Monday, 10th December 2018  

Vijayavani

ಆರ್​ಬಿಐ ಗವರ್ನರ್​ ಸ್ಥಾನಕ್ಕೆ ಊರ್ಜಿತ್​ ಪಟೇಲ್​ ರಾಜೀನಾಮೆ- ವಿಜಯ ಮಲ್ಯ ಗಡಿಪಾರಿಗೆ ಯುಕೆ ನ್ಯಾಯಾಲಯ ಆದೇಶ        ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ -ಮೊದಲ ದಿನ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ -ಮೈತ್ರಿ ಸರ್ಕಾರ ವಿರುದ್ಧ ಬಿಜೆಪಿ ಗುಡುಗು        ಸರ್ಕಾರದ ವಿರುದ್ದ ರೈತರ ಹೋರಾಟ -ದೀಡ್ ದಂಡ ನಮಸ್ಕಾರ, ಬಾರುಕೋಲು ಚಳುವಳಿ -ಪೀಪಿ ಊದಿ ನಾಯಕರನ್ನು ಎಚ್ಚರಿಸಿದ ರೈತರು        ಚಿಕ್ಕಬಳ್ಳಾಪುರದಲ್ಲಿ ಒತ್ತುವರಿ ಅರಣ್ಯ ಭೂಮಿ ತೆರವು -ಜೆಸಿಬಿ ಮುಂದೆ ಬಿದ್ದು ಗೋಳಾಡಿದ ರೈತರು -ಬಿಗಿ ಪೊಲೀಸ್ ಭದ್ರತೆಯಲ್ಲಿ ಕಾರ್ಯಾಚರಣೆ        940 ದಿನಗಳ ನಿರಂತರ ವಿದ್ಯುತ್ ಉತ್ಪಾದನೆ -ಕೈಗಾ ಅಣುಸ್ಥಾವರದಿಂದ ವಿಶ್ವ ದಾಖಲೆ -ಸ್ಥಳೀಯರ ವಿರೋಧದ ನಡುವೆಯೂ ಸಾಧನೆ        ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ -ನಾಳೆ ವಾರ್ಡ್ ಗೆ ಶಿಫ್ಟ್ ಸಾಧ್ಯತೆ -ಅಲ್ಪಸಂಖ್ಯಾತ ವೈದ್ಯರ ಚಿಕಿತ್ಸೆ ಅಂತ ಪ್ರಸ್ತಾಪಿಸಿದ್ದ ಡಿಕೆಶಿ ಕ್ಷಮೆ        ಮಂಡ್ಯದ ನವದಂಪತಿಗೆ ವಿಶೇಷ ಗಿಫ್ಟ್ -ದೇಸೀ ಹಸು ಉಡುಗೊರೆ ನೀಡಿದ ಗೆಳೆಯರು -ಕಾಮಧೇನು ನೋಡಿ ಮದುಮಕ್ಕಳ ಸಂತಸ       
Breaking News

ಸಮಾಜಕ್ಕೆ ಶಕ್ತಿ ತುಂಬಿದ ರಿಯಲ್ ಹೀರೋಗಳು

Sunday, 29.07.2018, 3:05 AM       No Comments

| ರವೀಂದ್ರ ಎಸ್. ದೇಶಮುಖ್

ಅಂದು ಆ ವೈದ್ಯ ಹೊರಟದ್ದು ಖ್ಯಾತ ಸಮಾಜಸೇವಕ ಬಾಬಾ ಆಮ್ಟೆ ಅವರನ್ನು ಭೇಟಿಯಾಗಲು. ದಾರಿಮಧ್ಯೆ ದಟ್ಟ ಕಾನನದ ನಡುವೆ ಒಬ್ಬ ಯುವಕನನ್ನು ಮಾನಸಿಕ ಅಸ್ವಸ್ಥ ಎಂಬ ಕಾರಣಕ್ಕೆ ಸರಪಳಿಗಳಿಂದ ಬಂಧಿಸಿಡಲಾಗಿತ್ತು. ಆತನನ್ನು ಗಾಡಿಯಲ್ಲಿ ಕೂರಿಸಿಕೊಂಡು ಆಮ್ಟೆಯವರ ಆಶ್ರಮಕ್ಕೆ ಕರೆದೊಯ್ದಾಗ, ಬಾಬಾರ ಪುತ್ರ ಪ್ರಕಾಶ್ ಆಮ್ಟೆ ಆತನ ಸರಪಳಿಗಳನ್ನು ಬಿಡಿಸಿ, ಊಟ ನೀಡಿದರು. ನಸುಕಿನ ಜಾವ ಖುದ್ದು ಬಾಬಾ ಆಮ್ಟೆ ಆ ಸರಪಳಿಗಳನ್ನು ಬಿಗಿದುಕೊಂಡು ಕುಳಿತಿದ್ದರು! ವೈದ್ಯರು ಈ ದೃಶ್ಯ ಕಂಡಾಗ ಕಕ್ಕಾಬಿಕ್ಕಿ. ‘ಆ ಯುವಕ ಎಂಥ ಯಾತನೆ ಅನುಭವಿಸಿರಬಹುದು ಎಂದು ತಿಳಿಯಲು ಹೀಗೆ ಮಾಡಿದೆ, ಸಮಾಜ ಇಷ್ಟು ಕ್ರೂರವಾಗಿ ನಡೆದುಕೊಳ್ಳಲು ಹೇಗೆ ಸಾಧ್ಯ?’ ಎಂದವರು ಪ್ರಶ್ನಿಸಿದರಲ್ಲದೆ ‘ಇಂಥವರಿಗಾಗಿ (ಮಾನಸಿಕ ಅಸ್ವಸ್ಥರಿಗಾಗಿ) ನೀವು ಸ್ವಲ್ಪ ಹೆಚ್ಚೇ ಕೆಲಸ ಮಾಡಬೇಕು’ ಎಂದರು.

ಬಾಬಾ ಆಮ್ಟೆಯವರ ಆ ಒಂದು ಮಾತು ಮತ್ತು ಆ ಯುವಕನ ಸ್ಥಿತಿ ಇವರ ಜೀವನವನ್ನೇ ಬದಲಿಸಿತು. ಪ್ರಸಕ್ತ 2000ಕ್ಕೂ ಅಧಿಕ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಿ, ಅವರು ಚೇತರಿಸಿಕೊಳ್ಳುವಂತೆ ಮಾಡಿರುವ ಆ ವೈದ್ಯ ಡಾ.ಭರತ್ ವಾಟವಾನಿ. ವಿಶೇಷವೆಂದರೆ ಇವರ ಪತ್ನಿ ಡಾ.ಸ್ಮಿತಾ ವಾಟವಾನಿ ಕೂಡ ಈ ಬದಲಾವಣೆಯ ಕೈಂಕರ್ಯದಲ್ಲಿ ಪತಿಯೊಂದಿಗೆ ಕೈಜೋಡಿಸಿದ್ದಾರೆ. ಮಹಾರಾಷ್ಟ್ರದ ಕರ್ಜತ್​ನಲ್ಲಿ ಇವರ ‘ಶ್ರದ್ಧಾ ಪುನರ್ವಾಸ್ ಫೌಂಡೇಷನ್’ ಮಾನಸಿಕ ರೋಗಿಗಳಿಗೆ ಮಕ್ಕಳಂತೆ ಆರೈಕೆ ಮಾಡುತ್ತ, ಅವರನ್ನು ಜೀವನದ ಗತ ಆಘಾತಗಳಿಂದ, ನೋವುಗಳಿಂದ ಆಚೆ ತರಲು ಯತ್ನಿಸುತ್ತಿದೆ. ಮಾತ್ರವಲ್ಲ, ಅಸಂಖ್ಯ ರೋಗಿಗಳನ್ನು ಮುಖ್ಯವಾಹಿನಿಗೆ ಕರೆತಂದು, ಅವರು ಹೊಸಜೀವನ ಆರಂಭಿಸುವಂತೆ ಮಾಡಿದೆ.

