ಸವಾಲನ್ನು ಸೋಲಿಸುವರೇ?

| ಯಗಟಿ ರಘು ನಾಡಿಗ್

ಬೆಂಗಳೂರು: ದ್ವೀಪರಾಷ್ಟ್ರ ಮಾಲ್ದೀವ್ಸ್​ನಲ್ಲೀಗ ಬದಲಾವಣೆಯ ಪರ್ವ. ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಅಲ್ಲಿನ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವುದು ಇದಕ್ಕೆ ಕಾರಣ. ದೇಶವೊಂದರ ಆಯಕಟ್ಟಿನ ಹುದ್ದೆಗಳಲ್ಲಿ ಹೀಗೆ ಕಾಲಾನುಕಾಲಕ್ಕೆ ಬದಲಾವಣೆಯಾಗುವುದು ಸಹಜ ಬೆಳವಣಿಗೆಯಾದರೂ, ಮಾಲ್ದೀವಿಯನ್ನರ ಪಾಲಿಗೆ ಹೊಸ ಆಶಾಕಿರಣವಾಗಿ ಕಂಡಿರುವ ಸೊಲಿಹ್, ಭಾರತದ ‘ಆಪ್ತಮಿತ್ರ’ನೂ ಹೌದು ಎಂಬುದು ದಕ್ಷಿಣ ಏಷ್ಯಾದ ಭೂ-ರಾಜಕೀಯ ನೆಲೆಗಟ್ಟಿಗೆ ದಕ್ಕಿದ ಹೊಸ ಆಯಾಮವೆನ್ನಬೇಕು. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಹಿಂದಿನ ಅಧ್ಯಕ್ಷ ಯಮೀನ್ ಅಬ್ದುಲ್ಲಾ ಚೀನಾ ಪರವಾದ ಒಲವು-ನಿಲುವು ಹೊಂದಿದ್ದು ಮಾತ್ರವಲ್ಲದೆ, ಅಲ್ಲಿಂದ ಅಪಾರ ಮೊತ್ತದ ಸಾಲವನ್ನೂ ಪಡೆದಿದ್ದರು. ಒಂದೊಮ್ಮೆ ಯಮೀನ್ ಅವರೇ ಮುಂದುವರಿಯುವಂತಾಗಿದ್ದಲ್ಲಿ, ಮಾಲ್ದೀವ್ಸ್-ಚೀನಾ ನಡುವಿನ ಈ ‘ಗಳಸ್ಯ-ಕಂಠಸ್ಯ’ ನಂಟು ಮುಂದುವರಿಯುತ್ತಿದ್ದುದರ ಜತೆಗೆ, ಭಾರತದ ಪಾಲಿಗದು ಬಿಡಿಸಲಾಗದ ಕಗ್ಗಂಟು ಆಗುತ್ತಿತ್ತು ಎಂಬುದು ರಾಜಕೀಯ ಪರಿಣತರ ವಿಶ್ಲೇಷಣೆ. ಹೀಗೆ ಅಗಾಧ ಸಾಲ ನೀಡಿಯೋ, ಮೂಲಭೂತ ಸೌಕರ್ಯ ಕಲ್ಪಿಸಿಕೊಡುವ ಪ್ರಲೋಭನೆ ಒಡ್ಡಿಯೋ ಬೇರೊಂದು ದೇಶವನ್ನು ತನ್ನ ಕಪಿಮುಷ್ಟಿಯಲ್ಲಿ ಸಿಲುಕಿಸಿಕೊಂಡು, ತರುವಾಯದಲ್ಲಿ ಅಲ್ಲಿ ತನ್ನ ಸೇನಾನೆಲೆ ಸ್ಥಾಪಿಸುವುದು, ವ್ಯಾಪಾರನೆಲೆ ವಿಸ್ತರಿಸುವುದು ಹಾಗೂ ಸಾಲ ಮರುಪಾವತಿ ಮಾಡಲಾಗದ ಅಂಥ ದೇಶಗಳ ಅಸಹಾಯಕತೆಯನ್ನು ತನ್ನ ‘ಭೂ-ರಾಜಕೀಯ’ ಹಿತಾಸಕ್ತಿಗಳ ಈಡೇರಿಕೆಯ ಅಸ್ತ್ರವನ್ನಾಗಿಸಿಕೊಳ್ಳುವುದು ಚೀನಾದ ‘ಡ್ರಾ್ಯಗನ್ ತಂತ್ರ’ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ನಮ್ಮ ಮತ್ತೊಂದು ನೆರೆರಾಷ್ಟ್ರ ಶ್ರೀಲಂಕಾ ಈಗಾಗಲೇ ಇಂಥ ತಂತ್ರದ ಬಲಿಪಶುವಾಗಿರುವುದೀಗ ಜಗಜ್ಜಾಹೀರು. ಹೀಗೆ, ಸಣ್ಣರಾಷ್ಟ್ರವಾಗಿದ್ದರೂ ವ್ಯಾಪಾರದ ದೃಷ್ಟಿಯಿಂದ ಮಹತ್ವದ್ದಾಗಿರುವ ಮಾಲ್ದೀವ್ಸ್ ಅನ್ನು ತನ್ನ ಹತೋಟಿಗೆ ತೆಗೆದುಕೊಳ್ಳಲು ತೆರೆಮರೆಯ ಕಸರತ್ತು ನಡೆಸಿದ್ದ ಚೀನಾಕ್ಕೆ, ಈಗಿನ ಹೊಸ ಬೆಳವಣಿಗೆಯಿಂದ ಹಿನ್ನಡೆಯಾದಂತಾಗಿದೆ. ಇದು ಭಾರತಕ್ಕೆ ವರದಾನವಾಗಿ ಪರಿಣಮಿಸುವುದಂತೂ ಖರೆ. ಇದಕ್ಕೆ ಮುನ್ನುಡಿಯೋ ಎಂಬಂತೆ ತಾವು ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಮೊಹಮ್ಮದ್ ಸೊಲಿಹ್ ನೀಡಿದ ಆಹ್ವಾನಕ್ಕೆ ಓಗೊಟ್ಟು ಪಾಲ್ಗೊಂಡ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ, ‘ಮಾಲ್ದೀವ್ಸ್ ಸ್ಥಿರ, ಪ್ರಜಾಸತ್ತಾತ್ಮಕ, ಶಾಂತಿಯುತ ಗಣರಾಜ್ಯವಾಗಿ ಪ್ರಗತಿಪಥದತ್ತ ಸಾಗುವಂತಾಗಲು ಸೊಲಿಹ್ ಸಾರಥ್ಯದ ನೂತನ ಸರ್ಕಾರದೊಂದಿಗೆ ಭಾರತ ಕೈಜೋಡಿಸಲಿದ್ದು, ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ, ಸಂಪರ್ಕ-ಸಂವಹನ, ಮಾನವಸಂಪನ್ಮೂಲ ಅಭಿವೃದ್ಧಿ ವಲಯಗಳಲ್ಲಿ ಸಂಪೂರ್ಣ ಸಹಕಾರ ನೀಡಲಿದೆ’ ಎಂದಿರುವುದು ಇಲ್ಲಿ ಸ್ಮರಣಾರ್ಹ ಹಾಗೂ ಭಾರತ-ಮಾಲ್ದೀವ್ಸ್ ಬಾಂಧವ್ಯ ಎಷ್ಟು ಮಹತ್ತರವಾದದ್ದು ಎಂಬುದಕ್ಕೆ ದ್ಯೋತಕ.

