Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಮೋಟಾರಿಗೆ ಇಂಧನ ಒದಗಿಸುವ ಹೊಣೆ

Sunday, 17.06.2018, 3:05 AM       No Comments

| ಉಮೇಶ್ ಕುಮಾರ್ ಶಿಮ್ಲಡ್ಕ

ಗುರಿ ಸ್ಪಷ್ಟವಾಗಿದ್ದು, ಅದನ್ನು ಈಡೇರಿಸುವುದಕ್ಕೆ ಪೂರಕ ಯೋಜನೆ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನವಾಯಿತು ಎಂದರೆ ಅಂಥ ಸಾಧಕರ ಕಡೆಗೆ ಜಗತ್ತೇ ಮುಖಮಾಡುತ್ತದೆ. ಅಮೆರಿಕದಲ್ಲಿನ ಆಟೋಮೊಬೈಲ್ ಕ್ಷೇತ್ರದ ಮುಂಚೂಣಿ ಸಂಸ್ಥೆ ಜನರಲ್ ಮೋಟಾರ್ಸ್(ಜಿಎಂ)ನ ಮುಖ್ಯ ಹಣಕಾಸು ಅಧಿಕಾರಿ(ಸಿಎಫ್​ಒ)ಯಾಗಿ ಕಳೆದವಾರ ನಿಯೋಜಿಸಲ್ಪಟ್ಟ ಭಾರತ ಮೂಲದ ಮೂವತ್ತೊಂಭತ್ತು ವರ್ಷದ ದಿವ್ಯಾ ಸೂರ್ಯದೇವರ ಸಾಧನೆಯೂ ಅಂಥದ್ದೇ. ಈ ನೇಮಕದ ಸುದ್ದಿ ಪ್ರಕಟವಾಗುವ ತನಕವೂ ಆಕೆ ಹೆಸರು ಭಾರತದಲ್ಲಿ ಪರಿಚಿತವಾದುದಾಗಿರಲಿಲ್ಲ. ನೂರಹತ್ತು ವರ್ಷಗಳ ಇತಿಹಾಸವಿರುವ ಜಿಎಂ ಕಂಪನಿಯಲ್ಲಿ ಮಾತ್ರವಲ್ಲದೇ ಆಟೋ ಮೊಬೈಲ್ ಕ್ಷೇತ್ರದಲ್ಲಿ ಸಿಎಫ್​ಒ ಸ್ಥಾನಕ್ಕೆ ಮಹಿಳೆಯೊಬ್ಬರ ನೇಮಕ ಆಗಿದ್ದು ಇದೇ ಮೊದಲು. ಸದ್ಯ ಜಿಎಂ ಕಂಪನಿಯ ಸಿಎಫ್​ಒ ಆಗಿರುವ ಚಕ್ ಸ್ಟೀವನ್ಸ್ ಅವಧಿ ಸೆಪ್ಟೆಂಬರ್ 1ಕ್ಕೆ ಮುಕ್ತಾಯವಾಗಲಿದ್ದು ಅದೇ ದಿನ ದಿವ್ಯಾ ಆ ಹೊಣೆಗಾರಿಕೆ ವಹಿಸಿಕೊಳ್ಳಲಿದ್ದಾರೆ.

‘ಹಣಕಾಸು ವ್ಯವಹಾರದಲ್ಲಿ ದಿವ್ಯಾರ ಅನುಭವ ಮತ್ತು ನಾಯಕತ್ವ ಗುಣ ಕಂಪನಿಯಲ್ಲಿ ಅವರು ನಿಭಾಯಿಸಿದ ಹಲವು ಹೊಣೆಗಾರಿಕೆಗಳ ಮೂಲಕ ವೇದ್ಯವಾಗಿದೆ. ಇದರ ಪರಿಣಾಮವಾಗಿ ನಾವು ಕಳೆದ ಕೆಲವು ವರ್ಷಗಳಲ್ಲಿ ಉತ್ತಮ ವ್ಯಾಪಾರ ಫಲಿತಾಂಶವನ್ನು ಕಂಡಿದ್ದೇವೆ’ ಎಂದು ಕಂಪನಿಯ ಸಿಇಒ ಮೇರಿ ತೆರೇಸಾ ಬರಾ› ಹೇಳಿದ್ದರು. ಕಿರಿಯ ವಯಸ್ಸಿನಲ್ಲೇ ಗಣನೀಯ ಸಾಧನೆಗಾಗಿ ದಿವ್ಯಾ ಈಗ ಗಮನಸೆಳೆದಿದ್ದಾರೆ.

