ವಿಎಸ್‌ಕೆ ವಿವಿ ವಿದ್ಯಾರ್ಥಿಗಳಿಂದ ಪದಕಗಳ ಬೇಟೆ

ಪೆಂಕಾಕ್ ಸಿಲತ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ |ಅಮೃತಸರದಲ್ಲಿ ನಡೆದ ಅಂತರ್ ವಿಶ್ವವಿದ್ಯಾಲಯ ಕ್ರೀಡಾಕೂಟ

ಬಳ್ಳಾರಿ: ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಅಮೃತಸರದಲ್ಲಿ ನಡೆದ ಪೆಂಕಾಕ್ ಸಿಲತ್ (ಮಾರ್ಷಲ್ ಆರ್ಟ್ ಮಾದರಿ) ಸ್ಪರ್ಧೆಯಲ್ಲಿ ಆರು ಬೆಳ್ಳಿ ಹಾಗೂ 12 ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ವಿಎಸ್‌ಕೆ ವಿವಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಸ್‌ಕೆ ವಿವಿ ಕುಲಪತಿ ಎಂ.ಎಸ್.ಸುಭಾಷ್ ಈ ಕುರಿತು ಮಾಹಿತಿ ನೀಡಿದರು. ವಿವಿಧ ಕ್ರೀಡಾಕೂಟಗಳಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು 2010ರಿಂದ ಪದಕ ಗೆಲ್ಲಲು ಪ್ರಯತ್ನ ನಡೆಸಿದ್ದರೂ ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಕ್ರೀಡಾಕೂಟದಲ್ಲಿ ನಿರ್ದಿಷ್ಟ ಸ್ಪರ್ಧೆಗಳಲ್ಲಿ ಭಾಗವಹಿಸಲು ತೀರ್ಮಾನಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿತ್ತು. ಅಮೃತಸರದ ಗುರುನಾನಕ್ ದೇವ ವಿಶ್ವವಿದ್ಯಾಲಯದಲ್ಲಿ ನಡೆದ ಪೆಂಕಾಕ್ ಸಿಲತ್ ಸ್ಪರ್ಧೆಯಲ್ಲಿ ಪದಕಗಳನ್ನು ಗೆಲ್ಲುವ ಮೂಲಕ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕೀರ್ತಿ ಪತಾಕೆ ಹಾರಿಸಿದ್ದಾರೆ ಎಂದು ಹೇಳಿದರು.

ತುಂಗಲ್, ರೇಗು ಹಾಗೂ ಗಾಂಡ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಹೊಸಪೇಟೆ, ಗಂಗಾವತಿ ಹಾಗೂ ಕೊಪ್ಪಳದ ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಆಕಾಶ್ ದೊಡ್ಡವಾಡ, ಮನೋಜ್ ಕುಮಾರ್, ವಿಜಯಕುಮಾರ್, ಪ್ರತಾಪ್ ಸಿಂಹ ಸಾಗರ್, ಅಭಿಜಿತ್, ಶೃತಿ, ರುಕ್ಮಿಣಿ, ಮಂಜುನಾಥ್ ಪದಕಗಳನ್ನು ಗೆದ್ದಿದ್ದಾರೆ. ವಿಶ್ವವಿದ್ಯಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕ್ರೀಡೆಯಲ್ಲಿ ಇಷ್ಟೊಂದು ಪದಕಗಳು ಬಂದಿವೆ.

ಕ್ರೀಡಾ ವಿಭಾಗದಲ್ಲಿ ವಿಶ್ವವಿದ್ಯಾಲಯದ ಖ್ಯಾತಿ ಹೆಚ್ಚಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದಿಂದ ಉಚಿತ ಶಿಕ್ಷಣದ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನಗದು ಬಹುಮಾನ ನೀಡಲಾಗುವುದು. ಜೆಎಸ್‌ಡಬ್ಲುೃ ಸಂಸ್ಥೆಯ ಇನ್ಸ್‌ಪೈರ್ ಇನ್ಸ್‌ಟ್ಯೂಟ್‌ನಲ್ಲಿ ತರಬೇತಿ ಕೊಡಿಸಲು ಪ್ರಯತ್ನಿಸಲಾಗುವುದು. ವಿಶ್ವವಿದ್ಯಾಲಯದಿಂದ ಜಂಪ್ ರೋಪ್ ರಾಷ್ಟ್ರೀಯ ಕ್ರೀಡಾಕೂಟ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. ಮೌಲ್ಯಮಾಪನ ವಿಭಾಗದ ಕುಲಸಚಿವ ಕೆ.ರಮೇಶ್, ಕ್ರೀಡಾ ವಿಶೇಷಾಧಿಕಾರಿಗಳಾದ ಶಾಂತನಾಯ್ಕ, ಕವಿತಾ ಸಂಗನಗೌಡ, ರಾಷ್ಟ್ರೀಯ ಪೆಂಕಾಕ್ ಸಿಲತ್ ಫೆಡರೇಷನ್ ತಾಂತ್ರಿಕ ನಿರ್ದೇಶಕ ಅಬ್ದುಲ್ ರಝಾಕ್ ಇತರರು ಇದ್ದರು.