Friday, 16th November 2018  

Vijayavani

Breaking News

ಹೊಸ ಗುರಿಯತ್ತ ನಕ್ಸಲರ ನೋಟ!

Wednesday, 12.09.2018, 2:05 AM       No Comments

ಇತ್ತೀಚಿನ ದಿನಗಳಲ್ಲಿ ನಕ್ಸಲರ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿರುವ ಬೆನ್ನಲ್ಲೇ ಮಾವೋವಾದಿಗಳು ತಮ್ಮ ಚಿಂತನೆ ಮತ್ತು ಸಂಘಟನೆಯೆಡೆಗೆ ಜನರನ್ನು ಸೆಳೆಯಲು ಹೊಸ ಹೊಸ ತಂತ್ರ ಹೆಣೆಯುತ್ತಿದ್ದಾರೆ. ಮತ್ತೊಂದೆಡೆ, ನಕ್ಸಲ್ ಸಂಘಟನೆ ಮತ್ತು ಅದರ ಹಿರಿಯ ಮುಖಂಡರ ಕಾರ್ಯವೈಖರಿಯಿಂದ ಭ್ರಮನಿರಸನಗೊಂಡಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಈ ಎಲ್ಲ ಬೆಳವಣಿಗೆಗಳ ಮಾಹಿತಿ ಇಲ್ಲಿದೆ.

‘ನಗರ ನಕ್ಸಲರ’ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿರುವ ಹೊತ್ತಿನಲ್ಲೇ ಸಿಪಿಐ (ಮಾವೋವಾದಿ) ಮುಂದಾಳುಗಳು ನಗರ ಪ್ರದೇಶದ ಎಡಪಂಥೀಯ ಚಿಂತಕರು, ಯುವಕರನ್ನು ಸಂಘಟನೆಗೆ ಸೇರಿಸಿಕೊಳ್ಳಲು ಮುಂದಾಗಿದ್ದಾರೆ. ಎರಡನೇ ಹಂತದ ನಾಯಕತ್ವದಲ್ಲಿ ಕೊರತೆ ಎದುರಿಸುತ್ತಿರುವ ಕಾರಣ ಮಾವೋವಾದಿಗಳು ಈ ನಡೆ ಇರಿಸಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಮಾವೋವಾದಿ ಸಂಘಟನೆಯ ಪಾಲಿಟ್​ಬ್ಯೂರೊ ಸದಸ್ಯ ಪ್ರಶಾಂತ್ ಬೋಸ್ ಅಲಿಯಾಸ್ ಕಿಷನ್ ದಾ, ಕ್ರಾಂತಿಕಾರಿ ನಿಲುವಿನ ಶಿಕ್ಷಣವಂತ ಯುವಕರು, ಚಿಂತಕರ ಪಟ್ಟಿಯನ್ನು ಕಳುಹಿಸುವಂತೆ ಸಂಘಟನೆಯ ವಿವಿಧ ಸಮಿತಿಗಳಿಗೆ ಸೂಚಿಸಿದ್ದಾರೆ. ಸಂಘಟನೆಯಲ್ಲಿರುವ ಎರಡನೇ ಹಂತದ ಯುವಕರು ಶಿಕ್ಷಣದ ಕೊರತೆ ಕಾರಣ ಮುಖಂಡತ್ವ ವಹಿಸುವಷ್ಟು ಸಮರ್ಥವಾಗಿ ಬೆಳೆದಿಲ್ಲ. ಹೀಗಾಗಿ ದಲಿತರು, ಬುಡಕಟ್ಟು ಜನರು, ಬಡವರಿಗೆ ಶಿಕ್ಷಣ ಮತ್ತು ಎಡಚಿಂತನೆಯ ತರಬೇತಿ ನೀಡುವಂತಹ ‘ಕ್ರಾಂತಿಕಾರಿ ಚಿಂತಕರ’ ಅಗತ್ಯ ಈಗ ಹೆಚ್ಚಿದೆ. ಹೀಗಾಗಿ ಪಟ್ಟಿ ನೀಡಲು ಸೂಚಿಸಲಾಗಿದೆ ಎಂದು ನಿಷೇಧಿತ ಸಂಘಟನೆಯ ಮುಖವಾಣಿ ‘ಲಾಲ್ ಚಿಂಗಾರಿ ಪ್ರಕಾಶನ’ಕ್ಕೆ ನೀಡಿರುವ ಸಂದರ್ಶನದಲ್ಲಿ ಬೋಸ್ ತಿಳಿಸಿದ್ದಾರೆ. ಬಿಹಾರ, ಜಾರ್ಖಂಡ್, ಅಸ್ಸಾಂಗಳಲ್ಲಿ ಶಿಕ್ಷಣ ಕೊರತೆ ಇರುವ ಬುಡಕಟ್ಟು ಪ್ರದೇಶ, ದಲಿತರು, ಬಡವರು ವಾಸಿಸುವ ಸ್ಥಳಗಳಲ್ಲಿ ಚಟುವಟಿಕೆ ವಿಸ್ತರಿಸಲು ಮಾವೋವಾದಿಗಳು ಯೋಜನೆ ರೂಪಿಸಿದ್ದಾರೆ. ಸಂಘಟನೆಯಲ್ಲಿರುವ ವಯಸ್ಸಾದವರನ್ನು ಮತ್ತು ದೈಹಿಕವಾಗಿ ಅಶಕ್ತರಾದವರನ್ನು ಭೂಗತ ಚಟುವಟಿಕೆಗಳಿಂದ ಬಿಡುಗಡೆ ಮಾಡಿ, ಮರುಸಂಘಟನೆ ಮಾಡುವುದಾಗಿ ಮಾವೋವಾದಿ ಸಂಘಟನೆ ಕಳೆದ ವರ್ಷ ನಿರ್ಣಯ ಕೈಗೊಂಡಿತ್ತು. ಆದರೆ, ಪ್ರಮುಖ ಹೊಣೆಗಾರಿಕೆಯಲ್ಲಿರುವ ಬಹುತೇಕ ನಾಯಕರು 60 ವರ್ಷ ದಾಟಿದ್ದಾರೆ. ಇವರನ್ನು ನಿವೃತ್ತಿಗೊಳಿಸಿದರೆ ಅವರ ಜಾಗವನ್ನು ತುಂಬುವಂತಹ ಸಮರ್ಥರು ಇಲ್ಲ. ಇದರಿಂದ ನಿರ್ವಾತ ಸೃಷ್ಟಿಯಾಗಿ ಸಂಘಟನೆ ಬಲಹೀನವಾಗುತ್ತದೆ ಎಂದು ಈ ನಿರ್ಣಯ ಜಾರಿ ಮಾಡಿರಲಿಲ್ಲ.