‘ರಿಯಲ್ ಸಿಂಪಲ್’ ನಿಯತಕಾಲಿಕೆಗೆ ಎರಡು ವರ್ಷ ಹಿಂದೆ ನೀಡಿದ ಸಂದರ್ಶನದಲ್ಲಿ ದಿವ್ಯಾ ತನ್ನ ವೃತ್ತಿ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದರು. ಅದರ ಝುಲಕ್: ‘ದಕ್ಷಿಣ ಭಾರತದ ಚೆನ್ನೈನಲ್ಲಿ ಬಾಲ್ಯ ಅನುಭವಿಸಿದ ನಾನು ಎಳವೆಯಲ್ಲೇ ತಂದೆಯನ್ನು ಕಳೆದುಕೊಂಡೆ. ಮೂರು ಮಕ್ಕಳ ಪೈಕಿ ನಾನೇ ಕಿರಿಯಳು. ಅಪ್ಪನನ್ನು ಕಳೆದುಕೊಂಡ ನಮ್ಮನ್ನು ಸಾಕಿ, ಬೆಳೆಸಿದ್ದೆಲ್ಲ ಅಮ್ಮನೇ. ಭಾರತದಲ್ಲಷ್ಟೇ ಅಲ್ಲ ಜಗತ್ತಿನ ಯಾವುದೇ ದೇಶದಲ್ಲಾದರೂ ಅದು ಬಲುಕಷ್ಟದ ಕೆಲಸವೇ. ಆದಾಗ್ಯೂ, ನಮ್ಮ ಶಾಲಾ ಮತ್ತು ನೈತಿಕ ಶಿಕ್ಷಣದ ವಿಚಾರದಲ್ಲಿ ಅಮ್ಮ ನಿಗಾವಹಿಸಿದ್ದರಿಂದ, ಅವರ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಫಲಿತಾಂಶ ನೀಡುವಂತೆ ಕೆಲಸ ಮಾಡುವುದು ನಮ್ಮಿಂದ ಸಾಧ್ಯವಾಯಿತು. ನಮಗೆ ಯಾವುದೂ ಸುಲಭವಾಗಿ ದಕ್ಕಿಲ್ಲ, ಎಲ್ಲವೂ ಸ್ವ ಪರಿಶ್ರಮದಿಂದಲೇ ಸಿಕ್ಕಿದ್ದು. ಶಿಕ್ಷಣ ಪಡೆಯುತ್ತಿರುವಾಗ ಮುಂದೇನಾಗಬೇಕು ಎಂಬ ಕನಸು ಕಂಡಿರಲಿಲ್ಲ. ಆದರೆ, ದೊಡ್ಡ ಆಟೋಮೋಟಿವ್ ಕಂಪನಿಯಲ್ಲಿ ಕೆಲಸ ಮಾಡಬೇಕೆಂಬ ಇಚ್ಛೆ ಇತ್ತು. ಎಲ್ಲದಕ್ಕೂ ಮಿಗಿಲಾಗಿ ಸವಾಲು ಮತ್ತು ಸಂಕೀರ್ಣವಾದ ಕೆಲಸ ಮಾಡಬೇಕೆಂಬ ಬಯಕೆ ಇತ್ತು. 22ನೇ ವಯಸ್ಸಿಗೆ ಭಾರತ ಬಿಟ್ಟು ಅಮೆರಿಕಕ್ಕೆ ಬಂದೆ. ಇಲ್ಲಿ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಎಂಬಿಎ ಪದವಿ ಪಡೆದೆ. ಚೆನ್ನೈನಲ್ಲಿ ಬಿಕಾಂ ಪದವಿ ಮುಗಿಸಿದ್ದೆ. ಅಮೆರಿಕದಲ್ಲಿ ಆರಂಭದಲ್ಲಿ ನನಗೆ ಸಾಂಸ್ಕೃತಿಕ ಸಮಸ್ಯೆ ಬಹುವಾಗಿ ಕಾಡಿತ್ತು. ನಿಧಾನವಾಗಿ ಎಲ್ಲದಕ್ಕೂ ಹೊಂದಿಕೊಂಡೆ. ಶೈಕ್ಷಣಿಕ ಸಾಲ ಪಡೆದು ಶಿಕ್ಷಣ ಮುಂದುವರಿಸಿದ್ದರಿಂದಾಗಿ ಎಲ್ಲರಂತೆ ವಿದ್ಯಾರ್ಥಿ ಬದುಕನ್ನು ‘ಎಂಜಾಯ್’ ಮಾಡಲಾಗಲಿಲ್ಲ. ಸಾಲ ಮರುಪಾವತಿಸುವ ಹೊಣೆಗಾರಿಕೆ ಹೆಗಲೇರಿತ್ತು. ಹೀಗಾಗಿ ಶಿಕ್ಷಣ ಮುಗಿಯುತ್ತಲೇ ಕೆಲಸ ಹುಡುಕುವ ಒತ್ತಡವೂ ಇತ್ತೆನ್ನಿ. ಚಾರ್ಟರ್ಡ್ ಫೈನಾನ್ಶಿಯಲ್ ಅನಲಿಸ್ಟ್ ಮತ್ತು ಅಕೌಂಟೆಂಟ್ ಆಗಿ ವೃತ್ತಿ ಆರಂಭಿಸಿದೆ. ಆರಂಭದಲ್ಲಿ ಹೂಡಿಕೆ ಬ್ಯಾಂಕ್ ಯುಬಿಎಸ್ ಮತ್ತು ಪ್ರೖೆಸ್​ವಾಟರ್​ಹೌಸ್​ಕೂಪರ್ಸ್​ನಲ್ಲಿ ಕೆಲಸ ಮಾಡಿದೆ. ತರುವಾಯ 2005ರಲ್ಲಿ ಡೆಟ್ರಾಯ್್ಟ ಜಿಎಂ ಕಂಪನಿಯ ಅಸೆಟ್ ಮ್ಯಾನೇಜ್​ವೆುಂಟ್ ವಿಭಾಗಕ್ಕೆ ಸೇರಿದೆ. ಆಗ ನನ್ನ ವಯಸ್ಸು 25. ಇದಾಗಿ ಕೆಲ ಸಮಯಕ್ಕೆ ವೈವಾಹಿಕ ಜೀವನಕ್ಕೆ ಕಾಲಿರಿಸಿದೆ. ಇಲ್ಲಿಂದ ನನ್ನ ವೃತ್ತಿ ಮತ್ತು ವೈಯಕ್ತಿಕ ಬದುಕಿನ ನಡುವಿನ ಸಮತೋಲನ ಸರ್ಕಸ್ ಆರಂಭವಾಯಿತು. ಮಗಳೂ ಜನಿಸಿದಳು. ಪತಿ ಮತ್ತು ಮಗಳೊಂದಿಗೆ ನನ್ನ ವಾಸ ನ್ಯೂಯಾರ್ಕ್​ನಲ್ಲಿ. ಕೆಲಸದ ಸ್ಥಳ ಇದ್ದುದು ಡೆಟ್ರಾಯ್್ಟಲ್ಲಿ. ಈ ನಗರಗಳ ನಡುವಿನ ಅಂತರ 632 ಕಿ.ಮೀ. ವಾರಾಂತ್ಯದಲ್ಲಿ ಮನೆಯವರೊಂದಿಗೆ ನ್ಯೂಯಾರ್ಕ್​ನಲ್ಲಿ ಮತ್ತು ವಾರ ಪೂರ್ತಿ ಡೆಟ್ರಾಯ್್ಟಲ್ಲಿ ಕೆಲಸ. ಈ ಪ್ರಯಾಣದ ನಡುವೆಯೇ ಇ-ಮೇಲ್ ಪರಿಶೀಲಿಸುವುದು ಮುಂತಾದ ಆಡಳಿತಾತ್ಮಕ ಕೆಲಸಗಳನ್ನು ಮಾಡಿ ಮುಗಿಸುತ್ತೇನೆ. ನಮ್ಮ ಸಮಯವೆಲ್ಲ ಬಹುತೇಕ ಮೀಟಿಂಗ್​ಗಳಲ್ಲೇ ಕಳೆದುಹೋಗುತ್ತದೆ. ಆದರೂ ತಂಡದ ಸದಸ್ಯರ ಜತೆ ಸಂವಹನ ನಡೆಸುತ್ತ ಅವರ ಭಿನ್ನ ಅಭಿಪ್ರಾಯಗಳನ್ನು ಆಲಿಸಿ, ಪರಿಶೀಲಿಸಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ಹಲವು ಹೊಣೆಗಾರಿಕೆಗಳಿಗೆ ನನ್ನನ್ನು ನಾನು ತೆರೆದುಕೊಳ್ಳುತ್ತ ಹೋದದ್ದರ ಫಲಿತಾಂಶವೇ ಈ ನನ್ನ ವೃತ್ತಿ ಬದುಕು’ ಎಂದು ದಿವ್ಯಾ ಹೇಳಿಕೊಂಡಿದ್ದಾರೆ.

ವೈಯಕ್ತಿಕ ಬದುಕಿನ ಬಗ್ಗೆ, ‘ಕೆಲಸದ ಮತ್ತು ವೈಯಕ್ತಿಕ ಬದುಕಿನ ಒತ್ತಡ ಸರಿದೂಗಿಸಲು ನಿತ್ಯವೂ ವ್ಯಾಯಾಮ ಮಾಡುತ್ತೇನೆ. ವಿಶೇಷವಾಗಿ ಬಾಕ್ಸಿಂಗ್ ಹವ್ಯಾಸ ಇಟ್ಟುಕೊಂಡಿದ್ದೇನೆ. ಇನ್ನುಳಿದಂತೆ ಬಿಡುವಿನ ವೇಳೆ ಸಿಕ್ಕರೆ ಮಗಳಿಗಾಗಿ ಸಮಯ ಮೀಸಲಿಡುತ್ತೇನೆ. ಆಕೆಯ ಶಾಲಾ ಶಿಕ್ಷಣ, ಚಟುವಟಿಕೆ ಕಡೆಗೆ ಗಮನಹರಿಸುತ್ತೇನೆ. ನನ್ನ ವೃತ್ತಿ ಬದುಕಿನ ಕುರಿತು ಮಗಳಿಗೆ ಬಹಳ ಆಸಕ್ತಿ ಇದೆ. ಆಕೆ ಗೂಗಲ್ ನೋಡುತ್ತ, ಅಮ್ಮಾ ನಿನ್ನ ಕುರಿತ ಹಲವು ವಿಷಯಗಳು ಇಂತಿಂಥ ಲಿಂಕ್​ಗಳಲ್ಲಿ ಇವೆ ನೋಡು ಎನ್ನುತ್ತಿರುತ್ತಾಳೆ. ಇದಕ್ಕಿಂತ ಖುಷಿ ಬೇರೊಂದಿಲ್ಲ’ ಎಂದು ಸಂಭ್ರಮಿಸಿದ್ದಾರೆ. ಅವರ ಪತಿ ಕುರಿತು ವಿವರ ಲಭ್ಯವಿಲ್ಲ.

ಏತನ್ಮಧ್ಯೆ, ದಿವ್ಯಾ ನೇಮಕದ ಸುದ್ದಿ ಅವರ ಶಾಲಾ ಸಹಪಾಠಿಗಳ ವಾಟ್ಸ್​ಆಪ್ ಗ್ರೂಪ್​ನಲ್ಲಿ ಸಂಚಲನ ಮೂಡಿಸಿದೆ. ಇಲ್ಲಿನ ಮಾಹಿತಿ ಪ್ರಕಾರ, ದಿವ್ಯಾ ಸೂರ್ಯದೇವರ ತಮಿಳುನಾಡಿನ ಚೆನ್ನೈನ ಮಂದವೇಲಿಯವರು. ಅಲ್ಲಿನ ಸೇಂಟ್ ಜಾನ್ಸ್ ಸೀನಿಯರ್ ಸೆಕೆಂಡರಿ ಸ್ಕೂಲ್​ನ 1996ರ ಬ್ಯಾಚಿನ ವಿದ್ಯಾರ್ಥಿ. ವಾಣಿಜ್ಯ ಪದವಿ ಶಿಕ್ಷಣಕ್ಕಾಗಿ ಅವರು ಯತಿರಾಜ್ ಮಹಿಳಾ ಕಾಲೇಜು ಸೇರಿದ್ದರು.

‘ನನಗೆ ಆಕೆ ಏಳನೇ ತರಗತಿಯಿಂದಲೇ ಗೊತ್ತು. ಕಾಮರ್ಸ್ ಗ್ರೂಪ್​ನಲ್ಲಿ ಪ್ಲಸ್ 2 ತನಕ ಒಟ್ಟಿಗೇ ಓದಿದ್ದೆವು. ಕೆಲವು ತಿಂಗಳ ಹಿಂದೆ ನಾನು ಅವರ ತಾಯಿಯನ್ನು ಚೆನ್ನೈನ ಸಿಗ್ನಲ್ ಬಳಿ ಭೇಟಿ ಮಾಡಿ, ಹಳೆಯದನ್ನೆಲ್ಲ ನೆನಪಿಸಿಕೊಂಡಿದ್ದೆವು’ ಎಂದು ಮುರಳೀಧರನ್ ಎಂಬುವರು ಹೇಳಿಕೊಂಡಿದ್ದಾರೆ. ದಿವ್ಯಾರ ನೆರೆಮನೆಯಲ್ಲಿದ್ದ ವಿಜಯಕುಮಾರ್, ‘ದಿವ್ಯಾರ ತಾಯಿ ಸಿಂಡಿಕೇಟ್ ಬ್ಯಾಂಕ್​ನ ಮೈಲಾಪುರ ಶಾಖೆಯಲ್ಲಿ ಕೆಲಸ ಮಾಡಿದ್ದರು. ದಿವ್ಯಾಗೆ ಬಡ್ತಿ ಸಿಕ್ಕಾಗ ನಮಗೆ ಕರೆ ಮಾಡಿ ಸಂತಸ ಹಂಚಿಕೊಂಡಿದ್ದರು. ಇದು ನಮಗೆಲ್ಲ ಹೆಮ್ಮೆಯ ವಿಚಾರ’ ಎಂದು ಹೇಳಿಕೊಂಡಿದ್ದಾರೆ.

ಜನರಲ್ ಮೋಟಾರ್ಸ್ ಕಂಪನಿಯ ಚೇರ್ಮನ್ ಮತ್ತು ಸಿಇಒ ಕೂಡ ಮಹಿಳೆಯೇ(ಮೇರಿ ತೆರೇಸಾ ಬರಾ›). ಇದು ಕೂಡಾ ದಾಖಲೆಯೇ. ಹೀಗೆ ಇಬ್ಬರು ಮಹಿಳೆಯರು ಆಯಕಟ್ಟಿನ ಹೊಣೆಗಾರಿಕೆ ಹೊತ್ತುಕೊಂಡು ಕಂಪನಿಯನ್ನು ಹೇಗೆ ಮುನ್ನಡೆಸಲಿದ್ದಾರೆ ಎಂಬುದು ಸದ್ಯದ ಕುತೂಹಲ.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿಸಂಪಾದಕರು)

[ಪ್ರತಿಕ್ರಿಯಿಸಿ: [email protected], [email protected]]

Leave a Reply

Your email address will not be published. Required fields are marked *

Back To Top