ವಿರೂಪ ಅವಮಾನದಿಂದ ತಂಡ ಸಂಪೂರ್ಣ ಹೊರಬಂದಿಲ್ಲ. ತಂಡದ ಅತ್ಯುತ್ತಮ ಬ್ಯಾಟ್ಸ್​ಮನ್​ಗಳು ನಿಷೇಧ ಅವಧಿಯಿಂದ ಹೊರಬಂದಿಲ್ಲ. ಆದರೆ, ತಂಡ ಶಕ್ತಿಹೀನಗೊಂಡಿರುವುದು ಬ್ಯಾಟಿಂಗ್ ವಿಭಾಗದಲ್ಲಿ ಮಾತ್ರ. ಬೌಲಿಂಗ್​ನಲ್ಲಿ ಆಸೀಸ್ ಈಗಲೂ ವಿಶ್ವ ನಂ.1. ಸಮಕಾಲೀನ ಸಂದರ್ಭದಲ್ಲಿ ಅತ್ಯುತ್ತಮ ಬೌಲರ್​ಗಳು ಆ ತಂಡದಲ್ಲಿದ್ದಾರೆ. ಬ್ಯಾಟ್ಸ್​ಮನ್​ಗಳಿಗೆ ಸಿಂಹಸ್ವಪ್ನ ಪಿಚ್​ಗಳಲ್ಲಿ, ಅನುಕೂಲಕರ ತವರಿನ ವಾತಾವರಣದಲ್ಲಿ ಕಾಂಗರೂ ಪಡೆಯ ಈ ಬೌಲರ್​ಗಳನ್ನು ಎದುರಿಸಿ ನಿಲ್ಲುವುದು ಯಾವುದೇ ಎದುರಾಳಿ ತಂಡಗಳಿಗೆ ದುರ್ಲಭ ಸಾಧನೆಯೇ ಸರಿ. 4 ಪಂದ್ಯಗಳ ಸರಣಿಯಲ್ಲಿ ವಿರಾಟ್ ಕೊಹ್ಲಿ ಒಮ್ಮೆ ಮಾತ್ರ ಶತಕದ ಗಡಿ ದಾಟಿದ್ದಾರೆ. ರೋಹಿತ್ ಶರ್ಮ, ಅಜಿಂಕ್ಯ ರಹಾನೆ ಪರದಾಡಿದ್ದಾರೆ. ಕೆ.ಎಲ್. ರಾಹುಲ್, ಮುರಳಿ ವಿಜಯ್ ದೊಡ್ಡ ಫ್ಲಾ್ಯಪ್ ಎನಿಸಿದ್ದಾರೆ. ಈ ಪ್ರವಾಸದಲ್ಲಿ, ಈ ಸರಣಿಯಲ್ಲಿ ಉಭಯ ತಂಡಗಳ ನಡುವಿನ ವ್ಯತ್ಯಾಸವೇ ಪೂಜಾರ. ಅಡಿಲೇಡ್​ನಲ್ಲಿ ಆರಂಭಗೊಂಡ ಸರಣಿಯ ಮೊದಲ ಪಂದ್ಯದ ಮೊಟ್ಟಮೊದಲ ದಿನದಿಂದ ಸಿಡ್ನಿ ಟೆಸ್ಟ್​ನ ಕಟ್ಟಕಡೆಯವರೆಗೆ ಚೇತೇಶ್ವರ ಪೂಜಾರ ಚೇತೋಹಾರಿ ಬ್ಯಾಟಿಂಗ್ ಭಾರತವನ್ನು ಐತಿಹಾಸಿಕ ಸಾಧನೆಯ ಹೊಸ್ತಿಲಲ್ಲಿ ನಿಲ್ಲಿಸಿದೆ. ಪರ್ತ್​ನಲ್ಲಿ ನಡೆದ 2ನೇ ಟೆಸ್ಟ್​ನಲ್ಲಿ ಪೂಜಾರ ವಿಫಲರಾಗಿದ್ದರು. ಆ ಪಂದ್ಯದಲ್ಲಿ ಅವರು ಗಳಿಸಿದ್ದು 24 ಮತ್ತು 4 ರನ್ ಮಾತ್ರ. ಭಾರತ ಆ ಪಂದ್ಯವನ್ನು 146 ರನ್​ಗಳಿಂದ ಹೀನಾಯವಾಗಿ ಸೋತಿತ್ತು. ಉಳಿದ ಮೂರು ಪಂದ್ಯಗಳಲ್ಲಿ ಪೂಜಾರ ತ್ರಿವಳಿ ಶತಕ ಭಾರತದ ಔನ್ನತ್ಯಕ್ಕೆ ಕಾರಣವಾಗಿದೆ.

