ಐದು ನಗರ ಸ್ಥಳೀಯ ಸಂಸ್ಥೆಗಳಿಗೆ ಮತದಾನ ಇಂದು

ಹಾವೇರಿ: ಜಿಲ್ಲೆಯ ಐದು ನಗರ ಸ್ಥಳೀಯ ಸಂಸ್ಥೆಗಳಿಗೆ ಆ. 31ರಂದು ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದ್ದು, ಶಾಂತಿಯುತ ಮತದಾನಕ್ಕೆ ಜಿಲ್ಲಾಡಳಿತ ಸನ್ನದ್ಧಗೊಂಡಿದೆ.

ಹಾವೇರಿ ಮತ್ತು ರಾಣೆಬೆನ್ನೂರ ನಗರಸಭೆಗಳು, ಹಾನಗಲ್ಲ, ಸವಣೂರು ಪುರಸಭೆಗಳು ಹಾಗೂ ಹಿರೇಕೆರೂರ ಪಟ್ಟಣ ಪಂಚಾಯಿತಿಗೆ ಮತದಾನ ನಡೆಯಲಿದೆ. ಐದು ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 136 ವಾರ್ಡ್​ಗಳಿಗೆ ಚುನಾವಣೆ ನಡೆಯಲಿದ್ದು, ಈ ಸ್ಥಾನಗಳಿಗೆ ಆಯ್ಕೆ ಬಯಸಿ ಒಟ್ಟು 480 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಎಲ್ಲ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಇಂದು ನಿರ್ಧರಿಸಲಿದ್ದಾರೆ.

ಕಾಂಗ್ರೆಸ್ ಪಕ್ಷವು 136 ವಾರ್ಡ್​ಗಳಿಗೆ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಬಿಜೆಪಿ 130 ಹಾಗೂ ಜೆಡಿಎಸ್ 52 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಯಾವುದೇ ವಾರ್ಡ್​ನಲ್ಲಿ ಅವಿರೋಧ ಆಯ್ಕೆ ನಡೆದಿಲ್ಲ. ಜಿಲ್ಲೆಯ 136 ವಾರ್ಡ್​ಗಳಲ್ಲಿ 35 ವಾರ್ಡ್​ಗಳಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದ್ದರೆ 52 ವಾರ್ಡ್​ಗಳಲ್ಲಿ ತ್ರಿಕೋನ ಸ್ಪರ್ಧೆ ಕಂಡುಬಂದಿದೆ. ರಾಣೆಬೆನ್ನೂರಿನ 13ನೇ ವಾರ್ಡ್​ನಲ್ಲಿ ಅತಿಹೆಚ್ಚು ಅಂದರೆ 10 ಅಭ್ಯರ್ಥಿಗಳು ಕಣದಲ್ಲಿದ್ದರೆ. ಹಾವೇರಿಯ 18ನೇ ವಾರ್ಡ್​ನಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 172 ಮಹಿಳಾ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಚುನಾವಣೆಯಲ್ಲಿ ರಾಜ್ಯ ಚುನಾವಣಾ ಆಯೋಗದವರು ಜಿಲ್ಲೆಗೆ ಹಂಚಿಕೆ ಮಾಡಿದ ಇವಿಎಂಗಳನ್ನು ಬಳಸಲಾಗುತ್ತಿದೆ. ಈ ಇವಿಎಂಗಳ ಪ್ರಥಮ ಹಂತದ ತಪಾಸಣೆ (ಎಫ್​ಎಲ್​ಸಿ) ಮಾಡಿ ಒಟ್ಟು 244 ವಿದ್ಯುನ್ಮಾನ ಮತಯಂತ್ರಗಳನ್ನು ಚುನಾವಣೆಗಾಗಿ ಸಿದ್ಧಪಡಿಸಲಾಗಿದೆ. ನೋಟಾಗೂ ಅವಕಾಶ ಕಲ್ಪಿಸಲಾಗಿದೆ. ಆದರೆ, ವಿವಿಪ್ಯಾಟ್ ಬಳಕೆಯಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಚಿಹ್ನೆಯ ಜೊತೆಗೆ ಭಾವಚಿತ್ರ ಮುದ್ರಿಸಲಾಗಿದೆ.

ಈ ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳ ಚುನಾವಣಾ ವೆಚ್ಚ ಪರಿಶೀಲಿಸಲು ಅಧಿಕಾರಿಗಳನ್ನು ನೇಮಿಸಲಾಗಿದ್ದು, ನಗರಸಭೆಗೆ 2 ಲಕ್ಷ, ಪುರಸಭೆಗೆ 1.5 ಲಕ್ಷ ಹಾಗೂ ಪಟ್ಟಣ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳಿಗೆ 1 ಲಕ್ಷ ರೂ. ಗಳ ಗರಿಷ್ಠ ವೆಚ್ಚದ ಮಿತಿಯನ್ನು ನಿಗದಿಪಡಿಸಲಾಗಿದೆ.

