ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆ ಈಗ ಚರ್ಚಾ ವಸ್ತು

ಬೆಂಗಳೂರು: ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆಯಾಗಿರುವ ಪ್ರಕರಣ ಈಗ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿ, ಕಾಂಗ್ರೆಸ್ ನಾಯಕರು ಆಯೋಗದ ಅಧಿಕಾರಿಗಳ ವಿರುದ್ಧ ಕೆಂಡ ಕಾರುತ್ತಿದ್ದಾರೆ.

ಬೆಂಗಳೂರಿನ ನಾನಾ ಕಡೆ ಮತಗಟ್ಟೆಗೆ ತೆರಳಿ ತಮ್ಮ ಹೆಸರು ಇಲ್ಲದಿರುವುದನ್ನು ಕಂಡ ಮತದಾರರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ. ಮತದಾನಕ್ಕೆ ಒಂದೆರಡು ದಿನ ಮುನ್ನ ಇದ್ದ ಹೆಸರುಗಳು ಹೇಗೆ ನಾಪತ್ತೆಯಾದವು ಎಂದು ಪ್ರಶ್ನಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ ವಿಚಾರ ಈಗ ರಾಜಕೀಯ ವಸ್ತುವಾಗಿ ಚರ್ಚೆಗೆ ಗ್ರಾಸವಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲೇ 1.5 ಲಕ್ಷ ಮತದಾರರ ಹೆಸರು ಮತಪಟ್ಟಿಯಿಂದ ಕೈಬಿಟ್ಟು ಹೋಗಿವೆ ಎಂದು ಅಂದಾಜಿಸಲಾಗಿದೆ.

ಹೆಸರು ನಾಪತ್ತೆ ಬಗ್ಗೆ ಸಾರ್ವಜನಿಕರು, ರಾಜಕೀಯ ಪಕ್ಷಗಳ ನೇತಾರರಿಂದ ಬಹಳಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಒಂದು ವಾರದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮುಖ್ಯ ಚುನಾವಣಾಧಿಕಾರಿ ಸಂಜೀವ್​ಕುಮಾರ್ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ ಪ್ರಸಾದ್ ಅವರಿಗೆ ಸೂಚಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಹೆಸರು ಕೈಬಿಡಲಾ ಗಿದೆ ಎಂದು ಆಡಳಿತ ಹಾಗೂ ಪ್ರತಿಪಕ್ಷದ ನಾಯಕರು ದೂರಿದ್ದಾರೆ. ಮತದಾನದ ದಿನದಂದೇ ಹೆಬ್ಬಾಳ ಕ್ಷೇತ್ರದಲ್ಲಿ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಹಾಗೂ ಬೆಂಬಲಿಗರು ಮತದಾರರ ಪಟ್ಟಿಯಿಂದ ಸಾವಿರಾರು ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಪ್ರತಿಭಟನೆ ನಡೆಸಿದ್ದರು.

ಬೆಂಗಳೂರು ದಕ್ಷಿಣ ಹಾಗೂ ಕೇಂದ್ರ ಕ್ಷೇತ್ರಗಳಲ್ಲೂ ಮತದಾರರ ಪಟ್ಟಿಯಿಂದ ಹೆಸರು ನಾಪತ್ತೆಯಾಗಿರುವ ಬಗ್ಗೆ ಹೆಚ್ಚಿನ ದೂರುಗಳು ಕೇಳಿ ಬಂದಿವೆ. ವಿಚಿತ್ರವೆಂದರೆ, ಒಂದು ವಾರ್ಡ್​ನ ಮತಗಟ್ಟೆಯಲ್ಲಿದ್ದ ಹೆಸರು ಇನ್ನೊಂದು ವಾರ್ಡ್​ಗೆ ಸ್ಥಳಾಂತರವಾಗಿದೆ. ಒಂದು ಊರಿನಲ್ಲಿ ಮಾಯವಾಗಿದ್ದ ಹೆಸರು ಇನ್ನೊಂದು ಊರಿನ ಮತಪಟ್ಟಿಯಲ್ಲಿ ಕಂಡು ಅಚ್ಚರಿ ಮೂಡಿಸಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕೆಲಸವೇ ಅಥವಾ ತಾಂತ್ರಿಕ/ ಅಧಿಕಾರಿಗಳ ಉದಾಸೀನತೆಯಿಂದ ಆಗಿರುವ ಕೃತ್ಯವೇ ಎಂಬುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ.

ಚುನಾವಣೆ ಘೋಷಣೆಯಾದ ಮೇಲೆ ಹೆಸರು ಮತದಾರರ ಪಟ್ಟಿಯಿಂದ ತೆಗೆಯುವುದಿಲ್ಲ. ನಿರ್ದಿಷ್ಟ ಪ್ರಕರಣಗಳಿದ್ದರೆ ಪರಿಶೀಲಿಸ ಬಹುದು ಎಂದು ಅಧಿಕಾರಿಗಳು ಸಮಜಾಯಿಶಿ ನೀಡುತ್ತಾರೆ. ದೂರುಗಳು ಅತ್ಯಧಿಕ ಸಂಖ್ಯೆಯಲ್ಲಿ ಬಂದಿರುವುದರಿಂದ ತನಿಖೆ ಮಾಡಿ ವರದಿ ನೀಡುವಂತೆ ಸಿಇಒ ಆದೇಶಿಸಿದ್ದಾರೆ.

ನನ್ನ ಹಕ್ಕು ಕಿತ್ತುಕೊಂಡವರ್ಯಾರು?

ಬೆಂಗಳೂರು: ಸಂವಿಧಾನಾತ್ಮಕವಾಗಿ ನೀಡಲಾಗಿರುವ ಮತದಾನದ ಹಕ್ಕನ್ನು ರಾಜ್ಯದಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಕಿತ್ತುಕೊಳ್ಳಲಾಗಿದೆ ಎಂದು ಸಾವಿರಾರು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಲ್ಲ ಚುನಾವಣೆಗಳಲ್ಲೂ ಇಂಥದ್ದೊಂದು ದೂರು ಸಾಮಾನ್ಯವಾಗಿರುತ್ತದೆ ಎಂದುಕೊಂಡಿದ್ದ ವಿಚಾರ ಈ ಬಾರಿ ವ್ಯಾಪಕಗೊಳ್ಳುತ್ತಲೇ ಸಾಗಿದ್ದು, ಆನ್​ಲೈನ್​ನಲ್ಲೂ ಅನೇಕರು ಅಭಿಯಾನದ ಸ್ವರೂಪ ನೀಡಿದ್ದಾರೆ.