ಆರಂಭದ ದಿನಗಳಿಂದಲೂ ಪೂಜಾರ, ಬ್ಯಾಟಿಂಗ್ ದಿಗ್ಗಜ ರಾಹುಲ್ ದ್ರಾವಿಡ್ ಉತ್ತರಾಧಿಕಾರಿ ಎಂದೇ ಗುರುತಿಸಿಕೊಂಡವರು. ದ್ರಾವಿಡ್​ರ ಬ್ಯಾಟಿಂಗ್ ತಾಂತ್ರಿಕತೆ, ಅವರ ಏಕಾಗ್ರತೆ, ತಂಡದ ಅಗತ್ಯಕ್ಕೆ ಅನುಸಾರ ಸಮರ್ಪಿಸಿಕೊಳ್ಳುವ ಕ್ರೀಡಾಮನೋಭಾವ, ಎದುರಾಳಿ ತಂಡ, ಬೌಲರ್​ಗಳು, ಪಿಚ್, ವಾತಾವರಣ, ಪಂದ್ಯದ ಸನ್ನಿವೇಶ ಹೇಗೇ ಇದ್ದರೂ, ಏನೇ ಇದ್ದರೂ, ವಿಚಲಿತಗೊಳ್ಳದೆ ನಿರಂತರವಾಗಿ ಕ್ರೀಸ್ ಆಕ್ರಮಿಸಿ ಆಡುವ ಛಾತಿ ಇದೆಲ್ಲವನ್ನೂ ಪೂಜಾರ ಸಹ ಕರಗತ ಮಾಡಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ದ್ರಾವಿಡ್​ಗಿಂತ ಮೊದಲು ಹಾಗೂ ನಂತರವೂ ಅನೇಕ ರಕ್ಷಣಾತ್ಮಕ ಬ್ಯಾಟ್ಸ್​ಮನ್​ಗಳು ಆಗಿಹೋಗಿದ್ದಾರೆ. ಕ್ರೀಸಿನಲ್ಲಿ ಅವುಡುಗಚ್ಚಿ ಗಂಟೆಗಟ್ಟಲೆ ನಿಲ್ಲುವ ಕೆಲವು ಬ್ಯಾಟ್ಸ್​ಮನ್​ಗಳ ಆಟವನ್ನು ನೋಡುವುದು ಎದುರಾಳಿ ಬೌಲರ್​ಗಳಿಗೆ ಮಾತ್ರವಲ್ಲ, ಪ್ರೇಕ್ಷಕರ ಪಾಲಿಗೂ ಯಾತನಾದಾಯಕ. ಆದರೆ ದ್ರಾವಿಡ್​ರಂತೆ ಪೂಜಾರ ಬ್ಯಾಟಿಂಗ್ ಸಹ ಕಣ್ಣಿಗೆ ಹಬ್ಬ. ರಕ್ಷಣಾತ್ಮಕ ಬ್ಯಾಟಿಂಗ್​ಗಿಂತ ಅತ್ಯುತ್ತಮ ಆಕ್ರಮಣವಿಲ್ಲ ಎಂದು ತೋರಿಸಿಕೊಟ್ಟವರು ದ್ರಾವಿಡ್. ಆಸೀಸ್ ನೆಲದಲ್ಲಿ ಈಗ ಪೂಜಾರ ಪ್ರದರ್ಶಿಸುತ್ತಿರುವುದೂ ಅಂಥ ಪ್ರೌಢಿಮೆಯನ್ನೇ. ಕೆ.ಎಲ್. ರಾಹುಲ್, ರೋಹಿತ್ ಶರ್ಮ, ರಹಾನೆ ಬ್ಯಾಟಿಂಗ್ ಸಂದರ್ಭದಲ್ಲಿ ಅನ್​ಪ್ಲೇಯಬಲ್ (ಆಡುವುದೇ ಅಸಾಧ್ಯ) ಎಂಬಂತೆ ತೋರುವ ಸಿಡಿಗುಂಡಿನಂಥ ಕಿಡಿಚೆಂಡುಗಳನ್ನು ಪೂಜಾರ ಲೀಲಾಜಾಲವಾಗಿ ಆಡುವುದನ್ನು ನೋಡುವುದೇ ಆನಂದ.

