ಬೆಳಗಾವಿ: ವಿಟಿಯು ಕುಲಸಚಿವ ಅಮಾನತು

ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು) ಕುಲಸಚಿವ ಎಚ್.ಎನ್.ಜಗನ್ನಾಥರೆಡ್ಡಿ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ನಿವೃತ್ತ ನ್ಯಾಯಾಧೀಶ ಡಿ.ಎಸ್. ಶಿಂಧೆ ಅಧ್ಯಕ್ಷತೆಯ ತನಿಖಾ ಸಮಿತಿಯು ನೀಡಿರುವ ಮಧ್ಯಂತರ ವರದಿಯ ಆಧಾರದ ಮೇಲೆ ಅಮಾನತುಗೊಳಿಸಲು ರಾಜ್ಯಪಾಲರು ಕುಲಪತಿಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಟಿಯು ಕುಲಪತಿ ಡಾ.ಕರಿಸಿದ್ದಪ್ಪ ಈ ಆದೇಶ ಹೊರಡಿಸಿದ್ದಾರೆಂದು ತಿಳಿದು ಬಂದಿದೆ.

ವಿಜಯವಾಣಿಯು ಜ.21ರಂದು ಕುಲಸಚಿವರ ಅಕ್ರಮಗಳ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿತ್ತು. ಕುಲಸಚಿವರ ವಿರುದ್ಧ ಆರೋಪ ಹೆಚ್ಚಾಗಿರುವುದರಿಂದ ಅಧಿಕಾರದಲ್ಲಿ ಮುಂದುವರಿಯುವುದು ತಪ್ಪು. ಆದ್ದರಿಂದ ಅಮಾನತುಗೊಳಿಸಿ ವಿಚಾರಣೆ ಮುಂದುವರಿಸುವಂತೆ ಸಮಿತಿಗೆ ಸೂಚಿಸಿದ್ದಾರೆ. ಜಗನ್ನಾಥರೆಡ್ಡಿ ಅವರು ಹಣಕಾಸು, ಕಟ್ಟಡಗಳ ನಿರ್ಮಾಣ, ಕಾಲೇಜು ಮಾನ್ಯತೆ ಸೇರಿದಂತೆ ಹತ್ತು ಹಲವು ವಿಷಯಗಳಲ್ಲಿ ಭ್ರಷ್ಟಾಚಾರ ಎಸಗಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯ ಸಮಿತಿ ನೇಮಕ ಮಾಡಿ ತನಿಖೆಗೆ ಆದೇಶಿಸಿದ್ದರು.

ವಿಚಾರಣೆ ನಡೆಸುವ ಉದ್ದೇಶದಿಂದ ನನ್ನನ್ನು ಅಮಾನತು ಮಾಡಲಾಗಿದೆ. ನಾನು ವಿಚಾರಣೆ ಎದುರಿಸಲು ಸಿದ್ಧನಿದ್ದೇನೆ. ಕಾನೂನು ಬಾಹಿರವಾಗಿ ನಾನೇನೂ ಮಾಡಿಲ್ಲ.
– ಎಚ್.ಎನ್.ಜಗನ್ನಾಥರೆಡ್ಡಿ, ಕುಲಸಚಿವ, ವಿಟಿಯು