ಹಾಗೆಂದ ಮಾತ್ರಕ್ಕೆ ಮೊಹಮ್ಮದ್ ಸೊಲಿಹ್ ಸಾಗಬೇಕಿರುವ ಹಾದಿ ಹೂವಿನಹಾಸೇನೂ ಅಲ್ಲ; ಹೆಜ್ಜೆಹೆಜ್ಜೆಗೂ ಸಂಕಷ್ಟ-ಸಮಸ್ಯೆಗಳೇ ತುಂಬಿರುವ ಮುಳ್ಳಿನಹಾದಿಯದು. ಪ್ರಸ್ತುತ ರಾಜಕೀಯ ಅಸ್ಥಿರತೆ, ಡೋಲಾಯಮಾನ ಪರಿಸ್ಥಿತಿ ಒಂದು ಹಂತಕ್ಕೆ ಕರಗಿದೆಯಾದರೂ, ದೇಶದ ಹೆಗಲೇರಿರುವ ಭಾರಿಮೊತ್ತದ ಸಾಲದ ಹೊರೆಯನ್ನು ಕರಗಿಸುವುದು ಮತ್ತು ಸುಸ್ಥಿರ ಆರ್ಥಿಕತೆಯನ್ನು ಸಾಕಾರಗೊಳಿಸುವುದು ಅವರೆದುರು ಇರುವ ದೊಡ್ಡ ಸವಾಲು. ಏಕೆಂದರೆ, ಯಮೀನ್ ಅಧ್ಯಕ್ಷರಾಗಿದ್ದಾಗ ರೂಪುಗೊಂಡಿದ್ದ ‘ಚೀನಿ-ಸಖ್ಯ’ದ ಅಧ್ಯಾಯ ಮಾಲ್ದೀವ್ಸ್ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ. ‘ಚೀನಾ-ಮಾಲ್ದೀವ್ಸ್ ಸ್ನೇಹಸೇತುವೆ’ ಹಣೆಪಟ್ಟಿಯ 2.1 ಕಿ.ಮೀ. ಉದ್ದದ ಸೇತುವೆ ನಿರ್ವಣಕ್ಕೆಂದು ಮಾಲ್ದೀವ್ಸ್​ಗೆ ನೀಡಿರುವ 100 ದಶಲಕ್ಷ ಡಾಲರ್ ಸಾಲ ಮಾತ್ರವಲ್ಲದೆ, ಮಾಲ್ದೀವ್ಸ್ ರಾಜಧಾನಿ ಮಾಲೆಯಲ್ಲಿ 25 ಅಂತಸ್ತಿನ ಆಸ್ಪತ್ರೆಯೊಂದರ ನಿರ್ವಣಕ್ಕೆ ಆಗುತ್ತಿರುವ 140 ದಶಲಕ್ಷ ಡಾಲರ್ ವೆಚ್ಚದ ಸಿಂಹಪಾಲನ್ನೂ ಚೀನಾ ಸಾಲವಾಗಿ ನೀಡಿದೆ. ಇದರ ಮರುಪಾವತಿಯ ಮಾತಿರಲಿ, ಅನ್ವಯವಾಗುವ ವಾರ್ಷಿಕ ಬಡ್ಡಿಯನ್ನೂ ಪಾವತಿಸಲಾಗದಷ್ಟರ ಮಟ್ಟಿಗೆ ಮಾಲ್ದೀವ್ಸ್ ವಿತ್ತಸ್ಥಿತಿ ಧರಾಶಾಯಿಯಾಗಿದೆ. ಇದು ಸೊಲಿಹ್​ರ ನಿದ್ರೆಗೆಡಿಸುವ ಬಾಬತ್ತು ಎಂದರೆ ಅತಿಶಯೋಕ್ತಿಯಲ್ಲ.

ಸೊಲಿಹ್ ಅಧ್ಯಕ್ಷಗಿರಿ ಅಪು್ಪವಂತಾದುದರ ಹಾದಿಯೂ ಸ್ವಾರಸ್ಯಕರವಾಗಿದೆ. ಅವರಿಗೂ ಮುನ್ನ ‘ಅಧ್ಯಕ್ಷಭಾಗ್ಯ’ ಕಂಡಿದ್ದ ನಿರಂಕುಶವಾದಿ ಯಮೀನ್ ಅಬ್ದುಲ್ಲಾ ಗಯೂಮ್ ತಮ್ಮ ಸರ್ವಾಧಿಕಾರಿ ವರ್ತನೆಗೆ ಅಪಸ್ವರ ಎತ್ತಿದವರನ್ನೆಲ್ಲ ದಮನಿಸಲೆಂದು ಆಡಳಿತ‘ಸೂತ್ರ’ವನ್ನೇ ‘ಚಾಟಿ’ಯಾಗಿಸಿಕೊಂಡು ತಮ್ಮ ರಾಜಕೀಯ ಎದುರಾಳಿಗಳಿಗೂ, ಸವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೂ ‘ಸೆರೆವಾಸ-ಭಾಗ್ಯ’ ಕರುಣಿಸಿದ್ದ ಕುಖ್ಯಾತ! ಭಯೋತ್ಪಾದನೆ, ದೇಶದ್ರೋಹ, ಸರ್ಕಾರ ಉರುಳಿಸುವ ಷಡ್ಯಂತ್ರದಂಥ ಯಮೀನ್ ಮಾಡಿದ ಸುಳ್ಳು ಆರೋಪಗಳಿಂದಾಗಿ ಮಹಮದ್ ನಶೀದ್, ಗಾಸಿಮ್ ಇಬ್ರಾಹಿಂರಂಥ ಎದುರಾಳಿ ನಾಯಕರು ತಲೆಮರೆಸಿಕೊಂಡು ದೇಶಬಿಟ್ಟು ಓಡಿಹೋಗಬೇಕಾಯಿತು. ವಿಪಕ್ಷ ನಾಯಕರುಗಳ ಮೇಲಿನ ಪ್ರತಿಬಂಧಗಳನ್ನು ತೆರವುಗೊಳಿಸಬೇಕೆಂದು ತೀರ್ಪಿತ್ತ ನ್ಯಾಯಾಧೀಶರುಗಳೂ ಯಮೀನ್ ಕೆಂಗಣ್ಣಿಗೆ ಗುರಿಯಾಗಿ ಸೆರೆವಾಸಕ್ಕೆ ತೆರಳಬೇಕಾಯಿತು. ಇಷ್ಟು ಸಾಲದೆಂಬಂತೆ ಯಮೀನ್ ಉದ್ಧಟತನ ಹಾಗೂ ನಿರಂಕುಶವಾದಿ ವರ್ತನೆಗಳು ಅತಿರೇಕದ ಮಟ್ಟ ಮುಟ್ಟಿದಾಗ ಸಾರ್ವಜನಿಕರೂ ಕೆರಳಿದರು, ಅದುವರೆಗೂ ಗುಪ್ತಗಾಮಿನಿಯಾಗಿದ್ದ ಆಡಳಿತ-ವಿರೋಧಿ ಅಲೆ ಭುಗಿಲೆದ್ದಿತು. ಈ ಹಂತದಲ್ಲಿ, ಮಹಮದ್ ನಶೀದ್, ಗಾಸಿಂ ಇಬ್ರಾಹಿಂ, ಮಾಮೂನ್ ಅಬ್ದುಲ್ ಗಯೂಮ್ (ಇವರು ಯಮೀನ್ ಅಧಿಕಾರ ಗದ್ದುಗೆ ಏರುವಂತಾಗುವುದಕ್ಕೆ ಒಂದು ಕಾಲದಲ್ಲಿ ತಂತ್ರಗಾರಿಕೆ ಮಾಡಿದ ಅವರ ಮಲಸೋದರನಾದರೂ, ಯಮೀನ್ ತೋರಿದ ಸ್ವಪ್ರತಿಷ್ಠೆ, ಸರ್ವಾಧಿಕಾರ ಮತ್ತು ಅಧಿಕಾರ ಲಾಲಸೆಯಿಂದಾಗಿ ಬೇಸತ್ತು ವಿಪಕ್ಷಗಳ ಜತೆ ಕೈಜೋಡಿಸಿದವರು!) ಮೊದಲಾದ ಯಮೀನ್​ರ ರಾಜಕೀಯ ವಿರೋಧಿಗಳು ಒಗ್ಗೂಡಿ ಸಂಯುಕ್ತ ರಂಗವೊಂದನ್ನು ಕಟ್ಟಿಕೊಂಡು, ನಶೀದ್​ರ ಬಲಗೈಬಂಟ ಹಾಗೂ ಮಾಲ್ದೀವಿಯನ್ ಡೆಮಾಕ್ರಟಿಕ್ ಪಾರ್ಟಿಯ ನೆಲೆಗಟ್ಟಿನಲ್ಲಿ ‘ಸಭ್ಯ’ ಎಂದು ಹೆಸರಾಗಿದ್ದ ಇಬ್ರಾಹಿಂ ಸೊಲಿಹ್​ರನ್ನು ಸರ್ವಸಮ್ಮತ ಅಭ್ಯರ್ಥಿಯಾಗಿಸಿಕೊಂಡರು. ಯಮೀನ್ ದುರ್ವರ್ತನೆಗೆ ಬೇಸತ್ತಿದ್ದ ಜನರ ಒತ್ತಾಸೆಯೂ ಈ ನಡೆಗೆ ದಕ್ಕಿ, ಕಳೆದ ಸೆಪ್ಟೆಂಬರ್ 23ರಂದು ನಡೆದ ಚುನಾವಣೆಯಲ್ಲಿ ಮಾಲ್ದೀವಿಯನ್ ಡೆಮಾಕ್ರಟಿಕ್ ಪಕ್ಷಕ್ಕೆ ‘ಅಂಗೀಕಾರದ ಮುದ್ರೆ’ ಒತ್ತಿಯೇಬಿಟ್ಟರು. ಪರಿಣಾಮ, ಅಂತಿಮನಗೆ ಬೀರಿದ್ದು ಇಬ್ರಾಹಿಂ ಮೊಹಮ್ಮದ್ ಸೊಲಿಹ್!

