Tuesday, 13th November 2018  

Vijayavani

ಲೋಕ ಎಲೆಕ್ಷನ್​​ ಗೆಲುವಿಗೆ ಮೈತ್ರಿಕೂಟ ಪ್ಲ್ಯಾನ್-ಮುಂದಿನ ವರ್ಷ ಟಿಪ್ಪು ಜಯಂತಿಗೆ ಬ್ರೇಕ್​        ಪಂಚಭೂತಗಳಲ್ಲಿ ಅನಂತ ಲೀನ-ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ        ಮೊಳಗಿದ ಅನಂತ್ ಅಮರ್​ ರಹೇ ಉದ್ಘೋಷ- ಅಗಲಿದ ಕಮಲಾಧಿಪತಿಗೆ ಅಡ್ವಾಣಿ, ಶಾ ಅಂತಿಮ ನಮನ        ರೆಡ್ಡಿ ಕೇಸ್​ನಲ್ಲಿ ಸಿಸಿಬಿಗೆ ಕೋರ್ಟ್​ ತರಾಟೆ- ರೆಡ್ಡಿಯನ್ನ ಬಂಧಿಸಿದ್ದೇಕೆ ಎಂದು ಪ್ರಶ್ನೆ-ಆದೇಶ ನಾಳೆಗೆ ಕಾಯ್ದಿಟ್ಟ ನ್ಯಾಯಾಲಯ        ರಫೇಲ್ ಡೀಲ್​​ನಲ್ಲಿ ರಿಲಯನ್ಸ್ ಆಯ್ಕೆ ನಮ್ಮದು- ಡಸಾಲ್ಟ್ ಸಿಇಓ ಸ್ಪಷ್ಟನೆ- ಎರಿಕ್ ಮಾತು ಸುಳ್ಳೆಂದ ಕಾಂಗ್ರೆಸ್ ಮತ್ತೆ ಹಳೇರಾಗ.!        ಮಹಾಘಟಬಂಧನ್​ ವಿರುದ್ಧ ತಲೈವಾ ಘರ್ಜನೆ- ಮೋದಿ ಪರ ಡೈಲಾಗ್​​ಗೆ ರಜನಿ ಸಮರ್ಥನೆ-ಬಿಜೆಪಿ ಕಡೆ ವಾಲುತ್ತಾರಾ ತಲೈವಾ?       
Breaking News

ಅವಿಸ್ಮರಣೀಯ ನಾಯಕ

Sunday, 19.08.2018, 3:05 AM       No Comments

| ಸಂತೋಷ್ ನಾಯ್ಕ್​

ಬೆಂಗಳೂರು: ಅದು 1970ರ ದಶಕದ ಆರಂಭದ ಕಾಲಘಟ್ಟ. ಆ ಕಾಲದಲ್ಲಿ ತೆಂಗಿನಮರದಂಥ ನೀಳ, ದೈತ್ಯಕಾಯದ, ಆಜಾನುಬಾಹು ವೆಸ್ಟ್​ಇಂಡೀಸ್ ವೇಗಿಗಳನ್ನು ಅವರ ತವರಿನಲ್ಲಿಯೇ ಎದುರಿಸುವುದೆಂದರೆ, ಸಿಂಹದ ಗುಹೆಗೇ ಹೋಗಿ ಬೇಟೆ ಆಡಿದಂತೆ. ಆ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕರಾಗಿದ್ದವರು ಎಂಎಕೆ ಪಟೌಡಿ. ಹಾಗಾಗಿ 1971ರ ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ ತಂಡ ಆಯ್ಕೆಗೆ ವಾರ ಮುಂಚೆ ಅಜಿತ್ ವಾಡೇಕರ್ ಸಹ ಪಟೌಡಿ ಬಳಿ ತೆರಳಿ, ‘ನನಗೆ ತಂಡದಲ್ಲಿ ಸ್ಥಾನವಿರಬಹುದೇ?’ ಎಂದು ಕೇಳಿದ್ದರು. ‘ಖಂಡಿತಾ ಇರ್ತೀಯ, ನೀನೇ ನಾಯಕ. ನನ್ನನ್ನು ಮಾತ್ರ ತಂಡದಿಂದ ಕೈಬಿಡಬೇಡ’ ಎಂದು ಪಟೌಡಿ ತಮಾಷೆ ಮಾಡಿದ್ದರು.

