ನ್ಯಾಯಾಂಗ ವ್ಯವಸ್ಥೆಯ ಸುಧಾರಣಾವಾದಿ

| ರವೀಂದ್ರ ಎಸ್.ದೇಶಮುಖ್

ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಅಥವಾ 20-20 ಕ್ರಿಕೆಟ್​ನ ಯಾವುದೇ ಮ್ಯಾಚ್​ಗಳ ವೇಳೆ ಅದರ ಫಲಿತಾಂಶಕ್ಕಾಗಿ ನಮ್ಮ ದೇಶದ ಜನರು ಕಾತರದಿಂದ ಕಾಯೋದು, ಟಿ.ವಿ. ಎದುರು ಕೂರೋದು ಮಾಮೂಲಿ. ಕೆಲವರಂತೂ ಎಷ್ಟೇ ಬಿಜಿ ಇದ್ದರೂ ‘ಸ್ಕೋರ್ ಎಷ್ಟು?’ ಎಂದು ಕೇಳಲು ಮರೆಯುವುದಿಲ್ಲ. ಆದರೆ, ಕಳೆದೊಂದು ವಾರದಿಂದ ದೇಶದ ಜನರು ಅತ್ಯಂತ ಕುತೂಹಲದಿಂದ ಕಾದಿದ್ದು ಸುಪ್ರೀಂ ಕೋರ್ಟಿನ ತೀರ್ಪಗಳಿಗಾಗಿ! ‘ಜಡ್ಜ್​ಮೆಂಟ್ ಬಂತಾ?’ ‘ಸಿಜೆಐ ಏನು ಹೇಳಿದ್ರು?’ ಎಂಬ ಕಾತರದಿಂದ ಹಿಡಿದು ತೀರ್ಪಿನ ಬಗ್ಗೆ ಥರಹೇವಾರಿ ವಿಶ್ಲೇಷಣೆ, ಅಭಿಪ್ರಾಯ ಕೇಳಿಬಂದವು. ಹೌದು, ದೇಶದ ಸಾಮಾಜಿಕ, ಧಾರ್ವಿುಕ, ರಾಜಕೀಯ ರಂಗಗಳ ಮೇಲೆ ಗಾಢ ಪರಿಣಾಮ ಬೀರುವ ಮಹತ್ವದ ತೀರ್ಪಗಳು ಪ್ರಕಟಗೊಂಡಿದ್ದು, ಅಕ್ಟೋಬರ್ 2 ರಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸ್ಥಾನದಿಂದ ನಿವೃತ್ತಿಯಾಗಲಿರುವ ದೀಪಕ್ ಮಿಶ್ರಾ ಈ ಮೂಲಕ ನ್ಯಾಯಾಂಗ ಕ್ರಿಯಾಶೀಲತೆಯ ಪರಮೋಚ್ಚ ನಿದರ್ಶನವನ್ನು ದೇಶದ ಮುಂದೆ ಇರಿಸಿದ್ದಾರೆ. ಅದೆಷ್ಟೋ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ್ರಕರಣಗಳಿಗೆ/ವಿವಾದಗಳಿಗೆ ಮುಕ್ತಿ ನೀಡಿದ್ದಾರೆ.

ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿದ್ದಾಗಲೇ ಮಹತ್ವದ ತೀರ್ಪಗಳ ಮೂಲಕ ಗಮನ ಸೆಳೆದಿದ್ದ ಮಿಶ್ರಾ, ಸುಪ್ರೀಂಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿ ದೇಶದ ನ್ಯಾಯಾಂಗ ಇತಿಹಾಸ ಎಂದೆಂದೂ ಮರೆಯದ ತೀರ್ಪಗಳನ್ನು ಇತ್ತಿದ್ದಾರೆ. ವಿವಾದ, ಆರೋಪ, ರಾಜಕೀಯ ಮೇಲಾಟ ಇದೆಲ್ಲವನ್ನು ಎದುರಿಸಬೇಕಾಗಿ ಬಂದರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳದೆ ನ್ಯಾಯಾಂಗದ ಘನತೆ ಮತ್ತು ಚೌಕಟ್ಟನ್ನು ಸಮರ್ಥವಾಗಿ ಕಾಪಾಡಿದ ಮಿಶ್ರಾ ಈ ವಾರವಂತೂ ಫಟಾಫಟ್ ತೀರ್ಪಗಳ ಮೂಲಕ ಚರ್ಚೆಯ ಕೇಂದ್ರಬಿಂದುವಾದರು.

