ಮತದಾನ ಜಾಗೃತಿಗಾಗಿ ಶಿಕ್ಷಕರ ಬೈಕ್ ರ‌್ಯಾಲಿ

ಬೆಳಗಾವಿ: ವಿಶ್ವೇಶ್ವರಯ್ಯ ನಗರದ ಸರ್ಕಾರಿ ಕನ್ನಡ ಮಾದರಿ ಶಾಲೆ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ಆಯೋಜಿಸಿದ್ದ ಮತದಾನ ಜಾಗೃತಿಗಾಗಿ ಬೈಕ್ ರ‌್ಯಾಲಿಗೆ ಐಎಎಸ್ ಪ್ರೋಬೇಷನರಿ ಅಧಿಕಾರಿ ಭಂವರ್‌ಸಿಂಗ್ ಮೀನಾ ಚಾಲನೆ ನೀಡಿದರು.

ಕಡ್ಡಾಯವಾಗಿ ಎಲ್ಲರೂ ಮತದಾನ ಮಾಡಬೇಕು. ಸುಭದ್ರ ಭಾರತ ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಅವರು ಕರೆ ನೀಡಿದರು. ಅಲ್ಲಿಂದ ಆರಂಭಗೊಂಡ ರ‌್ಯಾಲಿ ಸದಾಶಿವ ನಗರ, ಶ್ರೀಕೃಷ್ಣದೇವರಾಯ ವೃತ್ತ, ಶಿವಬಸವ ನಗರ, ಶ್ರೀನಗರ, ವಂಟಮುರಿ ಕಾಲನಿ ಮಾರ್ಗವಾಗಿ ಸಂಚರಿಸಿ ಕಣಬರ್ಗಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಕ್ತಾಯಗೊಂಡಿತು.

ಡಿಡಿಪಿಐ ಡಾ.ಆನಂದ ಪುಂಡಲೀಕ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಅಂತಾರಾಷ್ಟ್ರೀಯ ಈಜುಪಟು ರಾಘವೇಂದ್ರ ಅಣ್ವೇಕರ, ನಗರ ವಲಯದ ಬಿಇಒ ಕೆ.ಡಿ.ಬಡಿಗೇರ, ರಾಜಶೇಖರ ಚಳಗೇರಿ, ರವಿ ಭಜಂತ್ರಿ ಮತ್ತಿತರರು ಇದ್ದರು. ಬೆಳಗಾವಿ ಗ್ರಾಮೀಣ ಮತ್ತು ನಗರ ವಲಯದ 400ಕ್ಕೂ ಅಧಿಕ ಶಿಕ್ಷಕರು ಉತ್ಸಾಹದಿಂದ ರ‌್ಯಾಲಿಯಲ್ಲಿ ಪಾಲ್ಗೊಂಡು ಗಮನ ಸೆಳೆದರು,