ಸಿನಿಮಾ

ಮತಯಂತ್ರ ಸೇರಿದ ಅಭ್ಯರ್ಥಿಗಳ ಅದೃಷ್ಟ ಬಿಸಿಲಿನ ಧಗೆ ನಡುವೆ ಮತದಾನ

ಬಳ್ಳಾರಿ: ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಬುಧವಾರ ಶಾಂತಿಯುತ ಮತದಾನ ನಡೆದಿದ್ದು, ಶೇ.ಮತದಾರರು ಹಕ್ಕು ಚಲಾಯಿಸಿದ್ದಾರೆ.
ಹೈವೋಲ್ಟೇಜ್ ಕ್ಷೇತ್ರಗಳಾದ ಬಳ್ಳಾರಿ ನಗರ ಮತ್ತು ಬಳ್ಳಾರಿ ಗ್ರಾಮೀಣ ಸೇರಿ ಇನ್ನಿತರ ಕ್ಷೇತ್ರಗಳಲ್ಲಿ ಮುಂಜಾನೆ 7ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾರರು ಹಕ್ಕು ಚಲಾಯಿಸಿದರು. 9 ಗಂಟೆ ವೇಳೆಗೆ ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಶೇ.8.55 ಇತ್ತು. ಅದರಲ್ಲಿ ಕಂಪ್ಲಿಯಲ್ಲಿ ಶೇ.11.54, ಸಿರಗುಪ್ಪ ಶೇ.9.53, ಬಳ್ಳಾರಿ ಗ್ರಾಮೀಣ ಶೇ.8.54, ಬಳ್ಳಾರಿ ನಗರ ಶೇ.7.26, ಸಂಡೂರಿನಲ್ಲಿ ಶೇ.5.9 ಮತ ಚಲಾವಣೆಯಾಗಿತ್ತು. ನಂತರ ಮತದಾನದ ಪ್ರಯಾಣ ಹೆಚ್ಚುತ್ತ ಸಾಗಿ, 11 ಗಂಟೆಗೆ ಒಟ್ಟಾರೆ ಜಿಲ್ಲೆಯ ಸರಾಸರಿ ಮತದಾನ ಶೇ.23.76 ಆಯಿತು. ಮಧ್ಯಾಹ್ನ 1 ಗಂಟೆ ವೇಳೆಗೆ 39.74 ಆಗಿ, ಊಟದ ನಂತರ ಮಧ್ಯಾಹ್ನ 3 ಗಂಟೆಗೆ ಶೇ.53.27, ಸಂಜೆ 5 ಗಂಟೆಗೆ ಶೇ.67.68 ಮತದಾನ ದಾಖಲಾಯಿತು.
ಜಿಲ್ಲೆಯಲ್ಲಿ 1,222 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 11,52,411 ಮತದಾರರ ಪೈಕಿ 5,67,319 ಪುರುಷರು, 5,84,920 ಮಹಿಳೆಯರು, 172 ತೃತೀಯ ಲಿಂಗಿಗಳಿದ್ದರು. ಐದು ವಿಧಾನ ಸಭೆ ಕ್ಷೇತ್ರದ 54 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಮೇ 13ಕ್ಕೆ ಬಳ್ಳಾರಿ ನಗರದ ರಾವ್ ಬಹಾದ್ದೂರ್ ವೈ.ಮಹಾಬಲೇಶ್ವರಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಕೈ-ಕಮಲ ಕಾರ್ಯಕರ್ತರ ಹೊಡೆದಾಟ