ಮತದಾನವಾದ ಗುರುವಾರ ಸಂಜೆ ಈ ಕುರಿತು ಬಹಳಷ್ಟು ದೂರುಗಳನ್ನು ಆಲಿಸಿದ್ದ ಕಲಾವಿದ ಕೃಷ್ಣಾ ಹೆಬ್ಬಾಲೆ ಮತ್ತು ಸಾಮಾಜಿಕ ಕಾರ್ಯಕರ್ತ ರಮೇಶ್ ರೆಡ್ಡಿ (98445 91234) ಎಂಬುವರು ವಾಟ್ಸ್ ಆಪ್​ನಲ್ಲಿ ಸಂದೇಶವೊಂದನ್ನು ರವಾನಿಸಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದು, ಯಾವುದೇ ಅರ್ಜಿ ನೀಡದೆ ಹೆಸರು ಡಿಲೀಟ್ ಆಗಿರುವವರು ವಿವರ ನಿಡುವಂತೆ ಮನವಿ ಮಾಡಿದ್ದರು. ಎಲ್ಲ ಗ್ರೂಪ್​ಗಳಲ್ಲಿ ಹರಿದಾಡಿದ ಸಂದೇಶದ ಪರಿಣಾಮ ಶನಿವಾರದ ವೇಳೆಗೆ 2 ಸಾವಿರ ದೂರವಾಣಿ ಕರೆಗಳು ಬಂದಿವೆ. ಸಮಸ್ಯೆಯಿರುವವರ ಮಾಹಿತಿ ಕಲೆ ಹಾಕಲು ಗೂಗಲ್ ಫಾಮ್ರ್ ರೂಪಿಸಲಾಗಿದೆ. ಅಕ್ರಮವಾಗಿ ಸಾವಿರಾರು ಜನರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊರಕಿರುವ ಹಕ್ಕನ್ನು ಕಸಿದುಕೊಂಡಿರುವ ಈ ಅಕ್ರಮವನ್ನು ಚುನಾವಣೆ ಆಯೋಗ ಮತ್ತೆ ಸಂಬಂಧಿತ ಸಂಸ್ಥೆಗಳ ಗಮನಕ್ಕೆ ತರಲಾಗುತ್ತದೆ ಎಂದು ಫಾಮರ್್​ನಲ್ಲಿ ವಿವರಿಸಲಾಗಿದೆ. 1 ಸಾವಿರಕ್ಕೂ ಹೆಚ್ಚು ಜನರು ಫಾಮರ್್​ನಲ್ಲಿ ತಮ್ಮ ಮತದಾನದ ವಿವರ ದಾಖಲಿಸಿದ್ದಾರೆ ಎಂದು ಕೃಷ್ಣಾ ಹೆಬ್ಬಾಲೆ ತಿಳಿಸಿದ್ದು, ಒಂದೆರಡು ದಿನದಲ್ಲೆ ಚುನಾವಣೆ ಆಯೋಗಕ್ಕೆ ಅಧಿಕೃತವಾಗಿ ದೂರು ನೀಡಲಾಗುತ್ತದೆ. ಮತದಾನದಿಂದ ವಂಚಿತರಾಗಿರುವ ಕುರಿತು ಅನೇಕರು ವೈಯಕ್ತಿಕವಾಗಿ ಕ್ರಿಮಿನಲ್ ದೂರು ನೀಡುತ್ತಿದ್ದಾರೆ ಎಂದಿದ್ದಾರೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಿದ್ಧತೆ: ಹೈಕೋರ್ಟ್ ವಕೀಲೆ ಜಿ. ತೇಜಸ್ವಿನಿ (99100 10005) ಅವರೂ ವಾಟ್ಸಪ್​ನಲ್ಲಿ ಇಂಥದ್ದೇ ಸಂದೇಶವನ್ನು ರವಾನಿಸಿದ್ದರು. ತಮ್ಮ ಪರಿಚಯಸ್ಥ ವೈದ್ಯರು, ವಕೀಲರು, ಇಂಜಿನಿಯರ್​ಗಳು ಸೇರಿ ಒಂದು ಅಪಾರ್ಟ್​ವೆುಂಟ್​ನಲ್ಲಿ 25-30 ಹೆಸರು ಒಟ್ಟೊಟ್ಟಿಗೆ ಅಳಿಸಲಾಗಿರುವುದು ಗಮನಕ್ಕೆ ಬಂದಿತ್ತು. ಈ ರೀತಿ ಒಟ್ಟೊಟ್ಟಿಗೆ ಹೆಸರು ಡಿಲೀಟ್ ಆದರೆ ಏನು ಕ್ರಮ ಕೈಗೊಳ್ಳಬೇಕು? ಮರು ಮತದಾನ ಮಾಡಬೇಕೆ? ಅಧಿಕಾರಿಗಳಿಗೆ ಶಿಕ್ಷೆ ಏನು? ಎಂಬ ಪ್ರಶ್ನೆಗಳಿಗೆ ಕಾನೂನಿನಲ್ಲಿ ಸ್ಪಷ್ಟತೆಯಿಲ್ಲ. ತಮ್ಮ ದೂರವಾಣಿ ಸಂಖ್ಯೆಗೆ ಈಗಾಗಲೆ 600ಕ್ಕೂ ಹೆಚ್ಚು ಮತದಾನವಂಚಿತ ನಾಗರಿಕರು ಗುರುತಿನ ಚೀಟಿ ಕಳಿಸಿದ್ದಾರೆ. ಇವುಗಳ ಪ್ರಿಂಟೌಟ್ ಪಡೆದು, ಈ ಪ್ರಕರಣಗಳಲ್ಲಿ ನ್ಯಾಯ ದೊರಕಿಸುವ ಜತೆಗೆ ಕಾನೂನಿನಲ್ಲಿ ಸ್ಪಷ್ಟನೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸುವುದಾಗಿ ತಿಳಿಸಿದ್ದಾರೆ.

ನಿರ್ದಿಷ್ಟ ಸಮುದಾಯ ಟಾರ್ಗೆಟ್?

ಈವರೆಗೆ ಸಾವಿರಾರು ಜನರು ಕರೆ ಮಾಡಿರುವ ಹಾಗೂ ವಾಟ್ಸ್​ಆಪ್​ನಲ್ಲಿ, ಗೂಗಲ್ ಫಾಮರ್್​ನಲ್ಲಿ ನೀಡಿರುವ ಮಾಹಿತಿ ಆಧಾರದಲ್ಲಿ, ಕೆಲವು ನಿರ್ದಿಷ್ಟ ಸಮುದಾಯಗಳನ್ನೇ ಟಾರ್ಗೆಟ್ ಮಾಡಿ ಹೆಸರು ಡಿಲೀಟ್ ಮಾಡಲಾಗಿದೆ ಎಂಬ ಅನುಮಾನ ಬಂದಿರುವುದಾಗಿ ಕಲಾವಿದ ಕೃಷ್ಣಾ ಹೆಬ್ಬಾಲೆ ಹೇಳಿದ್ದಾರೆ.ಹೆಚ್ಚಿನ ದೂರುಗಳು ಬೆಂಗಳೂರು ದಕ್ಷಿಣದಿಂದ ಆಗಮಿಸಿವೆ. ನಂತರದಲ್ಲಿ ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ನಗರ ವಿಧಾನಸಭೆ ಕ್ಷೇತ್ರಗಳಿಂದ ಬರುತ್ತಿವೆ. ನಿರ್ದಿಷ್ಟವಾಗಿ ಒಂದು ಪಕ್ಷಕ್ಕೆ ಮತ ಹಾಕುತ್ತಾರೆ ಎಂದು ಸಾಮಾನ್ಯವಾಗಿ ನಂಬಲಾಗುವ ಸರ್​ನೇಮ್ಳನ್ನೇ ಟಾರ್ಗೆಟ್ ಮಾಡಿದಂತೆ ತೋರುತ್ತಿದೆ.ಕೆಲವರ ಹೆಸರನ್ನು ಡಿಲೀಟ್ ಮಾಡಿಲ್ಲವಾದರೂ ಮತ್ತೊಂದು ಮತಗಟ್ಟೆಗೆ ವರ್ಗಾಯಿಸಲಾಗಿದೆ. ಪಕ್ಕದ ಬೂತ್​ಗೆ ವರ್ಗಾವಣೆ ಮಾಡಿದರೆ ಹುಡುಕಬಹುದು ಎಂಬ ಕಾರಣಕ್ಕೆ, ಮನೆಯ ಇತರೆ ಸದಸ್ಯರ ಮತವಿರುವ ಬೂತ್​ನಿಂದ 25-30 ಬೂತ್ ದೂರದಲ್ಲಿ ಸೇರ್ಪಡೆ ಮಾಡಲಾಗಿದೆ. ಮತಪಟ್ಟಿಯಲ್ಲಿ ಹೆಸರಿದ್ದರೂ ಹುಡುಕಿಕೊಂಡು ಮತ ಚಲಾಯಿಸದಂತೆ ಮಾಡಲಾಗಿದೆ ಎಂದು ತಿಳಿಯುತ್ತಿದೆ. ಇದೆಲ್ಲವನ್ನೂ ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ.

ಯಾರ ಹೆಸರು ಕೈಬಿಟ್ಟು ಹೋಗಿದೆ? ಯಾಕೆ ಹೋಗಿದೆ ಎಂಬ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಪ್ರತಿಯೊಬ್ಬ ಮತದಾರರಿಗೆ ಸಂಬಂಧಿಸಿದಂತೆ ಒಂದು ಕಡತ ಸಿದ್ಧಪಡಿಸಿ ವರಿದ ತಯಾರಿಸಲಾಗುತ್ತಿದೆ. ಮುಖ್ಯ ಚುನಾವಣಾಧಿಕಾರಿ ಒಂದು ವಾರ ಗಡುವು ಕೊಟ್ಟಿದ್ದು, ಅದರ ಒಳಗೆ ಸಮಗ್ರ ವರದಿ ತಯಾರಿಸಿ ಸಲ್ಲಿಸಲಾಗುವುದು.

| ಮಂಜುನಾಥಪ್ರಸಾದ್, ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