Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಭಾರತದ ಕರುಳಬಳ್ಳಿ

Sunday, 01.07.2018, 3:05 AM       No Comments

| ಉಮೇಶ್ ಕುಮಾರ್ ಶಿಮ್ಲಡ್ಕ

ವಿಶ್ವಸಂಸ್ಥೆಯಲ್ಲಿ ಅಮೆರಿಕದ ವಿಚಾರ ಪ್ರಸ್ತಾಪವಾದಾಗೆಲ್ಲ ಕಾಣಿಸಿಕೊಳ್ಳುವ ಹೆಸರು ನಿಕ್ಕಿ ಹ್ಯಾಲೆ. ಅವರು ಅಲ್ಲಿ ಅಮೆರಿಕದ ಪ್ರತಿನಿಧಿ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬಳಿಕ ಅನುಸರಿಸುತ್ತಿರುವ ‘ಅಮೆರಿಕ ಫಸ್ಟ್’ ನೀತಿ ಪರಿಣಾಮ ಆ ದೇಶದ ವಿದೇಶ ನೀತಿಗಳೂ ಬದಲಾಗಿವೆ. ಅಣ್ವಸ್ತ್ರ ವಿಚಾರದಲ್ಲಿ ಉತ್ತರ ಕೊರಿಯಾವನ್ನು ಟಾರ್ಗೆಟ್ ಮಾಡಿದ್ದ ಅಮೆರಿಕ, ಅದರ ಜತೆಗಿನ ಸಂಬಂಧ ಸುಧಾರಿಸುವ ಪ್ರಯತ್ನದಲ್ಲಿದೆ. ಇನ್ನೊಂದೆಡೆ, ಇರಾನ್ ಜತೆಗಿನ ಅಣ್ವಸ್ತ್ರ ಒಪ್ಪಂದವನ್ನು ಮುರಿದುಕೊಂಡು ಆ ದೇಶದ ಮೇಲೆ ನಿರ್ಬಂಧ ಹೇರಲು ಮುಂದಾಗಿದ್ದು, ನವೆಂಬರ್ 4ರಂದು ಇದು ಜಾರಿಗೊಳ್ಳಲಿದೆ. ಇದಕ್ಕೆ ಪೂರ್ವಭಾವಿಯಾಗಿ ಜಗತ್ತಿನ ಪ್ರಮುಖ ರಾಷ್ಟ್ರಗಳ ಬೆಂಬಲ ಗಿಟ್ಟಿಸಿಕೊಳ್ಳುವ ಪ್ರಯತ್ನವೂ ಶುರುವಾಗಿದೆ. ಇದೇ ಕಾರಣಕ್ಕೆ ನಿಕ್ಕಿ ಹ್ಯಾಲೆ ಕಳೆದ ವಾರ ಭಾರತಕ್ಕೆ ಎರಡು ದಿನಗಳ ಅಧಿಕೃತ ಪ್ರವಾಸ ಕೈಗೊಂಡಿದ್ದರು. ಇರಾನ್​ನಿಂದ ಭಾರತದ ತೈಲ ಆಮದು, ಭಯೋತ್ಪಾದನೆ ವಿರುದ್ಧದ ಹೋರಾಟ, ದ್ವಿಪಕ್ಷೀಯ ಸಹಕಾರ ಮುಂತಾದ ವಿಷಯಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜತೆಗೆ ಮಹತ್ವದ ಮಾತುಕತೆಯನ್ನೂ ನಡೆಸಿದರು.