ಕಳೆದ ಒಂದು ತಿಂಗಳ ಅವಧಿಯಲ್ಲಿ 4 ಟೆಸ್ಟ್​ಗಳ 7 ಇನಿಂಗ್ಸ್​ಗಳಿಗಾಗಿ ಪೂಜಾರ ಬರೋಬ್ಬರಿ 1869 ನಿಮಿಷಗಳನ್ನು ಕ್ರೀಸಿನಲ್ಲಿ ಕಳೆದಿದ್ದಾರೆ. ಈ ಅವಧಿಯಲ್ಲಿ ಆಸ್ಟ್ರೇಲಿಯಾ ತಂಡದ ಪರ ಒಬ್ಬನೇ ಬ್ಯಾಟ್ಸ್​ಮನ್ ಗರಿಷ್ಠ 900 ನಿಮಿಷ ಕೂಡ ಕ್ರೀಸಿನಲ್ಲಿ ಉಳಿದಿಲ್ಲ. ಈ ಮೂವತ್ತೊಂದೂ ಕಾಲು ಗಂಟೆಗಳ ಆಟದಲ್ಲಿ ಅವರು ಉಭಯ ತಂಡಗಳ ಪರ ಗರಿಷ್ಠ 521 ರನ್ ಬಾರಿಸಿದ್ದಾರೆ. 3 ಶತಕ ದಾಖಲಿಸಿದ್ದಾರೆ. ಒಂದು ಟೆಸ್ಟ್ ಪಂದ್ಯದ ಪೂರ್ಣ ಅವಧಿಗಿಂತ ಹೆಚ್ಚು ಸಮಯವನ್ನು ಪೂಜಾರ ಒಬ್ಬರೇ ಈ ಸರಣಿಯಲ್ಲಿ ಕ್ರೀಸಿನಲ್ಲಿ ಕಳೆದಿರುವುದು ಅವರ ಬ್ಯಾಟಿಂಗ್​ನ ಸಂಯಮವನ್ನು, ಏಕಾಗ್ರತೆಯನ್ನು, ತಾದಾತ್ಮ್ಯವನ್ನು, ಸಮರ್ಪಣಾ ಭಾವವನ್ನು ಬಿಂಬಿಸುತ್ತದೆ.

