More

    ಮತದಾನ ಜಾಗೃತಿ ಮೂಡಿಸುತ್ತಿದೆ ನಾನು ಭಾರತೀಯ ಗೀತೆ

    ಕೆ.ಎಸ್.ಪ್ರಣವಕುಮಾರ್ ಚಿತ್ರದುರ್ಗ
    ಮತದಾನ ಜಾಗೃತಿ ಮೂಡಿಸುತ್ತಿದೆ ನಾನು ಭಾರತೀಯ ಗೀತೆ. ಸಂಗೀತಕ್ಕೆ ಮಳೆ ತರಿಸುವ ಶಕ್ತಿ ಇದೆ ಎಂಬ ಮಾತಿದೆ. ಈಗ ಚುನಾವಣಾ ಆಯೋಗ ಇಂತಹ ಸಂಗೀತದ ಮೂಲಕ ಮತದಾನ ಹೆಚ್ಚಳ ಗುರಿ ಸಾಧಿಸಲು ಮುಂದಾಗಿದೆ.

    ಈಗಾಗಲೇ ಹಲವು ಪ್ರಯೋಗ ಕೈಗೊಂಡಿರುವ ಆಯೋಗ ‘ನಾನು ಭಾರತೀಯ’ ಎಂಬ ಜಾಗೃತಿ ಗೀತೆಯ ವಿಡಿಯೋ ಹೊರತಂದಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಹಸ್ರಾರು ಮಂದಿಯ ಮೆಚ್ಚುಗೆ ಗಳಿಸಿದೆ.

    ಹಿಂದಿ, ಕನ್ನಡ ಒಳಗೊಂಡು 12ಕ್ಕೂ ಅಧಿಕ ಭಾಷೆಗಳಲ್ಲಿ ಹೊರಹೊಮ್ಮಿರುವ ಇಸಿಐನ ಈ ಹಾಡು 5.24 ನಿಮಿಷದ್ದಾಗಿದೆ. ಯುಟ್ಯೂಬ್‌ನಲ್ಲಿ ಬಿಡುಗಡೆಯಾದ ಮೂರೇ ತಿಂಗಳಲ್ಲಿ 4,67,562 ಮಂದಿ ವೀಕ್ಷಿಸಿದ್ದಾರೆ. 11 ಸಾವಿರ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾವಿರಾರು ಶೇರ್ ಆಗಿದೆ. ಇನ್‌ಸ್ಟಾಗ್ರಾಮ್, ಟ್ವಿಟರ್, ಫೇಸ್‌ಬುಕ್‌ನಲ್ಲೂ ಹರಿಬಿಡಲಾಗಿದೆ.

    ಭಾರತದಲ್ಲಿನ ಐತಿಹಾಸಿಕ ತಾಣ, ಜನರ ಉಡುಗೆ-ತೊಡುಗೆ, ಆಚಾರ-ವಿಚಾರ, ಸಂಸ್ಕೃತಿ-ಸಂಸ್ಕಾರ, ನಡೆ-ನುಡಿ, ವೇಷಭೂಷಣ, ಕಲೆಗಳ ಅನಾವರಣ, ಜೀವನ ಶೈಲಿ ಒಳಗೊಂಡು ರಾಷ್ಟ್ರದ ಭವ್ಯ ಪರಂಪರೆಯನ್ನು ಚಿತ್ರೀಕರಿಸಲಾಗಿದೆ. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎನ್ನುವಂತಿದೆ.

    ಮತದಾನ ನಿಮ್ಮ ಹಕ್ಕು, ಸದೃಢ ಪ್ರಜಾಪ್ರಭುತ್ವಕ್ಕಾಗಿ ತಪ್ಪದೆ ಮತಚಲಾಯಿಸಿ ಎಂಬ ಸಂದೇಶ ಸಾರಲು ಆಯೋಗ ಯಾವೆಲ್ಲ ಜಾಗೃತಿ ಕಾರ್ಯಕ್ರಮ ನಡೆಸಿದೆ ಎಂಬುದನ್ನೂ ಸಂಪೂರ್ಣವಾಗಿ ಚಿತ್ರಿಸಲಾಗಿದೆ. ಇದನ್ನು ಹಲವು ಭಾಷೆಗಳಲ್ಲಿ ಕೇಳಬಹುದು.

    ‘ಸತ್ಯಂ ಭಾರತ’, ‘ಶಿವಂ ಭಾರತ’, ‘ಭಕ್ತಿ ಭಾರತ’, ‘ಶಕ್ತಿ ಭಾರತ’ ಎನ್ನುವ ಸಾಲುಗಳು ಕಿವಿಗೆ ಇಂಪು ನೀಡುವುದಷ್ಟೇ ಅಲ್ಲ, ಪ್ರಜ್ಞಾವಂತ ಮತದಾರರನ್ನು ಬಡಿದೆಬ್ಬಿಸುವಂತಿದೆ.

    ಮತದಾನ ಜಾಗೃತಿ ಮೂಡಿಸುತ್ತಿದೆ ನಾನು ಭಾರತೀಯ ಗೀತೆ

    ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿಸಂಹಿತೆ ಜಾರಿಯಾದ ಒಂದೆರಡು ದಿನದೊಳಗೆ ಬಹುತೇಕ ಇಲಾಖೆಗಳ ಸರ್ಕಾರಿ ಜಾಹೀರಾತನ್ನು ತೆರವುಗೊಳಿಸಲಾಯಿತು. ಆ ಸ್ಥಳವನ್ನು ‘ಮೇ 10 ರಂದು ತಪ್ಪದೆ ಮತಚಲಾಯಿಸಿ’, ‘ನಿಮ್ಮ ಮತ ನಿಮ್ಮ ಧ್ವನಿ’ ಎಂಬ ಮತದಾನ ಜಾಗೃತಿ ಸಂದೇಶವುಳ್ಳ ಚಿತ್ರ ಆವರಿಸಿಕೊಂಡಿತು.

