ಉಗ್ರರ ‘ಐಇಡಿ’ ಗಿಂತ ಪ್ರಜಾಪ್ರಭುತ್ವದ ವೋಟರ್​ ‘ಐಡಿ’ ಬಲಿಷ್ಠ: ಮತದಾನ ಮಾಡಿದ ಬಳಿಕ ನರೇಂದ್ರ ಮೋದಿ ಹೇಳಿಕೆ

ಅಹಮದಾಬಾದ್​: ಮತದಾನದ ಗುರುತು ಪತ್ರ (ID) ಉಗ್ರರು ಬಳಸುವ ಸುಧಾರಿತ ಸ್ಫೋಟಕ ಸಾಧನ (IED)ಕ್ಕಿಂತ ಬಲಶಾಲಿ ಎಂದು ಪ್ರಧಾನಿ ಮೋದಿ ಹೇಳಿದರು.

ಗುಜರಾತ್​ನ ಅಹಮದಾಬಾದ್​ನಲ್ಲಿ ಮತದಾನ ಮಾಡಿದ ಬಳಿಕ ಶಾಯಿ ಗುರುತು ಹಾಕಿದ ತೋರು ಬೆರಳು ತೋರಿಸಿದ ಮೋದಿಯವರು, ಭಯೋತ್ಪಾದಕರು ಐಇಡಿಯನ್ನು ತಮ್ಮ ಅಸ್ತ್ರವಾಗಿ ಬಳಸುತ್ತಾರೆ. ಆದರೆ, ಅದಕ್ಕಿಂತ ಬಲಶಾಲಿ ಶಸ್ತ್ರವೆಂದರೆ ಪ್ರಜಾಪ್ರಭುತ್ವದ ವೋಟರ್​ ಐಡಿ. ಪ್ರತಿಯೊಬ್ಬರೂ ಮತದಾನದ ಮಹತ್ವ, ಶಕ್ತಿಯನ್ನು ಅರಿತುಕೊಳ್ಳಬೇಕು ಎಂದು ಅವರು ತಿಳಿಸಿದರು.

ಮತದಾನಕ್ಕೂ ಮೊದಲು ಅವರು ಬುಲೆಟ್​ ಪ್ರೂಫ್​ ಆಗಿರುವ ತೆರೆದ ವಾಹನದಲ್ಲಿ ಸಣ್ಣ ಮೆರವಣಿಗೆ ನಡೆಸುವ ಮೂಲಕ ಮತಗಟ್ಟೆ ತಲುಪಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಹಾಗೂ ಅವರ ಕುಟುಂಬದವರೂ ಇದ್ದರು. ಈ ವೇಳೆ ಅಮಿತ್​ ಷಾ ಅವರ ಮೊಮ್ಮಗಳನ್ನು ಮೋದಿಯವರು ಎತ್ತಿಕೊಂಡಿದ್ದು ವಿಶೇಷವಾಗಿತ್ತು.

ಮತದಾನದ ಬಳಿಕ ತಮ್ಮ ಬೆರಳನ್ನು ತೋರಿಸುತ್ತ, ತಮ್ಮ ಪಕ್ಷದ ಮುಖಂಡರ ಜತೆ ರಸ್ತೆಯಲ್ಲಿ ನಡೆದುಕೊಂಡೇ ಹೋದರು. ಈ ವೇಳೆ ಮೋದಿ ಮೋದಿ ಎಂಬ ಘೋಷಣೆ ಕೇಳುತ್ತಿತ್ತು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನ ರಾಜ್ಯವಾದ ಗುಜರಾತ್​ನಲ್ಲಿ ಮತದಾನ ಮಾಡಿದ್ದು ಹೆಮ್ಮೆಯೆನಿಸುತ್ತದೆ. ಈ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳುವುದೇ ತುಂಬ ಸಂತಸದ ವಿಚಾರ.

ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದಾಗ ಮನಸಿನಲ್ಲಿ ಮೂಡುವ ಭಾವನೆಯೇ ಈಗ ಮತದಾನ ಮಾಡಿದ ಮೂಲಕ ಮೂಡಿದೆ ಎಂದು ಹೇಳಿದ ಮೋದಿ, ಮತದಾರರು ತುಂಬ ಜಾಣರು. ಯಾವುದು ಸರಿ, ಯಾವುದು ತಪ್ಪು ಎಂಬುದು ಅವರಿಗೆ ಗೊತ್ತಿದೆ ಎಂದರು.