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಸಂಜೀವರಾಯನಕೋಟೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತ ಉಮೇಶ್ ಗೌಡ ಹಾಗೂ ಬಿಜೆಪಿಯ ಹೇಮಣ್ಣಗೆ ಗಾಯಗಳಾಗಿವೆ. ಉಮೇಶ್‌ಗೌಡಗೆ ತಲೆ ಮೇಲೆ ಬಲವಾದ ಪೆಟ್ಟು ಬಿದ್ದಿದ್ದು ರಕ್ತ ಸುರಿಯುತ್ತಿತ್ತು. ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ಕಳುಹಿಸಿದರು. ಘಟನೆ ಬಗ್ಗೆ ಮಾಹಿತಿ ಪಡೆದ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಮಾಹಿತಿ ಪಡೆದರು. ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ, ಮಾಜಿ ಸಂಸದೆ ಜೆ.ಶಾಂತಾ ಭೇಟಿ ನೀಡಿದರು. ಗಲಾಟೆ ನಿಯಂತ್ರಣಕ್ಕೆ ಮತಗಟ್ಟೆ ಬಳಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಕುರ್ಚಿನೂ ಇಲ್ಲ, ನೀರೂ ಇಲ್ಲ!

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮತಗಟ್ಟೆ ಸಂಖ್ಯೆ 41ರಲ್ಲಿ ಮತದಾರರು ಮತ್ತು ಮತಗಟ್ಟೆ ಸಿಬ್ಬಂದಿ ಕುಡಿಯುವ ನೀರಿಗಾಗಿ ಪರದಾಡಿತ್ತಿದ್ದುದು ಕಂಡು ಬಂತು. ಪ್ರತಿ ಮತಗಟ್ಟೆಯಲ್ಲೂ ಕುಡಿಯುವ ನೀರು, ಶೌಚಗೃಹ, ಶಾಮಿಯಾನ, ಕುರ್ಚಿ ವ್ಯವಸ್ಥೆ ಮಾಡುವುದಾಗಿ ಜಿಲ್ಲಾಡಳಿತ ಹೇಳಿದ್ದರೂ ಕೆಲವೆಡೆ ಇವುಗಳ ಕೊರತೆ ಎದ್ದು ಕಂಡಿತು. ಹರಗಿನಡೋಣಿ ಗ್ರಾಮದ ಮತಗಟ್ಟೆ ಸಂಖ್ಯೆ 93ರಲ್ಲಿ ಮತದಾರರು ಕ್ಯೂನಲ್ಲಿ ನಿಂತು ಮತದಾನ ಮಾಡಿದ ದೃಶ್ಯಗಳು ಕಂಡು ಬಂದವು. 88 ವರ್ಷದ ವೃದ್ಧೆ ಸುಲೋಚನಮ್ಮ ತಮ್ಮ ಮೊಮ್ಮಗನ ಸಹಾಯದಿಂದ ಮತದಾನ ಮಾಡಿದರು. ರೇಡಿಯೋ ಪಾರ್ಕ್ ಬಳಿಯ ಮತಗಟ್ಟೆ, ಡಿ.ಸಿ.ನಗರದಲ್ಲಿರುವ ಮತಗಟ್ಟೆಗಳಲ್ಲಿ ವಯೋವೃದ್ಧರಿಗೆ ಕುಳಿತುಕೊಳ್ಳಲು ಕುರ್ಚಿಗಳು ಹಾಕಿರಲಿಲ್ಲ. ಕುಡತಿನಿ ಮತಗಟ್ಟೆವೊಂದರಲ್ಲಿ ಬೇರೆ ಗುರುತಿನ ಚೀಟಿ ಇದ್ದರೂ ಮತದಾರರ ಗುರುತಿನ ಚೀಟಿ (ಎಪಿಕ್ ಕಾರ್ಡ್ ತರುವಂತೆ ಚುನಾವಣಾ ಸಿಬ್ಬಂದಿ ಮತದಾರರನ್ನು ವಾಪಸ್ ಕಳುಹಿಸಿದ ದೃಶ್ಯಗಳು ಕಂಡು ಬಂದವು. ಕೆಲವೊಂದು ಮತಗಟ್ಟೆಗಳಲ್ಲಿ ಸಣ್ಣಪುಟ್ಟ ತಾಂತ್ರಿಕ ದೋಷಗಳು ಕಂಡರೂ ಯಾವುದೇ ಗಂಭೀರ ಸಮಸ್ಯೆ ಇಲ್ಲದೆ ಶಾಂತಿಯುತವಾಗಿ ಮತದಾನ ನಡೆಯಿತು.