ಮುಂಬೈ ಮೂಲದ ಡಾ. ಭರತ್ ಮತ್ತು ಸ್ಮಿತಾ ಖ್ಯಾತ ಮನೋವೈದ್ಯರಾಗಿ ವೃತ್ತಿಜೀವನದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದವರು. ಆದರೆ, ತಮ್ಮ ಶಿಕ್ಷಣ, ಜ್ಞಾನದ ಉಪಯೋಗ ಸಮಾಜದ ಏಳ್ಗೆಗೆ ವಿನಿಯೋಗ ಆಗಬೇಕು ಅದರಲ್ಲೂ ಸಮಾಜದಲ್ಲಿ ನಿರ್ಲಕ್ಷಿತರಾಗಿರುವ ಮಾನಸಿಕ ರೋಗಿಗಳ ಆರೈಕೆಗೆ ಉಪಯೋಗವಾಗಬೇಕು ಎಂಬ ಸಂಕಲ್ಪದಿಂದ ದೊಡ್ಡ ಬದಲಾವಣೆಯನ್ನೇ ಸಾಕಾರಗೊಳಿಸಿದ್ದಾರೆ. 1988ರಲ್ಲಿ ‘ಶ್ರದ್ಧಾ ಪುನರ್ವಾಸ್ ಫೌಂಡೇಷನ್’ ಸ್ಥಾಪಿಸಿದ್ದು, ಎರಡು ದಶಕಗಳ ಪಯಣದಲ್ಲಿ ಸಮಾಜದ ಸಿಹಿ-ಕಹಿ ಅನುಭವಗಳನ್ನು ಕಂಡಿದ್ದಾರೆ. ಕರ್ಜತ್​ನಲ್ಲಿ ಕಟ್ಟಡವಾಗುವ ಮೊದಲು ಮುಂಬೈಯ ಸಣ್ಣ ಮನೆಯಲ್ಲಿ ಇವರು ಸೇವಾಕಾರ್ಯ ನಿರ್ವಹಿಸಬೇಕಾದರೆ ಇನ್ನಿಲ್ಲದ ಕಿರುಕುಳ ಅನುಭವಿಸಬೇಕಾಯಿತು. ಬಡಾವಣೆಯ ಜನರೇ ‘ಇವರು ಹುಚ್ಚರನ್ನು ತಂದು ನಮಗೆ ಕಷ್ಟ ಕೊಡುತ್ತಿದ್ದಾರೆ’ ಎಂದು ನ್ಯಾಯಾಲಯದ ಮೆಟ್ಟಿಲು ಹತ್ತಿದರು. ಕೆಲವರಂತೂ ಸ್ಮಿತಾ ಅವರ ಮೇಲೆ ಹಲ್ಲೆಗೂ ಯತ್ನಿಸಿದರು. ನ್ಯಾಯಾಲಯದಲ್ಲಿ ವೈದ್ಯ ದಂಪತಿಗೆ ಗೆಲುವು ದೊರಕಿತಲ್ಲದೆ, ನ್ಯಾಯಾಧೀಶರೇ ಇವರ ಕೆಲಸವನ್ನು ಶ್ಲಾಘಿಸಿ, ‘ಇಂಥವರ ಸಂಖ್ಯೆ ಹೆಚ್ಚಬೇಕಿದೆ’ ಎಂದರು. ಅದೆಷ್ಟೋ ಸಂಬಂಧಿಕರು, ‘ಉಚ್ಚಶಿಕ್ಷಣ ಪಡೆದಿರುವ ನಿಮಗೇಕೆ ಈ ಹುಚ್ಚರ ಸಹವಾಸ’ ಎಂದು ಹಂಗಿಸಿದರು. ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮಾನಸಿಕ ಅಸ್ವಸ್ಥರಿಗೆ ಪ್ರೀತಿ, ವಾತ್ಸಲ್ಯ ಜತೆಗೆ ಜೀವನದ ಕೌಶಲಗಳನ್ನು ತುಂಬುತ್ತಿದ್ದಾರೆ. ಇಂಥವರಿಗೂ ಸಮಾಜದಲ್ಲಿ ಬದುಕುವ ಸಮಾನ ಹಕ್ಕಿದೆ ಎಂಬುದನ್ನು ದರ್ಶಿಸಿದ್ದಾರೆ. ಎರಡು ಸಾವಿರಕ್ಕೂ ಅಧಿಕ ರೋಗಿಗಳ ಕಾಯಿಲೆ ಗುಣಪಡಿಸಿ ಅವರನ್ನು ಅವರ ಕುಟುಂಬಗಳಿಗೆ ಸೇರಿಸಿದ್ದಾರೆ. ದೇಶದ ಬಹುತೇಕ ಎಲ್ಲ ರಾಜ್ಯಗಳ ಮತ್ತು ನೆರೆಯ ನೇಪಾಳದ ರೋಗಿಗಳು ಕೂಡ ‘ಶ್ರದ್ಧಾ’ದಲ್ಲಿ ಜೀವನದ ಹೊಸಮುಖ ಕಾಣುತ್ತಿದ್ದಾರೆ. ಈ ಅನನ್ಯ ಸೇವೆಗಾಗಿಯೇ ಡಾ. ಭರತ್ ಅವರಿಗೆ ಈ ಬಾರಿಯ ಮ್ಯಾಗ್ಸೆಸೆ ಪ್ರಶಸ್ತಿ ಅರಸಿಕೊಂಡು ಬಂದಿದೆ.

