ಭಾರತಕ್ಕೆ ತಲೆನೋವು ನಿಕ್ಕಿ?

| ಯಗಟಿ ರಘು ನಾಡಿಗ್

ಬೆಂಗಳೂರು: ದ್ವೀಪರಾಷ್ಟ್ರ ಶ್ರೀಲಂಕಾ ಮತ್ತೊಮ್ಮೆ ಸುದ್ದಿಯ ಮುನ್ನೆಲೆಗೆ ಬಂದಿದೆ. ಅಲ್ಲಿ ಇತ್ತೀಚೆಗೆ ನಡೆದ ಕ್ಷಿಪ್ರ ರಾಜಕೀಯ ಕ್ರಾಂತಿ ಇದಕ್ಕೆ ಕಾರಣವಾದರೂ, ಆ ಕ್ರಾಂತಿಯ ಕೇಂದ್ರಬಿಂದುವಾಗಿದ್ದವರು ಮಹಿಂದಾ ರಾಜಪಕ್ಸ ಎಂಬುದು ಗಮನಾರ್ಹ. ಶ್ರೀಲಂಕಾ ಪ್ರಧಾನಿ ಹುದ್ದೆಯಲ್ಲಿದ್ದ ರಾನಿಲ್ ವಿಕ್ರಮಸಿಂಘಯವರನ್ನು ಹಠಾತ್ ಪದಚ್ಯುತಗೊಳಿಸಿದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ, ಆ ಹುದ್ದೆ ಅಲಂಕರಿಸುವಂತೆ ಮಹಿಂದಾ ರಾಜಪಕ್ಸ ಅವರಿಗೆ ಮಣೆಹಾಕಿದಾಗ ದೇಶ-ವಿದೇಶಗಳ ರಾಜತಂತ್ರಜ್ಞರು ನಿಬ್ಬೆರಗಾಗಿದ್ದು, ಅದರಲ್ಲೂ ವಿಶೇಷವಾಗಿ ಭಾರತ ಸಹಜ ಆತಂಕ ವ್ಯಕ್ತಪಡಿಸಿದ್ದು ಸುಳ್ಳಲ್ಲ. ‘ಮಹಿಂದಾ ರಾಜಪಕ್ಸ ಚೀನಾ ಪರ ಒಲವುಳ್ಳವರು’ ಎಂಬ ಗ್ರಹಿಕೆಯೇ ಭಾರತದ ಆತಂಕಕ್ಕೆ ಕಾರಣ ಎಂಬುದು ಬಹಿರಂಗ ಗುಟ್ಟು.

ರಾಜಪಕ್ಸ ಅಧಿಕಾರಗ್ರಹಣ ಅಸಾಂವಿಧಾನಿಕ, ಪ್ರಧಾನಿಯಾಗಿ ಅವರ ಆಯ್ಕೆ ಸಿಂಧುವಲ್ಲ; ತಾವು ಈಗಲೂ ಶ್ರೀಲಂಕಾ ಪ್ರಧಾನಿಯೇ ಎಂದು ಹೇಳುವ ಮೂಲಕ ಪದಚ್ಯುತ ರಾನಿಲ್ ವಿಕ್ರಮಸಿಂಘ ತೊಡೆತಟ್ಟಿದ್ದಾರೆ. ನ. 7ರಂದು ಸದನದಲ್ಲಿ ಉಭಯ ಬಣಗಳ ಬಲಾಬಲ ಪ್ರದರ್ಶನ ನಡೆಯಲಿದ್ದು, ಅಲ್ಲಿ ಯಾರು ಅಂತಿಮನಗೆ ಬೀರಲಿದ್ದಾರೆ ಎಂಬುದರ ಮೇಲೆ ಈ ವಿವಾದ ನಿರ್ಣಾಯಕ ಘಟ್ಟವನ್ನು ಮುಟ್ಟಲಿದೆ.

