ದೂರು ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ

ಯಾದಗಿರಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗದ ಸೂಚನೆಯಂತೆ ಅರ್ಹತಾ ದಿನಾಂಕ 2019ರ ಜನವರಿ 1ರಂತೆ ವಿಧಾನಸಭಾ ಕ್ಷೇತ್ರಗಳ ಭಾವಚಿತ್ರವಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ನಡೆಯುತ್ತಿದೆ. ಅಕ್ಟೋಬರ್ 10ರಂದು ಜಿಲ್ಲೆಯ ಮತದಾರರ ಕರಡು ಪಟ್ಟಿ ಪ್ರಕಟಿಸಿದ್ದು, ಮತದಾರರ ಪಟ್ಟಿಯ ಬಗ್ಗೆ ಯಾವುದೇ ದೂರು, ಆಕ್ಷೇಪಣೆಗಳಿದ್ದಲ್ಲಿ ನವೆಂಬರ್ 20ರ ವರೆಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮರಾವ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕರಡು ಮತರಾರರ ಪಟ್ಟಿ ಕುರಿತಂತೆ ನ. 20ರವರೆಗೆ ಬರುವ ದೂರು, ಆಕ್ಷೇಪಣೆಗಳನ್ನು ಪರಿಶೀಲಿಸಿ ಡಿ. 20ರೊಳಗೆ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಾಗುವುದು. 2019ರ ಜನವರಿ 4ರಂದು ಮತದಾರರ ಭಾವಚಿತ್ರವಿರುವ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಅರ್ಹ ಮತದಾರರು ತಮ್ಮ ಹೆಸರನ್ನು ನಿಗದಿತ ನಮೂನೆ-6 ರಲ್ಲಿ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಅವರುಗಳು ಸ್ಥಳಾಂತರ ಹೊಂದಿದ್ದಲ್ಲಿ, ಮೃತ ಪಟ್ಟಿದ್ದಲ್ಲಿ, ಹೆಸರು ಪುನರಾವರ್ತನೆಯಾಗಿದ್ದಲ್ಲಿ ಅವರುಗಳ ಹೆಸರನ್ನು ತೆಗೆದು ಹಾಕಲು ನಿಗದಿತ ಅರ್ಜಿ ನಮೂನೆ-7 ರಲ್ಲಿ ಮತ್ತು ಮತದಾರರ ಪಟ್ಟಿಯಲ್ಲಿರುವ ನಮೂದುಗಳನ್ನು ಸರಿಪಡಿಸಲು ನಿಗದಿತ ಅರ್ಜಿ ನಮೂನೆ-8 ರಲ್ಲಿ, ಅಲ್ಲದೇ ಒಂದೇ ಮತಕ್ಷೇತ್ರದ ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ಹೆಸರು ವರ್ಗಾವಣೆ ಮಾಡುವಂತಿದ್ದಲ್ಲಿ ನಿಗದಿತ ಅರ್ಜಿ ನಮೂನೆ-8(ಎ) ರಲ್ಲಿ ಸಲ್ಲಿಸಬಹುದು ಎಂದರು.
ಅಕ್ಟೋಬರ್ 10ರಂದು ಪ್ರಕಟಗೊಂಡಿರುವ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 9,75,014 ಮತದಾರರಿದ್ದು, ಈ ಪೈಕಿ 4,87,799 ಪುರುಷ ಮತದಾರರು ಮತ್ತು 4,87,215 ಮಹಿಳಾ ಮತದಾರರಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ 1,127 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಗ್ರಾಮೀಣ ಪ್ರದೇಶದ ಮತಗಟ್ಟೆಯೊಂದರಲ್ಲಿ 1,300 ಮತ್ತು ನಗರ ಪ್ರದೇಶದ ಮತಗಟ್ಟೆಯೊಂದರಲ್ಲಿ 1,400 ಮತದಾರರು ಇರಬೇಕು. ಆದರೆ, ಕೆಲವೆಡೆ ಹೆಚ್ಚಿನ ಮತದಾರರಿದ್ದರಿಂದ 8 ಮತಗಟ್ಟೆಗಳನ್ನು ಹೆಚ್ಚಿಸಲಾಗಿದೆ. ಈ ಮೂಲಕ ಈಗ ಜಿಲ್ಲೆಯಲ್ಲಿ ಮತದಾನ ಕೇಂದ್ರಗಳ ಸಂಖ್ಯೆ 1,135ಕ್ಕೆ ಏರಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.
ನಕಲಿ ಮತದಾರರು ಸೇರಿದಂತೆ ಯಾವುದೇ ದೂರು,ಆಕ್ಷೇಪಣೆಗಳಿದ್ದಲ್ಲಿ ನಿಗದಿತ ಅವಧಿಯೊಳಗೆ ಸಂಬಧಿಸಿದ ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಿದ ಅವರು, ಬೂತ್ ಮಟ್ಟದ ಏಜೆಂಟರನ್ನು ನೇಮಿಸುವ ಮೂಲಕ ಮತದಾರರ ಪಟ್ಟಿಯ ಪರಿಷ್ಕರಣೆಗೆ ನೆರವಾಗಬೇಕು ಎಂದು ಕೋರಿದರು.
ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಈಗಾಗಲೇ ಶೇಕಡ 99.99 ರಷ್ಟು ಮತದಾರರ ಭಾವಚಿತ್ರಗಳನ್ನೊಳಗೊಂಡಿವೆ. ಶೇಕಡ 100ರಷ್ಟು ಭಾವಚಿತ್ರಗಳನ್ನೊಳಗೊಳ್ಳಲು ಕ್ರಮವಹಿಸಬೇಕು. ಹಾಗೆಯೇ ಮರಣ ಹೊಂದಿದವರು ಸೇರಿದಂತೆ ನಕಲಿ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಸಹಾಯಕ ಆಯುಕ್ತ ಡಾ.ಬಿ.ಎಸ್.ಮಂಜುನಾಥ ಸ್ವಾಮಿ, ಚುನಾವಣೆ ಶಾಖೆಯ ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ, ಶಿರಸ್ತೆದಾರರಾದ ಪರಶುರಾಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಪಾಟೀಲ್ ಹುಲ್ಕಲ್, ಯಾದಗಿರಿ ನಗರ ಬಿಜೆಪಿ ಅಧ್ಯಕ್ಷ ಹಣಮಂತ ಇಟಗಿ, ಜೆಡಿಎಸ್ ವಿಭಾಗೀಯ ಅಧ್ಯಕ್ಷ ಬಾಲಪ್ಪ ಚಿಕ್ಕಮೇಟಿ, ಬಿಎಸ್ಪಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಭಾಗಣ್ಣ ಎಸ್.ಹೋತಿನಮಡು ಇದ್ದರು.