ಭಾರತದ ಜತೆಗೆ ನಿಕ್ಕಿ ಹ್ಯಾಲೆಗೆ ಇರುವುದು ಕರುಳುಬಳ್ಳಿಯ ಸಂಬಂಧ. ಅವರನ್ನು ಅಮೆರಿಕದಲ್ಲಿ ‘ಭಾರತೀಯ ಅಮೆರಿಕನ್’ ಎಂದೇ ಗುರುತಿಸುತ್ತಾರೆ. ಅವರ ತಂದೆ ಅಜಿತ್ ಸಿಂಗ್ ರಾಂಧವ, ತಾಯಿ ರಾಜ್ ಕೌರ್. ಪಂಜಾಬ್​ನ ಅಮೃತಸರ ಜಿಲ್ಲೆಯವರು. ಅಜಿತ್ ಸಿಂಗ್ ಪಂಜಾಬ್ ಕೃಷಿ ವಿವಿಯಲ್ಲಿ ಪ್ರೊಫೆಸರ್ ಆಗಿದ್ದರು. ರಾಜ್ ಕೌರ್ ದೆಹಲಿ ವಿವಿಯಲ್ಲಿ ಕಾನೂನು ಪದವಿ ಪಡೆದಿದ್ದಾರೆ. 1960ರ ದಶಕದ ಕೊನೆಯಲ್ಲಿ ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾದ ವಿದ್ಯಾರ್ಥಿ ವೇತನ ಲಭಿಸಿದ್ದರಿಂದ ಅವರು ಕೆನಡಾಕ್ಕೆ ವಲಸೆ ಹೋದರು. 1969ರಲ್ಲಿ ಪಿಎಚ್​ಡಿ ಪದವಿ ಪಡೆದ ಬಳಿಕ ಅಜಿತ್ ಕುಟುಂಬ ಸಮೇತ ದಕ್ಷಿಣ ಕ್ಯಾಲಿಫೋರ್ನಿಯಾಗೆ ತೆರಳಿದರು. ಅಲ್ಲಿ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾದರು. ತಾಯಿ ಸ್ನಾತಕೋತ್ತರ ಪದವಿ ಪಡೆದು ಬ್ಯಾಂಬರ್ಗ್ ಪಬ್ಲಿಕ್ ಸ್ಕೂಲ್​ನಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದರು. ಈ ನಡುವೆ, 1972 ಜನವರಿ 20ರಂದು ನಿಕ್ಕಿ ಜನಿಸಿದರು. ನಿಮ್ರತಾ ರಾಂಧವ ಎಂಬುದು ಅವರ ಜನ್ಮನಾಮ. ‘ನಿಕ್ಕಿ’ ಎಂಬುದು ಅಡ್ಡಹೆಸರು. ಕೊನೆಗೆ ನಿಮ್ರತಾ ನಿಕ್ಕಿ ರಾಂಧವ ಎಂದು ಗುರುತಿಸಿಕೊಂಡರು. 1989ರಲ್ಲಿ ಆರೆಂಜ್ ಬರ್ಗ್ ಪ್ರಿಪರೇಟರಿ ಸ್ಕೂಲ್ ಶಿಕ್ಷಣ ಪೂರೈಸಿದ ಬಳಿಕ ಕ್ಲೆಮ್ಸನ್ ಯೂನಿವರ್ಸಿಟಿಯಲ್ಲಿ ಪದವಿ ಪಡೆದರು. ಇದಾಗಿ, ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ಕಂಪನಿ ಎಫ್​ಸಿಆರ್ ಕಾರ್ಪೆರೇಷನ್​ನಲ್ಲಿ ನಿಕ್ಕಿ ವೃತ್ತಿ ಬದುಕು ಆರಂಭಿಸಿದರು. ತರುವಾಯ ಕುಟುಂಬ ನಡೆಸುತ್ತಿದ್ದ ಉಡುಪುಗಳ ವ್ಯಾಪಾರ ವ್ಯವಹಾರಕ್ಕೆ ಕಾಲಿಟ್ಟು, ಸಂಸ್ಥೆಯ ಮುಖ್ಯಹಣಕಾಸು ಅಧಿಕಾರಿಯೂ ಆದರು.

1996ರಲ್ಲಿ ಮೈಕೆಲ್ ಹ್ಯಾಲೆ ಜತೆಗೆ ಅವರ ವಿವಾಹ ನೆರವೇರಿತು. ಹ್ಯಾಲೆ ದಕ್ಷಿಣ ಕ್ಯಾಲಿಫೋರ್ನಿಯಾದ ಪ್ರಥಮ ಪ್ರಜೆಯಾಗಿದ್ದವರು. ಅಷ್ಟೇ ಅಲ್ಲ, ಸೌತ್ ಕಾಲೋನಿಯಾ ಆರ್ವಿು ನ್ಯಾಷನಲ್ ಗಾರ್ಡ್​ನ ಅಧಿಕಾರಿಯಾಗಿಯೂ ಆಗಿದ್ದರು.

1998ರಲ್ಲಿ ಆರೆಂಜ್​ಬರ್ಗ್ ಕೌಂಟಿ ಚೇಂಬರ್ ಆಫ್ ಕಾಮರ್ಸ್​ನ ಆಡಳಿತ ಮಂಡಳಿಗೆ ನಿರ್ದೇಶಕರಾಗಿ ನಿಕ್ಕಿ ನಾಮನಿರ್ದೇಶಿತರಾದರು. 2003ರಲ್ಲಿ ಲೆಕ್ಸಿನ್ಗ್​ಟನ್