ಅದೇನೇ ಇರಲಿ, ಶ್ರೀಲಂಕಾ ರಾಜಕಾರಣದಲ್ಲಿ ಗಮನಾರ್ಹ ಛಾಪು ಮೂಡಿಸಿರುವ ಹೆಗ್ಗಳಿಕೆ ರಾಜಪಕ್ಸ ಅವರದ್ದು. ಅವರನ್ನು ರಾಜಕೀಯ ಅಖಾಡ ಮೊದಲಿಗೆ ಕೈಬೀಸಿ ಕರೆದದ್ದು 1970ರಲ್ಲಿ. ಶ್ರೀಲಂಕಾ ರಾಜಕೀಯ ರಂಗದಲ್ಲಿ ಮಹತ್ವದ ಹೆಸರಾಗಿದ್ದ ಡಿ.ಎ. ರಾಜಪಕ್ಸ ಇವರ ತಂದೆ. ಇವರು 1967ರಲ್ಲಿ ಅಸುನೀಗಿದಾಗ, ಸಂಸತ್ ಚುನಾವಣೆಗೆ ಶ್ರೀಲಂಕಾ ಫ್ರೀಡಂ ಪಾರ್ಟಿ ವತಿಯಿಂದ ಬೆಲಿಯಟ್ಟ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ‘ರಾಜಕೀಯ ಅರಂಗೇಟ್ರಂ’ ಮಾಡಿದಾಗ ಮಹಿಂದಾ ರಾಜಪಕ್ಸ ಇನ್ನೂ 24ರ ತರುಣ, ಅತಿಕಿರಿಯ ಸಂಸದ ಎಂಬ ಹೆಗ್ಗಳಿಕೆ. ತರುವಾಯ, 1977ರ ಚುನಾವಣೆಯಲ್ಲಿ ಇವರ ಪಕ್ಷ ಮುಗ್ಗರಿಸಿ ನೆಲಕಚ್ಚಿದರೂ, ಧೂಳಿನಿಂದೆದ್ದ ಫೀನಿಕ್ಸ್​ನಂತೆ 1989ರಲ್ಲಿ ಸಂಸತ್ತಿಗೆ ಮರುಚುನಾಯಿತರಾದದ್ದು ಪಟ್ಟುಬಿಡದೆ ಸಾಧಿಸುವ ಅವರ ಛಾತಿಗೆ ದ್ಯೋತಕ. ನಂತರ ಅವರ ರಾಜಕೀಯ ಗ್ರಾಫ್ ಏರುತ್ತಲೇ ಹೋಯಿತು. 1994ರಲ್ಲಿ ಚಂದ್ರಿಕಾ ಕುಮಾರತುಂಗ ನೇತೃತ್ವದ ರಾಜಕೀಯ ಮೈತ್ರಿಕೂಟ ಚುನಾವಣೆಯಲ್ಲಿ ಜಯಭೇರಿ ಬಾರಿಸಿದಾಗ, ಅದರ ಪಾಲುದಾರರಲ್ಲೊಬ್ಬರಾಗಿದ್ದ ರಾಜಪಕ್ಸ ಅವರಿಗೆ ಕಾರ್ವಿುಕ ಸಚಿವಖಾತೆ ಅರಸಿಕೊಂಡು ಬಂತು. 1997ರ ಸಂಪುಟ ಪುನಾರಚನೆಯ ವೇಳೆ ಮೀನುಗಾರಿಕೆ ಮತ್ತು ಜಲಸಂಪನ್ಮೂಲದಂಥ ಹೊಸಖಾತೆ ಹೆಗಲೇರಿತು. ರಾಜಪಕ್ಸ ಪ್ರತಿನಿಧಿಸುತ್ತಿದ್ದ ರಾಜಕೀಯ ಮೈತ್ರಿಕೂಟಕ್ಕೆ 2001ರ ಚುನಾವಣೆಯಲ್ಲಿ ಯುನೈಟೆಡ್ ನ್ಯಾಷನಲ್ ಪಾರ್ಟಿ ಮಣ್ಣುಮುಕ್ಕಿಸಿದರೂ, ವಿಪಕ್ಷ ನಾಯಕನಾಗುವ ಭಾಗ್ಯ ಒದಗಿ, ರಾಜಕೀಯ ಪಯಣ ಅಬಾಧಿತವಾಯಿತು. 2004ರ ಸಂಸತ್ ಚುನಾವಣೆಯಲ್ಲಿ ಯುಪಿಎಫ್ ರಾಜಕೀಯ ಮೈತ್ರಿಕೂಟಕ್ಕೆ ಸರಳ ಬಹುಮತ ದಕ್ಕಿ, ಶ್ರೀಲಂಕಾದ 13ನೇ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು ರಾಜಪಕ್ಸ. ಇದು ಅವರ ರಾಜಕೀಯ ಬದುಕಿಗೆ ದಕ್ಕಿದ ಗಮನಾರ್ಹ ಚಿಮ್ಮುಹಲಗೆ.

ಕಾಲಘಟ್ಟಕ್ಕೆ ತಕ್ಕಂತೆ ರಾಜಕೀಯ ಲೆಕ್ಕಾಚಾರಗಳೂ ಬದಲಾಗುತ್ತ ಹೋದಾಗ, ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಯುನೈಟೆಡ್ ನ್ಯಾಷನಲ್ ಪಾರ್ಟಿಯ ನಾಯಕರೂ, ವಿಪಕ್ಷ ನಾಯಕರೂ ಆಗಿದ್ದ ರಾನಿಲ್ ವಿಕ್ರಮಸಿಂಘ ಎದುರು ಸ್ಪರ್ಧಿಸಲೆಂದು ಮಹಿಂದಾರನ್ನು ಪಕ್ಷ ಅಭ್ಯರ್ಥಿಯನ್ನಾಗಿ ಆರಿಸಿತು. 2005ರ ನವೆಂಬರ್ 17ರಂದು ನಡೆದ ಈ ಹಣಾಹಣಿಯಲ್ಲಿ ಶೇ. 50.3ರಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಮೂಲಕ ವಿಜಯದ ನಗೆಬೀರಿದರು ರಾಜಪಕ್ಸ. ವಾಸ್ತವವಾಗಿ, ಈ ಚುನಾವಣೆ ವೇಳೆ ವಿಕ್ರಮಸಿಂಘ ಪ್ರಚಾರ ಭರ್ಜರಿಯಾಗೇ ಇದ್ದು ವಿಜಯ ಬಹುತೇಕ ನಿಕ್ಕಿಯಾಗಿದ್ದರೂ, ಶ್ರೀಲಂಕಾದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಚುನಾವಣೆ ಬಹಿಷ್ಕರಿಸುವಂತೆ ತಮ್ಮ ಹಿಡಿತದಲ್ಲಿದ್ದ ಆ ಪ್ರದೇಶಗಳ ಮತದಾರರಿಗೆ ಎಲ್​ಟಿಟಿಇ ಕರೆನೀಡಿದ್ದರಿಂದ ತಮಗೆ ಸೋಲಾಯಿತು ಎಂದು ವಿಕ್ರಮಸಿಂಘಯವರ ಪಕ್ಷ ಸಮರ್ಥಿಸಿಕೊಂಡಿತು; ಮತದಾನದಿಂದ ದೂರವುಳಿಯುವಂತೆ ಈ ಪ್ರದೇಶದ ಮತದಾರರನ್ನು ನಿರ್ಬಂಧಿಸಲಾಗಿತ್ತು ಮತ್ತು ಒಂದು ವೇಳೆ ಅವರು ಮತ ಚಲಾಯಿಸಿದ್ದಿದ್ದರೆ, ವಿಕ್ರಮಸಿಂಘ ಅನಾಯಾಸವಾಗಿ ಗೆಲ್ಲುತ್ತಿದ್ದರು ಎಂಬುದೊಂದು ಅಭಿಪ್ರಾಯವಿದೆ.

