ಲಾರ್ಡ್ಸ್​ನಲ್ಲಿ ಜೆರ್ಸಿ ಬಿಚ್ಚಿ ಕುಣಿದಾಡಿದ್ದ ಗಂಗೂಲಿಯ ಹಿಂದೆಯೇ ನಿಂತಿದ್ದ ಲಕ್ಷ್ಮಣ್​ ಏನು ಹೇಳಿದ್ದರು ಗೊತ್ತೇ?

ನವದೆಹಲಿ: ಲಾರ್ಡ್ಸ್​ ಮೈದಾನದಲ್ಲಿ ಇಂಗ್ಲೆಂಡ್​ ವಿರುದ್ಧ ಭಾರತ ನಾಟ್​ವೆಸ್ಟ್​ ಸರಣಿ ಗೆದ್ದಾಗ ಕ್ರೀಡಾಂಗಣದ ಬಾಲ್ಕನಿಯಲ್ಲಿ ಕುಳಿತಿದ್ದ ಟೀಂ ಇಂಡಿಯಾದ ಅಂದಿನ ಸೌರವ್​ ಗಂಗೂಲಿ ತಮ್ಮ ಜರ್ಸಿ ಬಿಚ್ಚಿ ಕುಣಿದಾಡಿ, ಸಂಭ್ರಮಾಚರಣೆ ಮಾಡಿದ್ದು ಯಾರಿಗೆ ಗೊತ್ತಿಲ್ಲ ಹೇಳಿ.

ಕ್ರಿಕೆಟ್​ ರಂಗದ ಮಟ್ಟಿಗೆ ಐತಿಹಾಸಿಕ ಪ್ರಸಂಗ ಎಂಬಷ್ಟರ ಮಟ್ಟಿಗೆ ಖ್ಯಾತಿ ಪಡೆದುಕೊಂಡ ಆ ಘಟನೆಯಲ್ಲೂ ಒಂದು ರೋಚಕತೆ ಇದೆ. ಸ್ವತಃ ಸೌರವ್​ ಗಂಗೂಲಿ ಅವರೇ ಆ ಕೌತುಕವನ್ನು ಬಿಚ್ಚಿಟ್ಟಿದ್ದಾರೆ.

‘ಬ್ರೇಕ್​ ಫಾಸ್ಟ್​ ವಿತ್​ ಚಾಂಪಿಯನ್​’ ಎಂಬ ಜನಪ್ರಿಯ ಟಿವಿ ಶೋವೊಂದರಲ್ಲಿ ಮಾತನಾಡಿರುವ ಗಂಗೂಲಿ, “ಪಂದ್ಯ ನಡೆಯುವಾಗ ನಾನು ಬಾಲ್ಕನಿಯ ಬಲಭಾಗದಲ್ಲಿ ನಿಂತಿದ್ದೆ. ನನ್ನ ಎಡಭಾಗದಲ್ಲಿ ವಿವಿಎಸ್​ ಲಕ್ಷ್ಮ,ಣ್​ ನಿಂತಿದ್ದರು. ನನ್ನ ಹಿಂದೆ ಹರ್ಭಜನ್​ ಸಿಂಗ್​ ನಿಂತಿದ್ದರು. ತಂಡ ಪಂದ್ಯ ಗೆಲ್ಲುತ್ತಲೇ ನಾನು ನನ್ನ ಜೆರ್ಸಿ ಬಿಚ್ಚಿದೆ. ಪಕ್ಕದಲ್ಲೇ ನಿಂತಿದ್ದ ಲಕ್ಷ್ಮಣ್​ “ಹಾಗೆ ಮಾಡಬೇಡ”(ನಾ ಕರ್​) ಎಂದು ಹೇಳಿದರು. ಆದರೂ ನಾನು ಜೆರ್ಸಿ ಬಿಚ್ಚಿ ಕುಣಿದಾಡಿದೆ. ನಂತರ ನನ್ನನ್ನು ನೋಡಿ ಪ್ರಶ್ನೆ ಹಾಕಿದ ಲಕ್ಷ್ಮಣ್​ “ಈಗ ನಾನೇನು ಮಾಡಲಿ” ಎಂದರು. ಆಗ ನಾನು ” ನೀನೂ ಜೆರ್ಸಿ ಬಿಚ್ಚಿ ಕುಣಿ,” ಎಂದಿದ್ದೆ ಎಂದು ಹೇಳಿಕೊಂಡಿದ್ದಾರೆ.

ಆದರೆ, ಈ ಘಟನೆ ಬಗ್ಗೆ ಆಗಾಗ ನನಗೇ ನಾಚಿಕೆ ಅನಿಸುತ್ತದೆ. ಈ ಘಟನೆ ಗಮನಿಸಿದ್ದ ನನ್ನ ಮಗಳು ” ನೀನು ಏಕೆ ಹಾಗೆ ಮಾಡಿದೆ? ಹಾಗೆ ಮಾಡಲೇ ಬೇಕಾ? ಎಂದೆಲ್ಲ ಪ್ರಶ್ನಿಸಿದ್ದಳು. ಆದಕ್ಕೆ ನಾನು ” ತಪ್ಪಿನಿಂದ ಆ ಘಟನೆ ನಡೆದು ಹೋಯಿತು,”ಎಂದು ಹೇಳಿದ್ದೆ. ಜೀವನಲ್ಲಿ ಕೆಲವೊಮ್ಮೆ ನಮ್ಮ ನಿಯಂತ್ರಣವನ್ನೂ ಮೀರಿದ ಪ್ರಸಂಗಗಳು ನಡೆದು ಹೋಗುತ್ತವೆ ಎಂದು ಅವರು ಹೇಳಿಕೊಂಡಿದ್ದಾರೆ.