ಚೇಂಬರ್ ಆಫ್ ಕಾಮರ್ಸ್​ನ ನಿರ್ದೇಶಕರಾದರು. ಈ ನಡುವೆ ಅವರು ಮೌಂಟ್ ಹೊರೆಬ್ ಯುನೈಟೆಡ್ ಮೆಥಡಿಸ್ಟ್ ಚರ್ಚ್​ನಲ್ಲಿ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದರು. 2004ರಲ್ಲಿ ನ್ಯಾಷನಲ್ ಅಸೋಸಿಯೇಷನ್ ಆಫ್ ವಿಮೆನ್ ಬಿಸಿನೆಸ್ ಓನರ್ಸ್​ನ

ಅಧ್ಯಕ್ಷರಾದರು. ಹೀಗೆ ಹಲವು ಸಂಘಟನೆಗಳಲ್ಲಿ ತೊಡಗಿಸಿಕೊಂಡ ಅವರು 2004ರಲ್ಲಿ ಸೌತ್ ಕ್ಯಾಲಿಫೋರ್ನಿಯಾದಿಂದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ಗೆ ಸ್ಪರ್ಧಿಸಿ ಆ ಕ್ಷೇತ್ರವನ್ನು ದೀರ್ಘಕಾಲದಿಂದ ಪ್ರತಿನಿಧಿಸುತ್ತಿದ್ದ ರಿಪಬ್ಲಿಕನ್ ಲ್ಯಾರಿ ಕೂನ್ ವಿರುದ್ಧ ಗೆಲುವು ದಾಖಲಿಸಿದರು. ಹಾಗೆ ಸೌತ್ ಕಾಲೋನಿಯಾದಲ್ಲಿ ಗೆದ್ದ ಮೊದಲ ಭಾರತೀಯ ಅಮೆರಿಕನ್ ಎಂಬ ಕೀರ್ತಿಗೆ ಭಾಜನರಾದರು. 2006ರಲ್ಲಿ ಅವಿರೋಧ ಆಯ್ಕೆ ಆದರು. 2008ರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಪ್ರತಿಸ್ಪರ್ಧಿಯನ್ನು ಸೋಲಿಸಿದರು.

ಭ್ರೂಣಹತ್ಯೆ ನಿರ್ಬಂಧಿಸುವ ಕಾಯ್ದೆ ಪರವಾಗಿದ್ದ ಅವರು, ವಲಸೆ ಕಾನೂನು ಪರಿಣಾಮಕಾರಿ ಅನುಷ್ಠಾನವನ್ನು ಪ್ರತಿಪಾದಿಸಿದ್ದಾರೆ. ರಿಪಬ್ಲಿಕನ್ ಪಕ್ಷದಲ್ಲಿ ಆಂತರಿಕವಾಗಿ 2009ರ ಮೇನಲ್ಲಿ ಆರಂಭವಾದ ಟೀ(ಟ್ಯಾಕ್ಸ್ ಇನಫ್ ಆಲ್​ರೆಡಿ) ಪಾರ್ಟಿ ಮೂವ್​ವೆುಂಟ್​ನ ಸದಸ್ಯರಾಗಿ ಗುರುತಿಸಿಕೊಂಡ ನಿಕ್ಕಿ, 2010ರಲ್ಲಿ ಸೌತ್ ಕಾಲೋನಿಯಾದ ಗವರ್ನರ್ ಸ್ಥಾನಕ್ಕೆ ಸ್ಪರ್ಧಿಸಿ ಚೊಚ್ಚಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದ ನಿಕ್ಕಿ ನವೆಂಬರ್ 2ರಂದು ಅಧಿಕಾರ ಸ್ವೀಕರಿಸಿದರು. ಸೌತ್ ಕಾಲೋನಿಯಾದ ಗವರ್ನರ್ ಸ್ಥಾನಕ್ಕೇರಿದ ಮೊದಲ ಭಾರತೀಯ ಅಮೆರಿಕನ್ ಮತ್ತು ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಅವರದಾಯಿತು. 2017ರ ತನಕ ಅಲ್ಲಿ ಕರ್ತವ್ಯ ನಿರ್ವಹಿಸಿದರು. 2016ರಲ್ಲಿ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಬೆನ್ನಿಗೆ ನಿಕ್ಕಿ ಅವರನ್ನು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಪ್ರತಿನಿಧಿಯಾಗಿ ಘೋಷಣೆ ಮಾಡಿದರು. 2017ರ ಜನವರಿಯಿಂದ ಅವರು ಆ ಹೊಣೆಗಾರಿಕೆ ನಿಭಾಯಿಸುತ್ತಿದ್ದಾರೆ.

2012ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಮಾಜಿ ಗವರ್ನರ್ ಮಿಟ್ ರೊಮ್ನಿ ಸ್ಪರ್ಧಿಸಿದ್ದಾಗ, ವೈಸ್ ಪ್ರೆಸಿಡೆಂಟ್ ಸ್ಥಾನಕ್ಕೆ ನಿಕ್ಕಿ ಹೆಸರನ್ನು ಪರಿಗಣಿಸಿದ್ದರು. ಆದರೆ, ನಿಕ್ಕಿ ಅದನ್ನು ನಯವಾಗಿ ತಿರಸ್ಕರಿಸಿದ್ದರು. 2016ರಲ್ಲೂ ಅಧ್ಯಕ್ಷೀಯ ಮತ್ತು ಉಪ ಅಧ್ಯಕ್ಷೀಯ ಅಭ್ಯರ್ಥಿ ಸ್ಥಾನಕ್ಕೆ ನಿಕ್ಕಿ ಹೆಸರು ಕೇಳಿ ಬಂದಿತ್ತು. ರಾಜಕೀಯ ವಿಶ್ಲೇಷಕರು ಕೂಡ ಅವರಲ್ಲಿ ಅಂಥ ಸಾಮರ್ಥ್ಯವನ್ನು ಗುರುತಿಸಿದ್ದಾರೆ.

ನಿಕ್ಕಿ ಮೇಲೆ ಅನೈತಿಕ ಸಂಬಂಧದ ಅಪವಾದಗಳೂ ಅಂಟಿಕೊಂಡಿದ್ದವು. ಆದರೆ, ಅವರದನ್ನು ನಿರಾಕರಿಸಿದ್ದು, ಹ್ಯಾಲೆ ಜತೆಗೆ ಸಂಬಂಧ ಚೆನ್ನಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಹೀಗೆ ವೈಯಕ್ತಿಕ ನಂಬಿಕೆ ವಿಚಾರ ಪ್ರಸ್ತಾಪಿಸುತ್ತ ಅವರು ನ್ಯೂಸ್​ವೀಕ್​ಗೆ ಬರೆದ ಲೇಖನದಲ್ಲಿ, ‘ನಾನು ಭಾರತೀಯ ಮಹಿಳೆ ಎಂಬುದೇ ನನ್ನಲ್ಲಿ ಹೊಸ ಚೈತನ್ಯವನ್ನು ತುಂಬುತ್ತದೆ. ಮಾತೃಧರ್ಮ ಬಿಟ್ಟು ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ್ದರಿಂದ ಹೆಚ್ಚೇನೂ ಬದಲಾಗಲ್ಲ. ನಾನು ಎರಡೂ ಧರ್ಮದ ಆಚರಣೆ, ನಂಬಿಕೆಗಳನ್ನು ಅನುಸರಿಸುತ್ತೇನೆ’ ಎಂದು ಉಲ್ಲೇಖಿಸಿದ್ದರು. ನಿಕ್ಕಿ ಹ್ಯಾಲೆ ದಂಪತಿಗೆ ರೇನಾ ಎಂಬ ಪುತ್ರಿ, ನಳಿನ್ ಎಂಬ ಪುತ್ರ ಇದ್ದಾರೆ. ‘ಕಾಂಟ್ ಈಸ್ ನಾಟ್ ಆನ್ ಆಪ್ಶನ್; ಮೈ ಅಮೆರಿಕನ್ ಸ್ಟೋರಿ’ ಎಂಬ ಪುಸ್ತಕವನ್ನೂ ನಿಕ್ಕಿ ಬರೆದಿದ್ದಾರೆ. ಸದ್ಯ ವಿಶ್ವಸಂಸ್ಥೆಯಲ್ಲಿ ಅಮೆರಿಕವನ್ನು ಪ್ರತಿನಿಧಿಸುತ್ತಿರುವ ನಿಕ್ಕಿ, ಜಾಗತಿಕವಾಗಿ ಅಮೆರಿಕದ ಪ್ರಭಾವ ಹರಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಅಮೆರಿಕದ ರಾಜಕೀಯ ವಲಯ ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಕಣಕ್ಕಿಳಿಯುವುದು ‘ನಿಕ್ಕಿ’ಯಾ ಎಂಬ ಕುತೂಹಲ ತಾಳಿದೆ.

(ಲೇಖಕರು ವಿಜಯವಾಣಿ ಸಹಾಯಕ ಸುದ್ದಿಸಂಪಾದಕರು)

[ಪ್ರತಿಕ್ರಿಯಿಸಿ: [email protected], [email protected]]

Leave a Reply

Your email address will not be published. Required fields are marked *

Back To Top