***

‘ನಾನು ಕನಸುಗಳಲ್ಲಿ, ಸಿನಿಮಾಗಳಲ್ಲಿ ಕೆಲಸ ಮಾಡುವುದಿಲ್ಲ, ನಾನು ನಿಜಜೀವನದಲ್ಲಿ ಕಾರ್ಯನಿರ್ವಹಿಸುತ್ತೇನೆ ಮತ್ತು ಏನಾದರೂ ಬದಲಾವಣೆ ತರಬೇಕು ಎಂಬ ತುಡಿತ ಹೊಂದಿದ್ದೇನೆ. ಹಾಂ, ಮತ್ತೊಮ್ಮೆ ಕೇಳಿಸಿಕೊಳ್ಳಿ ನಾನು ಫುಂಗ್​ಸುಕ್ ವಾಂಗ್ಡು ಅಲ್ಲ, ನಾನು ಸೋನಂ ವಾಂಗ್​ಚುಕ್’ -ಹೀಗೆಂದು ಸ್ಪಷ್ಟ ದನಿಯಲ್ಲಿ ಹೇಳುವ ಸೋನಂ ಭಾರತದಲ್ಲಿ ಸಿನಿಮಾ ಮತ್ತು ಕ್ರಿಕೆಟ್​ಗೆ ಅವಶ್ಯಕತೆಗಿಂತ ಹೆಚ್ಚೇ ಪ್ರಾಧಾನ್ಯ ನೀಡುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಶಿಕ್ಷಣ, ಸಂಸ್ಕೃತಿ, ಪರಿಸರ ಹೀಗೆ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತ ಲದಾಖ್​ನ ಹಿಂದುಳಿದ ಪ್ರದೇಶಗಳಲ್ಲಿ, ಬೆಟ್ಟದ ತುದಿಗಳಲ್ಲಿ ಅಭಿವೃದ್ಧಿಯ ಬೆಳಕು ಬೀರುವಂತೆ ಮಾಡಿದ್ದಾರೆ. ಆಮೀರ್ ಖಾನ್ ನಟಿಸಿರುವ ‘ತ್ರೀ ಈಡಿಯಟ್ಸ್’ ಚಿತ್ರದ ಫುಂಗ್​ಸುಕ್ ವಾಂಗ್ಡು ಪಾತ್ರಕ್ಕೆ ಸೋನಂ ಪ್ರೇರಣೆ. ಆದರೆ, ‘ಚಿತ್ರಕ್ಕಿಂತ ಲದಾಖ್​ನ ದನಿಗಳು, ಇಲ್ಲಿನ ಕೆಲಸಗಳು ಮಾತನಾಡಬೇಕು’ ಎನ್ನುವ ಸೋನಂಗೆ ಈ ಬಾರಿಯ ಮ್ಯಾಗ್ಸೆಸೆ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.