ಸರತಿಯಲ್ಲಿ ನಿಂತು ಡಿಸಿ ವೋಟಿಂಗ್

ಬಳ್ಳಾರಿ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಬೆಳಗ್ಗೆ 8 ಗಂಟೆಗೆ ಸರಳಾದೇವಿ ಕಾಲೇಜಿನ ಮತಗಟ್ಟೆ 123ರಲ್ಲಿ ಸರತಿಯಲ್ಲಿ ನಿಂತು ಮತ ಚಲಾಯಿಸಿದರು. ಸ್ವೀಪ್ ಸಮಿತಿ ಅಧ್ಯಕ್ಷ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅವರು ರೈಲ್ವೆ ಕಾಲನಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ 128ರಲ್ಲಿ ಮತದಾನ ಮಾಡಿದರು.

ಹಕ್ಕು ಚಲಾಯಿಸಿದ ಗಣ್ಯರು

ಬಳ್ಳಾರಿ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಸೋಮಶೇಖರ ರೆಡ್ಡಿ , ಕೆಆರ್‌ಪಿಪಿ ಅಭ್ಯರ್ಥಿ ಲಕ್ಷ್ಮೀ ಅರುಣಾ, ಅವರ ಪುತ್ರಿ ಬ್ರಹ್ಮಣಿ ರೆಡ್ಡಿ ಅವರು ಹವಂಬಾವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಮತದಾನ ಮಾಡಿದರು. ಬಾಲಭಾರತಿ ಪ್ರೌಢಶಾಲೆ ಮತಗಟ್ಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ನಾಗೇಂದ್ರ, ಭರತ್ ರೆಡ್ಡಿ ಮತ ಚಲಾಯಿಸಿದರು. ದೇವಿನಗರದ ವಾಲ್ಮೀಕಿ ವೃತ್ತದ ಬಳಿಯ ಮತಗಟ್ಟೆಯಲ್ಲಿ ಬಿ.ಶ್ರೀರಾಮುಲು, ಮಾಜಿ ಸಂಸದೆ ಜೆ.ಶಾಂತಾ, ಕಂಪ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಬಾಬು, ತಾಳೂರು ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಮಾಜಿ ಎಂಎಲ್ಸಿ ಕೆ.ಸಿ.ಕೊಂಡಯ್ಯ, ಬೆಂಗಳೂರು ರಸ್ತೆಯ ದೊಡ್ಡ ಮಾರುಕಟ್ಟೆ ಯ ಮತಗಟ್ಟೆಯಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಮಿಲ್ಲರ್ ಪೇಟೆಯಲ್ಲಿ ಮಾಜಿ ಸಚಿವ ಎಂ.ದಿವಾಕರ ಬಾಬು ಮತ ಚಲಾಯಿಸಿದರು.

ಗಮನದ ಮಾದರಿ ಮತಗಟ್ಟೆಗಳು

ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಒಟ್ಟು 10 ಸಖಿ, ಐದು ವಿಶೇಷಚೇತನ, ಐದು ಯುವ ಮತಗಟ್ಟೆ ಸೇರಿ 12 ಇತರ ಮಾದರಿ ಮತಗಟ್ಟೆಗಳ ಸ್ಥಾಪಿಸಲಾಗಿತ್ತು. ಐದು ವಿಧಾನಸಭಾ ಕ್ಷೇತ್ರಗಳಲ್ಲಿ 10 ಸಖಿ, 5 ವಿಶೇಷಚೇತನ, 5 ಯುವ, 2 ಪರಿಸರ ಸ್ನೇಹಿ, 6 ಸಾಂಪ್ರದಾಯಿಕ, 3 ವಿಷಯಾಧಾರಿತ, 1 ಜಲಾನಯನ ವಿಷಯಾಧಾರಿತ ಸೇರಿ 32 ಮಾದರಿ ಮತಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಇವುಗಳನ್ನು ವಿಶೇಷವಾಗಿ ಅಲಂಕಾರ ಮಾಡಿದ್ದರಿಂದ ಮತದಾರರು ಆಕರ್ಷಿತರಾದರು.

