ಕುಡಚಿ: ಪ್ರಜಾಪ್ರಭುತ್ವ ಕಟ್ಟುವ ಕೆಲಸ ಬಿಎಲ್‌ಒಗಳ ಮೇಲಿದೆ. ಆಸಕ್ತಿಯಿಂದ ಮತದಾರರ ಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು ಎಂದು ತಹಸೀಲ್ದಾರ್ ಸುರೇಶ ಮುಂಜೆ ಹೇಳಿದರು.
ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಎಲ್‌ಓಗಳ ಸಭೆಯಲ್ಲಿ ಮಾತನಾಡಿ, ಜ.1 2024ರ ಅರ್ಹತಾ ದಿನಾಂಕ ಆಧರಿಸಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಿಮಿತ್ತ ಮತದಾರ ನೋಂದಣಿ ಮಾಡಲು ನ.9, 10, 23, 24ರಂದು ವಿಶೇಷ ಅಭಿಯಾನ ಆಯೋಜಿಸಿದೆ. ಮತಗಟ್ಟೆಮಟ್ಟದ ಅಧಿಕಾರಿಗಳು, ಬಿಎಲ್‌ಒಗಳು ಮತಕಟ್ಟೆ ವ್ಯಾಪ್ತಿಯಲ್ಲಿ ಬೆಳಗ್ಗೆ ಹಾಜರಿರಬೇಕು. ಮತದಾರ ಯಾದಿಯಲ್ಲಿ ಇರುವ ತಪ್ಪುಗಳನ್ನು ಅಭಿಯಾನದಲ್ಲೇ ಸರಿಪಡಿಸಬೇಕು ಎಂದು ಸೂಚಿಸಿದರು.
ಇಲ್ಲಿನ ಪುರಸಭೆಯಲ್ಲಿ 23 ವಾರ್ಡ್‌ಗಳಿದ್ದು, 23 ಸಾವಿರಕ್ಕೂ ಅಧಿಕ ಮತದಾರರಿದ್ದಾರೆ. ವಾಸವಿರುವ ವಾರ್ಡ್‌ನಲ್ಲೆ ಮತದಾರರು ಹೆಸರು ಸೇರ್ಪಡೆ ಮಾಡಬೇಕು ಎಂದು ಪುರಸಭೆ ಅಧ್ಯಕ್ಷ ಹಮಿಧೋದಿನ್ ರೋಹಿಲೆ, ಸಾಧೀಕ್ ಸಜ್ಜನ, ಅಲ್ಲಾವುದ್ದೀನ್ ರೋಹಿಲೆ, ಸಾಕೀಫ್ ಪಾಳೇಗಾರ, ಸಾಧೀಕ್ ರೋಹಿಲೆ, ರಾಜು ನಿಡಗುಂದಿ ಸೇರಿ ಪುರಸಭೆ ಸದಸ್ಯರು ಹಾಗೂ ಮುಖಂಡರು ತಹಸೀಲ್ದಾರ್ ಸುರೇಶ ಮುಂಜೆ ಅವರಲ್ಲಿ ಮನವಿ ಮಾಡಿದರು.
ಮನವಿಗೆ ಸಮ್ಮತಿಸಿದ ತಹಸೀಲ್ದಾರ್ ವಾಸವಿರುವ ವಾರ್ಡ್‌ನಲ್ಲೆ ಮತದಾರರು ಹೆಸರು ಸೇರ್ಪಡೆ ಮಾಡುವಂತೆ ಗ್ರಾಮ ಲೆಕ್ಕಾಧಿಕಾರಿ ಹಾಗೂ ಬಿಎಲ್‌ಒಗಳಿಗೆ ಸೂಚಿಸಿದರು. ಶಿರಸ್ತೆದಾರ ಅಭಿಷೇಕ ಬೊಂಗಾಳೆ, ಉಪತಹಸೀಲ್ದಾರ್ ಎಸ್.ಜಿ.ದೊಡಮನಿ, ರಾಜು ದಾನೋಳಿ, ವೈ.ಕೆ.ಹೇಳವರ, ಎಚ್.ಕೆ. ದಶ್ವಂತ, ಎಸ್.ಬಿ.ಕದಮ್ ಇತರರು ಇದ್ದರು.