ಆದರೆ, ಪಟೌಡಿ ಮಾತು ನಿಜವಾಗಿತ್ತು. ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ವಿಜಯ್ ಮರ್ಚೆಂಟ್ ತಂಡದ ನಾಯಕ ಟೈಗರ್ ಪಟೌಡಿ ಹಾಗೂ ಅನುಭವಿ ಚಂದು ಬೋರ್ಡೆ ಇಬ್ಬರನ್ನೂ ಕೈಬಿಟ್ಟು ಬಿಸಿರಕ್ತಕ್ಕೆ ಮಣೆ ಹಾಕುವ ಉತ್ಸಾಹ ತೋರಿದ್ದರು. ಆಗ ಕಂಡಿದ್ದೇ ಅಜಿತ್ ಲಕ್ಷ್ಮಣ್ ವಾಡೇಕರ್. ನಾಯಕತ್ವದಿಂದ ಕೆಳಗಿಳಿಸಿದ್ದಕ್ಕೆ ಆಕ್ರೋಶಗೊಂಡಿದ್ದ ಪಟೌಡಿ ವಿಂಡೀಸ್ ಪ್ರವಾಸದಿಂದಲೇ ಹಿಂದೆ ಸರಿದಿದ್ದರು.

ಆದರೆ, ಆಯ್ಕೆಗಾರರ ತೀರ್ವನವೇ ಬೆಸ್ಟ್ ಎನ್ನುವಂತೆ ಸ್ಪೂರ್ತಿದಾಯಕ ನಾಯಕನಾಗಿ ಹೊರಹೊಮ್ಮಿದ ವಾಡೇಕರ್, ವೆಸ್ಟ್ ಇಂಡೀಸ್ ನೆಲದಲ್ಲಿ ಭಾರತದ ಮೊಟ್ಟಮೊದಲ ಟೆಸ್ಟ್ ಜಯ ಹಾಗೂ ಐತಿಹಾಸಿಕ ಸರಣಿ ಗೆಲುವನ್ನು ಸಾಧಿಸಿಬಿಟ್ಟಿದ್ದರು. ಅದಾದ ಮೂರು ತಿಂಗಳ ಬಳಿಕ, ಇಂಗ್ಲೆಂಡ್ ತಂಡವನ್ನು ಓವಲ್ ಟೆಸ್ಟ್​ನಲ್ಲಿ ಮಣಿಸುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಭಾರತ ವಶಪಡಿಸಿಕೊಂಡಿತ್ತು. ಅದುವರೆಗೂ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನೆಲದಲ್ಲಿ ಬ್ಯಾಟಿಂಗ್ ಮಾಡಲು ಪರದಾಡುತ್ತಿದ್ದ ಭಾರತಕ್ಕೆ ಅಜಿತ್ ವಾಡೇಕರ್ ಸತತ ಎರಡು ಸರಣಿ ಗೆಲುವು ದೊರಕಿಸಿಕೊಟ್ಟಿದ್ದರು. ಕ್ಯಾನ್ಸರ್​ನಿಂದಾಗಿ ಬುಧವಾರ ಮುಂಬೈನಲ್ಲಿ 77ನೇ ವರ್ಷದಲ್ಲಿ ನಿಧನರಾದ ಅಜಿತ್ ವಾಡೇಕರ್​ರನ್ನು ಭಾರತೀಯ ಕ್ರಿಕೆಟ್ ನೆನಪಿಸಿಕೊಳ್ಳುವುದು ಈ ಎರಡು ಶ್ರೇಷ್ಠ ದಿಗ್ವಿಜಯಗಳಿಂದಾಗಿ.

ಮುಂಬೈ ಕ್ರಿಕೆಟ್​ನಲ್ಲಿದ್ದ ಆಕ್ರಮಣಕಾರಿ ವರ್ತನೆಯನ್ನು ಭಾರತ ತಂಡಕ್ಕೂ ತಂದವರು ಅಜಿತ್ ವಾಡೇಕರ್. ನಾಯಕರಾಗಿ ಆಡಿದ ಮೊದಲ ಟೆಸ್ಟ್​ನಿಂದಲೂ ಭಿನ್ನ ನಿಲುವುಗಳ ಮೂಲಕ ಗಮನಸೆಳೆದಿದ್ದ ವಾಡೇಕರ್, ಭಾರತದ ಶ್ರೇಷ್ಠ ಬ್ಯಾಟ್ಸ್​ಮನ್ ಸುನೀಲ್ ಗಾವಸ್ಕರ್​ರ ಕ್ರಿಕೆಟ್ ಉತ್ತುಂಗಕ್ಕೆ ಕಾರಣರಾದವರು. ವಿಶೇಷವೆಂದರೆ, ಗಾವಸ್ಕರ್ ರಣಜಿ ಹಾಗೂ ಭಾರತ ತಂಡಗಳ ಪದಾರ್ಪಣೆ ವಾಡೇಕರ್ ನಾಯಕತ್ವದಲ್ಲೇ ಆಗಿದ್ದು.

ಇಂಗ್ಲೆಂಡ್ ಪಿಚ್​ಗಳು ವೇಗ ಹಾಗೂ ಸ್ವಿಂಗ್​ಗೆ ಹೆಚ್ಚಿನ ನೆರವು ನೀಡುತ್ತದೆ ಎಂದು ತಿಳಿದಿದ್ದರೂ, ಬಿಷನ್ ಸಿಂಗ್ ಬೇಡಿ, ಭಾಗವತ್ ಚಂದ್ರಶೇಖರ್, ಎರ›ಪಳ್ಳಿ ಪ್ರಸನ್ನ ಹಾಗೂ ಎಸ್.ವೆಂಕಟರಾಘವನ್​ರಂಥ ‘ಸ್ಪಿನ್ ಚಕ್ರವ್ಯೂಹ’ವನ್ನು ಕಟ್ಟಿದ ನಾಯಕ. ಅಜಿತ್ ವಾಡೇಕರ್ ಕ್ರಿಕೆಟ್ ಜೀವನ ಆರಂಭವಾಗಿದ್ದೇ ತಡವಾಗಿ. ‘ಸಮ್ಮರ್ ಆಫ್ 42’ ಎಂದು ಕರೆಸಿಕೊಳ್ಳುವ (ಲಾರ್ಡ್ಸ್ ಟೆಸ್ಟ್​ನಲ್ಲಿ ಭಾರತದ ಟೆಸ್ಟ್ ಇತಿಹಾಸದ ಅತಿ ಕಡಿಮೆ ಮೊತ್ತ 42 ರನ್) 1974ರ ಇಂಗ್ಲೆಂಡ್ ಪ್ರವಾಸದ ಹೀನಾಯ ಸೋಲಿನ ಬೆನ್ನಲ್ಲಿಯೇ ಕ್ರಿಕೆಟ್ ಜೀವನ ಮುಕ್ತಾಯ ಕಂಡಿತು. ಆವರೆಗೆ ಆಡಿದ್ದು ಕೇವಲ 37 ಟೆಸ್ಟ್. ಅನಿಶ್ಚಿತತೆ ನಡುವೆಯೂ 16 ಟೆಸ್ಟ್​ಗಳನ್ನು ನಾಯಕರಾಗಿ ಆಡಿದ್ದ ಎಡಗೈ ಬ್ಯಾಟ್ಸ್​ಮನ್, 4 ಗೆಲುವು, 4 ಸೋಲು ಹಾಗೂ 8 ಡ್ರಾ ಫಲಿತಾಂಶ ಸಾಧಿಸಿದ್ದರು. ಕೇವಲ 2 ಏಕದಿನ ಪಂದ್ಯವಾಡಿದ್ದ ವಾಡೇಕರ್, 34ನೇ ವಯಸ್ಸಿನಲ್ಲಿ ವಿದಾಯ ಪ್ರಕಟಿಸಿದ್ದರು.

1974ರ ಇಂಗ್ಲೆಂಡ್ ಪ್ರವಾಸದಲ್ಲಿ ಅದಾಗಲೇ ವೈಟ್​ವಾಷ್ ಅವಮಾನ ಕಂಡಿದ್ದ ಭಾರತ ಮೊದಲೇ ನಿಗದಿಯಾಗಿದ್ದ ರಾಯಭಾರ ಕಚೇರಿಯ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿತ್ತು. ಲಾರ್ಡ್ಸ್ ಟೆಸ್ಟ್ ನಿರ್ವಹಣೆಯಿಂದ ಸಿಟ್ಟಾಗಿದ್ದ ರಾಯಭಾರಿ ಬಿಕೆ ನೆಹರು, ಕಾರ್ಯಕ್ರಮಕ್ಕಾಗಿ ಮನೆಯ ಬಳಿ ಬಂದಿದ್ದ ಅಜಿತ್ ವಾಡೇಕರ್ ನೇತೃತ್ವದ ತಂಡಕ್ಕೆ ‘ಗೆಟ್ ಔಟ್’ ಎಂದು ಕೂಗಿದ್ದರು. ಈ ಎಲ್ಲ ಘಟನೆಗಳಿಂದ ನೊಂದಿದ್ದ ವಾಡೇಕರ್ ಪ್ರವಾಸದ ಬೆನ್ನಲ್ಲಿಯೇ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದರು.

ಮುಂದೆ ಬ್ಯಾಂಕ್ ಹುದ್ದೆಯಲ್ಲಿ ಮುಂದುವರಿದ ವಾಡೇಕರ್​ಗೆ 1992ರ ಅವಧಿಯಲ್ಲಿ ಮತ್ತೊಮ್ಮೆ ಭಾರತ ತಂಡದಿಂದ ಬುಲಾವ್ ಬಂದಿತು. ಟೀಮ್ ಮ್ಯಾನೇಜರ್ ಸ್ಥಾನದೊಂದಿಗೆ ಕೋಚ್ ಹುದ್ದೆಯನ್ನು ವಹಿಸಿಕೊಂಡ ಮೊದಲ ವ್ಯಕ್ತಿ ಇವರು. ಗೆಲ್ಲುವ ಛಾತಿಯೇ ಇಲ್ಲದಂತೆ ಆಡುತ್ತಿದ್ದ ಮೊಹಮದ್ ಅಜರುದ್ದೀನ್ ಸಾರಥ್ಯದ ತಂಡದಲ್ಲಿ ಗೆಲುವಿನ ಉತ್ಸಾಹ ತುಂಬಿದರು. ಅನಿಲ್ ಕುಂಬ್ಳೆ, ರಾಜೇಶ್ ಚೌಹಾಣ್ ಹಾಗೂ ವೆಂಕಟಪತಿ ರಾಜು ಎನ್ನುವ ಸ್ಪಿನ್ ಅಸ್ತ್ರದೊಂದಿಗೆ, ಸಚಿನ್ ತೆಂಡುಲ್ಕರ್ ಎನ್ನುವ ಅಗಾಧ ಪ್ರತಿಭೆಯನ್ನು ಆರಂಭಿಕ ಆಟಗಾರರನ್ನಾಗಿ ರೂಪಿಸಿದರು.

ಕ್ರಿಕೆಟ್ ಜೀವನದಂತೆ ಅವರ ಕೋಚ್ ಹೊಣೆಗಾರಿಕೆ ಕೂಡ ಅವಧಿಗೂ ಮುನ್ನವೇ ಅಂತ್ಯ ಕಂಡಿತು.1996ರ ವಿಶ್ವಕಪ್​ನ ಸೆಮಿಫೈನಲ್​ನಲ್ಲಿ ಶ್ರೀಲಂಕಾ ವಿರುದ್ಧ ಕೋಲ್ಕತದಲ್ಲಿ ಎದುರಾದ ಸೋಲಿನ ಬೆನ್ನಲ್ಲಿಯೇ ಬಿಸಿಸಿಐ, ವಾಡೇಕರ್​ರನ್ನು ಕೋಚ್ ಸ್ಥಾನದಿಂದ ವಜಾ ಮಾಡಿತು.

ನಾಯಕತ್ವದ ಜವಾಬ್ದಾರಿ ಇರದೇ ಹೋಗಿದ್ದಲ್ಲಿ ವಾಡೇಕರ್ ಖಂಡಿತ ಭಾರತದ ಶ್ರೇಷ್ಠ ಬ್ಯಾಟ್ಸ್​ಮನ್​ಗಳ ಪೈಕಿ ಒಬ್ಬರಾಗುತ್ತಿದ್ದರು. ಇದಕ್ಕೆ 1966-67ರ ರಣಜಿ ಟ್ರೋಫಿ ಫೈನಲ್​ನಲ್ಲಿ ಪ್ರಸನ್ನ ಹಾಗೂ ಚಂದ್ರಶೇಖರ್​ರ ಪ್ರಖರ ದಾಳಿಯನ್ನು ಎದುರಿಸಿ ಅವರು ಬಾರಿಸಿದ ತ್ರಿಶತಕವೇ ಪುಷ್ಟಿ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವರು ಬಾರಿಸಿದ ಏಕೈಕ ಶತಕ, 1968ರ ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತದ ಅಪೂರ್ವ ವಿದೇಶಿ ಸರಣಿ ವಿಜಯಕ್ಕೆ ನೆರವಾಗಿತ್ತು. ನಾಯಕನಾಗಿದ್ದಾಗ ಸಿಕ್ಕ ಯಶಸ್ಸು ಕೋಚ್ ಆಗಿದ್ದಾಗಲೂ ಕೈಬಿಡಲಿಲ್ಲ. ಅವರ ಗರಡಿಯಲ್ಲಿ ತವರಿನಲ್ಲಿ ಆಡಿದ ಸತತ 14 ಟೆಸ್ಟ್​ಗಳಲ್ಲಿ ಭಾರತ ಅಜೇಯವಾಗಿತ್ತು. 1974ರಲ್ಲಿ ಭಾರತ ತಂಡ ಆಡಿದ ಮೊಟ್ಟಮೊದಲ ಏಕದಿನ ಪಂದ್ಯಕ್ಕೂ ನಾಯಕರಾಗಿದ್ದ ವಾಡೇಕರ್, ‘ಏಕದಿನ ಮಾದರಿ ಕ್ರಿಕೆಟ್ ಅನ್ನು ಹೇಗೆ ಆಡುವುದು ಎಂದೇ ತಿಳಿದಿರಲಿಲ್ಲ’ ಎಂದು ಕೆಲ ವರ್ಷದ ಬಳಿಕ ಹೇಳಿದ್ದರು.

1941ರ ಏಪ್ರಿಲ್ 1 ರಂದು ಜನಿಸಿದ ಅಜಿತ್ ವಾಡೇಕರ್​ಗೆ ಪೈಲಟ್ ಆಗಬೇಕೆಂಬ ಆಸೆ ಇತ್ತು. ಆದರೆ, ಅಪ್ಪ ಎಲ್​ಬಿ ವಾಡೇಕರ್ ಆಸೆಯಿಂದಾಗಿ ಕ್ರಿಕೆಟರ್ ಆದರು. ಎಡಗೈ ಮಧ್ಯಮವೇಗಿಯೂ ಆಗಿದ್ದ ಅಜಿತ್​ರ ಪತ್ನಿಯ ಹೆಸರು ರೇಖಾ. ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳ ತುಂಬು ಸಂಸಾರ. ಕ್ರಿಕೆಟರ್, ಕೋಚ್, ರೆಫ್ರಿಯಾಗಿ, ಆಯ್ಕೆ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದು ಅವರ ಹಿರಿಮೆ.

1958-59ರಲ್ಲಿ ರಣಜಿಗೆ ಪದಾರ್ಪಣೆ ಮಾಡಿದ್ದ ವಾಡೇಕರ್, ದೇಶೀಯ ಕ್ರಿಕೆಟ್​ನಲ್ಲಿ ಸಾಲು ಸಾಲು ದೊಡ್ಡ ಮೊತ್ತ ಬಾರಿಸಿದರೂ, ರಾಷ್ಟ್ರೀಯ ತಂಡದ ಆಯ್ಕೆಗಾಗಿ ಎಂಟು ವರ್ಷ ಕಾಯಬೇಕಾಯಿತು. ಪರಿಸ್ಥಿತಿಗೆ ತಕ್ಕಂತೆ ಆಟದಲ್ಲಿ ಬದಲಾವಣೆ ಮಾಡಿಕೊಳ್ಳುತ್ತಿದ್ದ ವಾಡೇಕರ್, ಭಾರತೀಯ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ನಂ.3 ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು. ಸ್ಲಿಪ್​ನಲ್ಲಿ ಅವರ ಫೀಲ್ಡಿಂಗ್ ನಿರ್ವಹಣೆಗೆ ಸಾಟಿಯೇ ಇಲ್ಲ. ಇದೇ ಕಾರಣಕ್ಕೆ ಅಜಿತ್ ವಾಡೇಕರ್ ನಿಧನದ ಬೆನ್ನಲ್ಲಿಯೇ ಬಿಸಿಸಿಐ, ‘ಭಾರತೀಯ ಕ್ರಿಕೆಟ್ ನವೋದಯದ ತಾರೆ’ ಎಂದು ಅವರನ್ನು ಬಣ್ಣಿಸಿತ್ತು.

Leave a Reply

Your email address will not be published. Required fields are marked *

Back To Top