ಅಧಿಸೂಚನೆಯ ದಿನದಿಂದಲೇ ಮಾದರಿ ನೀತಿಸಂಹಿತೆಯು ಜಾರಿಯಲ್ಲಿದ್ದು, ಇದರ ಕಟ್ಟು ನಿಟ್ಟಿನ ಅನುಪಾಲನೆಗಾಗಿ ಎಂಸಿಸಿ ತಂಡಗಳು, ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಿ, ಆಯಕಟ್ಟಿನ ಸ್ಥಳಗಳಲ್ಲಿ ತಪಾಸಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸೂಕ್ತ ಅನುಮತಿಯಿಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿಪತ್ರಗಳನ್ನು ಲಗತ್ತಿಸುವುದು, ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸುವುದನ್ನು ಪ್ರತಿಬಂಧಿಸಲಾಗಿರುವ ಕಾರಣ ಜಿಲ್ಲೆಯಾದ್ಯಂತ ಎಲ್ಲಿಯೂ ಪೋಸ್ಟರ್​ಗಳ ಹಾವಳಿ ಅಷ್ಟಾಗಿ ಕಂಡುಬಂದಿಲ್ಲ. ಪ್ಲಾಸ್ಟಿಕ್ ಮುಕ್ತ ಚುನಾವಣೆ ನಡೆಸಲು ಸಹಕರಿಸುವಂತೆ ರಾಜಕೀಯ ಪಕ್ಷಗಳ ಜೊತೆಗೆ ನಡೆಸಲಾದ ಸಭೆಯಲ್ಲಿ ಕೋರಿದ ಕಾರಣ ಎಲ್ಲಿಯೂ ಫ್ಲೆಕ್ಸ್ ಹಾವಳಿ ಕಂಡುಬಂದಿಲ್ಲ. ಬಹಿರಂಗ ಪ್ರಚಾರದ ಅವಧಿ ಈಗಾಗಲೇ ಮುಕ್ತಾಯಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ ತಿಳಿಸಿದರು.

ಜಿಲ್ಲೆಯಲ್ಲಿ ಚುನಾವಣೆಗಳ ಮೇಲ್ವಿಚಾರಣೆಗಾಗಿ ಒಬ್ಬರು ಸಾಮಾನ್ಯ ವೀಕ್ಷಕರು ಹಾಗೂ ಒಬ್ಬರು ವೆಚ್ಚ ವೀಕ್ಷಕರು ನಿಯೋಜನೆಗೊಂಡಿದ್ದು ಒಬ್ಬರು ವಿಶೇಷ ವೀಕ್ಷಕರನ್ನೂ ಸಹ ಚುನಾವಣಾ ಆಯೋಗವು ನಿಯೋಜಿಸಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಶಾಂತರೀತಿಯಿಂದ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಒಟ್ಟು 208 ಮತಗಟ್ಟೆ ಸ್ಥಾಪನೆ: ಮತದಾನ ಕಾರ್ಯಕ್ಕಾಗಿ ಜಿಲ್ಲಾಡಳಿತ ಒಟ್ಟು 208 ಮತಗಟ್ಟೆಗಳನ್ನು ಸ್ಥಾಪಿಸಿದೆ. ಇದರಲ್ಲಿ 202 ಮೂಲ ಮತಗಟ್ಟೆಗಳಾಗಿದ್ದರೆ, 6 ಹೆಚ್ಚುವರಿ ಮತಗಟ್ಟೆಗಳಾಗಿವೆ. ಇದರಲ್ಲಿ 65 ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ 29 ಮತಗಟ್ಟೆಗಳನ್ನು ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಿದೆ. ಪ್ರತಿ ತಾಲೂಕಿಗೆ ಒಬ್ಬರಂತೆ ಐವರು ನೋಡಲ್ ಅಧಿಕಾರಿಗಳನ್ನು ಮೇಲುಸ್ತುವಾರಿಗಾಗಿ ನಿಯೋಜಿಸಲಾಗಿದೆ. ಮತದಾನ ಕಾರ್ಯಕ್ಕಾಗಿ ಸುಮಾರು 1 ಸಾವಿರ ಸಿಬ್ಬಂದಿ ನಿಯೋಜಿಸಲಾಗಿದೆ. ಇದರಲ್ಲಿ ಮತಗಟ್ಟೆ ಅಧ್ಯಕ್ಷಾಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳನ್ನು ಅವರು ಕಾರ್ಯನಿರ್ವಹಿಸುತ್ತಿರುವ ತಾಲೂಕನ್ನು ಹೊರತುಪಡಿಸಿ ಬೇರೆ ತಾಲೂಕಿಗೆ ನಿಯೋಜಿಸಲಾಗಿದೆ.