    ಈ ಸಂದೇಶದ ಎಡಬದಿಯಲ್ಲಿ ಯಕ್ಷಗಾನ ಕಲಾವಿದರ ಚಿತ್ರವಿದ್ದು, ಮೈ ನೇಷನ್, ಮೈ ರೈಟ್, ಮೈ ಸಾಂಗ್ ಎಂದು ಕೆಂಪು ಬಣ್ಣದ ಚಿಹ್ನೆಯ ಮೇಲೆ ಒತ್ತಿದೊಡನೆ (ಕ್ಲಿಕ್ ಮಾಡಿದೊಡನೆ) ಈ ವಿಡಿಯೋ ತೆರೆದುಕೊಳ್ಳಲಿದೆ.

    ಅಮಿತಾಬ್ ಬಚ್ಚನ್, ರಜನಿಕಾಂತ್, ಅನಿಲ್‌ಕಪೂರ್, ಮಾಧವನ್, ಸೂರ್ಯ, ಆಶಾ ಬೋಸ್ಲೆ, ಕ್ರಿಕೆಟಿಗರು, ವಿವಿಧ ಕ್ರೀಡಾಪಟುಗಳು, ಗಾಯಕರು, ನೃತ್ಯ ಪಟುಗಳು ಸೇರಿ ಖ್ಯಾತನಾಮರನ್ನು ಒಳಗೊಂಡಿದೆ.

    ಮತದಾನ ಜಾಗೃತಿ ಮೂಡಿಸುತ್ತಿದೆ ನಾನು ಭಾರತೀಯ ಗೀತೆ

    ತ್ರಿವರ್ಣ, ರಾಷ್ಟ್ರ ಲಾಂಛನ ಆಕರ್ಷಣೆ
    ಭೂ ಮಂಡಲದಲ್ಲಿ ದೀಪಗಳಂತೆ ಕಂಗೊಳಿಸುವ ಭಾರತದ ಭೂಪಟ, ಹಾರಾಡುವ ತ್ರಿವರ್ಣ ಧ್ವಜ, ಕೆಂಪು ಮೋಡದ ಮಧ್ಯೆ ಕಂಗೊಳಿಸುವ ರಾಷ್ಟ್ರ ಲಾಂಛನ, ಮುಷ್ಠಿಯೊಳಗೆ ಅಶೋಕ ಚಕ್ರ, ಪ್ಯಾರಾ ಗ್ಲೈಡಿಂಗ್ ಹಾರಾಟದ ಮೂಲಕ ಮತದಾನ ಜಾಗೃತಿ, ಬೃಹತ್ ಸೈಕಲ್ ಜಾಥಾ… ಹೀಗೆ ಮತದಾರರನ್ನು ಮತಗಟ್ಟೆಯತ್ತ ಸೆಳೆಯಲು ಈ ಹಾಡು ಸಹಕಾರಿಯಾಗಿದೆ.

    ಯಾರೆಲ್ಲಾ ಹಾಡಿದ್ದಾರೆ ?
    ಹಲವು ರಾಜ್ಯದ ಚುನಾವಣೆಗೆ ಅನುಕೂಲವಾಗಲೆಂದು ಈ ಹಾಡು ಸಿದ್ಧಪಡಿಸಲಾಗಿದೆ. ಖ್ಯಾತ ಹಿನ್ನೆಲೆ ಗಾಯಕರು ತಮ್ಮ ಸಿರಿಕಂಠದಿಂದ ಅದ್ಭುತವಾಗಿ ಹಾಡಿದ್ದಾರೆ. ಕನ್ನಡದಲ್ಲಿ ವಿಜಯಪ್ರಕಾಶ್, ಗುಜರಾತಿಯಲ್ಲಿ ಭೂಮಿ ತ್ರಿವೇದಿ, ತಮಿಳಿನಲ್ಲಿ ಕೆ.ಎಸ್.ಚಿತ್ರಾ, ತೆಲುಗಿನಲ್ಲಿ ಮನೊ, ಮಲಯಾಳಂನಲ್ಲಿ ವಿಜಯ ಯೇಸುದಾಸ್, ಅಸ್ಸಾಮಿಯಲ್ಲಿ ಪಪೊನ್, ಮರಾಠಿಯಲ್ಲಿ ವೈಶಾಲಿ ಸಮಂತ್, ಕಾಶ್ಮೀರಿಯಲ್ಲಿ ಮೊಹ್ಮತ್ ಸೈಯದ್, ಬೆಂಗಾಲಿಯಲ್ಲಿ ಕೌಶಿಕಿ ಚಕ್ರಬೋರ್ತಿ, ಸ್ಯಾಂತಲಿಯಲ್ಲಿ ಪಂಕಜ್ ಜಲ್, ಒಡಿಯಾದಲ್ಲಿ ದೀಪ್ತಿ ರೇಖಾ ಪಡಿ ಗೀತೆಗೆ ಜೀವ ತುಂಬಿದ್ದಾರೆ. ಪ್ರತಿ ಗಾಯಕರು 10 ರಿಂದ 20 ಸೆಕೆಂಡ್ ಹಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts