ಚೀನಾ ದಾಳದಲ್ಲಿ ಮೈತ್ರಿಪಾಲ?

| ರವೀಂದ್ರ ಎಸ್.ದೇಶಮುಖ್

ಬೆಂಗಳೂರು: ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘ ಮೂರು ದಿನಗಳ ಭಾರತ ಪ್ರವಾಸ ಯಶಸ್ವಿಯಾಗಿದೆ. ಶನಿವಾರ ಅವರು ಪ್ರಧಾನಿ ನರೇಂದ್ರ ಮೋದಿ ಜತೆ ನಡೆಸಿದ ಮಹತ್ವದ ಮಾತುಕತೆ ಎರಡೂ ರಾಷ್ಟ್ರಗಳ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಿದೆಯೇನೋ ನಿಜ. ಆದರೆ, ವಿಕ್ರಮಸಿಂಘ ಭಾರತ ಭೇಟಿಯ ಮೊದಲು ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ‘ಉದ್ವಿಗ್ನ’ಗೊಳಿಸುವ, ಬಾಂಧವ್ಯದಲ್ಲಿ ಹುಳಿ ಹಿಂಡುವ ದೊಡ್ಡ ಷಡ್ಯಂತ್ರ ನಡೆಯಿತೇ? ಇಂಥದ್ದೊಂದು ಅನುಮಾನ ಸುಖಾಸುಮ್ಮನೆ ಹುಟ್ಟಿಕೊಂಡಿದ್ದೇನಲ್ಲ. ‘ನನ್ನ ಹತ್ಯೆಗೆ ಭಾರತದ ಗುಪ್ತಚರ ಸಂಸ್ಥೆ ರಾ ಪ್ರಯತ್ನಿಸುತ್ತಿದೆ’ ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಪ್ರಮುಖ ಸಚಿವರ ಸಭೆಯಲ್ಲೇ ಆರೋಪಿಸಿದ್ದಾರೆ ಎಂಬ ಸುದ್ದಿಯನ್ನು ಶ್ರೀಲಂಕಾ ಮಾಧ್ಯಮಗಳೇ ವರದಿ ಮಾಡಿದ್ದರಿಂದ ಬಿರುಗಾಳಿಯೇ ಸೃಷ್ಟಿಯಾಯಿತು. ಮೈತ್ರಿಪಾಲ ಹೀಗೇಕೆ ಆರೋಪಿಸಿದರು? ಭಾರತದ ಜತೆಗೆ ಅವರು ಮುನಿಸು ಕಟ್ಟಿಕೊಳ್ಳಲು ಚೀನಾದ ಚಿತಾವಣೆಯಿದೆಯೇ? ಅಥವಾ ಇಂಥದ್ದೊಂದು ಆರೋಪ ಸೃಷ್ಟಿಯಾಗುವ ಹಿಂದೆ ಡ್ರಾ್ಯಗನ್ ರಾಷ್ಟ್ರದ ಕಾಣದ ಕೈಗಳು ಯತ್ನಿಸಿವೆಯೇ? ಎಂಬೆಲ್ಲ ಪ್ರಶ್ನೆಗಳು ಉದ್ಭವವಾದ ಸಂದರ್ಭದಲ್ಲೇ ಖುದ್ದು ಮೈತ್ರಿಪಾಲ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇದೇ ಬುಧವಾರ ಫೋನ್ ಮೂಲಕ ಮಾತುಕತೆ ನಡೆಸಿ ಆರೋಪಗಳನ್ನು ಅಲ್ಲಗಳೆದರು, ಅಲ್ಲದೆ, ಶ್ರೀಲಂಕಾ ಭಾರತದ ವಿಶ್ವಾಸಾರ್ಹ ಮಿತ್ರವಾಗಿ ಮುಂದುವರಿಯಲಿದೆ ಎಂದೂ ಸ್ಪಷ್ಟಪಡಿಸಿದರು. ಇದೆಲ್ಲವೂ ಒಂದು ದಿಢೀರ್ ಬೆಳವಣಿಗೆ, ಆಕಸ್ಮಿಕ ಪ್ರಕ್ರಿಯೆಯಂತೆ ಮೇಲ್ನೋಟಕ್ಕೆ ತೋರಿದರೂ, ಹಿನ್ನೆಲೆಯಲ್ಲಿ ಸಾಕಷ್ಟು ಕಥೆಗಳಿವೆ.

2015ರಲ್ಲಿ ಶ್ರೀಲಂಕಾದಲ್ಲಿ ಅವಧಿಪೂರ್ವ ಚುನಾವಣೆ ನಡೆದು ಮಹಿಂದಾ ರಾಜಪಕ್ಸ ಮೂರನೇ ಅವಧಿಗೆ ಅಧ್ಯಕ್ಷರಾಗುವ ಕನಸು ಕಾಣುತ್ತಿದ್ದಾಗಲೇ ಅವರ ಸಂಪುಟದಲ್ಲೇ ಆರೋಗ್ಯ ಸಚಿವರಾಗಿದ್ದ ಮೈತ್ರಿಪಾಲ ಸಿರಿಸೇನಾ ಬಂಡಾಯವೆದ್ದು, ರಾಜಪಕ್ಸ ವಿರುದ್ಧ ಪ್ರಬಲ ಅಭ್ಯರ್ಥಿಯಾಗಿ ಹೊಮ್ಮಿ ಗೆಲುವು ಸಾಧಿಸಿದ್ದು ರೋಚಕ ಮತ್ತು ಮಹತ್ವದ ರಾಜಕೀಯ ತಿರುವು. ತಮ್ಮ ಅಧಿಕಾರಾವಧಿಯಲ್ಲಿ ಚೀನಾದೊಂದಿಗೆ ಭಾರಿ ಸಖ್ಯ ಬೆಳೆಸಿದ್ದ ಮಹಿಂದಾ ರಾಜಪಕ್ಸ ಆ ದೇಶದಿಂದ ಭಾರಿ ಸಾಲವನ್ನು ತಂದು, ಮೂಲಸೌಕರ್ಯ ಅಭಿವೃದ್ಧಿಯ ಹಲವು ಯೋಜನೆಗಳಲ್ಲಿ ಹೂಡಿದ್ದರು. 2004-14ರ ಒಂದು ದಶಕದ ಅವಧಿಯಲ್ಲಿ ಭಾರತ ರಾಜತಾಂತ್ರಿಕವಾಗಿ ಶ್ರೀಲಂಕಾವನ್ನು ಕಡೆಗಣಿಸಿದ್ದರ ಫಲವಾಗಿ, ಅದು ಪೂರ್ತಿಯಾಗಿ ಚೀನಾದ ಸ್ನೇಹತಂತ್ರಕ್ಕೆ ವಾಲಿತು. ಇದು ಭಾರತದ ಹಿತಾಸಕ್ತಿಗಳಿಗೆ ಗಂಭೀರ ಬೆದರಿಕೆಯಾಗಿದೆ ಎಂಬುದನ್ನು 2014ರಲ್ಲಿ ಅಸ್ತಿತ್ವಕ್ಕೆ ಬಂದ ಎನ್​ಡಿಎ ಸರ್ಕಾರ ಮನಗಂಡಿತು. ದ್ವೀಪರಾಷ್ಟ್ರದಲ್ಲಿ 2015ರಲ್ಲಿ ಅವಧಿಪೂರ್ವ ಚುನಾವಣೆ ನಡೆದಾಗ ‘ಭಾರತಸ್ನೇಹಿ ಸರ್ಕಾರ’ ಸ್ಥಾಪನೆಯಾಗಲಿ ಎಂಬ ಆಶಯ ಹೊಂದಿದ್ದಷ್ಟೆ ಅಲ್ಲದೆ ಮೈತ್ರಿಪಾಲ ಗೆಲುವಿಗೂ ಸಹಕರಿಸಿತು.

ಭಾರತದ ನೆರೆರಾಷ್ಟ್ರಗಳಾದ ನೇಪಾಳ, ಬಾಂಗ್ಲಾದೇಶ, ಮ್ಯಾನ್ಮಾರ್, ಭೂತಾನ್​ನಲ್ಲಿ ಚೀನಾ ತನ್ನ ಪ್ರಾಬಲ್ಯ ಸಾಧಿಸಲು ಹಣದ ಹೊಳೆಯನ್ನೇ ಹರಿಸಿತು. ಶ್ರೀಲಂಕಾದಲ್ಲೂ ಇದೇ ತಂತ್ರ ಅನುಸರಿಸಿ, ಹೆದ್ದಾರಿಗಳನ್ನೂ ನಿರ್ವಿುಸಿಕೊಟ್ಟಿತು! ಭಾರತದ ಮಿತ್ರರಾಷ್ಟ್ರಗಳಲ್ಲಿ ಭಾರತವಿರೋಧಿ ಭಾವನೆ ಹುಟ್ಟುಹಾಕಬೇಕೆಂಬ ಚೀನಾದ ಷಡ್ಯಂತ್ರ ಇಂದು ನಿನ್ನೆಯದೇನಲ್ಲ. ಆದರೆ, ಸಜ್ಜನ ರಾಜಕಾರಣಿ ಎಂದೇ ಹೆಸರಾಗಿರುವ ಮತ್ತು ಶ್ರೀಲಂಕಾ ಅಭಿವೃದ್ಧಿಯಲ್ಲಿ ಭಾರತದ ಪಾತ್ರದ ಮಹತ್ವವನ್ನು ಅರಿತಿರುವ ಮೈತ್ರಿಪಾಲ ಸಿರಿಸೇನಾ ನಿಲುವು ಬದಲಾಗುತ್ತಿದೆಯೇ? ಅವರು ಚೀನಾದ ಒತ್ತಡತಂತ್ರಕ್ಕೆ ಮಣಿಯುತ್ತಿದ್ದಾರಾ? ಎಂಬ ಸಂಗತಿಗಳು ಸಾಕಷ್ಟು ಜಿಜ್ಞಾಸೆ ಮೂಡಿಸಿರುವುದಂತೂ ಹೌದು.

ಮೈತ್ರಿಪಾಲ ಕಳೆದ ಮೂರು ವರ್ಷಗಳಲ್ಲಿ ಶ್ರೀಲಂಕಾ ಆಡಳಿತದಲ್ಲಿ ಮಹತ್ವದ ಸುಧಾರಣೆಗಳನ್ನು ತಂದಿದ್ದಾರೆ. ಮುಖ್ಯವಾಗಿ, ಭಾರತದ ಸ್ನೇಹ, ರಾಜತಾಂತ್ರಿಕ ಸಂಬಂಧವನ್ನು ಅವರು ಬಯಸುತ್ತಿದ್ದಾರೆ ಎಂಬ ಬಗ್ಗೆ ಅನುಮಾನವಿಲ್ಲ. ಅವರ ಒತ್ತಾಸೆಯ ಮೇರೆಗೆ ಪ್ರಧಾನಿ ರಾನಿಲ್ ವಿಕ್ರಮಸಿಂಘ ಭಾರತ ಪ್ರವಾಸ ಕೈಗೊಂಡರು ಎಂಬುದು ಗಮನಾರ್ಹ. ಆದರೆ, ಹಿಂದಿನ ಅಧ್ಯಕ್ಷ ಮಹಿಂದಾ ರಾಜಪಕ್ಸ ಚೀನಾದಿಂದ ಪಡೆದ ಸಾಲ ಬೆಟ್ಟದಷ್ಟು ಬೆಳೆದಿದೆ. ಅಷ್ಟೇ ಅಲ್ಲ, ಚೀನಾ ‘ಹಿಡನ್ ಅಜೆಂಡಾ’ಗಳನ್ನು ಇಟ್ಟುಕೊಂಡೇ ಈ ಬಗೆಯ ಸಾಲ ನೀಡಿತ್ತು. ಹಾಗಾಗಿ, ಕೆಲ ನಿಬಂಧನೆ, ಷರತ್ತುಗಳಿಗೆ ಒಪ್ಪಲೇಬೇಕಾದ ಅನಿವಾರ್ಯತೆ ಶ್ರೀಲಂಕಾದ್ದು. ಮೈತ್ರಿಪಾಲರನ್ನು ಸದ್ಯ ಕಾಡುತ್ತಿರುವ ಸಂಕಷ್ಟವಿದು. ಅದರಲ್ಲೂ, ಕಳೆದ ಮೂರು ವರ್ಷಗಳಲ್ಲಿ ಭಾರತ-ಶ್ರೀಲಂಕಾ ಸಂಬಂಧಗಳು ಬಲಗೊಳ್ಳುತ್ತಿರುವುದು, ವಿವಿಧ ರಂಗಗಳಲ್ಲಿ ಸಹಕಾರ ಏರ್ಪಟ್ಟಿರುವುದನ್ನು ಚೀನಾಕ್ಕೆ ಸಹಿಸಲಾಗುತ್ತಿಲ್ಲ. ಹಾಗಾಗಿ ಅದು ಭಾರತದ ಬಗ್ಗೆ ಅಪನಂಬಿಕೆಗಳನ್ನು ಹುಟ್ಟುಹಾಕಲು ಇನ್ನಿಲ್ಲದಂತೆ ಯತ್ನಿಸುತ್ತಿದೆ.

ಸಿರಿಸೇನಾ ಈ ಷಡ್ಯಂತ್ರಗಳನ್ನು ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾದರೆ ರಾಜತಾಂತ್ರಿಕ ಸಂಬಂಧ, ಸಹಕಾರಕ್ಕೆ ಯಾವುದೇ ಅಡ್ಡಿ ಇಲ್ಲ. ಅಲ್ಲದೆ, ಭಾರತ ಕೂಡ ಶ್ರೀಲಂಕಾದ ವಿಮಾನ ನಿಲ್ದಾಣ, ಹೆದ್ದಾರಿ ನಿರ್ಮಾಣ ಯೋಜನೆಗಳಿಗೆ ದೊಡ್ಡಮೊತ್ತದ ಹಣ ನೀಡಿದೆ. ಪ್ರಧಾನಿ ವಿಕ್ರಮಸಿಂಘ ಭಾರತ ಭೇಟಿಯ ವೇಳೆಯೂ ಹಲವು ಒಪ್ಪಂದಗಳು ಏರ್ಪಟ್ಟಿವೆ. ಮುಖ್ಯವಾಗಿ, ಸಿರಿಸೇನಾ ಭಾರತದೊಂದಿಗಿನ ಸ್ನೇಹವರ್ಧನೆಗೆ ಕಟಿಬದ್ಧರಾಗಿದ್ದು, ಭಾರತದಲ್ಲಿನ ಆಡಳಿತ ಸುಧಾರಣೆ, ಅಭಿವೃದ್ಧಿ ಕಾರ್ಯಗಳನ್ನು ಮಾದರಿಯಾಗಿ ಸ್ವೀಕರಿಸಿದ್ದಾರೆ. ಅವರ ವ್ಯಕ್ತಿಗತ ಬದುಕು ಕೂಡ ಹೋರಾಟ, ಪ್ರೇರಣೆಯಿಂದ ಕೂಡಿದ್ದಾಗಿದೆ. ಮೈತ್ರಿಪಾಲ ಸಿರಿಸೇನಾ ಅವರ ಹುಟ್ಟೂರು ಪೊಲುನ್ನರುವಾ. ಹುಟ್ಟಿದ್ದು 1951 ಸೆಪ್ಟೆಂಬರ್ 3ರಂದು. ‘ಪಲ್ಲವಟ್ಟೆ ಗಮರಲಾಲಗೆ ಮೈತ್ರಿಪಾಲ ಯಪ ಸಿರಿಸೇನಾ’ ಅವರ ಪೂರ್ಣ ಹೆಸರು. ತಂದೆ ಅಲ್ಬರ್ಟ್ ಸಿರಿಸೇನಾ ಎರಡನೇ ಮಹಾಯುದ್ಧದಲ್ಲಿ ಹೋರಾಡಿದವರು. ಸಿರಿಸೇನಾ 1967ರಲ್ಲಿ ಶ್ರೀಲಂಕಾ ಫ್ರೀಡಂ ಪಾರ್ಟಿ(ಎಸ್​ಎಲ್​ಎಫ್​ಪಿ)ಯ ಯುವಘಟಕಕ್ಕೆ ಸೇರುವ ಮೂಲಕ ರಾಜಕೀಯ ಜೀವನ ಆರಂಭಿಸಿದರು. 1981ರಲ್ಲಿ ಆ ಪಕ್ಷದ ಪಾಲಿಟ್​ಬ್ಯೂರೊ ಸದಸ್ಯರಾದರು. 1983ರಲ್ಲಿ ಆಲ್ ಐಲ್ಯಾಂಡ್ ಎಸ್​ಎಲ್​ಎಫ್​ಪಿ ಯುವ ಘಟಕದ ಅಧ್ಯಕ್ಷರೂ ಆದರು. 1989ಲ್ಲಿ ಮೊದಲಬಾರಿಗೆ ಚುನಾವಣೆಯಲ್ಲಿ ಗೆದ್ದು, ಪೊಲುನ್ನರುವಾ ಕ್ಷೇತ್ರವನ್ನು ಸಂಸತ್ತಿನಲ್ಲಿ ಪ್ರತಿನಿಧಿಸಿದರು. 1997ರಲ್ಲಿ ಜಲಸಂಪನ್ಮೂಲ ಸಚಿವರಾಗಿ ಬಡ್ತಿ ಪಡೆದರು. 2008ರಲ್ಲಿ ಎಲ್​ಟಿಟಿಇ ಆತ್ಮಾಹುತಿ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದರು. ರಾಜಪಕ್ಸ ಸಂಪುಟದಲ್ಲಿ ಮೊದಲ ಅವಧಿಗೆ ಕೃಷಿ, ಎರಡನೇ ಅವಧಿಗೆ ಆರೋಗ್ಯ ಮಂತ್ರಿಯಾಗಿ ಕಾರ್ಯನಿರ್ವಹಿಸಿದರು. ಅಂದಹಾಗೆ, ಸಿರಿಸೇನಾ ಅವರದ್ದು ಪ್ರೇಮವಿವಾಹ. ಪತ್ನಿ ಜಯಂತಿ ಪುಷ್ಪಕುಮಾರಿ, 25 ವರ್ಷದ ಪುತ್ರ ಧಹಮ್ ಧರಣಿ ಹಾಗೂ ಚತುರಿಕಾ ಎಂಬ ಪುತ್ರಿಯರನ್ನು ಒಳಗೊಂಡ ಸಂತೃಪ್ತ ಕುಟುಂಬ ಅವರದ್ದು. ಲಂಕೆಯನ್ನು ಅಭಿವೃದ್ಧಿಯ ಮುಂಚೂಣಿಗೆ ತರಲು ಯತ್ನಿಸುತ್ತಿರುವ ಅವರು ‘ನರೇಂದ್ರ ಮೋದಿ ಅವರೊಂದಿಗೆ ಕಾರ್ಯನಿರ್ವಹಿಸಲು ಉತ್ಸುಕನಾಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಅಭಿವೃದ್ಧಿಯ ಆಶಯಗಳೊಂದಿಗೆ ಸರಿಯಾದ ಹೆಜ್ಜೆ ಇರಿಸಿ, ಭಾರತದೊಂದಿಗೆ ನೈಜಬಾಂಧವ್ಯ ಗಟ್ಟಿ ಮಾಡಿಕೊಂಡಲ್ಲಿ ಸಿರಿಸೇನಾ ಶ್ರೀಲಂಕಾದ ಯಶಸ್ವಿ ನಾಯಕರಷ್ಟೆ ಅಲ್ಲದೆ, ಭವಿಷ್ಯದ ಆಶಾವಾದವಾಗಿಯೂ ಹೊರಹೊಮ್ಮಬಲ್ಲರು.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿ ಸಂಪಾದಕರು)

Leave a Reply

Your email address will not be published. Required fields are marked *