ರಾಜಸ್ಥಾನ, ತೆಲಂಗಾಣ ಶಾಂತಿಯುತ ಮತದಾನ: ಕ್ರಮವಾಗಿ 73 ಹಾಗೂ 70ರಷ್ಟು ಮತದಾನ

<< ಇನ್ನು ಡಿ.11ರ ಪಂಚ ರಾಜ್ಯಗಳ ಫಲಿತಾಂಶದತ್ತ ಎಲ್ಲರ ಚಿತ್ತ >>

ನವದೆಹಲಿ: ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಐದು ರಾಜ್ಯಗಳ ಪೈಕಿ ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆಗೆ ಇಂದು ಮತದಾನ ನಡೆಯಿತು.

ವಸುಂದರಾ ರಾಜೆ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿರುವ ರಾಜಸ್ಥಾನದಲ್ಲಿ 72.7% (ಕಳೆದ ಬಾರಿ 74.38% ಮತದಾನವಾಗಿತ್ತು) ಮತದಾನವಾಗಿದ್ದರೆ, ಕೆ.ಚಂದ್ರಶೇಖರ್​ ರಾವ್​ ಅವರ ನೇತೃತ್ವದ ಟಿಆರ್​ಎಸ್​ ಅಧಿಕಾರದಲ್ಲಿರುವ ತೆಲಂಗಾಣದಲ್ಲಿ 70% (ಕಳೆದ ಬಾರಿ 72%) ಮತದಾನವಾಗಿದೆ.

ರಾಜಸ್ಥಾನದಲ್ಲಿ ಒಟ್ಟಾರೆ 199 ಕ್ಷೇತ್ರಗಳಿದ್ದು, ಬಿಜೆಪಿ ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿದೆ. ಕಾಂಗ್ರೆಸ್​ 194 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ (ಆರ್​ಎಲ್​ಡಿಗೆ 2, ಎಲ್​ಜೆಡಿ 2, ಎನ್​ಸಿಪಿ 1) ಸ್ಪರ್ಧೆ ಮಾಡಿದೆ. ಇನ್ನು, ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಲು ಯತ್ನಿಸಿ ವಿಫಲವಾದ ಬಿಎಸ್​ಪಿ ರಾಜ್ಯದ ಒಟ್ಟು 190 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.
ಸಮೀಕ್ಷೆಗಳಲ್ಲಿ ರಾಜಸ್ಥಾನ ಕಾಂಗ್ರೆಸ್​ಗೆ ಒಲಿಯುವ ಸಾಧ್ಯತೆ ಇರುವ ಬಗ್ಗೆ ಫಲಿತಾಂಶಗಳು ಬಂದಿವೆ. ರಾಜಸ್ಥಾನದಲ್ಲಿ ಒಂದು ಅವಧಿಗೆ ಬಿಜೆಪಿ, ಒಂದು ಅವಧಿಗೆ ಕಾಂಗ್ರೆಸ್​ ಗೆಲ್ಲುವುದು ಪರಿಪಾಠವೂ ಹೌದು. ಅದರಂತೆ ಕಾಂಗ್ರೆಸ್​ನಲ್ಲಿ ಮಾಜಿ ಸಿಎಂ ಅಶೋಕ್​ ಗೆಹ್ಲೋಟ್​ ಮತ್ತು ಸಚಿನ್​ ಪೈಟಲ್​ ನಡುವೆ ಸಿಎಂ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ.

ಕರ್ನಾಟಕದ ಪಕ್ಕದ ರಾಜ್ಯ ತೆಲಂಗಾಣದಲ್ಲಿ 119 ಸೀಟುಗಳಿದ್ದು, ಅವಧಿ ಪೂರ್ವ ಚುನಾವಣೆ ಎದುರಿಸಿದೆ. 2014ರ ಲೋಕಸಭೆ ಚುನಾವಣೆ ವೇಳೆ ವಿಧಾನಸಭೆ ಚುನಾವಣೆಯನ್ನೂ ಎದುರಿಸಿದ್ದ ತೆಲಂಗಾಣದಲ್ಲಿ ಕೆ.ಚಂದ್ರಶೇಖರ್​ ರಾವ್​ ಅವರ ನೇತೃತ್ವದ ಟಿಆರ್​ಎಸ್​ ಅಧಿಕಾರಕ್ಕೆ ಬಂದಿತ್ತು. ಅದರೆ, ಒಂದು ವರ್ಷ ಮೊದಲೇ ವಿಧಾನಸಭೆಯನ್ನು ವಿಸರ್ಜಿಸಿದ್ದರಿಂದ ಅಲ್ಲಿ ಈಗ ಚುನಾವಣೆ ನಡೆದಿದೆ.

ಆಡಳಿತಾರೂಢ ತೆಲಂಗಾಣ ರಾಷ್ಟ್ರೀಯ ಸಮಿತಿ ಮತ್ತು ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿವೆ. ನೆರೆಯ ಆಂಧ್ರಪ್ರದೇಶದಲ್ಲಿ ಅಧಿಕಾರದಲ್ಲಿರುವ ಟಿಡಿಪಿ ಈ ಬಾರಿ ತೆಲಂಗಾಣದಲ್ಲಿ ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಧುಮುಕಿದೆ. ಇದರ ಜತೆಗೆ ಎಐಎಂಐಎಂ ಪಕ್ಷವೂ ಕೆಲ ಸ್ಥಾನಗಳಲ್ಲಿ ಸ್ಪರ್ಧಿಸಿದೆ.
ಐದು ರಾಜ್ಯಗಳ ಪೈಕಿ, ಚತ್ತೀಸ್​ಘಡ, ಮಿಜೋರಾಂ ಮತ್ತು ಮಧ್ಯಪ್ರದೇಶಗಳಲ್ಲಿ ಈಗಾಗಲೇ ಮತದಾನ ಪೂರ್ಣಗೊಂಡಿದೆ. ಡಿ.11ರಂದು ಫಲಿತಾಂಶ ಪ್ರಕಟವಾಗಲಿದೆ.