ಇದೇ 25ಕ್ಕೆ 31ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಚೇತೇಶ್ವರ ಜನಿಸಿದ್ದು 1988ರಲ್ಲಿ ಸೌರಾಷ್ಟ್ರದ ರಾಜಕೋಟ್​ನಲ್ಲಿ. ತಂದೆ ಅರವಿಂದ ಪೂಜಾರ ಅವರ ಕೋಚ್ ಕೂಡ ಹೌದು. ಸ್ವತಃ ರಣಜಿ ಮಟ್ಟದ ಆಟಗಾರರಾದ ಅರವಿಂದ ತಮ್ಮಿಂದ ಆಗದ ಸಾಧನೆಯನ್ನು ಮಗನ ಮೂಲಕ ಸಾಧಿಸಿದವರು. ಪೂಜಾರ 17ರ ಹುಡುಗನಾಗಿದ್ದಾಗ ಅಮ್ಮ ರೀಮಾ ಕ್ಯಾನ್ಸರ್​ನಿಂದ ಮೃತಪಟ್ಟರು. ಆದರೆ, ಹೆಬ್ಬಂಡೆಯಂತೆ ಬೆನ್ನಿಗೆ ನಿಂತ ತಂದೆಯ ಮಾರ್ಗದರ್ಶನದಲ್ಲಿ ಪೂಜಾರ ಸಾಧನೆಯ ಮೆಟ್ಟಿಲನ್ನೇರಿದರು. ಪತ್ನಿ ಪೂಜಾ ಹಾಗೂ ಈಗಿನ್ನೂ ಅಂಬೆಗಾಲಿಡುತ್ತಿರುವ ಮಗಳು ಪೂಜಾರ ಪುಟ್ಟ ಕುಟುಂಬದ ಸದಸ್ಯರು. ಅಂದ ಹಾಗೆ ಮೊನ್ನೆ ಸಿಡ್ನಿಯಲ್ಲಿ ಪೂಜಾರ ದಿನಪೂರ್ತಿ ಬ್ಯಾಟಿಂಗ್ ಮಾಡಿ ವೃತ್ತಿಜೀವನದ 18ನೇ ಶತಕ ಬಾರಿಸುತ್ತಿರುವ ಸಂದರ್ಭದಲ್ಲಿ ಅವರ ತಂದೆ ಅರವಿಂದ ಮುಂಬೈ ಆಸ್ಪತ್ರೆಯಲ್ಲಿ ಹೃದಯದ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಆ ದಿನ ಪೂಜಾರ ಶತಕವನ್ನು ಅರವಿಂದ್ ಆಗಲೀ, ಪತ್ನಿ ಪೂಜಾ ಆಗಲೀ ನೋಡಲಾಗಲಿಲ್ಲ. ತಂದೆಯ ಅನಾರೋಗ್ಯದ ಮಾಹಿತಿ ಇದ್ದ ಪೂಜಾರ, ಬ್ಯಾಟಿಂಗ್ ಮೇಲೆ ಅದರ ಪ್ರಭಾವ ಲವಲೇಶವೂ ಆಗದಂತೆ ಆಡಿದ್ದು ಅವರ ಮನೋಬಲಕ್ಕೆ ಹಿಡಿದ ಕನ್ನಡಿ.

ಮೊನ್ನೆ ಪೂಜಾರ ಶತಕ ಬಾರಿಸಿದ ಬಳಿಕ ಎದುರಾಳಿ ತಂಡದ ಸ್ಪಿನ್ನರ್ ನಾಥನ್ ಲ್ಯಾನ್, ‘ನಿನಗೆ ಬ್ಯಾಟಿಂಗ್ ಮಾಡಿ ಮಾಡಿ ಬೋರ್ ಆಗಿಲ್ಲವೇ’ ಎಂಬ ಪ್ರಶ್ನೆ ಕೇಳಿದರು. ಓರ್ವ ಎದುರಾಳಿಯಾಗಿ ಆಸೀಸ್ ಆಟಗಾರರು ಬೋರಾಗಿದ್ದರಲ್ಲಿ, ಬಸವಳಿದಿದ್ದರಲ್ಲಿ ಆಶ್ಚರ್ಯವಿಲ್ಲ. ಆದರೆ, ಪೂಜಾರ ಅವರ ತಪಸ್ಸಿನಂಥ ಬ್ಯಾಟಿಂಗ್ ಧ್ಯಾನ ಅಭಿಮಾನಿಗಳ ಪಾಲಿಗೆ ಅಮೃತಸಮಾನ.

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

[ಪ್ರತಿಕ್ರಿಯಿಸಿ: [email protected]]

- Advertisement -

Stay connected

278,757FansLike
589FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...