ಬಂಧಿತರ ಪರ ಬ್ಯಾನರ್

ಪ್ರಧಾನಿ ನರೇಂದ್ರ ಮೋದಿ ಹತ್ಯೆ ಸಂಚು ನಡೆಸಿದ ಆಪಾದನೆ ಮೇಲೆ ಬಂಧಿತರಾಗಿರುವ ನಕ್ಸಲ್ ಹಿತೈಷಿಗಳಾದ ಹತ್ತು ಮಂದಿ ಚಿಂತಕರ ಪರ ಗಡ್​ಚಿರೋಲಿ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಬ್ಯಾನರ್​ಗಳು ಕಾಣಿಸಿಕೊಂಡಿವೆ. ಸಿಪಿಐ (ಮಾವೋವಾದಿ) ಸಂಘಟನೆಯ ಪೆರಿಮಿಲಿ ದಳಂ ಕಾರ್ಯಕರ್ತರು ಈ ಬ್ಯಾನರ್​ಗಳನ್ನು ಅಂಟಿಸಿದ್ದು, ಚಿಂತಕರ ಬಂಧನವನ್ನು ಖಂಡಿಸುವಂತೆ ಸಾರ್ವಜನಿಕರಲ್ಲಿ ಆಗ್ರಹಿಸಿದ್ದಾರೆ.

ಹೊಸದಿಕ್ಕಿನತ್ತ ಬುಡಕಟ್ಟು ಜನರು

ಮಾವೋವಾದಿಗಳು ತಮ್ಮ ಸಂಘಟನೆಗಳಿಗೆ ಸೇರುವಂತೆ ಒತ್ತಡ, ಆಮಿಷ, ಬೆದರಿಕೆ ಹೇರುವುದೇ ಬುಡಕಟ್ಟು ಮತ್ತು ವನವಾಸಿ ಜನರ ಮೇಲೆ. ನಕ್ಸಲರ ಬಂದೂಕಿನ ಭೀತಿಗೋ, ಅರಿವಿನ ಕೊರತೆಗೋ ಅವರು ಕೆಲವೊಮ್ಮೆ ನಕ್ಸಲ್ ಸಂಘಟನೆ ಸೇರುತ್ತಿದ್ದರು. ಆದರೀಗ, ಸರ್ಕಾರದ ಯೋಜನೆಗಳು ಮತ್ತು ಅಭಿವೃದ್ಧಿಯ ಆಶಯಗಳು ಇಲ್ಲೂ ಗರಿಗೆದರಿದ್ದು ಬುಡಕಟ್ಟು ಜನರು ಮತ್ತು ವನವಾಗಳು ನಕ್ಸಲ್ ಸಂಘಟನೆಗಳಿಗೆ ಸೇರಲು ನಿರಾಕರಿಸುತ್ತಿದ್ದಾರೆ. ಅಲ್ಲದೆ, ಉತ್ತಮ ಶಿಕ್ಷಣ ಪಡೆದು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವತ್ತ ಮುಖ ಮಾಡಿದ್ದಾರೆ ಎಂದು ಸಿಆರ್​ಪಿಎಫ್ ತನಿಖಾ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಖಂಡರ ಬಗ್ಗೆ ಭ್ರಮನಿರಸನ

