ರಟ್ಟಿಹಳ್ಳಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ನಿಮ್ಮ ಮತ ದೇಶದ-ನಾಡಿನ ಅಭಿವೃದ್ಧಿಗೆ ಮುನ್ನುಡಿ ಬರೆಯಲಿದೆ ಎಂದು ಪಿಡಿಒ ಗುಡ್ಡಪ್ಪ ಗೌಡರ ಹೇಳಿದರು.
ತಾಲೂಕಿನ ಮಾಸೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಮತ್ತು ಸ್ವೀಪ್ ಸಮಿತಿಯಿಂದ ಗುರುವಾರ ಮದುವೆ ಸಮಾರಂಭದಲ್ಲಿ ಮತದಾನ ಕುರಿತು ಜನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೇ 10ರಂದು ಜರುಗುವ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಹಕ್ಕು ಚಲಾಯಿಸಿ, ಸಂವಿಧಾನದ ಆಶಯ ಮತ್ತು ಪ್ರಜಾಪ್ರಭುತ್ವ ಯಶಸ್ವಿಗೊಳಿಸಬೇಕು.
ಯಾವುದೇ ಕಾರಣಕ್ಕೂ ಮತದಾನ ಮಾಡದೇ ಹೊರಗುಳಿಯಬಾರದು. ಆಸೆ ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತ ಚಲಾಯಿಸಬೇಕು ಎಂದರು.
ಮತದಾನ ಜಾಗೃತಿ
ನವದಂಪತಿಗೆ ಮತ್ತು ಮದುವೆಗೆ ಆಗಮಿಸಿದ ಬಂಧು-ಬಳಗದವರಿಗೆ ಮತದಾರರ ಪ್ರತಿಜ್ಞಾವಿಧಿ ಬೋಧಿಸಲಾಯಿತು. ನವದಂಪತಿ ಸಂಬಂಧಿಕರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮತದಾನ ಘೊಷಣೆಗಳನ್ನು ಮೊಳಗಿಸಿದರು.
ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಮದುವೆ ಸಮಾರಂಭ ಎಲ್ಲರ ಗಮನ ಸೆಳೆಯಿತು. ಗ್ರಾಪಂ ಸಿಬ್ಬಂದಿ ಹನುಮಂತಪ್ಪ ನಾಡರ, ಪ್ರದೀಪ ಬೋಗಾರ, ರಾಜು ಸತ್ತಿಗಿಹಳ್ಳಿ ಇತರರು ಇದ್ದರು.