ಘೋರ ಅಪರಾಧಗಳ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿರುವ ವ್ಯಕ್ತಿಗಳು ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿ ತೀರ್ಪಿತ್ತ (ಸೆ.25) ಮಿಶ್ರಾ ನೇತೃತ್ವದ ಪೀಠ ಈ ಸಂಬಂಧ ಕಾನೂನು ರೂಪಿಸುವುದು ಸಂಸತ್ತಿನ ಹೊಣೆ ಎಂದು ಹೇಳಿ ನ್ಯಾಯಾಂಗ ಲಕ್ಷ್ಮಣರೇಖೆ ದಾಟಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತಲ್ಲದೆ, ಕಳಂಕಿತರಿಗೆ ಅಂಕುಶ ಹಾಕುವ ನಿಟ್ಟಿನಲ್ಲಿ, ಅಭ್ಯರ್ಥಿಗಳು ಹಾಗೂ ಟಿಕೆಟ್ ನೀಡಿದ ಪಕ್ಷವೇ ಆರೋಪಿ ಅಭ್ಯರ್ಥಿಯ ಅಪರಾಧ ಹಿನ್ನೆಲೆ ಕುರಿತು ಕನಿಷ್ಠ ಮೂರು ಬಾರಿ ಪ್ರಮುಖ ಮಾಧ್ಯಮಗಳಲ್ಲಿ ಜಾಹೀರಾತು ನೀಡಬೇಕು ಎಂದು ಆದೇಶಿಸಿರುವುದು ರಾಜಕೀಯ ಪಕ್ಷಗಳಲ್ಲಿ ವಿಶೇಷವಾಗಿ ಅಪರಾಧ ಹಿನ್ನೆಲೆಯುಳ್ಳ ರಾಜಕಾರಣಿಗಳಲ್ಲಿ ತಲ್ಲಣ ಮೂಡಿಸಿದೆ. ಈ ತೀರ್ಪು ನೀಡಿದ 24 ಗಂಟೆಗಳಲ್ಲೇ (ಸೆ.26) ಬಹುವರ್ಷಗಳ ಆಧಾರ್ ಕಗ್ಗಂಟನ್ನು ಬಗೆಹರಿಸಿದ ಮಿಶ್ರಾ, ಆಧಾರ್​ಗೆ ಸಾಂವಿಧಾನಿಕ ಸಿಂಧುತ್ವ ಕಲ್ಪಿಸುವ ಮೂಲಕ ವಿವಾದದ ದೀರ್ಘಹಾದಿಯನ್ನು ಅಂತ್ಯಗೊಳಿಸಿದರು. ಮತ್ತು ಬಡ್ತಿ ಮೀಸಲಿಗೆ ಸಂಬಂಧಿಸಿ ಎಂ.ನಾಗರಾಜ್ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಇದೇ ದಿನ ಎತ್ತಿಹಿಡಿದರು. ಸಾಮೂಹಿಕ ಪ್ರಾರ್ಥನೆಗೆ ಮಸೀದಿ ಅಗತ್ಯವಿಲ್ಲ ಎಂದಿದ್ದ 1994ರ ತೀರ್ಪಿನ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವರ್ಗಾಯಿಸಲು ಮಿಶ್ರಾ ಅವರಿದ್ದ ಪೀಠ ನಿರಾಕರಿಸಿತು. (ಸೆ.27) ಈ ತೀರ್ಪು ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿದೆ. ಅಲ್ಲದೆ, ಅನೈತಿಕ ಸಂಬಂಧ ಅಪರಾಧವಲ್ಲ ಮತ್ತು ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅವಕಾಶದ ತೀರ್ಪಗಳು ಚರ್ಚೆಗೆ ಗ್ರಾಸವಾಗಿದ್ದು, ಪ್ರಮುಖ ಪ್ರಕರಣಗಳ ವಿಚಾರಣೆಯ ನೇರಪ್ರಸಾರಕ್ಕೆ ಹಸಿರು ನಿಶಾನೆ ನೀಡಿದ್ದು, ಸ್ವಾಗತಾರ್ಹ ಹೆಜ್ಜೆಯಾಗಿ ಶ್ಲಾಘನೆಗೆ ಒಳಗಾಗಿದೆ. ನಕ್ಸಲ್ ಬೆಂಬಲಿಗರ ಬಂಧನ ಪ್ರಕರಣವನ್ನು ಎಸ್​ಐಟಿಗೆ ವಹಿಸಬೇಕು ಎಂಬ ಮನವಿಯನ್ನು ತಳ್ಳಿಹಾಕುವ ಮೂಲಕ, ಪೊಲೀಸ್ ಪಡೆಗಳ ನೈತಿಕ ಸ್ಥೈರ್ಯ ಹೆಚ್ಚಿಸಿದ್ದಾರೆ. ಈ ಮುಂಚೆಯೂ ಇವರು ನೀಡಿರುವ ತೀರ್ಪಗಳು ಮಹತ್ವದ ಪರಿಣಾಮ ಬೀರಿದವು. 2012ರ ನಿರ್ಭಯಾ ಗ್ಯಾಂಗ್​ರೇಪ್ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳ ಗಲ್ಲುಶಿಕ್ಷೆ ಎತ್ತಿಹಿಡಿದಿದ್ದ ನ್ಯಾ. ಮಿಶ್ರಾ, ‘ಸಂತ್ರಸ್ತ ಯುವತಿಯನ್ನು ಭೋಗದ ವಸ್ತುವಂತೆ ಕಂಡ, ಅಮಾನವೀಯ, ರಾಕ್ಷಸೀ ವರ್ತನೆ ಗಲ್ಲುಶಿಕ್ಷೆಗೆ ಅರ್ಹ’ ಎಂದು ಸ್ಪಷ್ಟವಾಗಿ ಹೇಳಿದ್ದರು. ಭಯೋತ್ಪಾದಕ ಯಾಕೂಬ್ ಪ್ರಕರಣದ ವಿಚಾರಣೆ ಮಾಡಬೇಡಿ ಎಂಬ ಜೀವಬೆದರಿಕೆಯನ್ನೂ ಲೆಕ್ಕಿಸದ ನ್ಯಾ. ಮಿಶ್ರಾ, ಯಾಕೂಬ್​ಗೆ ನೀಡಿದ ಗಲ್ಲುಶಿಕ್ಷೆ ಜಾರಿಯನ್ನು ಎತ್ತಿಹಿಡಿದರು.

ಸ್ಪಷ್ಟನುಡಿ, ಸರಳ ಸ್ವಭಾವದ ಮಿಶ್ರಾ ಎದುರಿಸಿದ ಸವಾಲುಗಳು ಅಷ್ಟಿಷ್ಟಲ್ಲ. ಇದೇ ವರ್ಷದ ಜನವರಿ 12ರಂದು ಸುಪ್ರೀಂ ಕೋರ್ಟ್​ನ ನ್ಯಾಯಮೂರ್ತಿಗಳಾದ ಚಲಮೇಶ್ವರ, ರಂಜನ್ ಗೊಗೊಯ್, ಮದನ್ ಲೋಕುರ್, ಕುರಿಯನ್ ಜೋಸೆಫ್ ನ್ಯಾಯಾಂಗ ಇತಿಹಾಸದಲ್ಲೇ ಮೊದಲ ಬಾರಿ ಪತ್ರಿಕಾಗೋಷ್ಠಿ ನಡೆಸಿ, ಬಹಿರಂಗವಾಗಿಯೇ ನ್ಯಾ.ಮಿಶ್ರಾ ವಿರುದ್ಧ ಅಸಮಾಧಾನ ಹೊರಹಾಕಿದರು. ಆದರೂ, ಸಂಯಮ ಕಳೆದುಕೊಳ್ಳದೆ, ಇತರರ ವಿರುದ್ಧ ಪ್ರತ್ಯಾರೋಪಕ್ಕೆ ಇಳಿಯದೆ ಈ ಇಡೀ ಕಗ್ಗಂಟನ್ನು ಜಾಣ್ಮೆಯಿಂದ ಬಗೆಹರಿಸಿದರು. ಮಾತ್ರವಲ್ಲ, ನಿವೃತ್ತಿ ನಂತರ ತಮ್ಮ ಸ್ಥಾನಕ್ಕೆ ರಂಜನ್ ಗೊಗೊಯ್ ಹೆಸರನ್ನು ಶಿಫಾರಸು ಮಾಡಿದಾಗ ಅಚ್ಚರಿಪಟ್ಟವರೇ ಹೆಚ್ಚು. ನ್ಯಾಯಾಂಗ ಮತ್ತು ಪೊಲೀಸ್ ವ್ಯವಸ್ಥೆ ಸುಧಾರಣೆಗೂ ಮಹತ್ವದ ಕೊಡುಗೆ ನೀಡಿದ ಮಿಶ್ರಾ ಎಫ್​ಐಆರ್​ಗಳು ದಾಖಲಾದ 24 ಗಂಟೆಯೊಳಗೆ ವೆಬ್​ಸೈಟ್​ನಲ್ಲಿ ಅಳವಡಿಸಲು ಸೂಚಿಸಿದರು. ರಾಜಕೀಯ ವಿರೋಧವನ್ನು ಎದುರಿಸಬೇಕಾಗಿ ಬಂದಾಗಲೂ ಇವರು ಧೃತಿಗೆಡಲಿಲ್ಲ. ಕಾಂಗ್ರೆಸ್ ನೇತೃತ್ವದಲ್ಲಿ ಏಳು ಪ್ರತಿಪಕ್ಷಗಳು 2018ರ ಏಪ್ರಿಲ್ 20ರಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡಿ ಮಿಶ್ರಾ ಅವರ ವಿರುದ್ಧ ಮಹಾಭಿಯೋಗ ನಡೆಸಬೇಕೆಂದು ಆಗ್ರಹಿಸಿದವು. ಆದರೆ, ನಾಯ್ಡು ಏ.23ರಂದು ಈ ಮನವಿಯನ್ನು ತಿರಸ್ಕರಿಸಿದರು. ಹೀಗೆ ಸವಾಲುಗಳನ್ನು ಹಿಮ್ಮೆಟಿಸುತ್ತ ಬಂದಿರುವ ಮಿಶ್ರಾ 1977ರ ಫೆ.14ರಂದು ಅಧಿಕೃತವಾಗಿ ವಕೀಲಿ ವೃತ್ತಿ ಆರಂಭಿಸಿದರು. 1996ರಲ್ಲಿ ಒಡಿಶಾ ಹೈಕೋರ್ಟ್​ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡ ಅವರು, 1997ರಲ್ಲಿ ಕಾಯಂ ನ್ಯಾಯಾಧೀಶರಾಗಿ, 2009ರಲ್ಲಿ ಪಟನಾ ಹೈಕೋರ್ಟ್ ಮತ್ತು 2010ರಲ್ಲಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಗಮನಸೆಳೆದರು. 2011ರಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿರುವ ನ್ಯಾ. ಮಿಶ್ರಾ, 2017 ಆಗಸ್ಟ್ 28ರಂದು ಮುಖ್ಯ ನ್ಯಾಯಮೂರ್ತಿ ಸ್ಥಾನವನ್ನು ಅಲಂಕರಿಸಿದರು. ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಗನಾಥ್ ಮಿಶ್ರಾ ಅವರ ಸೋದರಳಿಯ ಆಗಿರುವ ಇವರು ಆಂಗ್ಲ ಸಾಹಿತ್ಯ, ಸಂಸ್ಕೃತ ಭಾಷೆ, ಇತಿಹಾಸ ಶಾಸ್ತ್ರಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಇವರು ಪ್ರಕಟಿಸುವ ಬಹುತೇಕ ತೀರ್ಪಗಳಲ್ಲಿ ಆಂಗ್ಲ ಕವನಗಳ ಸಾಲುಗಳನ್ನು, ಮುಖ್ಯವಾಗಿ ಷೇಕ್ಸ್​ಪಿಯರ್ ಕವನಗಳನ್ನು ದಾಖಲಿಸುವುದುಂಟು.

ಯುವ ವಕೀಲರನ್ನು ಪ್ರೋತ್ಸಾಹಿಸುವ, ಕ್ಲಿಷ್ಟಕರ ಸಮಸ್ಯೆಗಳನ್ನು ಪರಿಹರಿಸುವ ದೀಪಕ್ ಮಿಶ್ರಾ ಸಿಜೆಐ ಆಗಿ ಕಾರ್ಯನಿರ್ವಹಿಸಿದ 13 ತಿಂಗಳುಗಳಲ್ಲಿ ನೀಡಿರುವ ತೀರ್ಪಗಳಂತೂ ಸದಾ ಸ್ಮರಣೀಯ. ಅವರ ನಿವೃತ್ತಿ ಬದುಕು ಸುಖಮಯವಾಗಿರಲಿ ಎಂದು ಹಾರೈಸುತ್ತ ರಂಜನ್ ಗೊಗೊಯ್ ಅವಧಿಯನ್ನು ಕುತೂಹಲದಿಂದ ಗಮನಿಸುವ ಸಮಯವಿದು.