ಒಂದೆಡೆ, ಭವಿಷ್ಯದ ನಾಯಕತ್ವವನ್ನು ಬೆಳೆಸಲು ಮುಂದಾಗಿರುವಂತೆಯೇ, ಮಾವೋವಾದಿ ಮುಖಂಡರ ಧೋರಣೆಯಿಂದ ಆ ಸಂಘಟನೆಗಳ ಕಾರ್ಯಕರ್ತರೇ ಭ್ರಮನಿರಸನಗೊಂಡಿರುವ ಸಂಗತಿಯೂ ಬಯಲಾಗಿದೆ. ಮಾವೋವಾದಿ ಮುಖಂಡರು ‘ನ್ಯಾಯ’, ‘ಸಮಾನತೆ’ಯ ಮುಖವಾಡ ಹಾಕಿ ‘ಹೋರಾಟ’ದ ಹೆಸರಲ್ಲಿ ಭಾರಿ ದುಡ್ಡು ಮಾಡುತ್ತಿದ್ದಾರೆ ಮತ್ತು ಐಷಾರಾಮಿ ಬದುಕು ಸಾಗಿಸುತ್ತ ಬೇರೆಯವರಿಗೆ ಮಾತ್ರ ‘ಸಿದ್ಧಾಂತ’ ಬೋಧಿಸುತ್ತಾರೆ ಎಂಬ ಅಸಮಾಧಾನದ ಬೇಗುದಿ ದೊಡ್ಡಪ್ರಮಾಣದಲ್ಲಿದೆ.

