ಮಹಿಳೆ, ಪುರುಷ ಇತರ ಸೇರಿ 10,61,584 ಮಂದಿ ಅರ್ಹರು
ಕಳೆದ ಬಾರಿಗಿಂತ 11,688 ಹೆಚ್ಚಳ
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮತದಾರ ಪಟ್ಟಿಯ ಪರಿಷ್ಕರಣೆ ಬಳಿಕ 11,688 ಮತದಾರರ ಸಂಖ್ಯೆ ಏರಿಕೆ ಕಂಡಿದೆ.
ಕಳೆದ ಜ.5ರಂದು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮಪಟ್ಟಿಯನ್ನು ಜಿಲ್ಲಾಡಳಿತ ಪ್ರಕಟಿಸಿದೆ. ಅದರಂತೆ 5,22,817 ಪುರುಷರು, 5,38,767 ಮಹಿಳೆಯರು, 90 ಇತರ ಮತದಾರರು ಸೇರಿ ಜಿಲ್ಲಾದ್ಯಂತ 10,61,584 ಮತದಾರರು ಇದ್ದಾರೆ. ಇದರಲ್ಲಿ 85 ವರ್ಷ ಮೇಲ್ಪಟ್ಟವರು 12,697, ಯುವ ಮತದಾರರು 14,431 ಹಾಗೂ 17,132 ಅಂಗವಿಕಲರು ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾರೆ.
11,688 ಮತದಾರರು ಹೆಚ್ಚಳ
2024 ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರ ಪಟ್ಟಿ ಪರಿಷ್ಕರಿಸಿದ್ದ ಸಂದರ್ಭದಲ್ಲಿ 10,49,896 ಮತದಾರರಿದ್ದರು. ಇದೀಗ 2025ನೇ ಸಾಲಿನ ಮತದಾರ ಪರಿಷ್ಕರಣೆ ಬಳಿಕ (ಜ.5ರಂದು) ಜಿಲ್ಲೆಯಲ್ಲಿ 4,659 ಪುರುಷರು ಹಾಗೂ 7,029 ಮಹಿಳೆಯರು ಸೇರಿ ಮತದಾರರ ಸಂಖ್ಯೆ 11,688 ಹೆಚ್ಚಾಗಿದೆ.
ಮತದಾರರ ಹೆಸರು ಸೇರ್ಪಡೆ, ರದ್ದು ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ. ಆನ್‌ಲೈನ್ ಇಲ್ಲವೇ ಆ್ಲೈನ್‌ನಲ್ಲಿ ಪರಿಷ್ಕರಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಹಾಯವಾಣಿ ಮೊಬೈಲ್ ಆ್ಯಪ್‌ನಲ್ಲಿ ಚುನಾವಣೆಗೆ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಇತರ ವಾಹಿತಿಗಳನ್ನು ಸಹ ಅಳವಡಿಸಲಾಗಿದೆ.
5 ವಿಧಾನಸಭಾ ಕ್ಷೇತ್ರಗಳು
ಈ ಭಾಗದ 5 ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಂತಾಮಣಿ ಮತ್ತು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳು (2) ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಮತ್ತು ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಗೌರಿಬಿದನೂರು ವಿಧಾನಸಭಾ ಕ್ಷೇತ್ರಗಳು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸೇರಿದೆ.
“ಜಿಲ್ಲೆಯಲ್ಲಿ ಮತದಾರ ಪಟ್ಟಿ ಪರಿಷ್ಕರಣೆಯ ಅಂತಿಮ ಪಟ್ಟಿಯನ್ನು ಸಲ್ಲಿಸಲಾಗಿದೆ. ಮತದಾರರು ಮಾಹಿತಿ ಪಡೆದುಕೊಂಡು ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಬಗೆಹರಿಸಿಕೊಳ್ಳಬಹುದು.”
– ಪಿ.ಎನ್.ರವೀಂದ್ರ, ಜಿಲ್ಲಾ ಚುನಾವಣಾಧಿಕಾರಿ, ಚಿಕ್ಕಬಳ್ಳಾಪುರ