30ರ ಹರೆಯದಲ್ಲೇ ಸಂಸದರಾಗಿ ಚುನಾಯಿತರಾದ ಇಬ್ರಾಹಿಂ ಸೊಲಿಹ್ ಅವರದ್ದು ಮಾಲ್ದೀವಿಯನ್ ಡೆಮಾಕ್ರಟಿಕ್ ಪಾರ್ಟಿ ಕಟ್ಟುವಲ್ಲಿ ಅನನ್ಯ ಕೊಡುಗೆಯಿದೆ. ಅಷ್ಟೇ ಅಲ್ಲ, ದೇಶವು ತನ್ನ ಇತಿಹಾಸದಲ್ಲೇ ಮೊದಲಬಾರಿಗೆ ಆಧುನಿಕ ಸಂವಿಧಾನವನ್ನು ಮತ್ತು ಬಹುಪಕ್ಷೀಯ ಪ್ರಜಾಪ್ರಭುತ್ವವನ್ನು ಅಪ್ಪಿ ಒಪು್ಪವುದಕ್ಕೆ ಕಾರಣವಾದ 2003-2008ರ ಅವಧಿಯ ‘ಮಾಲ್ದೀವ್ಸ್ ರಾಜಕೀಯ ಸುಧಾರಣಾ ಆಂದೋಲನ’ದಲ್ಲಿ ಅವರು ವಹಿಸಿದ ಪಾತ್ರ ಸರಿಸಾಟಿಯಿಲ್ಲದ್ದು ಎನ್ನಬೇಕು.

ಮಾಲ್ದೀವ್ಸ್ ದ್ವೀಪಸಮೂಹದ ಹಿನ್ನಾವರು ದ್ವೀಪದಲ್ಲಿ 1964ರ ಮೇ 4ರಂದು ಜನಿಸಿದ ಇಬ್ರಾಹಿಂ ಸೊಲಿಹ್ ‘ಇಬು’ ಎಂದೇ ಖ್ಯಾತರು. ಶಿಕ್ಷಣಕ್ಕಾಗಿ ರಾಜಧಾನಿ ಮಾಲೆಗೆ ತೆರಳಿದವರು ಅಲ್ಲೇ ನೆಲೆಗೊಂಡರು. ಬಾಳಸಂಗಾತಿ ಫಜ್ನಾ ಅಹಮದ್, ಮಗ ಯಮನ್, ಮಗಳು ಸಾರಾರನ್ನೊಳಗೊಂಡ ಪುಟ್ಟಕುಟುಂಬದ ‘ಯಜಮಾನ’ರಾಗಿರುವ ಅವರು ಈಗ ದೇಶದ ‘ಯಜಮಾನ’ರೂ ಆಗಿರುವುದು ಕುಟುಂಬಿಕರಿಗೂ, ಅವರ ಸುಧಾರಣಾವಾದಿ ಚಿಂತನೆಯನ್ನು ಮೆಚ್ಚುವ ದೇಶವಾಸಿಗಳಿಗೂ ಸಂತಸ ತಂದಿದೆ ಎನ್ನಲಡ್ಡಿಯಿಲ್ಲ.

(ಲೇಖಕರು ವಿಜಯವಾಣಿ ಮುಖ್ಯ ಉಪಸಂಪಾದಕರು)