ಮುಖಂಡರ ಧನದಾಹಿ ಸ್ವಭಾವದಿಂದ ಸಂಘಟನೆಯ ಮಧ್ಯಮ ಮತ್ತು ಕೆಳ ಹಂತದ ಕಾರ್ಯಕರ್ತರು ರೋಸಿಹೋಗಿದ್ದು, ಇದೇ ಕಾರಣದಿಂದ ಮುಖ್ಯವಾಹಿನಿಗೆ ಬರಲು ಇಚ್ಛಿಸುತ್ತಿದ್ದಾರೆ ಮತ್ತು ಈ ನಿಟ್ಟಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಶರಣಾಗುತ್ತಿದ್ದಾರೆ ಎಂಬ ಮಹತ್ವದ ಅಂಶವನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್​ಪಿಎಫ್) ತನಿಖೆ ಬಯಲು ಮಾಡಿದೆ. ಬೇರುಮಟ್ಟದ ಮತ್ತು ಮಧ್ಯಮ ಶ್ರೇಣಿಯ ಕಾರ್ಯಕರ್ತರು ಕಡುಕಷ್ಟದಲ್ಲಿ ದುಡಿಯುತ್ತಿದ್ದರೆ ಹಿರಿಯ ಮುಖಂಡರು ಮಾತ್ರ ಸುಖದ ಜೀವನ ನಡೆಸುತ್ತಿದ್ದಾರೆ. ಈ ಮುಖಂಡರು ಕಿರಿಯರ ಅಹವಾಲುಗಳನ್ನು ಕೇಳಲು ಸಿದ್ಧರಿಲ್ಲ. ಅವರಿಗೆ ಹಣಮೋಹ ಹೆಚ್ಚಾಗಿದೆಯೇ ಹೊರತು, ಸಂಘಟನೆ ಸಿದ್ಧಾಂತವಲ್ಲ ಎಂಬ ಅಭಿಪ್ರಾಯ ಅನೇಕ ಕಿರಿಯರಲ್ಲಿ ಮನೆಮಾಡಿದೆ. ಕಳೆದ ವರ್ಷ 359 ನಕ್ಸಲರು ಶರಣಾಗಿದ್ದು, ಈ ಅಂಕಿಸಂಖ್ಯೆಯೇ ಆ ಸಂಘಟನೆಗಳ ದುರವಸ್ಥೆಯನ್ನು ಬಿಂಬಿಸುತ್ತದೆ. ಅದರಲ್ಲೂ, ನಕ್ಸಲ್​ಪೀಡಿತ ಛತ್ತೀಸ್​ಗಢ ರಾಜ್ಯವೊಂದರಲ್ಲೇ 217 ಮಾವೋವಾದಿಗಳು ಶರಣಾಗಿದ್ದಾರೆ. ಬುಡಕಟ್ಟು ಜನರು, ರೈತರು ಮತ್ತು ನಿರುದ್ಯೋಗಿ ಯುವಕರ ಸಮಸ್ಯೆಗಳಿಗೆ ಅಭಿವೃದ್ಧಿಯೊಂದೇ ಪರಿಹಾರ ಎಂಬ ಸತ್ಯವನ್ನು ಇವರೂ ಮನಗಂಡ ಪರಿಣಾಮ, ಈ ಪರಿವರ್ತನೆ ಕಂಡುಬಂದಿದೆ. ಪರಿಣಾಮ, ನಕ್ಸಲ್ ಸಂಘಟನೆಗಳು ದಿನಕಳೆದಂತೆ ವರ್ಚಸ್ಸು ಕಳೆದುಕೊಳ್ಳುತ್ತಿದ್ದು, ಯುವಕರು ದೂರವಾಗುತ್ತಿದ್ದಾರೆ. ಪೀಪಲ್ಸ್ ಲಿಬರೇಷನ್ ಗೊರಿಲ್ಲಾ ಆರ್ವಿು (ಪಿಎಲ್​ಜಿಎಸ್), ಇದು ಮಾವೋವಾದಿಗಳ ಶಸ್ತ್ರಾಸ್ತ್ರ ಸಂಗ್ರಹ ಶಾಖೆಯಾಗಿದ್ದು, ಈ ಸಂಘಟನೆಯೇ ಮದ್ದುಗುಂಡು ಹಾಗೂ ಇತರೆ ಶಸ್ತ್ರಾಸ್ತ್ರಗಳ ಕೊರತೆಯನ್ನು ಎದುರಿಸುತ್ತಿದೆ. ‘ಮಾವೋವಾದಿಗಳ ನಡೆ ಮತ್ತು ನುಡಿಯಲ್ಲಿ ಇರುವ ಅಗಾಧ ವ್ಯತ್ಯಾಸವನ್ನು ಜಗತ್ತಿನೆದುರು ಬಯಲು ಮಾಡಬೇಕಿದೆ’ ಎಂದು ಶರಣಾದ ನಕ್ಸಲ್ ಪಹಾಡ್ ಸಿಂಗ್ ಕೆಲ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದು-‘ಸಂಘಟನೆಯ ಹಿರಿಯ ನಾಯಕರು ಎನಿಸಿಕೊಂಡವರಿಗೆ ಬುಡಕಟ್ಟು ಜನರ ಬಗ್ಗೆ ನಿಜವಾದ ಕಾಳಜಿ ಇಲ್ಲ. ಅವರ ಹೆಸರು, ಹೋರಾಟ ಹೇಳಿಕೊಂಡು ಇವರು ಐಷಾರಾಮಿ ಬದುಕು ಸಾಗಿಸುತ್ತಿದ್ದಾರೆ’ ಎಂಬ ಮಾಹಿತಿ ಹೊರಗೆಡವಿದ್ದಾನೆ. ಬುಡಕಟ್ಟು ಜನರಲ್ಲಿ ಅರಿವು ಮೂಡಿಸಿ ಅವರಿಗೆ ಸೂಕ್ತ ಸೌಲಭ್ಯ, ಉದ್ಯೋಗ ದೊರಕಿಸಿದರೆ ಅವರಲ್ಲಿ ಯಾರೂ ನಕ್ಸಲ್ ಆಗಲು ಸಾಧ್ಯವಿಲ್ಲವೆಂದು ಪಹಾಡ್ ಸಿಂಗ್ ಹೇಳಿದ್ದಾನೆ. ಈತ ಮಹಾರಾಷ್ಟ್ರ-ಮಧ್ಯಪ್ರದೇಶ-ಛತ್ತೀಸ್​ಗಢ ಸ್ಪೆಷಲ್ ಝೋನ್​ನ ಕಾರ್ಯದರ್ಶಿಯಾಗಿದ್ದ.

Leave a Reply

Your email address will not be published. Required fields are marked *

Back To Top