ಲದಾಖ್​ನ ಶೈಕ್ಷಣಿಕ, ಸಾಂಸ್ಕೃತಿಕ ಚಳವಳಿಯ ಸಂಸ್ಥಾಪಕ ಎಂದೇ ಗುರುತಿಸಲ್ಪಡುವ ಇವರ ಜೀವನಪಯಣ ರೋಚಕ. ಹುಟ್ಟಿದ್ದು ಜಮ್ಮು-ಕಾಶ್ಮೀರದ ಲೇಹ್ ಜಿಲ್ಲೆಯ ಉಲೆಯ್ತೊಕ್ಟೊ ಎಂಬ ಸಣ್ಣಹಳ್ಳಿಯಲ್ಲಿ. ಅಲ್ಲಿ ಶಾಲೆಯೇ ಇಲ್ಲದ್ದರಿಂದ 9ನೇ ವರ್ಷದವರೆಗೂ ತಾಯಿಯೇ ಮನೆಯಲ್ಲಿ ಗಣಿತ, ವಿಜ್ಞಾನ ಹೇಳಿಕೊಟ್ಟರು. ತಂದೆ ರಾಜಕಾರಣಿ. 1975ರಲ್ಲಿ ಅವರಿಗೆ ಜಮ್ಮು-ಕಾಶ್ಮೀರ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿದ್ದರಿಂದ ಕುಟುಂಬ ಶ್ರೀನಗರಕ್ಕೆ ಸ್ಥಳಾಂತರವಾಯಿತು. ಆದರೆ, ಲದಾಖಿ ಗ್ರಾಮೀಣ ಭಾಷೆಯಷ್ಟೇ ಗೊತ್ತಿದ್ದ ಸೋನಂಗೆ ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವೇ ಆಯಿತು. ಮನೆಯಲ್ಲಿ ಯಾರಿಗೂ ತಿಳಿಸದೆ 1977ರಲ್ಲಿ ದೆಹಲಿಗೆ ಓಡಿಹೋದ ಸೋನಂ ಅಲ್ಲಿಯ ವಿಶೇಷ ಕೇಂದ್ರೀಯ ವಿದ್ಯಾಲಯದ ಪ್ರಾಧ್ಯಾಪಕರನ್ನು ಭೇಟಿ ಮಾಡಿ, ತಮ್ಮ ಸ್ಥಿತಿ ವಿವರಿಸಿ ಅದೇ ಶಾಲೆಯ ವಿದ್ಯಾರ್ಥಿಯಾಗಿ ಸೇರಿಕೊಂಡರು. ಮುಂದೆ, ಶ್ರೀನಗರಕ್ಕೆ ಬಂದಾಗ ತಂದೆ ಹೇಳಿದ್ದು ‘ಸಿವಿಲ್ ಇಂಜಿನಿಯರಿಂಗ್’ ಓದು ಅಂತ. ಇವರ ಆಸಕ್ತಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಕಡೆ. ಹಾಗಾಗಿ, ಸ್ವಂತ ಖರ್ಚಿನಲ್ಲೇ ಮೆಕ್ಯಾನಿಕಲ್ ಇಂಜಿನಿಯರಿಂಗ್ (1983-87) ವ್ಯಾಸಂಗ ಪೂರ್ಣಗೊಳಿಸಿದ ಸೋನಂ ಶಿಕ್ಷಣ ಸುಧಾರಣೆಯಲ್ಲಿ ತೊಡಗಿಕೊಂಡರು.

1987ರಲ್ಲಿ ಲದಾಖ್​ಗೆ ಹಿಂದಿರುಗಿ Students’ Educational and Cultural Movement of Ladakh ಎಂಬ ಸಂಸ್ಥೆ ಹುಟ್ಟಿಹಾಕಿದ್ದು ಜೀವನಕ್ಕೆ ಸಿಕ್ಕ ಮಹತ್ವದ ತಿರುವು. ಈ ಸಂಸ್ಥೆಯ ಎಲ್ಲ ಕಟ್ಟಡಗಳಿಗೂ ಸೌರಶಕ್ತಿಯ ಸಂಪರ್ಕವಿದ್ದು, ಕೆಲ ಗ್ರಾಮ, ಮನೆಗಳನ್ನೂ ಸೌರಬೆಳಕಿನಿಂದ ಬೆಳಗಿದ್ದಾರೆ.

ಸರ್ಕಾರಿ ಶಾಲೆಗಳ ಸಬಲೀಕರಣ ಗುರಿಯಾಗಿಸಿಕೊಂಡು ಅಲ್ಲಿ ಕೈಗೊಂಡ ಹೊಸ ಪ್ರಯೋಗಗಳು ಯಶಸ್ವಿ ಆಗುತ್ತಿದ್ದಂತೆ ‘ನ್ಯೂ ಹೋಪ್’ ಎಂಬ ಮತ್ತೊಂದು ಶೈಕ್ಷಣಿಕ ಯೋಜನೆಯಡಿ ಒಂದು ಸಾವಿರ ಶಿಕ್ಷಕರಿಗೆ ತರಬೇತಿ ನೀಡಿದ್ದಾರೆ ಸೋನಂ. ಲದಾಖ್​ನಲ್ಲಿ 10ನೇ ತರಗತಿ ಪಾಸಾಗುವ ವಿದ್ಯಾರ್ಥಿಗಳ ಸಂಖ್ಯೆ ಬರೀ ಶೇ. 5ರಷ್ಟಿತ್ತು. ಆದರೆ, ಸೋನಂ ಮತ್ತು ಅವರ ಸಂಸ್ಥೆಯ ಪ್ರಯೋಗ, ಶ್ರಮದ ಪರಿಣಾಮ ಈ ಸಂಖ್ಯೆ ಶೇ.75ಕ್ಕೆ ಏರಿದೆ. ಬರೀ ಸಂಖ್ಯೆ ಮಾತ್ರ ಹೆಚ್ಚಿಲ್ಲ ಮಕ್ಕಳು ಜ್ಞಾನಾಧಾರಿತ ಶಿಕ್ಷಣ ಪಡೆಯುತ್ತಿದ್ದು, ಸೃಜನಶೀಲತೆಯಿಂದ ಗಮನ ಸೆಳೆದಿದ್ದಾರೆ. ‘ಲದಾಖ್ 2025’ ಎಂಬ ಶೀರ್ಷಿಕೆಯಲ್ಲಿ ಆ ಭಾಗದ ಸಮಗ್ರ ಅಭಿವೃದ್ಧಿಯ ಯೋಜನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

2011ರಲ್ಲಿ ಫ್ರಾನ್ಸ್​ನ ಗ್ರೆನೊಬಲ್​ನಲ್ಲಿ ವಾಸ್ತುಶಿಲ್ಪ ಅಧ್ಯಯನದಲ್ಲಿ ಉನ್ನತ ವ್ಯಾಸಂಗಗೈದ ಸೋನಂ, ಐಸ್ ಸ್ತೂಪ ಎಂಬ ಮಾನವನಿರ್ವಿುತ ಊಟೆಯನ್ನು ಸಂಶೋಧಿಸಿದ್ದು, ಲದಾಖ್​ಗೆ ದೊಡ್ಡ ವರದಾನವಾಗಿ ಪರಿಣಮಿಸಿದೆ. ಚಳಿಗಾಲದಲ್ಲಿ ಹರಿವ ನೀರನ್ನು ಮಂಜುಗಡ್ಡೆಗಳಾಗಿ ಘನೀಕರಿಸಿ, ಬೃಹತ್ ಊಟೆಗಳನ್ನಾಗಿಸಿ ಬೇಸಿಗೆಯಲ್ಲಿ ಅದೇ ಊಟೆಗಳನ್ನು ಕರಗಿಸಿ ಗದ್ದೆಗಳಲ್ಲಿ ಬೇಸಾಯಕ್ಕೆ ಬಳಸುವುದು ಐಸ್ ಸ್ತೂಪದ ಕ್ರಮ. ಇದುವರೆಗೂ ಲಕ್ಷಾಂತರ ಲೀಟರ್ ನೀರನ್ನು ಹಿಡಿದಿಡಬಲ್ಲ ಐಸ್ ಸ್ತೂಪಗಳ ನಿರ್ವಣವಾಗಿದೆ. ‘ಈಗ ದೇಶಕ್ಕಾಗಿ ಪ್ರಾಣ ನೀಡುವ ಅಗತ್ಯವಿಲ್ಲ, ಜೀವನ ನೀಡುವ ಅಗತ್ಯವಿದೆ’ ಎನ್ನುವ ಸೋನಂ ಜ್ಞಾನ-ಸೇವೆಯ ಶಕ್ತಿಯನ್ನು ದರ್ಶಿಸಿದ್ದು, ಯುವಮನಸ್ಸುಗಳ ಐಕಾನ್ ಆಗಿ ಹೊರಹೊಮ್ಮಿದ್ದಾರೆ.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿಸಂಪಾದಕರು)
[ಪ್ರತಿಕ್ರಿಯಿಸಿ: [email protected], [email protected]]

Leave a Reply

Your email address will not be published. Required fields are marked *

Back To Top