ಅಧ್ಯಕ್ಷರಾಗುತ್ತಿದ್ದಂತೆ ರಕ್ಷಣೆ ಮತ್ತು ಹಣಕಾಸು ಖಾತೆಯನ್ನು ತಮ್ಮ ತೆಕ್ಕೆಯಲ್ಲೇ ಇಟ್ಟುಕೊಂಡ ರಾಜಪಕ್ಸ, ಶ್ರೀಲಂಕಾ ಸೇನೆಯ ಕಮಾಂಡರ್ ಆಗಿದ್ದ ಮತ್ತು ನಿವೃತ್ತಿಗೆ 30 ದಿನಕ್ಕಿಂತಲೂ ಕಡಿಮೆಯಿದ್ದ ಸರತ್ ಫೊನ್ಸೆಕಾ ಅವರ ಅಧಿಕಾರಾವಧಿಯನ್ನು ವಿಸ್ತರಿಸಿದರು. ಇಂಥ ಅಚ್ಚರಿಯ ನಡೆಗೆ ರಾಜಪಕ್ಸ ಮುಂದಾಗಿದ್ದೇಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ತರುವಾಯದಲ್ಲಿ- ಫೋನ್ಸೆಕಾ ಜತೆಯಲ್ಲಿ ರಾಜಪಕ್ಸ ಸೋದರ ಮತ್ತು ರಕ್ಷಣಾ ಕಾರ್ಯದರ್ಶಿ ಗೊತಾಭಯ ರಾಜಪಕ್ಸ ಸೇರಿಕೊಂಡು ಬರೋಬ್ಬರಿ ಮೂರೂವರೆ ವರ್ಷಗಳವರೆಗೆ ದೇಶದ ಸಶಸ್ತ್ರ ಪಡೆಗಳನ್ನು ಅದ್ಯಾವ ಮಟ್ಟಿಗೆ ಎಲ್​ಟಿಟಿಇ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಇಳಿಸಿದರೆಂದರೆ, ತಮಿಳು ಟೈಗರ್​ಗಳು ಸೋಲುಣ್ಣದೇ ಬೇರೆ ಮಾರ್ಗವೇ ಉಳಿಯಲಿಲ್ಲ ಮತ್ತು ಅವರ ನಾಯಕ ವೇಲುಪಿಳ್ಳೆ ೖ ಪ್ರಭಾಕರನ್ ಈ ಹಣಾಹಣಿಯಲ್ಲಿ ಅಸುನೀಗಿದ.

ತಾವೊಬ್ಬ ‘ಶಾಂತಿದೂತ’ನೆಂದೂ, ರಾಜಿ-ಕಬೂಲಿಗೆ ತವಕಿಸುವ ವ್ಯಕ್ತಿಯೆಂದೂ ರಾಜಪಕ್ಸ ಸಮರ್ಥಿಸಿಕೊಳ್ಳುತ್ತಿದ್ದರೂ, ಎಲ್​ಟಿಟಿಇ ವಿರುದ್ಧ ಅವರು ಮುರಕೊಂಡು ಬಿದ್ದ ಪರಿ ಇಂಥ ಎಲ್ಲ ಸಮರ್ಥನೆಗಳನ್ನೂ ಸುಳ್ಳಾಗಿಸಿತು. ಎಲ್​ಟಿಟಿಇ ಠಾಣ್ಯವನ್ನು ಹಣಿಯಲು ಸೇನೆಗೆ ಇನ್ನಿಲ್ಲದ ಅಧಿಕಾರ ನೀಡಿದ್ದು ಇದೇ ರಾಜಪಕ್ಸ; ತಮಿಳು ಜನರಿಗೆ ಯಾವುದೇ ತೆರನಾದ ಅಧಿಕಾರ ಹಂಚಿಕೆ ಅಥವಾ ವಿಕೇಂದ್ರೀಕರಣವಾಗದಂತೆ ನೋಡಿಕೊಂಡಿದ್ದು, ಎಲ್​ಟಿಟಿಇ ಆಕ್ರಮಿತ ಪ್ರದೇಶಗಳು ಸುನಾಮಿ ದಾಳಿಗೆ ಸಿಲುಕಿ ಬಸವಳಿದಾಗಲೂ ಯಾವುದೇ ಪರಿಹಾರಾರ್ಥ ನೆರವುಗಳು ಅವರನ್ನು ತಲುಪದಂತೆ ತಡೆಹಿಡಿದಿದ್ದು ಈ ಮಾತಿಗೆ ಪುಷ್ಟಿನೀಡುತ್ತವೆ. ಹೀಗೆ ಎಲ್​ಟಿಟಿಯ ನಿಮೂಲನೆಯ ನೆಪದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೂ ಮುಂದಾಗಿದ್ದು ಅವರ ‘ರಾಜಕೀಯ ವಸ್ತ್ರ’ದ ಮೇಲಿನ ಕಪು್ಪಚುಕ್ಕೆ.

ಭಾರತಕ್ಕೆ ರಾಜಪಕ್ಸ ‘ಅಪಥ್ಯ’ರಾಗಲು ಧಿ್ವಪರಾಷ್ಟ್ರದಲ್ಲಿನ ತಮಿಳರನ್ನು ದಮನಿಸಬೇಕೆಂಬ ಅವರ ಈ ಚಿತ್ತಸ್ಥಿತಿಯಷ್ಟೇ ಕಾರಣವಲ್ಲ; ಚೀನಾವನ್ನು ಅಪು್ಪವ ಅವರ ರಾಜನೀತಿಯೂ ಮತ್ತೊಂದು ಪ್ರಮುಖ ಕಾರಣ. ಶ್ರೀಲಂಕಾದ ಮೂಲಸೌಕರ್ಯ ಯೋಜನೆಗಳಿಗೆಂದು ವೈಯಕ್ತಿಕ ಚರಿಷ್ಮಾದ ಬಲವಿಟ್ಟುಕೊಂಡು ಹಿಂದಿನ ಅಧಿಕಾರಾವಧಿಯಲ್ಲಿ ಚೀನಾದಿಂದ ಅಗಾಧ ಮೊತ್ತದ ಸಾಲ ಎತ್ತಿರುವ ರಾಜಪಕ್ಸ, ಈ ಋಣಸಂದಾಯಕ್ಕೆಂದು ‘ಭಾರತ-ವಿರೋಧಿ’ ನಿಲುವು ಮುಂದುವರಿಸುವುದು ಕಟ್ಟಿಟ್ಟಬುತ್ತಿ ಎಂಬುದು ರಾಜಕೀಯ ವಿಶ್ಲೇಷಕರ ಅಭಿಮತ; ಶ್ರೀಲಂಕಾದ ಪ್ರಮುಖ ಬಂದರಿನಲ್ಲಿ ಚೀನಿ ನೌಕಾನೆಲೆ ನಿರ್ವಣಕ್ಕೆ ಅವರು ಅನುವುಮಾಡಿಕೊಟ್ಟಿರುವುದರ ಹಿಂದೆ ಇಂಥದೊಂದು ವಾಸನೆ ದಟ್ಟವಾಗಿದೆ. ಒಟ್ಟಿನಲ್ಲಿ, ಯಾವುದೇ ಆಯಾಮದಿಂದ ಲೆಕ್ಕಿಸಿದರೂ ಮಹಿಂದಾ ರಾಜಪಕ್ಸ ಭಾರತದ ಪಾಲಿಗೆ ತಲೆನೋವಿನ ಬಾಬತ್ತೇ!

ಕೌಟುಂಬಿಕ ನೆಲೆಗಟ್ಟನ್ನು ಗಮನಿಸುವುದಾದರೆ, ಶಿರಾಂತಿ ವಿಕ್ರಮಸಿಂಘ ಎಂಬಾಕೆಯ (ಇವರು ಶಿಶು-ಮನಶ್ಶಾಸ್ತ್ರಜ್ಞೆ ಹಾಗೂ ಶಿಕ್ಷಣತಜ್ಞೆ) ಜತೆ 1983ರಲ್ಲಿ ಮದುವೆಯಾದರು ರಾಜಪಕ್ಸ. ಈ ದಂಪತಿಗೆ ನಮಲ್, ಯೊಶಿತಾ ಮತ್ತು ರೋಹಿತಾ ಎಂಬ ಮೂವರು ಪುತ್ರರಿದ್ದಾರೆ. ಈ ಪೈಕಿ ನಮಲ್ 2010 ಮತ್ತು 2015ರಲ್ಲಿ ಹಂಬನ್​ಟೋಟಾ ಕ್ಷೇತ್ರದ ಸಂಸದರಾಗಿ ಚುನಾಯಿತರಾಗಿದ್ದರೆ, ಶ್ರೀಲಂಕಾ ನೌಕಾಪಡೆಯಲ್ಲಿ ಸಬ್-ಲೆಫ್ಟಿನೆಂಟ್ ಆಗಿದ್ದಾರೆ ಯೊಶಿತಾ.

(ಲೇಖಕರು ವಿಜಯವಾಣಿ ಮುಖ್ಯ ಉಪಸಂಪಾದಕರು)