ಕೆಲ ಬೂತ್ ಬಳಿ ನೂಕುನುಗ್ಗಲು

ಜಿಲ್ಲೆಯಲ್ಲಿ ಬೆಳಗ್ಗೆ ಮತದಾನ ಸ್ವಲ್ಪ ಕಡಿಮೆ ಇತ್ತು. ನಂತರದಲ್ಲಿ ಮಧ್ಯಾಹ್ನದ ವೇಳೆಗೆ ಹೆಚ್ಚಾಯಿತು. ಬಿಸಿಲಿನ ತಾಪಮಾನ ಹೆಚ್ಚಾದಂತೆ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಕಡಿಮೆ ಆಗಿತ್ತು. ಸಂಜೆ ವೇಳೆಗೆ ಮತದಾರರು ಮತಗಟ್ಟೆಗೆ ಆಗಮಿಸಿದ ಪ್ರಮಾಣ ಹೆಚ್ಚಾಗಿತ್ತು. ಕೆಲವು ಕಡೆಗಳಲ್ಲಿ ನೂಕುನುಗ್ಗಲು ಕಂಡು ಬಂದಿತು. ಬಳ್ಳಾರಿ ಗ್ರಾಮೀಣ ಕ್ಷೇತ್ರದ ಮತಗಟ್ಟೆ 2 ಕೊಳಗಲ್ಲು ಗ್ರಾಮದಲ್ಲಿ ಮತಗಟ್ಟೆ ಮಹಿಳೆಯರಿಗಾಗಿ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಸರತಿ ನಿರ್ಮಿಸಲಾಗಿತ್ತು. ಪೊಲೀಸರು ಮತದಾರರನ್ನು ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಲು ಹರಸಾಹಸ ಪಟ್ಟರು.

ಇದನ್ನೂ ಓದಿ: ಮತಯಂತ್ರದ ಕಂಟ್ರೋಲ್ ಯೂನಿಟ್ ಒಡೆದ ಮತದಾರ

ಹೊಸ ಮುಖಗಳಿಗೆ ಮೊದಲ ಅನುಭವ

ಜಿಲ್ಲೆಯಲ್ಲಿ ಪ್ರಸಕ್ತ ಚುನಾವಣೆಯಲ್ಲಿ 39,359 ಯುವ ಮತದಾರರು ನೋಂದಾಯಿಸಿಕೊಂಡಿದ್ದು, ಮೊದಲ ಬಾರಿಗೆ ಮತದಾನ ಮಾಡಿದ ಸಂಭ್ರಮಿಸಿದರು. ಬಳ್ಳಾರಿಯ ರೇಡಿಯೋ ಪಾರ್ಕ್ ಬಳಿಯ ಮತಗಟ್ಟೆಯಲ್ಲಿ ಲಿಖಿತಾ ಯಾದವ್, ಸಾಯಿ ಸಹನಾ, ಬೆಳಗಲ್ಲು ಗ್ರಾಮದಲ್ಲಿ ಭಾಗ್ಯಮ್ಮ, ಹರಗಿನ ಡೋಣಿಯಲ್ಲಿ ಪುಷ್ಪಾವತಿ, ರಾಘವೇಂದ್ರ ಬಿ.ಎಚ್, ಕುಡತಿನಿಯಲ್ಲಿ ಅಕ್ಷಿತಾ ಹೀಗೆ ಅನೇಕ ಯುವ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವ ಮೂಲಕ ಮೊದಲ ಬಾರಿಯ ಅನುಭವವನ್ನು ಹಂಚಿಕೊಳ್ಳುವ ಮೂಲಕ ಖುಷಿಯನ್ನು ವ್ಯಕ್ತಪಡಿಸಿದರು.

Latest Posts

ಲೈಫ್‌ಸ್ಟೈಲ್